Thursday, February 11, 2021

05 ಸಾಯಿಯ ಪುನರ್ದರ್ಶನ / Baba's return to Shirdi

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ಸಾಯಿಯ ಪುನರ್ದರ್ಶನ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.



ಈಗ ಹಿಂದಿನ ಅಧ್ಯಾಯದಿಂದ ಕತೆಯನ್ನು ಮುಂದುವರಿಸಬೇಕೆಂದರೆ, ಬಾಬಾರವರು ಶಿರಡಿಯಿಂದ ಮರೆಯಾದರು ಮತ್ತು ಪುನಃ ಚಾಂದಪಾಟೀಲನ ಜೊತೆಯಲ್ಲಿ ಆಗಮಿಸಿದರು. ಇದೆಲ್ಲ ಹೇಗೆ ನಡೆಯಿತೆಂಬುದನ್ನು ಆಲಿಸಿರಿ. ॥1॥
ಬಾಬಾರವರು ತೋಟವನ್ನು ಹೇಗೆ ನಿರ್ಮಾಣ ಮಾಡಿದರು ಮತ್ತು ತಾವೇ ಸ್ವತಃ ನೀರನ್ನು ಹಾಯಿಸುತ್ತ ಹೇಗೆ ಕಾಪಾಡಿದರು, ಗ೦ಗಾಗೀರ್‌ ಮತ್ತಿತರ ಸಂತರ ಸಂಗ ಮಾಡಿದರು ಅಂತಹ ಪಾವನ ಕತೆಯನ್ನು ಕೇಳಿರಿ. ॥2॥
ಅನ೦ತರ ಬಾಬಾರವರು ಸ್ವಲ್ಪ ಕಾಲ ಮರೆಯಾಗಿದ್ದವರು. ಈ ಮಾನವರತ್ನ ಮುಸಲ್ಮಾನನ ಮನೆಯ ಮದುವೆ ದಿಬ್ಬಣದ ಜೊತೆಯಲ್ಲಿ ಹೇಗೆ ಶಿರಡಿಗೆ ಹಿಂತಿರುಗಿದರು ಎಂಬುದನ್ನು ಹೇಳುತ್ತೇನೆ. ॥3॥
ಅದಕ್ಕೆ ಮೊದಲು ದೇವಿದಾಸನು ಶಿರಡಿಯಲ್ಲಿ ನೆಲೆಯೂರಿದ್ದನು. ಅನಂತರ ಜಾನಕೀದಾಸ ಎಂಬ ತಪಸ್ವಿಯೂ ಅಲ್ಲಿಗೆ ಬಂದಿದ್ದನು. ॥4॥
ಇವೆಲ್ಲವೂ ಯಾವ ರೀತಿ ನಡೆದವು, ನಾನು ಅದನ್ನೆಲ್ಲ ವಿವರವಾಗಿ ಹೇಳುತ್ತೇನೆ. ಶ್ರೋತೃಗಳೇ, ಆದರಪೂರ್ವಕವಾಗಿ ಗಮನವಿಟ್ಟು ಕೇಳಿರಿ. ॥5॥
ಔರಂಗಾಬಾದ್‌ ಜಿಲ್ಲೆಯ ಧೂಪ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ಭಾಗ್ಯತಾಲಿಯಾದ ಮುಸಲ್ಮಾನನಿದ್ದನು. ಅವನ ಹೆಸರು ಚಾಂದಪಾಟೀಲ. ॥6॥
ಅವನು ಔರಂಗಾಬಾದಿಗೆ ಹೋಗುತ್ತಿದ್ದಾಗ ಅವನ ಕುದುರೆಗಳಲ್ಲಿ ಒಂದು ತಪ್ಪಿಸಿಕೊಂಡಿತು. ಸುಮಾರು 2 ತಿಂಗಳವರೆಗೆ ಅದರ ಸುಳಿವಿರಲಿಲ್ಲ. ಅವನು ನಿರಾಶನಾದನು. ॥7॥
ಪಾಟೀಲನು ಪೂರ್ಣ ನಿರಾಶನಾಗಿ, ಕುದುರೆ ಕಳೆದುಹೋಗಿದ್ದರಿಂದ ಬಹಳ ಸಂಕಟಪಟ್ಟನು. ಅದರ ಜೀನನ್ನು ತನ್ನ ಬೆನ್ನ ಮೇಲೆ ಹೊತ್ತು ಹಿಂತಿರುಗಲು ಪ್ರಾರಂಭಿಸಿದನು. ॥8॥
ಔರಂಗಾಬಾದ್‌ನಿಂದ 4 1/2 ಕೋಸು ಪಯಣಿಸಿದ ಮೇಲೆ, ದಾರಿಯಲ್ಲಿ ಒಂದು ಮಾವಿನ ಮರ ಸಿಕ್ಕಿತು. ಅದರ ಕೆಳಗೆ ಆ  ರತ್ನ(ಸಾಯಿ)ವನ್ನು ಕಂಡನು. ॥9॥
ತಲೆಯ ಮೇಲೆ ಟೋಪಿ ಮತ್ತು ದೇಹದ ಮೇಲೆ ಕಫಿನಿಯನ್ನು ಧರಿಸಿ, ಒಂದು ಮರದ ಕೋಲ(ಸಟಕ)ನ್ನು ಕಂಕುಳಲ್ಲಿಟ್ಟು ಹೊಗೆಸೊಪ್ಪನ್ನು ತನ್ನ ಚಿಮಣಿಯಲ್ಲಿ ಸೇದಲು ಪುಡಿಮಾಡುತ್ತ ಇದ್ದನು. ಆಗ ಒಂದು ವಿಚಿತ್ರ ಘಟನೆ ನಡೆಯಿತು. ॥10॥
ಚಾಂದ ಪಾಟೀಲನು ಪಕ್ಕದಲ್ಲಿ ಹಾದುಹೋದಾಗ ಫಕೀರನು ಕರೆಯುತ್ತಿದ್ದುದನ್ನು ಕೇಳಿದನು. "ಹೇ, ಬಾ ಇಲ್ಲಿ. ಒಂದು ದಮ್‌ ಎಳೆದುಕೋ; ಮತ್ತೆ ಮುಂದೆ ನಡಿ. ನೆರಳಿನಲ್ಲಿ ಸ್ವಲ್ಪಕಾಲ ಕುಳಿತುಕೋ". ॥11॥
ಫಕೀರನು ಕೇಳುತ್ತಾನೆ - "ಈ ಜೀನು ಏತಕ್ಕಾಗಿ"? ಪಾಟೀಲ ಉತ್ತರಿಸುತ್ತಾನೆ, "ನನ್ನ ಕುದುರೆ ತಪ್ಪಿಸಿಕೊಂಡಿದೆ". ಅನಂತರ ಫಕೀರನು ಹೇಳುತ್ತಾನೆ, "ಹೋಗು, ಆ ನಾಲೆಯ ಹತ್ತಿರ ಹುಡುಕು". ತಕ್ಷಣವೇ ಕುದುರೆಯು ಕಾಣಿಸಿತು. ॥12॥
ಚಾಂದಪಾಟೀಲನು ಆಶ್ಚರ್ಯಚಕಿತನಾದನು. ಮನಸ್ಸಿನಲ್ಲೇ ತಾನೊಬ್ಬ 'ಅವಲಿಯ'ನ್ನು ಭೇಟಿಮಾಡಿದೆನೆಂದು ಯೋಚಿಸಿದನು. ಅವನ ಶಕ್ತಿ ಅಪರಿಮಿತ. ಅವನನ್ನು ಸಾಮಾನ್ಯ ಮಾನವನೆಂದು ಕರೆಯುವ ಹಾಗಿಲ್ಲ. ॥13॥
ಅನಂತರ ಪಾಟೀಲನು ಕುದುರೆಯೊಂದಿಗೆ ಸ್ಥಳಕ್ಕೆ ಬಂದನು. ಫಕೀರನು ಅವನನ್ನು ಪಕ್ಕದಲ್ಲೇ ಕುಳ್ಳಿರಿಸಿಕೊ೦ಡನು. ನಂತರ ತನ್ನ ಕೈಯಲ್ಲಿ ಚಿಮಟವನ್ನು ತೆಗೆದುಕೊ೦ಡನು. ॥14॥
ಅನ೦ತರ ಅವನು ಅದನ್ನು ನೆಲದ ಮಣ್ಣಿನ ಒಳಗೆ ಚುಚ್ಚಿದನು. ಒಂದು ಕೆಂಡವನ್ನು ತೆಗೆದನು. ಅದನ್ನು ತನ್ನ ಕೈಯಲ್ಲಿದ್ದ ಚಿಲುಮೆಯಲ್ಲಿ ಹಾಕಿದನು. ನಂತರ ಅವನು ತನ್ನ ಸಟಕವನ್ನು ಎತ್ತಿಕೊ೦ಡನು. ॥15॥
ಮತ್ತೆ ಅಲ್ಲಿ ಚಿಲುಮೆಗೆ ಬೇಕಾದ ಚಪ್ಪಿಯನ್ನು ಒದ್ದೆಮಾಡಲು ನೀರು ಇರಲಿಲ್ಲ. ಅದಕ್ಕಾಗಿ ಅವನು ಸಟಕವನ್ನು ನೆಲಕ್ಕೆ ಬಡಿಯಲು ಅಲ್ಲಿ ನೀರು ಚಿಮ್ಮಿತು. ॥16॥
ಚಪ್ಪಿಯನ್ನು ನೀರಿನಲ್ಲಿ ನೆನೆಸಿ ಅದನ್ನು ಹಿಂಡಿ ಒಣಗಿಸಲಾಯಿತು. ಅವನು ಅದನ್ನು ಚಿಲುಮೆಗೆ ಸುತ್ತಿದನು. ಅದನ್ನು ತಾನೇ ಒಮ್ಮೆ ಸೇದಿ ನಂತರ ಪಾಟೀಲನನ್ನೂ ಸೇದುವಂತೆ ಮಾಡಿದನು. ಪಾಟೀಲನಾದರೋ ದಿಗ್ಬ್ರಮೆಹೊಂದಿದನು. ॥17॥
ಅವನು ಫಕೀರನನ್ನು ತನ್ನ ಮನೆಗೆ ಬರಬೇಕೆಂದು ಪ್ರಾರ್ಥಿಸಿದನು. ಈ ದಿವ್ಯ ಲೀಲೆಗಳ ಪ್ರದರ್ಶನಕಾರನಾದ ಫಕೀರನು ಅವನ ಮಾತಿಗೆ ಒಪ್ಪಿದನು. ॥18॥


ಮಾರನೆಯ ದಿನ ಅವನು ಹಳ್ಳಿಗೆ ಹೋದನು. ಸ್ವಲ್ಪ ಸಮಯ ಪಾಟೀಲನ ಜೊತೆ ಇದ್ದನು. ನಂತರ ಶಿರಡಿಗೆ ಹಿಂತಿರುಗಿದನು. ॥19॥
ಈ ಚಾಂದಪಾಟೀಲನು ಕಾರಭಾರಿ. ಧೂಪಖೇಡ ಹಳ್ಳಿಯ ಗ್ರಾಮಾಧಿಕಾರಿಯೂ ಆಗಿದ್ದನು. ಅವನ ಪತ್ನಿಯ ಸೋದರಳಿಯನ ಮದುವೆಯು ಶಿರಡಿಯ ಹುಡುಗಿಯೊಂದಿಗೆ ಆಯೋಜಿಸಲಾಗಿತ್ತು. ॥20॥
ಚಾಂದಭಾಯಿಯ ಪತ್ನಿಯ ಸೋದರಳಿಯನಿಗೆ ಶಿರಡಿಯವಿವಾಹಯೋಗ್ಯ ವಧುವಿನ ಜೊತೆ ಮದುವೆ ನಿಗದಿಪಡಿಸಲಾಗಿದ್ದು ಸುಯೋಗವೇ ಸರಿ. ॥21॥
ಕುದುರೆಗಳು, ಗಾಡಿಗಳು, ಇವುಗಳೊಡನೆ ಮದುವೆಯ ದಿಬ್ಬಣ ಶಿರಡಿಯ ಕಡೆಗೆ ಹೊರಟಿತು. ಚಾ೦ದಭಾಯಿಯ ಮೇಲಿನ ಪ್ರೀತಿಯಿ೦ದ ಬಾಬಾರವರೂ ದಿಬ್ಬಣದ ಜೊತೆ ಸೇರಿದರು. ॥22॥
ಮದುವೆಯು ನೆರವೇರಿತು. ಮದುವೆಯ ಪರಿವಾರ ಹಿಂತಿರುಗಿತು. ಬಾಬಾರವರು ಮಾತ್ರ ಅಲ್ಲಿಯೇ ಉಳಿದರು ಮತ್ತು ಅಲ್ಲಿಯೇ ನೆಲೆಸಿದರು. ಈ ರೀತಿ ಶಿರಡಿಯ ಭಾಗ್ಯ ಉದಯಿಸಿತು. ॥23॥
ಸಾಯಿಯು ಅವಿನಾಶಿ ಮತ್ತು ಪುರಾತನರು. ಹಿಂದುವೂ ಅಲ್ಲ ಮುಸಲ್ಮಾನನೂ ಅಲ್ಲ. ಅವರಿಗೆ ಯವುದೇ ಜಾತಿಯಾಗಲಿ,  ಕುಲವಾಗಲಿ, ಗೋತ್ರವಾಗಲಿ ಇಲ್ಲ. ಅವರು ಆತ್ಮಸಾಕ್ಷಾತ್ಕಾರ ಪಡೆದ ಮಹಾತ್ಮನೆಂದು ತಿಳಿ. ॥24॥
ಜನರು "ಸಾಯಿ, ಸಾಯಿ" ಎಂದು ಕರೆದರು. ಈ ಹೆಸರು ಹೇಗೆ ಬಂತು? "ಬಾ ಸಾಯಿ" ಎಂದು ಗೌರವಪೂರ್ವಕವಾಗಿ ಸ್ಥಾಗತಿಸಲ್ಪಟ್ಟರು. ಅದೇ ರೀತಿ ಸಂಬೋಧಿಸಲ್ಪಟ್ಟರು. ॥25॥
ಖಂಡೋಬಾ ಮಂದಿರದ ಹತ್ತಿರ ಮ್ಹಾಲಸಾಪತಿಯವರ ಒಕ್ಕಣಿ ಮಾಡುವ ಜಾಗದಲ್ಲಿ ಬಾಬಾರವರು ಮದುವೆ ದಿಬ್ಬಣದ ಜೊತೆಯಲ್ಲಿ ಬಂದಿಳಿದಾಗ, ಆ ದಿನದಂದು ಈ ಹೆಸರು ಕೊಡಲಾಯಿತು. ॥26॥
ಪ್ರಾರಂಭದಲ್ಲಿ ಆ ಒಕ್ಕಣಿಯ ಜಾಗ ಮ್ಹಾಲಸಾಪತಿಯವರದ್ದಾಗಿತ್ತು. ಆನಂತರ ಅದು ಅಮೀನಾಭಾಯಿಯವರದಾಯಿತು. ಮದುವೆಯ ದಿಬ್ಬಣ ಬಂದಾಗ ಅದು ಒ೦ದು ಆಲದ ಮರದ ಕೆಳಗಡೆ ಇಳಿಯಿತು. ॥27॥
ಗಾಡಿಗಳನ್ನು ಆ ಒಕ್ಕಣೆಯ ಭೂಮಿಯಲ್ಲಿ ಬಿಡಿಸಲಾಯಿತು. ಖಂಡೋಬಾ ಮಂದಿರದ ಮುಂದೆ ಇದ್ದ ವಿಶಾಲವಾದ ಬಯಲಿನಲ್ಲಿ ನಿಲ್ಲಿಸಲಾಯಿತು. ಬಾಬಾರವರು ಮದುವೆಯ ಇತರ ಅತಿಥಿಗಳೊಡನೆ ಅಲ್ಲಿ ಇಳಿದರು. ॥28॥
ಈ ಬಾಲ ಫಕೀರನು ಗಾಡಿಯಿಂದ ಇಳಿದಕೂಡಲೇ ಮೊದಲು ಭಗತ್ ‌ಮ್ಹಾಲಸಾಪತಿಯವರ ದೃಷ್ಟಿಗೆ ಬಿದ್ದನು. ಅವನು ಮುಂದೆಹೋಗಿ "ಬಾ ಸಾಯಿ, ಸ್ವಾಗತ" ಎಂದು ಹೇಳಿದನು. ಅಲ್ಲಿಂದೀಚೆಗೆ ಅವನು ಆ ಹೆಸರಿನಿಂದಲೇ ಕರೆಯಲ್ಪಟ್ಟನು. ॥29॥


ಅನ೦ತರ, ಆ ಸಮಯದಿಂದಲೇ ಎಲ್ಲರೂ ಅವನನ್ನು "ಸಾಯಿ, ಸಾಯಿ" ಎಂದು ಕರೆದರು. ಅದು ಅವನ ಅಂಕಿತ ನಾಮವಾಯಿತು. ॥30॥
ಅವನು ಅಲ್ಲಿ ಹುಕ್ಕವನ್ನು ಸೇದುತ್ತಿದ್ದನು. ಮಸೀದಿಯಲ್ಲಿ ವಾಸಮಾಡುತ್ತ ದೇವಿದಾಸನ ಸಹವಾಸದಲ್ಲಿ ಸಂತೋಷವಾಗಿರುತ್ತಿದ್ದನು. ಹೀಗೆ ಆತ ಶಿರಡಿಯಲ್ಲಿ ಆನ೦ದವಾಗಿದ್ದನು. ॥31॥
ಕೆಲವು ಸಲ ಅವನು ಚಾವಡಿಯಲ್ಲಿ ಕುಳಿತಿರುತ್ತಿದ್ದನು. ಕೆಲವೊಮ್ಮೆ ದೇವಿದಾಸನ ಸಹವಾಸದಲ್ಲಿ, ಕೆಲವು ಸಲ ಮಾರುತಿ ದೇವಸ್ಥಾನದಲ್ಲಿ ಸದಾಕಾಲ ಸ್ವಾತ್ಮಾನಂದದಲ್ಲಿ ಸಂಪೂರ್ಣವಾಗಿ ಮುಳುಗಿರುತ್ತಿದ್ದನು. ॥32॥
ಈ ದೇವೀದಾಸನು ಈಗಾಗಲೇ ಶಿರಡಿಯಲ್ಲಿ ಬಾಬಾರವರು ಶಿರಡಿಗೆ ಬರುವ ಮೊದಲೇ ನೆಲಸಿದ್ದನು. ಆನಂತರ ಮಹಾನುಭವ ಪಂಥದ ಸನ್ಯಾಸಿ ಜಾನಕೀದಾಸ ಗೋಸಾವಿ ಬ೦ದನು. ॥33॥
ಜಾನಕೀದಾಸರ ಜೊತೆಯಲ್ಲಿ ಸಾಯಿ ಮಹಾರಾಜರು ಕುಳಿತು ಮಾತುಕತೆ ಆಡುತ್ತಿದ್ದರು. ಇಲ್ಲದಿದ್ದಲ್ಲಿ ಜಾನಕೀದಾಸರು ಮಹಾರಾಜರು  ಕುಳಿತಿದ್ದ ಜಾಗಕ್ಕೇ ಬರುತ್ತಿದ್ದರು. ॥34॥
ಇಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು ಮತ್ತು ನಿತ್ಯವೂ ಭೇಟಿಯಾಗುತ್ತಿದ್ದರು. ಅವರ ಈ ರೀತಿಯ ಸಮಾಗಮ ಪ್ರತಿಯೊಬ್ಬರಿಗೂ ಅತ್ಯಂತ ಸಂತಸ ತರುತ್ತಿತ್ತು. ॥35॥
ಅದೇ ರೀತಿ, ಒಬ್ಬ ಪ್ರಸಿದ್ಧ ವೈಷ್ಣವ ಗೃಹಸ್ಥಾತ್ರಮಿ ಗಂಗಾಗೀರ್‌ ಮತ್ತು ಪ್ರಣತಾಂಬೆಯ ಶಿರಡಿಗೆ ಆಗಾಗ್ಗೆ ಬಂದು ಹೋಗುವ ಯಾತ್ರಾರ್ಥಿಯಾಗಿದ್ದರು. ॥36॥
ಆರಂಭದಲ್ಲಿ ಗಂಗಾಗೀರನ ಅಚ್ಚರಿ ಬಹಳವಾಗಿತ್ತು. ಸಾಯಿಯು ಎರಡೂ ಕೈಗಳಿಂದ ಮಣ್ಣಿನ ಮಡಕೆಗಳಲ್ಲಿ ಬಾವಿಯಿಂದ ನೀರನ್ನು ಹೊತ್ತು ತರುತ್ತಿದ್ದರು. ॥37॥
ಅದೇ ರೀತಿ ಬುವಾನ ದೃಷ್ಟಿಗೆ ಸಾಯಿಯು ಮೊದಲು ಕಂಡಾಗ ಅವನು ಹೇಳಿದ್ದು - "ಇದು ಶಿರಡಿಯ ಮಹಾಪುಣ್ಯ ಈ ರೀತಿಯ ರತ್ನ ಶ್ರೇಷ್ಠವು ಶಿರಡಿಯಲ್ಲಿರುವುದು ಶಿರಡಿಯ ಮಹಾಭಾಗ್ಯ. ಶಿರಡಿಯು ಧನ್ಯ" ಎಂದು ಸ್ಪಷ್ಟೀಕರಿಸಿದನು. ॥38॥
ಈ ದಿನ ಅವನು ಹೆಗಲಮೇಲೆ ನೀರನ್ನು ಹೊತ್ತು ತರುತ್ತಿದ್ದರೂ, ಅವನು ಸಾಧಾರಣ ಮಾನವನಲ್ಲ. ಅವನ ಪಾದ ಸೋಕಿದ ಶಿರಡಿಯ ನೆಲವೇ ಧನ್ಯ ॥39॥
ಅದೇ ರೀತಿ ಮತ್ತೊಬ್ಬ ಪ್ರಖ್ಯಾತ ಸಂತ ಆನಂದನಾಥರು ಅವರ (ಸಾಯಿ) ಬಗ್ಗೆ, ಅವರು ಅದ್ಭುತಗಳನ್ನು ಮಾಡುವರೆಂದು ಭವಿಷ್ಯ ನುಡಿದಿದ್ದರು. ॥40॥
ಈ ಮಹಾ ಪ್ರಸಿದ್ಧ ಆನಂದನಾಥರು ಯೇವಲಾ ಎಂಬ ಗ್ರಾಮದಲ್ಲಿ ಒಂದು ಮಠವನ್ನು ಸ್ಥಾಪಿಸಿದ್ದರು. ಒಮ್ಮೆ ಅವರು ಕೆಲವು ಶಿರಡಿ ನಿವಾಸಿಗಳೊಂದಿಗೆ ಶಿರಡಿಗೆ ಬಂದರು. ॥41॥
ಆನಂದನಾಥರು ಅಕ್ಕಲಕೋಟೆಯ ಮಹಾಪುರುಷರ ಶಿಷ್ಯರು. ಸಾಯಿಯನ್ನು ನೋಡಿದ ಕೂಡಲೇ ಘೋಷಿಸಿದರು -"ಇದು ನಿಜವಾಗಿಯೂ ಒಂದು ವಜ್ರ, ಒ೦ದು ಅಸಲಿ ವಜ್ರ" ಎಂದು. ॥42॥
"ಈದಿನ ಅವನು ಒ೦ದು ಕಸದ ರಾಶಿಯ ಮೇಲೆ ಇದ್ದರೂ (ತಿರಸ್ಕರಿಸಲ್ಪಟ್ಟಿದ್ದರೂ) ಇದು ಕೇವಲ ಒಂದು ಹರಳಲ್ಲ, ಆದರೆ ಅಸಲಿ ವಜ್ರ" ಎಂದು ಘೋಷಿಸಿದರು. ಇವು ಬಾಬಾರವರು ಇನ್ನೂ ಬಾಲಕನಿದ್ದಾಗ ಹೇಳಿದ ಆನಂದನಾಥರ ಮಾತುಗಳು. ॥43॥
"ನನ್ನ ಮಾತುಗಳನ್ನು ಧ್ಯಾನದಿಂದ ಕೇಳಿರಿ. ಅನಂತರ ನೀವು ಇವುಗಳನ್ನು ಮತ್ತೆ ಜ್ಞಾಪಿಸಿಕೊಳ್ಳುವಿರಿ" ಈ ರೀತಿ ಭವಿಷ್ಯವಾಣಿಯನ್ನು ನುಡಿದು ಯೇವಾಲ ಗ್ರಾಮಕ್ಕೆ ಹಿಂತಿರುಗಿದರು. ॥44॥
ಆ ದಿನಗಳಲ್ಲಿ ಸಾಯಿಯು ಯುವಕರಾಗಿದ್ದು, ಕೇಶಮುಂಡನವನ್ನೂ ಮಾಡಿಕೊಳ್ಳದೆ ಕೂದಲನ್ನು ಉದ್ದವಾಗಿ ಬೆಳೆಸಿದ್ದರು ಮತ್ತು ಒಬ್ಬ ಕುಸ್ತಿಪಟುವಿನ ರೀತಿ ಉಡುಪು ಧರಿಸುತ್ತಿದ್ದರು. ॥45॥
ಬಾಬಾರವರು ರಾಹತಾಗೆ ಹೋದಾಗಲೆಲ್ಲಾ ಚಂಡು ಹೂವು ಮತ್ತು ಮಲ್ಲಿಗೆ ಹೂವಿನ ಸಸಿಗಳನ್ನು ತರುತ್ತಿದ್ದರು. ಅವುಗಳನ್ನು ಬಂಜರು ಭೂಮಿಯಲ್ಲಿ ನೆಟ್ಟು ದಿನವೂ ನೀರು ಹಾಕುತ್ತಿದ್ದರು. ॥46॥
ವಾಮನ ತಾತ್ಯಾ ಎಂಬ ಭಕ್ತನೊಬ್ಬನು ನಿತ್ಯವೂ ಎರಡು ಹಸಿ ಮಡಕೆಗಳನ್ನು ಬಾಬಾರವರಿಗೆ ಕೊಡುತ್ತಿದ್ದನು. ಅದರಿಂದ ಬಾಬಾರವರು ತಮ್ಮ ಕೈಗಳಿಂದಲೇ ನೀರು ಹಾಕುತ್ತಿದ್ದರು. ॥47॥
ಬಾಬಾರವರು ಬಾವಿಯ ಹತ್ತಿರವಿದ್ದ ಕೊಳದಿಂದ ನೀರು ತುಂಬಿ ಹೆಗಲಮೇಲೆ ಹೊತ್ತು ತರುತ್ತಿದ್ದರು. ಸೂರ್ಯಾಸ್ತಮ ಸಮಯದಲ್ಲಿ ಆ ಮಡಕೆಗಳನ್ನು ಬೇವಿನ ಮರದ ಬುಡದಲ್ಲಿ ಇಡುತ್ತಿದ್ದರು. ॥48॥
ನೆಲದ ಪೀಲೆ ಇಟ್ಟ ಕೂಡಲೇ ಆ ಮಡಕೆಗಳು ಒಡೆದು ಹೋಗುತ್ತಿದ್ದವು. ಮಾರನೆಯ ದಿನ ಬೆಳಿಗ್ಗೆ ತಾತ್ಯಾ ಹೊಸ ಮಡಕೆಗಳನ್ನು ತಂದು ಕೊಡುತ್ತಿದ್ದನು. ॥೪9॥
ಸುಟ್ಟ ಮಡಕೆಯು ಬಹಳ ಬಾಳಿಕೆ ಬರುತ್ತದೆ. ಆದರೆ ಬಾಬಾರವರಿಗೆ ಕೇವಲ ಹೊಸದಾದ ಹಸಿ ಮಡಕೆಗಳೇ ಬೇಕಾಗಿದ್ದವು. ಆದ್ದರಿಂದ ಸುಡುವ ಗೋಜಿಗೇ ಹೋಗದೆ ಕುಂಬಾರನು ಮಡಕೆಗಳನ್ನು ಮಾರುತ್ತಿದ್ದನು. ॥50॥
ಮೂರು ವರ್ಷಗಳ ಕಾಲ ಇದು ಮುಂದುವರೆಯಿತು. ನಿರರ್ಥಕವಾದ ಜಮೀನು ಒಂದು ತೋಟವಾಗಿ ಪರಿವರ್ತಿತವಾಯಿತು. ಈ ನೆಲದ ಮೇಲೆಯೇ ಇಂದು 'ವಾಡಾ' ನೆಲೆಸಿದೆ ಹಾಗೂ ಭಕ್ತರಿಗೆ ನಿಕಟ ಸಂಬಂಧ ಉಂಟುಮಾಡುವ ಸ್ಥಳವಾಗಿದೆ. ॥51॥
ಇಲ್ಲಿ, ಬೇವಿನ ಮರದ ಕೆಳಗಡೆ ಭಾಯಿ ಎಂಬ ಭಕ್ತನು ಅಕ್ಕಲಕೋಟೆ ಸ್ವಾಮಿಯವರ ಪಾದುಕೆಗಳನ್ನು ಭಕ್ತರು ಪೂಜಿಸಲೆಂದು ಸ್ಥಾಪನೆಮಾಡಿದ್ದಾನೆ. ॥52॥
ಅಕ್ಕಲಕೋಟೆಯ ಸ್ವಾಮಿ ಸಮರ್ಥರು ಭಾಯಿಯ ಉಪಾಸ್ಯ ದೈವವಾಗಿದ್ದರು. ಭಾಯಿಯು ನಿತ್ಯವೂ ಭಕ್ತಿಯಿಂದ ಅವರ ಚಿತ್ರಪಟವನ್ನು ಪೂಜಿಸುತ್ತಿದ್ದನು. ॥53॥
ಅವನೊಮ್ಮೆ ಅಕ್ಕಲಕೋಟೆಗೆ ಹೋಗಿ ಅಲ್ಲಿ ಪಾದುಕೆಗಳ ದರ್ಶನವಾಡಿ ತನ್ನ ಮನಃಪೂರ್ವಕವಾಗಿ ಪೂಜಿಸಲು ಯೋಚಿಸಿದನು. ॥54॥
ಮಾರನೆಯ ದಿನ ಬೊಂಬಾಯಿನಿಂದ ಹೊರಡಲು ಸಿದ್ಧನಾದನು. ಆದರೆ ಅವನ ನಿರ್ಧಾರ ನೆರವೇರದೆ ಬದಲಾಗಿ ಶಿರಡಿಗೆ ಹೊರಟನು. ॥55॥
ಹೊರಡುವ ಹಿಂದಿನ ದಿನ ಅವನಿಗೆ ಒಂದು ಸ್ಪಪ್ನವಾಯಿತು. ಅಕ್ಕಲಕೋಟೆ ಸ್ವಾಮಿಗಳು ಆಜ್ಞಾಪಿಸುತ್ತಾರೆ - "ಈಗ ಶಿರಡಿಯೇ ನನ್ನ ವಾಸ ಸ್ಥಾನ. ನೀನು ಅಲ್ಲಿಗೇ ಹೋಗು" ಎ೦ದು. ॥56॥
ಅತಿ ಪೂಜ್ಯಭಾವನೆಯಿಂದ ಆಜ್ಞಾಧಾರಕನಾಗಿ ಭಾಯಿಯು ಬೊಂಬಾಯಿನಿಂದ ಹೊರಟನು. ಶಿರಡಿಯಲ್ಲಿ ಆರು ತಿಂಗಳುಗಳ ಕಾಲ ನೆಲೆಸಿ ಶಾಂತಿ, ಸಂತೋಷಗಳನ್ನು ಹೊಂದಿದರು. ॥57॥
ಭಾಯಿಯು ಪೂರ್ಣನಿಷ್ಠಾವಂತನಾಗಿದ್ದನು. ಆದ್ದರಿಂದ ಸ್ಪಷ್ನದರ್ಶನದ ಸ್ಮರಣಾರ್ಥವಾಗಿ ಸ್ವಾಮಿಯವರ ಪಾದುಕೆಗಳನ್ನು ಬೇವಿನಮರದ ಕೆಳಗೆ ಸ್ಥಾಪಿಸಿದನು. ॥58॥
ಶಕೆ 1834ರಲ್ಲಿ ಶುಕ್ಲ ಪಕ್ಷ; ಶ್ರಾವಣ ಮಾಸದ ಒಂದು ಮಂಗಳಕರವಾದ ದಿನದಂದು ಪಾದುಕೆಗಳನ್ನು ಬೇವಿನಮರದ ಕೆಳಗೆ ಪೂರ್ವಕವಾಗಿ ನಾಮಸಂಕೀರ್ತನೆ ಮಾಡುತ್ತ ಪ್ರತಿಷ್ಠಾಪಿಸಿದನು. ॥59॥
ಆ ಶುಭಮುಹೂರ್ತದಲ್ಲಿ ಪ್ರತಿಷ್ಠಾಪನಾ ಸಮಾರಂಭವು ದಾದಾ ಕೇಳ್ಕರ್‌ರವರಿಂದ ನೆರವೇರಿಸಲ್ಪಟ್ಟಿತು. ಶಾಸ್ತ್ರಪೂರ್ವಕ ವಿಧಿವಿಧಾನಗಳು ಉಪಾಸನಿ ಅವರಿಂದ ನೆರವೇರಿಸಲ್ಪಟ್ಟಿತು. ॥60॥
ಮುಂದೆ, ಆಚರಣೆಗಳನ್ನು ದೀಕ್ಷಿತ್‌ ಎ೦ಬ ಬ್ರಾಹ್ಮಣನಿಗೆ ಒಪ್ಪಿಸಲಾಯಿತು. ಅವನು ಪೂಜೆ ಮಾಡುವವನು. ಆಡಳಿತ ವ್ಯವಸ್ಥೆಯನ್ನು ಸಗುಣಿ ಎಂಬ ಭಕ್ತನಿಗೆ ವಹಿಸಲಾಯಿತು. ಇದು ಪಾದುಕೆಗಳ ಕತೆಯು. ॥61॥
ಈ ರೀತಿ ಸಂತರು ಅನಿರ್ಬಾಧಿತರು. ಭಗವ೦ತನ ನಿಜವಾದ ಅವತಾರ ಪುರುಷರು. ಭೂಮಿಯ ಮೇಲೆ ಮುಕ್ತಿಗಾಗಿ ಮತ್ತು ಮಾನವ ಕಲ್ಯಾಣಕ್ಕಾಗಿ ಅವತರಿಸುತ್ತಾರೆ. ॥62॥
ಕೆಲವು ದಿನಗಳ ನಂತರ ಒಂದು ವಿಶೇಷ ನಡೆಯಿತು. ಶ್ರೋತೃಗಳು ಶ್ರದ್ಧೆಯಿಂದ, ಗೌರವದಿಂದ ಕೇಳಿದಲ್ಲಿ ಆತ್ಚರ್ಯಪಡುತ್ತಾರೆ. ॥63॥
ಅಲ್ಲಿ ವೀಳೆಯದೆಲೆ ಮಾರುವ ಮೊಹಿದೀನ್‌ ಭಾಯಿ ಎಂಬುವವನಿದ್ದನು. ಅವನ ಮತ್ತು ಬಾಬಾರವರ ಮಧ್ಯೆ ಒಂದು ವಾಗ್ವಾದ ಹುಟ್ಟಿ ಕುಸ್ತಿ ಪಂದ್ಯಕ್ಕೆ ಪ್ರಜ್ವಲಿಸಿತು. ॥64॥
ಇಬ್ಬರೂ ನುರಿತ ಕುಸ್ಸಿಪಟುಗಳೆ. ಆದರೆ ವಿಧಿಯು ಶಕ್ತಿಯ ಮೇಲೆ ನಿರ್ಧಾರವಾಗುತ್ತದೆ. ಮೊಹಿದೀನ್‌ ಶಕ್ತಿವ೦ತನೆಂದು ಸಾಧಿಸಿದನು. ಬಾಬಾರವರು ನಿಶ್ಯಕ್ತರಾಗಿದ್ದರಿಂದ ಸೋತರು. ॥6॥
ಅನ೦ತರ ಅವರು ಒಂದು ನಿರ್ಧಾರ ತೆಗೆದುಕೊಂಡರು. ಬಾಬಾರವರು ಸಂಪೂರ್ಣವಾಗಿ ತಮ್ಮ ಉಡುಗೆಯನ್ನು ಬದಲಿಸಿದರು. ಅವರು ಒಂದು ಕಫನಿಯನ್ನು ಧರಿಸಿ, ಒಂದು ಕೌಪೀನವನ್ನು ಧರಿಸಿದರು. ತಮ್ಮ ತಲೆಯ ಸುತ್ತಲೂ ಒಂದು ಬಟ್ಟೆಯನ್ನು ಸುತ್ತಿದರು. ॥66॥
ಅವರು ಒಂದು ಗೋಣಿಚೀಲವನ್ನು ಕುಳಿತುಕೊಳ್ಳಲು ಮತ್ತು ಹಾಸಿಗೆಯನ್ನಾಗಿಸಲು ಉಪಯೋಗಿಸುತ್ತಿದ್ದರು. ಅವರು ಹರಿದು ಹೋದ, ಸವೆದು ಹೋದ ಚಿಂದಿಗಳಿಂದ ತೃಪ್ತರಾಗಿದ್ದರು. ॥67॥
ಸಾಯಿಯು ನಿತ್ಯವೂ ಹೇಳುತ್ತಾರೆ, - "ಬಡತನವು ಒಡೆತನಕ್ಕಿಂತ ಮಿಗಿಲು, ಸಿರಿತನಕ್ಕಿಂತ ಅತಿ ಉತ್ತಮ, ಪರಮಾತ್ಮನು ಬಡವರ ಬಂಧು"॥68॥
ಗ೦ಗಾಗೀರರೂ ಇದೇ ರೀತಿಯ ಸ್ಥಿತಿಯನ್ನು ದಾಟಿದ್ದರು. ಅವರಿಗೆ ಅಂಗಸಾಧನೆ ಅತಿ ಪ್ರಿಯವಾಗಿತ್ತು. ಒಮ್ಮೆ ಒಂದು ಕುಸ್ತಿಯ ಆಟದಲ್ಲಿ ಮಗ್ನರಾಗಿದ್ದಾಗ ಅವರಿಗೂ ಇದೇ ರೀತಿಯ ನಿರ್ವಿಕಾರತೆಯ ಭಾವ ಉಂಟಾಯಿತು. ॥69॥
ಒಂದು ಪ್ರಾಪ್ತ ಕಾಲದಲ್ಲಿ ಅವರಿಗೆ ಒಬ್ಬ ಸಿದ್ಧನ ವಾಣಿಯು ಕೇಳಿಸಿತು. "ಪ್ರತಿಯೊಬ್ಬನ ದೇಹ, ಪರಮಾತ್ಮನ ಸೇವೆಗಾಗಿ ಇದೆ ಮತ್ತು ಆ ಪರಮಾತ್ಮನ ಸೇವೆಯಲ್ಲಿಯೇ ಸವೆದುಹೋಗಬೇಕು." ॥70॥
ಅವರು ಕುಸ್ತಿಮಾಡುತ್ತಿರುವಾಗಲೇ ಈ ಅನುಗ್ರಹವಾಣಿಯು ಕೇಳಿಸಿತು. ಆದುದರಿಂದ ಅವರು ತಮ್ಮ ಸಾಂಸಾರಿಕ ಜೀವನವನ್ನು ತ್ಯಜಿಸಿ ಅಧ್ಯಾತ್ಮದ ಹಾದಿಯನ್ನು ಹಿಡಿದಿದ್ದರು. ॥71॥
ಪುರಿತಂಬೆಯ ಹತ್ತಿರ ನದಿಯ ಮಧ್ಯದಲ್ಲಿದ್ದ ಒಂದು ದ್ವೀಪದಲ್ಲಿ, ಬುವಾನ ಮಠವು ಇದ್ದಿತು. ಅಲ್ಲಿ ಕೆಲವರು ಶಿಷ್ಯರು ಅವರ ಸೇವೆಗಾಗಿ ನೆಲೆಸಿದ್ದರು. ॥72॥
ಸಾಯಿನಾಥರು ತಮಗೆ ಹಾಕಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ತಮ್ಮಷ್ಟಕ್ಕೆ ಎಂದೂ ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ॥73॥ 
ಹಗಲು ವೇಳೆ ಅವರು ಬೇವಿನಮರದ ಕೆಳಗೆ ಕುಳಿತಿರುತ್ತಿದ್ದರು. ಕೆಲವೊಮ್ಮೆ ಹಳ್ಳಿಯ ಹೊರವಲಯದಲ್ಲಿದ್ದ ಒಂದು ಹೊಳೆಯ ಪಕ್ಕದಲ್ಲಿದ್ದ ಬಾಬುಲ್‌ ಮರದ ಹರಡಿದ್ದ ಕೊಂಬೆಗಳ ನೆರಳಿನಲ್ಲಿ ಕುಳಿತಿರುತ್ತಿದ್ದರು. ॥74॥
ಕೆಲವು ಸಲ ಹಗಲಿನಲ್ಲಿ ಮನಸೋ ಇಚ್ಛೆ ತಿರುಗಾಡುತ್ತಿದ್ದರು. ಅಥವಾ ಮಧ್ಯಾಹ್ನದಲ್ಲಿ ಅಥವಾ ಬೆಳಗಿನ ಜಾವದಲ್ಲಿ ಸುಮಾರು ಇದು ಮೈಲು ದೂರದಲ್ಲಿರುವ ನೀಮಗಾಂವಕ್ಕೆ ನಡೆಯುತ್ತಿದ್ದರು. ॥75॥
ಪ್ರಸಿದ್ಧವಂಶವಾದ ತ್ರಿಂಬಕ್‌ಡಿಂಗ್ಲೆ ಕುಟುಂಬದವರು ನೀಮಗಾಂವನ ಜಾಗಿರದಾರಿಯನ್ನು ಹೊಂದಿದ್ದರು. ಬಾಬಾ ಸಾಹೇಬ್‌ ಡಿಂಗ್ಲೆ ಆ ಕುಟುಂಬದವನು. ಅವನನ್ನು ಕಂಡರೆ ಬಾಬಾಗೆ ಅತ್ಯಂತ ಪ್ರೀತಿ. ॥76॥
ಬಾಬಾರವರು ನೀಮ್‌ಗಾಂವನ್ನು ಸುತ್ತಿ ಬಂದಾಗಲೆಲ್ಲಾ ಅವನ ಮನೆಗೆ ಹೋಗಿ ಅವನೊಡನೆ ಬಹಳ ಪ್ರೀತಿಯಿಂದ ಮಾತನಾಡುತ್ತ ದಿನವನ್ನು ಕಳೆಯುತ್ತಿದ್ದರು. ॥77॥
ಅವನಿಗೆ ನಾನಾಸಾಹೇಬ್‌ ಎ೦ಬ ಕಿರಿಯ ಸೋದರನೊಬ್ಬನಿದ್ದನು. ಅವನಿಗೆ ಸಂತಾನವಿಲ್ಲದುದರಿಂದ ಖಿನ್ನ ಮನಸ್ಕನಾಗಿದ್ದನು. ॥78॥
ಅವನ ಮೊದಲ ಪತ್ನಿಯಿಂದ ಸಂತಾನದ ಸಾಧ್ಯತೆ ಇರಲಿಲ್ಲ. ಆದ್ದರಿಂದ ಅವನು ಎರಡನೆ ಬಾರಿ ಮದುವೆಯಾಗಿದ್ದನು. ಆದರೂ ವಿಧಿ ಬದಲಾಗಲಿಲ್ಲ. ವಿಧಿಬರಹವನ್ನು ತಪ್ಪಿಸುವವರಾರು? ॥79॥
ಅನ೦ತರ ಬಾಬಾಸಾಹೇಬರು ಸಾಯಿಯ ದರ್ಶನಕ್ಕಾಗಿ ಕಳಿಸಿದರು. ಸಾಯಿಯ ಆಶೀರ್ವಾದದಿಂದ ಒಬ್ಬ ಮಗನ ರೂಪದ ಪ್ರಸಾದ ಪಡೆದರು. ॥80॥
ಸಮಯ ಕಳೆದಂತೆ ಜನಸಮುದಾಯವು ಸಾಯಿಯ ದರ್ಶನಕ್ಕಾಗಿ ಮುಗಿಬೀಳುತ್ತಿತ್ತು. ಸಾಯಿಯ ಕೀರ್ತಿ ಹರಡಿ ಈ ವರ್ತಮಾನವು ಅಹಮದ್‌ನಗರವನ್ನು ತಲಪಿತು. ॥81॥
ಅಲ್ಲಿ ನಾನಾನು ಸರಕಾರಿ ವಲಯದಲ್ಲಿ ಓಡಾಡುತ್ತಿದ್ದನು. ಅಲ್ಲಿ ಅನೇಕ ಅಧಿಕಾರಿಗಳಿಂದ ಪ್ರಭಾವಿತನಾಗಿದ್ದು ಅವರಲ್ಲಿ ಚಿದಂಬರ ಕೇಶವ ಎನ್ನುವವನೊಬ್ಬನು ಜಿಲ್ಲಾಧಿಕಾರಿಗಳ ಕಾರ್ಯದರ್ಶಿಯಾಗಿದ್ದನು. ॥82॥
ಅವನಿಗೆ ಒಂದು ಪತ್ರ ಬರೆದು ಸಾಯಿ ಸಮರ್ಥರು ದರ್ಶನಕ್ಕೆ ಯೋಗ್ಯರು ಮತ್ತು ಅವನು ತನ್ನ ಪತ್ನಿ, ಪುತ್ರ ಮತ್ತು ಬಂಧುಮಿತ್ರರೊಡನೆ ಸಾಯಿಯ ದರ್ಶನಮಾಡಬೇಕೆಂದು ತಿಳಿಸಿದನು. ॥83॥
ಒಬ್ಬರಾದ ಮೇಲೊಬ್ಬರು ಈ ರೀತಿ ಅನೇಕ ಜನರು ಶಿರಡಿಗೆ ಬರಲು ಪ್ರಾರಂಭಿಸಿದರು. ಬಾಬಾರವರ ಕೀರ್ತಿ ಹರಡುತ್ತಿದ್ದಂತೆ ಭಕ್ತವೃಂದವೂ ಬೆಳೆಯತೊಡಗಿತು. ॥84॥
ಸಾಯಿಗೆ ಸಂಗದ ಅವಶ್ಯಕತೆಯಿಲ್ಲದಿದ್ದರೂ ದಿನವೆಲ್ಲ ಭಕ್ತಪರಿವಾರದಿಂದ ಸುತ್ತುವರೆದಿರುತ್ತಿದ್ದರು. ಆದರೆ ಸೂರ್ಯಾಸ್ತದನಂತರ ತಮ್ಮ ಶಿಥಿಲವಾದ ಮಸೀದಿಯಲ್ಲಿ ವಿತ್ರಮಿಸುತ್ತಿದ್ದರು. ॥85॥
ತಂಬಾಕಿನ ಚಿಲುಮೆ ಮತ್ತು ಒ೦ದು ಲೋಟ, ಜೊತೆಗೆ ಒಂದು ಸಟಕಾವನ್ನು ಯಾವಾಗಲೂ ತಮ್ಮೊಡನೆ ಇಟ್ಟುಕೊಳ್ಳುತ್ತಿದ್ದರು. ಮೊಣಕಾಲಿನವರೆಗಿನ ಒಂದು ಕಫನಿಯನ್ನು ಧರಿಸಿ ತಲೆಯ ಸುತ್ತ ಒಂದು ಬಿಳಿಯ ವಸ್ತ್ರವನ್ನು ಸುತ್ತಿಕೊಂಡಿರುತ್ತಿದ್ದರು. ॥86॥
ಆ ಒಗೆದ ವಸ್ತ್ರವನ್ನು ತಮ್ಮ ಎಡ ಕಿವಿಯ ಹಿಂದೆ ಕಲಾತ್ಮಕವಾಗಿ ಕೂದಲಿಗೆ ಗಂಟುಹಾಕಿ ಇಳಿಬಿಡುತ್ತಿದ್ದರು. ॥87॥
ಈ ರೀತಿ ಅವರ ಉಡುಪು ಇರುತ್ತಿತ್ತು. ಕೆಲವೊಮ್ಮೆ ಎಂಟು ದಿನಗಳವರೆಗೆ ಸ್ನಾನ ಮಾಡದೆ ಬರಿಗಾಲಲ್ಲಿ ಓಡಾಡುತ್ತಿದ್ದರು. ಅವರು ಕೇವಲ ಒಂದು ಗೋಣಿಚೀಲದ ಮೇಲೆ ಕುಳಿತಿರುತ್ತಿದ್ದರು. ॥88॥
ಅವರ ಆಸನವು ಸದಾ ಒಂದು ಚೀಲದ ತುಂಡು. ಅವರಿಗೆ ಮೆತ್ತನೆಯ ಒರಗುದಿ೦ಬು ಏನೆಂಬುದು ತಿಳಿದಿರಲಿಲ್ಲ. ಅವರಿಗೆ ಹಾಸಿಗೆ, ಆಡಂಬರಗಳು ಇರಲು ಹೇಗೆ ಸಾಧ್ಯ? ॥89॥
ಆ ದಿನಗಳಲ್ಲಿ, ಒಂದು ಹಳೆಯ ಚೀಲದ ತುಂಡು ಅವರ ಪ್ರೀತಿಪಾತ್ರ ಆಸನವಾಗಿತ್ತು. ಅದು 24 ಗಂಟೆಗಳೂ ಅಲ್ಲಿಯೇ ಇರಿತ್ತಿತ್ತು. ॥90॥
ಅದೊಂದೇ ಅವರ ಆಸನ ಮತ್ತು ಹಾಸಿಗೆ. ಅವರು ಕೌಪೀನವನ್ನು ಸೊಂಟಕ್ಕೆ ಬಿಗಿದಿರುತ್ತಿದ್ದರು. ಮತ್ತಾವುದೇ ಉಡುಪು ಇರಲಿಲ್ಲ, ಚಳಿಯನ್ನು ಓಡಿಸಲು ಕೇವಲ ಒಂದು ಧುನಿ ಇತ್ತು. ॥91॥
ಬಾಬಾರವರು ದಕ್ಷಿಣಾಭಿಮುಖವಾಗಿ ಎರಡು ಕಾಲುಗಳನ್ನೂ ಮಡಚಿ ಪದ್ಮಾಸನದಲ್ಲಿ ಕುಳಿತು ಎಡಗೈಯನ್ನು ಮಸೀದಿಯ ಕಟಕಟೆಯ ಮೇಲಿಟ್ಟು ಮುಂದಿರುವ ಧುನಿಯನ್ನು ತೀವುವಾಗಿ ದೃಷ್ಟಿಸುತ್ತಿರುತ್ತಿದ್ದರು. ॥92॥
ಅಹಂಕಾರ ಮತ್ತು ವಾಸನೆಗಳ ಜೊತೆಗೆ ಎಲ್ಲಾ ರೀತಿಯ ಆಸೆಗಳನ್ನು ಆಹುತಿಯಾಗಿ ಕೊಡುತ್ತಿದ್ದರು. ಸಾಂಸಾರಿಕ ಲೋಭ ಪ್ರವೃತ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಧುನಿಗೆ ಆಹುತಿ ನೀಡುತ್ತಿದ್ದರು. ॥93॥
ಈ ರೀತಿಯಲ್ಲಿ, ಅವರು ಜ್ಞಾನದ ಅಹಂಕಾರವನ್ನು ಪ್ರಜ್ವಲಿಸುತ್ತಿರುವ ಅಗ್ನಿಗೆ ಸಮರ್ಪಿಸಿ 'ಅಲ್ಲಾ ಮಾಲಿಕ್' ಎಂದು ಪುನಶ್ಚರಣೆ ಮಾಡುತ್ತ ಪರಮಾತ್ಮನ ನಾಮ ಪತಾಕೆಯನ್ನು ಅತಿ ಎತ್ತರದಲ್ಲಿ ಹಾರಿಸುತ್ತಿದ್ದರು. ॥94॥
ಆ ಮಸೀದಿಯು ಎಷ್ಟು ದೊಡ್ಡದಾಗಿತ್ತು? ಎಲ್ಲಾ ಜಾಗವನ್ನು ಸೇರಿಸಿದರೂ ಎರಡು ಕೋಣೆಗಳಷ್ಟು? ಇದ್ದು ಅಲ್ಲಿ ಅವರು ಕುಳಿತು, ವಾಸಮಾಡಿ, ನಿದ್ರಿಸುತ್ತಿದ್ದರು ಮತ್ತು ಎಲ್ಲರಿಗೂ ಸಂದರ್ಶನ ನೀಡುತ್ತಿದ್ದರು. ॥95॥
ಹಾಸಿಗೆ, ಮೆತ್ತನೆಯ ದಿಂಬು ಇವು ಇತ್ತೀಚಿನವುಗಳು. ಭಕ್ತರು ಅವರ ಸುತ್ತುವರೆದಿದ್ದಾಗ ಇದ್ದುದು. ಮೊದಲಿನ ದಿನಗಳಲ್ಲಿ ಯಾರೂ ಧೈರ್ಯವಾಗಿ ಅವರ ಹತ್ತಿರ ಹೋಗುತ್ತಿರಲಿಲ್ಲ. ॥96॥
ಸನ್‌ 1912 ಇಸವಿಯ ನಂತರ ಈ ಬದಲಾವಣೆ ಬಂದಿತು. ಮಸೀದಿಯ ಜೀರ್ಣೋದ್ಧಾರದ ಕೆಲಸವೂ ಆನಂತರವಷ್ಟೇ ಪ್ರಾರಂಭವಾಯಿತು. ॥97॥
ಮಸೀದಿಯ ನೆಲದಲ್ಲಿ ಮೊಳಕಾಲುದ್ದದ ಹಳ್ಳಗಳಿದ್ದವು. ಆದರೆ, ಭಕ್ತರ ಶ್ರದ್ಧಾಭಕ್ತಿಗಳಿಂದ ನೆಲವನ್ನು ಸಮತಟ್ಟುಮಾಡಿ ಶಾಹಬಾದಿ ಕಲ್ಲುಚಪ್ಪಡಿಗಳನ್ನು ಹಾಸಲಾಯಿತು. ॥98॥
ಮಸೀದಿಗೆ ಸ್ಥಳಾಂತರಮಾಡುವ ಮೊದಲು ಬಾಬಾರವರು ಟಾಕಿಯಾದಲ್ಲಿರುತ್ತಿದ್ದರು. ಅಲ್ಲಿ, ಬಹಳ ಸಮಯ ಶಾಂತರಾಗಿ, ಯಾರಿಂದಲೂ ತೊಂದರೆಗೊಳಗಾಗದೆ ಅಲ್ಲಿದ್ದರು. ॥99॥
ಇಲ್ಲಿ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಮನೋಹರವಾಗಿ ನಾಟ್ಯಮಾಡುತ್ತಿದ್ದರು. ಭಕ್ತಿಯಿಂದ ಮಧುರವಾಗಿ ಹಾಡುತ್ತಿದ್ದರು. ಜೊತೆಗೆ ತಂಬೂರಿಯ ಶೃತಿಯೂ ಇರುತ್ತಿತ್ತು. ॥100॥
ಮೊದಲ ದಿನಗಳಲ್ಲಿ ಸಾಯಿ ಸಮರ್ಥರು ಎಣ್ಣೆಯಿಂದ ದೀಪ ಉರಿಸಲು ಇಹುಡುತ್ತಿದ್ದರು. ಅದಕ್ಕಾಗಿ ಅವರು ಸ್ಪತಃ ಅಂಗಡಿಗಳಿಗೆ ಹೋಗಿ ಎಣ್ಣೆಯನ್ನು ಬೇಡುತ್ತಿದ್ದರು. ॥101॥
ಕೈಯಲ್ಲಿ ಒಂದು ಲೋಟದ ತರಹದ ಕುಡಿಯುವ ಪಾತ್ರೆಯನ್ನು ಹಿಡಿದು ಎಣ್ಣೆಗಾಗಿ ದಿನಸಿ ಅಂಗಡಿಯವರನ್ನು ಮತ್ತು ಎಣ್ಣೆ ಅಂಗಡಿಯವರನ್ನು ಬೇಡುತ್ತಿದ್ದರು. ಅದನ್ನು ತಂದು ಮಣ್ಣಿನ ಹಣತೆಯಲ್ಲಿ ತುಂಬಿಸುತ್ತಿದ್ದರು. ॥102॥
ಅವರು ಮಂದಿರಗಳಲ್ಲಿ ಮತ್ತು ಮಸೀದಿಗಳಲ್ಲಿ ದೀಪವನ್ನು ಉರಿಸುತ್ತಿದ್ದರು. ಇದು ಕೆಲವು ಸಮಯದವರೆಗೆ ಮುಂದುವರೆಯಿತು. ॥103॥
ದೀಪಾರಾಧನೆಯ ಬಗ್ಗೆ ಇದ್ದ ಒಲವಿನಿಂದಾಗಿ ದೀಪಾವಳಿಯನ್ನು ಬೆಳಕಿನಿಂದ ಆಚರಿಸುತ್ತಿದ್ದರು. ಹಗ್ಗವನ್ನು ಬತ್ತಿಯಾಗಿ ಹೊಸೆದು ಮಸೀದಿಯಲ್ಲಿ ದೀಪಗಳನ್ನು ಪ್ರಜ್ವಲಿಸುತ್ತಿದ್ದರು. ॥104॥
ಅವರು ಪ್ರತಿನಿತ್ಯವೂ ಎಣ್ಣೆಯನ್ನು ಉಚಿತವಾಗಿ ತರುತ್ತಿದ್ದರು. ಆದ್ದರಿದ ಒಮ್ಮೆ ಎಣ್ಣೆ ವ್ಯಾಪಾರಿಗಳೆಲ್ಲರೂ ಅವರಿಗೆ ತಿರುಗಿಬಿದ್ದು ಈ ಉಪದ್ರವವನ್ನು ತಪ್ಪಿಸಬೇಕೆಂದು ಪಿತೂರಿ ನಡೆಸಿದರು. ॥105॥
ಅನ೦ತರ, ಬಾಬಾರವರು ನಿತ್ಯದಂತೆ ಎಣ್ಣೆಯನ್ನು ಕೇಳಲು ಹೋದಾಗ, ಎಲ್ಲರೂ ನಿರಾಕರಿಸಿದಾಗ ಎಂತಹ ಸೋಜಿಗ ನಡೆಯಿತೆಂದು ನೋಡಿ. ॥106॥
ಬಾಬಾರವರು ಒಂದು ಮಾತನ್ನೂ ಆಡದೆ ಹಿಂತಿರುಗಿದರು. ಹಸಿ ಬತ್ತಿಯನ್ನು ಹಣತೆಗಳಲ್ಲಿಟ್ಟರು. ಎಣ್ಣೆ ಇಲ್ಲದಿದ್ದಾಗ ಅವರು ಏನು ಮಾಡಲು ಸಾಧ್ಯ? ಎಣ್ಣೆ ವ್ಯಾಪಾರಿಗಳು ಈ ತಮಾಷೆಯನ್ನು ನೋಡಲು ಕಾತರತೆಯಿಂದ ಕಾದರು. ॥107॥
ಬಾಬಾರವರು ಮಸೀದಿಯ ದಿಡ್ಡಿ ಗೋಡೆಯಮೇಲಿದ್ದ ಒಂದು ಮಡಕೆಯನ್ನು ತೆಗೆದುಕೊಂಡರು. ಅದರಲ್ಲಿ ಸ್ವಲ್ಪವೇ ಎಣ್ಣೆ (ಸಂಜೆ ದೀಪಹಚ್ಚಲೂ ಸಾಕಾಗದಷ್ಟು) ಇತ್ತು. ॥108॥
ನ೦ತರ ಆ ಎಣ್ಣೆಗೆ ನೀರನ್ನು ಹಾಕಿ ಬಾಬಾರವರು ಸ್ವಲ್ಪ ಕುಡಿದರು. ಈ ರೀತಿ ಪರಬ್ರಹ್ಮನಿಗೆ ಸಮರ್ಪಿಸಿ ಸ್ಟಲ್ಪ ತುದ್ಧವಾದ ನೀರನ್ನು ತೆಗೆದುಕೊಂಡರು. ॥109॥
ನಂತರ ಆ ನೀರನ್ನು ಹಣತೆಗಳಿಗೆಲ್ಲಾ ಹಾಕಿದರು. ಒಣ ಬತ್ತಿಗಳನ್ನು ಪೂರ್ತಿ ನೆನೆಸಿದರು. ಬೆಂಕಿ ಕಡ್ಡಿಗಳಿಂದ ಎಲ್ಲಾ ದೀಪಗಳನ್ನೂ ಎಲ್ಲರಿಗೂ ಕಾಣುವಂತೆ ಉರಿಸಿದರು. ॥110॥
ನೀರಿನಲ್ಲಿ ದೀಪಗಳು ಉರಿಯುತ್ತಿರುವುದನ್ನು ನೋಡಿ ಆ ವ್ಯಾಪಾರಿಗಳು, ವರ್ತಕರು ನಿಬ್ಬೆರಗಾದರು. ಅವರಿಗೆ ತಮ್ಮ ಮೇಲೆಯೇ ಬಾಬಾರವರಿಗೆ ಸುಳ್ಳು ಹೇಳಿದ್ದಕ್ಕಾಗಿ ಜಿಗುಪ್ಸೆ ಉಂಟಾಯಿತು. ॥111॥
ಒಂದು ತೊಟ್ಟು ಎಣ್ಣೆ ಇಲ್ಲದಿದ್ದರೂ ದೀಪಗಳು ಇಡೀ ರಾತ್ರಿಯೆಲ್ಲಾ ಪ್ರಜ್ವಲಿಸಿದವು. ವರ್ತಕರು ಸಾಯಿಕೃಪೆಯನ್ನು ಕಳೆದುಕೊಂಡರೆಂದು ಜನರು ಟೀಕೆ ಮಾಡಲು ಪ್ರಾರಂಭಿಸಿದರು. ॥112॥
ವ್ಯಾಪಾರಿಗಳು ಬಾಬಾರವರನ್ನು ಕಾರಣವಿಲ್ಲದೆ ಕಾತರಗೊಳಿಸಿ ಕಾಡಿದ್ದಕ್ಕಾಗಿ ಪಶ್ಚಾತ್ತಾಪಪಟ್ಟರು. ಸುಳ್ಳು ಹೇಳಿದ ಪಾಪಕ್ಕೊಳಗಾದರು. ಬಾಬಾರವರ ಶಕ್ತಿ ಎಷ್ಟು ಅಪರಿಮಿತವಾದದ್ದು ಎಂದು ಯೋಚಿಸಿದರು. ॥113॥
ಬಾಬಾರವರು ಇದರ ಬಗ್ಗೆ ಯಾವಾಗಲೂ ಯೋಚಿಸಲೇ ಇಲ್ಲ. ಅವರಿಗೆ ಯಾರ ಮೇಲೆಯೂ ಕೋಪ, ದ್ವೇಷಗಳಿರಲಿಲ್ಲ. ಅವರಿಗೆ ಸ್ನೇಹಿತರಾಗಲೀ, ಬಂಧುಗಳಾಗಲೀ ಇರಲಿಲ್ಲ. ಅವರಿಗೆ ಎಲ್ಲ ಜೀವಿಗಳಲ್ಲೂ ಸಮ ಭಾವವಿತ್ತು. ॥114॥
ಅದು ಹಾಗಿರಲಿ, ನಾವು ಹಿಂದಿನ ಘಟನೆಯ ಬಗ್ಗೆ ಮುಂದುವರೆಸೋಣ. ಕುಸ್ತಿಯಲ್ಲಿ ಮೊಹಿದ್ದೀನನು ಜಯಗಳಿಸಿದನು. ಅನಂತರದ ಚರಿತ್ರೆ ಬಹಳ ಕುತೂಹಲಕಾರಿಯಾಗಿದೆ. ದಯಮಾಡಿ ಗಮನವಿಟ್ಟು ಆಲಿಸಿರಿ. ॥115॥
ಕುಸ್ತಿಯ ಆಟದ ಐದು ವರ್ಷಗಳ ನಂತರ, ಅಹಮದ್‌ನಗರವಾಸಿಯಾದ ಜವಹರ್‌ ಆಲಿ ಎಂಬ ಫಕೀರನು ತನ್ನ ಶಿಷ್ಯರೊಡನೆ ರಾಹತಾದಲ್ಲಿ ನೆಲಸಲು ಬಂದನು. ॥116॥
ವೀರಭದ್ರ ದೇವಸ್ಥಾನದ ಹತ್ತಿರ ಇದ್ದ ಬಯಲು ಪ್ರದೇಶದಲ್ಲಿ ಫಕೀರನು ಮೊಕ್ಕಾಮು ಹೂಡಿದನು. ಆ ಫಕೀರನು ಬಹಳ ಅದೃಷ್ಟವಂತನು. ॥117॥
ಅವನು ಭಾಗ್ಯವಂತನಲ್ಲದಿದ್ದಲ್ಲಿ ಸಾಯಿಯಂತಹ ಮಹಾನ್‌ ಶಿಷ್ಯನನ್ನು ಹೇಗೆ ಪಡೆಯುತ್ತಿದ್ದ? ಸಾಯಿಯ ಪ್ರಖ್ಯಾತಿ ಈಗಾಗಲೇ ಹರಡಿತ್ತು. ॥118॥
ಆ ಹಳ್ಳಿಯಲ್ಲಿ ಅನೇಕ ತರಹದ ಜನರಿದ್ದರು. ಅವರಲ್ಲಿ ಕೆಲವರು ಮರಾಠಳೂ ಇದ್ದರು. ಅವರಲ್ಲೊಬ್ಬನು ಭಾಗು ಸದಾಫೆಲ್‌ ಅವರ ಸೇವಕನಾಗಿ ಬಂದನು. ॥119॥
ಫಕೀರನು ಒಬ್ಬ ಮಹಾನ್‌ ಪಂಡಿತನು. ಖುರಾನ್‌ ಶರೀಫ್ ಅವನಿಗೆ ಕರತಲಾಮಲಕವಾಗಿತ್ತು. ಅನೇಕ ಸ್ವಾರ್ಥಪರರು, ನಿಜವಾದ ಭಕ್ತರು, ಪರಮಾರ್ಥ ಇಚ್ಛಿಸುವವರು ಎಲ್ಲರೂ ಒಂದೇ ತರಹ ಅವನನ್ನು ಆರಾಧಿಸುತ್ತಿದ್ದರು. ॥120॥
ಅವನು ಈದ್‌ಗಾವನ್ನು ಕಟ್ಟಲು ಪ್ರಾರಂಭಿಸಿದನು. ಕೆಲವು ಕಾಲಾನಂತರ, ಅವನು ವೀರಭದ್ರಸ್ಥಾಮಿಯನ್ನು ಅಪವಿತ್ರಗೊಳಿಸಿದನೆಂಬ ಆಪಾದನೆಗೆ ಗುರಿಯಾದನು. ॥121॥
ಅಲ್ಲಿಗೆ ಈದ್‌ಗಾ ನಿರ್ಮಾಣ ನಿಂತಿತು. ಫಕೀರನನ್ನು ಹಳ್ಳಿಯಿಂದ ಹೊರಗೆ ಓಡಿಸಲಾಯಿತು. ಅಲ್ಲಿಂದ ಅವನು ಶಿರಡಿಗೆ ಬಂದು ಬಾಬಾರೊಡನೆ ಮಸೀದಿಯಲ್ಲಿ ವಾಸಮಾಡಿದನು. ॥122॥
ಫಕೀರನು ಮಧುರಭಾಷಿಯಾಗಿದ್ದನು. ಇಡೀ ಹಳ್ಳಿಯೇ ಅವನನ್ನು ಪೂಜಿಸಲಾರಂಭಿಸಿತು. ಬಾಬಾರವರೊಡನೆ ಅವನು ವರ್ತಿಸಿದ ರೀತಿಯನ್ನು ನೋಡಿ ಜನರು ಅವನು ಬಾಬಾರವರನ್ನು ವಶೀಕರಿಸಿಕೊಂಡಿದ್ದಾನೆಂದೇ ಭಾವಿಸಿದರು. ॥123॥
"ನೀನು ನನ್ನ ಶಿಷ್ಯನಾಗಿರು" ಎಂದು ಫಕೀರನು ಹೇಳಿದನು. ಬಾಬಾರವರು ಲೀಲಾ ವಿನೋದದಿಂದ ಒಪ್ಪಿದರು. ಫಕೀರನು ಸಂತೋಷದಿಂದ ಬಾಬಾರವರನ್ನು ತನ್ನೊಡನೆ ಕರೆದೊಯ್ದನು. ॥124॥
ಅವನಿಗೆ ಬಾಬಾರಂತಹ ವಿಧೇಯ ಶಿಷ್ಯ ದೊರಕಿದರು. ಜವಹರ್‌ ಆಲಿ ಗುರುವಾದನು. ಇಬ್ಬರೂ ಒಟ್ಟಿಗೆ ರಾಹತಾದಲ್ಲಿ ವಾಸಮಾಡಲು ನಿಶ್ಚಯಿಸಿದರು. ॥125॥
ಗುರುವಿಗೆ ಶಿಷ್ಯನ ಪಾಂಡಿತ್ಯದ ಅರಿವಿರಲಿಲ್ಲ. ಆದರೆ ಶಿಷ್ಯನಿಗೆ ಗುರುವಿನ ನ್ಯೂನತೆಗಳು ತಿಳಿದಿದ್ದುವು. ಆದರೂ ಅವರು ಎಂದಿಗೂ ಅಗೌರವವನ್ನು ವ್ಯಕ್ತಪಡಿಸಲಿಲ್ಲ, ಶಿಷ್ಯತರ್ತವ್ಯವನ್ನು ನೆರವೇರಿಸಿದರು. ॥126॥
ಗುರುವಿನ ಆಜ್ಞೆಯನ್ನು ಎಂದಿಗೂ ವಿಮರ್ಶಕವಾಗಿ ಆಲೋಚಿಸಲಿಲ್ಲ. ಅವುಗಳನ್ನು ಕೂಲಂಕಶವಾಗಿ ನೆರವೇರಿಸಿದರು. ಅವರು ಗುರುವಿಗೆ ನೀರು ಹೊತ್ತುಕೊಂಡು ಬರುವಂತಹ ಕೆಲಸದಾಳು ಮಾಡುವ ಕೆಲಸಗಳನ್ನೂ ಮಾಡುತ್ತಿದ್ದರು. ॥127॥
ಈ ರೀತಿ ಗುರುವಿನ ಶುಶ್ರೂಷೆ ಮುಂದುವರಿಯಿತು. ಶಿರಡಿಯ ಭೇಟಿ ವಿರಳವಾಯಿತು. ಈ ರೀತಿ ನಡೆದಾಗ ಮುಂದೇನಾಯಿತೆಂದು ಹೇಳುವೆನು. ॥128॥
ಸ್ವಲ್ಪ ಸಮಯ ಇದು ನಡೆಯಿತು. ಅವರು ರಾಹತಾದಲ್ಲೇ ವಾಸಮಾಡಲು ಪ್ರಾರಂಭಿಸಿದರು. ಅವರು ಪೂರ್ಣವಾಗಿ ಶಿರಡಿಯನ್ನು ತೊರೆದು ಫಕೀರನ ಅಧೀನರಾದರೆಂದು ಜನರು ಯೋಚಿಸಿದರು. ॥129॥
ಜವಹರ್‌ ಆಲಿಯು ತನ್ನ ಯೋಗಶಕ್ತಿಯಿಂದ ಸಾಯಿಯನ್ನು ಪೂರ್ಣವಾಗಿ ವಶಪಡಿಸಿಕೊಂಡಿರುವನೆಂದು ಜನರು ಯೋಚಿಸಿದರು.
ಆದರೆ ಸಾಯಿಯ ದೃಷ್ಟಿಕೋನ ಬೇರೇ ಅತ್ತು. ಅವರು ದೇಹಾಭಿಮಾನವನ್ನು ನಾಶಮಾಡಲು ಇಚ್ಛಿಸಿದ್ದರು. ॥130॥
ಜನರು ಊಹಿಸಿದರು, "ಸಾಯಿಗೆ ಅಭಿಮಾನವಾದರೂ ಎಲ್ಲಿತ್ತು" ಆದರೆ ಈ ವರ್ತನೆ ಜನರಿಗಾಗಿ ಒಂದು ಉದಾಹರಣೆಯಾಗಿ ನಿರೂಪಿಸಲು ಆಗಿತ್ತು. ಇದೇ ಅವತಾರದ ನಿಜವಾದ ಉದ್ದೇಶ. ॥131॥
ಶಿರಡಿಯಲ್ಲಿ ಬಾಬಾರವರನ್ನು ಪ್ರೀತಿಸುವ ಅನೇಕ ಭಕ್ತರಿದ್ದರು. ಅವರು ಜಬಾರವರಲ್ಲಿ ಆಸಕ್ತರಾಗಿದ್ದರು. ಬಾಬಾರವರಿಂದ ದೂರ ಇರುವುದು ನ್ಯಾಯಸಮ್ಮತವಲ್ಲ ಎಂದು ಆಲೋಚಿಸಿದರು. ॥132॥
ಆದರೆ ಸಾಯಿಯಾದರೋ ಜವಹರ್‌ ಆಲಿಗೆ ಸಂಪೂರ್ಣವಾಗಿ ಶರಣಾಗಿದ್ದರು. ಈ ಪರಿಸ್ಥಿತಿಯನ್ನು ಕಂಡ ಹಳ್ಳಿಯವರು ಅತಿಯಾಗಿ ನೊಂದುಕೊಂಡರು. ಅವರು ಬಾಬಾರವರನ್ನು ಹಿಂದಕ್ಕೆ ಪಡೆಯುವ ಬಗ್ಗೆ ಗಂಭೀರವಾಗಿ ವಿಚಾರಮಾಡಲಾರಂಭಿಸಿದರು. ॥133॥ 
ಚಿನ್ನದ ಜೊತೆಯಲ್ಲಿಯೇ ಅದರ ಹೊಳಪು, ದೀಪದ ಜೊತೆಯಲ್ಲಿಯೇ ಅದರ ಪ್ರಕಾಶ ಇರುವ ರೀತಿಯಲ್ಲಿ ಗುರುಶಿಷ್ಯರ ಅವಿನಾಭಾವ ಸಂಬಂಧ ಇರುತ್ತದೆ. ॥134॥
ಭಕ್ತರ ಗುಂಪೊಂದು ಶಿರಡಿಯಿಂದ ರಾಹತಾಗೆ ಹೋಯಿತು. ಅಲ್ಲಿ ಈದ್‌ಗಾ ಹತ್ತಿರ ಇದ್ದ ಬಾಬಾರವರನ್ನು ಒಪ್ಪಿಸಿ ತಮ್ಮೊಡನೆ ಕರೆದೊಯ್ಯುವ ಪ್ರಯತ್ನ ಮಾಡಲು ಬಂದರು. ॥135॥
ಆದರೆ ಬಾಬಾರವರು ತದ್ದಿರುದ್ಧವಾಗಿ ಹೇಳಿದರು. "ಫಕೀರನು ಬಹಳ ಮುಂಗೋಪಿ. ಅವನೊಡನೆ ಅಡ್ಡ ಮಾತನಾಡಬೇಡಿ. ಅವನು ನನ್ನನ್ನೆಂದಿಗೂ ಬಿಡುವುದಿಲ್ಲ. ॥136॥
"ನೀವು ಇಲ್ಲಿಂದ ಹೊರಟರೆ ಒಳ್ಳೆಯದು. ಯಾವ ಕ್ಷಣವಾದರೂ ಅವನು ಹಳ್ಳಿಯಿಂದ ಹಿಂತಿರುಗಬಹುದು. ಅವನು ನಿಮ್ಮನ್ನು ಬೈಯುತ್ತಾನೆ. ಅವನ ಕ್ರೋಧ ಅತಿ ಭಯಂಕರ. ॥137॥
"ಅವನು ಹಿಂತಿರುಗಿದ ಕೂಡಲೇ ಕೋಪದಿಂದ ಕೆಂಡಾಮಂಡಲವಾಗುತ್ತಾನೆ. ಅವನ ಕೋಪ ಅತಿ ಭಯಂಕರ. ಓಹ್‌! ನೀವು ಕೂಡಲೇ ಹೊರಡಿ. ಶಿರಡಿಯ ಮಾರ್ಗ ಹಿಡಿಯಿರಿ". ॥137॥
ಈಗ ಯಾವ ತಿರುವು ತೆಗೆದುಕೊಳ್ಳುತ್ತದೆ? ಬಾಬಾರವರು ವಿರುದ್ಧವಾದ ದೃಷ್ಟಿಕೋನವನ್ನು ಪ್ರಕಟಿಸಿದರು. ಆ ಕೂಡಲೇ ಫಕೀರನು ಅನಿರೀಕ್ಷಿತವಾಗಿ ಹಿಂತಿರುಗಿದನು ಮತ್ತು ಅವರನ್ನು ಈ ರೀತಿ ಪ್ರಶ್ನಿಸಿದನು. ॥138॥
"ನೀವು ಈ ಯುವಕನಿಗಾಗಿ ಬಂದಿರಾ? ಇಲ್ಲಿ ಏನು ಮಾಡುತ್ತಿದ್ದೀರಿ? ಅವನನ್ನು ಶಿರಡಿಗೆ ಕರೆದೊಯ್ಯುವ ಚಿತ್ತವಿತ್ತೇನು? ಆದರೆ ಆ ತೊಂದರೆ ತೆಗೆದುಕೊಳ್ಳಬೇಡಿ". ॥139॥
ಮೊದಲು ಈ ರೀತಿ ಮಾತನಾಡಿದ್ದರೂ, ಅವನು ಹಳ್ಳಿಗರ ಒತ್ತಾಯಕ್ಕೆ ಮಣಿದು ಹೇಳಿದನು - "ನನ್ನನ್ನೂ ಹಳ್ಳಿಗೆ ಏಕೆ ಕರೆದೊಯ್ಯಬಾರದು? ನಾವು ಈ ತರುಣನನ್ನೂ ನಮ್ಮ ಜೊತೆಗೆ ಕರೆತರುತ್ತೇವೆ". ॥140॥
ಹಾಗೆ ಫಕೀರನು ಅವರ ಜೊತೆಯಲ್ಲಿ ಹೊರಟನು. ಅವನು ಬಾಬಾರವರನ್ನು ಬಿಡಲಿಲ್ಲ ಮತ್ತು ಬಾಬಾರವರೂ ಅವನನ್ನು ಬಿಡಲಾಗಲಿಲ್ಲ. ಈ ರೀತಿ ಹೇಗೆ ಆಯಿತೆಂದು ಯಾರಿಗೂ ತಿಳಿಯಲಿಲ್ಲ. ॥141॥
ಸಾಯಿಯು ಸಾಕ್ಷಾತ್‌ ಪರಬ್ರಹ್ಮನ ಅವತಾರ. ಆದರೆ ಜವಹರ್‌ ಆಲಿಯು ಒಬ್ಬ ನಕಲಿ ವೇಷಧಾರಿ, ದೇವೀದಾಸನು ಅವನನ್ನು ಪರೀಕ್ಷಿಸಿದನು. ಅದೇ ರೀತಿ ಶಿರಡಿಯಲ್ಲಿ ಬೆಕ್ಕು ಚೀಲದಿಂದ ಹೊರಗೆ ಬಂದಿತು. ॥142॥
ದೇವಿದಾಸನಿಗೆ ಒಳ್ಳೆಯ ದೇಹದಾರ್ಡ್ಯವಿತ್ತು ಹೊಳೆಯುವ ಕಣ್ಣುಗಳು ಮತ್ತು ಆಕರ್ಷಕ ನೋಟ. ಅವನು ಶಿರಡಿಗೆ ಬಂದಾಗ 10-11 ವರ್ಷ ವಯಸ್ಸಿನವನಾಗಿದ್ದನು. ॥144॥
ಆ ಕೋಮಲ ಮನಸ್ಸಿನಲ್ಲಿ ಕೌಪೀನಧಾರಿಯಾಗಿ, ಯಾತ್ರಾರ್ಥಿಯಾಗಿ ಬಂದವನು ಮಾರುತಿದೇವಾಲಯದಲ್ಲಿ ನೆಲೆಸಿದನು. ॥145॥ 
ಆಪ್ಪ ಭಿಲ್ಲ ಮತ್ತು ಮ್ಹಾಳಸಾಪತಿಯವರು ನಿಯಮಿತವಾಗಿ ಅವನನ್ನು ಭೇಟಿಯಾಗುತ್ತಿದ್ದರು. ಕಾಶೀರಾಂ? ಮತ್ತಿತರರು
ಅವನಿಗೆ ಭಿಕ್ಷೆ ನೀಡುತ್ತಿದ್ದರು. ಈ ರೀತಿ ಅವನ ಕೀರ್ತಿ ಹರಡಿತು. ॥146॥
ಬಾಬಾರವರು ಮದುವೆಯ ದಿಬ್ಬಣದ ಜೊತೆಯಲ್ಲಿ ಶಿರಡಿಗೆ ಬಂದ ಹನ್ನೆರಡು ವರ್ಷಗಳ ಮೊದಲು ದೇವೀದಾಸನು ಬಂದು ಶಿರಡಿಯಲ್ಲಿ ನೆಲೆಸಿದ್ದನು. ॥147॥
ಆಪ್ಪ ಭಿಲ್ಲನಿಗೆ ಬಳಪದ ಕಲ್ಲಿನ ಮೇಲೆ ಬರೆಯುತ್ತ ವೆಂಕಟೇಶ ಸೂತ್ರವನ್ನು ಕಲಿಸಲಾಯಿತು. ಎಲ್ಲರೂ ಬಾಯಿಪಾಠಮಾಡಿ ಕಲಿಯುವಂತಾಯಿತು. ಈ ಪಾಠಗಳನ್ನು ಕ್ರಮವಾಗಿ ಪ್ರತಿನಿತ್ಯ ಕಲಿಸಲಾಯಿತು. ॥148॥
ದೇವಿದಾಸನು ಮಹಾಜ್ಞಾನಿಯಾಗಿದ್ದನು. ತಾತ್ಯಾಬಾ ಅವನನ್ನು ಗುರುವೆಂದು ಪರಿಗಣಿಸಿದ್ದನು. ಕಾಶೀನಾಥ ಮತ್ತಿತರರು ಅವನ ಪ್ರಮುಖ ಶಿಷ್ಯರಾದರು ಮತ್ತು ಅವನನ್ನು ಆರಾಧಿಸಿದರು. ॥149॥
ಫಕೀರ(ಜವಹರ್‌ ಆಲಿ)ನನ್ನು ದೇವೀದಾಸರ ಮುಂದೆ ಕರೆತರಲಾಯಿತು. ಶಾಸ್ತ್ರಗಳ ಬಗ್ಗೆ ವಾಗ್ದಾದವನ್ನು ಏರ್ಪಡಿಸಲಾಯಿತು. ಬೈರಾಗಿಯು (ದೇವೀದಾಸ) ಫಕೀರನನ್ನು ಸೋಲಿಸಿದನು. ಫಕೀರನನ್ನು ಅಲ್ಲಿಂದ ಓಡಿಸಲಾಯಿತು. ॥150॥
ಅವನು ಅಲ್ಲಿಂದ ಓಡಿಹೋದಮೇಲೆ, ವೈಜಾಪುರದಲ್ಲಿ ನೆಲೆಸಿದನು. ನಂತರ ಅನೇಕ ವರ್ಷಗಳ ನಂತರ ಹಿಂತಿರುಗಿ ಬಂದು ಸಾಯಿನಾಥರಿಗೆ ಶರಣಾದನು. ॥151॥
ಈ ರೀತಿ 'ನಾನು ಗುರು ಮತ್ತು ಸಾಯಿಯು ಶಿಷ್ಯ' ಎಂಬುದು ತಪ್ಪು ಎಂದು ತಿಳಿಯಿತು. ಬಾಬಾರವರು ಹಿಂದಿನಂತೆಯೇ ಅವನನ್ನು ಸ್ವೀಕರಿಸಿದರು. ಅವನು ಪಶ್ಚಾತ್ತಾಪದಿಂದ ಪರಿತುದ್ಧನಾಗಿದ್ದನು. ॥152॥
ಬಾಬಾರವರ ಲೀಲೆಗಳು ಈ ರೀತಿಯಾಗಿ ನಿಗೂಢ. ಫಕೀರನ ಭ್ರಮೆ ದೂರವಾಗುವ ಕಾಲ ವಿಧಿವತ್ತಾಗಿ ಬರುವವರೆಗೆ ಸಾಯಿಯು ನಾಟಕವನ್ನಾಡಿದರು. ॥153॥
ಸಾಯಿನಾಥರು ಗುರುಶಿಷ್ಯರ ಸಂಬಂಧವನ್ನು ತಾವೇ ಕಾರ್ಯರೂಪವಾಗಿ ತೋರಿಸಿ ಗೌರವಿಸಿದರು. ಅವರು ಅವನಿಗೆ ಗುರುವಿನ ಸ್ಥಾನಮಾನವನ್ನು ಅನುಭವಿಸಲು ಅನುವುಮಾಡಿಕೊಟ್ಟು ತಾವು ಸ್ಪತಃ ವಿದ್ಯಾರ್ಥಿ ಸ್ಥಾನವನ್ನು ಒಪ್ಪಿಕೊಂಡರು. ॥154॥
ನಾವು ಒಬ್ಬರಿಗಾಗಿ ಆಗಬೇಕು ಅಥವಾ ಮತ್ತೊಬ್ಬರು ನಮಗಾಗಿ. ಇದರಿಂದ ಬೇರೆ ಯಾವುದೇ ಆದರೂ ಅದು ಸರಿಯಲ್ಲ. ಅದಿಲ್ಲದೆ ಭವಸಾಗರವನ್ನು ದಾಟಲು ಸಾಧ್ಯವಿಲ್ಲ. ॥155॥
ಅವರ ವರ್ತನೆಯಿಂದ ಈ ಪಾಠವನ್ನು ಮಾತ್ರ ಕಲಿಯಬಹುದು. ಈ ರೀತಿಯ ಧೈರ್ಯ, ಆತ್ಮಸ್ಥೈರ್ಯ ಮತ್ತು ನಿರ್ಭಯತೆಗಳನ್ನು ನೋಡುವುದು ಅತಿದುರ್ಲಭ. ಈ ಉದಾಹರಣೆಯನ್ನು ಅನುಸರಿಸುವವರು ನಿರಭಿಮಾನವನ್ನು ಪಡೆಯುವರು. ॥156॥
ಇ೦ತಹ ವಿಷಯಗಳಲ್ಲಿ ಸ್ಪಬುದ್ಧಿ, ಚತುರತೆಗಳು ಕೆಲಸಕ್ಕೆ ಬರುವುದಿಲ್ಲ. ತನಗೆ ಒಳ್ಳೆಯದಾಗಲೆಂದು ಬಯಸುವವನು ನಿರಭಿಮಾನಿಯಾಗಿ ವರ್ತಿಸಬೇಕು. ॥157॥
ದೇಹಾಭಿಮಾನವನ್ನು ಸುಟ್ಟಿರಿವಂತಹ ಮಾನವನು ಮಾತ್ರವೇ ತನ್ನ ದೇಹವನ್ನು ಸಾರ್ಥಕವಾಗಿ ಉಪಯೋಗಿಸಿರುತ್ತಾನೆ. ಪರಮಾರ್ಥವನ್ನು ಸಾಧಿಸಲು ಅವನು ಯಾರದಾದರೂ ಶಿಷ್ಯ ಅಥವಾ ಹಿಂಬಾಲಕನಾಗಬಹುದು. ॥158॥
ಕಿರಿಯರು ಮತ್ತು ಹಿರಿಯರೆಲ್ಲರೂ ಒಬ್ಬ ಚಿಕ್ಕ ತರುಣ, ಸು೦ದರ ಯುವಕನಲ್ಲಿನ ಮನಸ್ಸಿನ ಅಸಮಾನತೆಯ ಸ್ಥಿತಿಯನ್ನು ನೋಡಿ ಅಚ್ಚರಿಗೊಂಡರು. ಜನರೆಲ್ಲರೂ ಅವನನ್ನು ಆರಾಧಿಸಿದರು ಮತ್ತು ಅಚ್ಚರಿಗೊ೦ಡರು. ॥159॥
ಆತ್ಮಜ್ಞಾನಿಯ ಕರ್ಮಗಳು ಅವನ ಹಿಂದಿನ ಕರ್ಮಗಳ ಮೇಲೆ ಆಧಾರಿತವಾಗಿರುತ್ತವೆ. ಆದರೆ ಅವು ಯಾವುವೂ ಬಂಧನವಲ್ಲ. ಅವನು ನಿಜವಾಗಿ ಕರ್ತೃವೇ ಆಗುವುದಿಲ್ಲ. ॥160॥
ಸೂರ್ಯನು ಕತ್ತಲಲ್ಲಿ ನಿಲ್ಲಲಾರ. ಅದೇ ರೀತಿ ಜ್ಞಾನಿಯು ದ್ವೈತಭಾವದಲ್ಲಿ ನಿಲ್ಲಲಾರನು. ಅವನಿಗೆ ಇಡೀ ವಿಶ್ವವೇ ಅವನ ಸ್ವಸ್ತರೂಪವು. ಅವನು ಅದ್ವೈತದಲ್ಲಿಯೇ ನೆಲಸಿರುತ್ತಾನೆ. ॥161॥ ಈ ಗುರು ಶಿಷ್ಯರ ಚರಿತ್ರೆಯನ್ನು ಸಾಯಿನಾಥರ ಪರಮಭಕ್ತ ಮ್ಹಾಳಸಾಪತಿಯವರು ತಿಳಿಸಿರುತ್ತಾರೆ. ಅದನ್ನು ಮೊದಲಿನಿಂದ ಕೊನೆಯವರೆಗೆ ನಾನು ಅವರಿಂದ ಕೇಳಿದಂತೆ ತಿಳಿಸಿರುತ್ತೇನೆ. ॥162॥
ಈ ಚರಿತ್ರೆಯನ್ನು ಈಗ ಮುಗಿಸೋಣ. ಮುಂದಿನದು ಇನ್ನೂ ಹೆಚ್ಚು ಗಾಢಪ್ರಜ್ಞೆಯುಳ್ಳದ್ದು ಅದನ್ನು ಅನುಕ್ರಮಾನುಸಾರ ತಿಳಿಸುತ್ತೇನೆ. ದಯಮಾಡಿ ಗಮನವಿಟ್ಟು ಕೇಳಿರಿ. ॥163॥
ಮಸೀದಿಯ ಪೂರ್ವಸ್ಥಿತಿ ಯಾವ ರೀತಿ ಇತ್ತು. ಅದನ್ನು ಎಷ್ಟು ಶ್ರಮವಹಿಸಿ ಸಮತಟ್ಟು ಮಾಡಿದರು. ಸಾಯಿಯು ಹಿಂದುವೋ ಮುಸ್ಲಿಮನೋ ಯಾರಿಗೂ ನಿಖರವಾಗಿ ತಿಳಿದಿಲ್ಲ. ॥164॥
ಮುಂದಿನ ಅಧ್ಯಾಯದಲ್ಲಿ ಅನುಕ್ರಮವಾಗಿ ಈ ವಿವರಗಳು ತಿಳಿಸಲ್ಪಟ್ಟಿವೆ. ಬಾಬಾರವರ ಯೋಗಶಕ್ತಿಯಲ್ಲಿ ಧೂತಿಪೋಟ ಮತ್ತು ಖಂಡಯೋಗ' ಮತ್ತು ಭಕ್ತರ ಕರ್ಮಫಲಗಳನ್ನು ತಾವು ಸ್ವೀಕಾರಮಾಡಿರುವ ಬಗ್ಗೆ. ॥165॥
ಹೇಮಾದನು ಸಾಯಿಗೆ ಶರಣಾಗುತ್ತಾನೆ. ಈ ಕಥಾಚರಿತ್ರೆಯ ವಿವರಣೆಯು ಅವನ ಅನುಗ್ರಹದಿಂದ ಮಾತ್ರ. ಇಂತಹ ಪುಣ್ಯಕರ ಮತ್ತು ಪವಿತ್ರ ಕಥೆಯು ಅಜ್ಞಾನವನ್ನು ದೂರಮಾಡುತ್ತದೆ. ॥166॥

ಎಲ್ಲರಿಗೂ ಶುಭವಾಗಲಿ.

ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಸಾಯಿಯ ಪುನರ್ದರ್ಶನ" ಎಂಬ ಐದನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.

ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.

[ಸನ್ಮಂಗಳವಾಗಲಿ।

Saturday, October 10, 2020

04 ಸಾಯಿ ಸಮರ್ಥರ ಅವತರಣ/ Sai Baba's First Advent in Shirdi

 ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ಸಾಯಿ ಸಮರ್ಥರ ಅವತರಣ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


 

ಹಿಂದಿನ ಎರಡು ಅಧ್ಯಾಯಗಳಲ್ಲಿ ಪ್ರಥಮ ಪ್ರಾರ್ಥನೆ ಮಾಡಲಾಯಿತು. ಅನಂತರ ಈ ಗ್ರಂಥ ರಚನೆಯ ಉದ್ದೇಶ ತಿಳಿಸಲಾಯಿತು ಮತ್ತು ಗ್ರಂಥರಚನಕಾರನ ಅರ್ಹತೆ, ಮುನ್ನುಡಿಯಲ್ಲಿ ಗ್ರಂಥ ರಚನೆಯ ಗುಣಲಕ್ಷಣ ಮತ್ತು ಇತರ ವಿವರಗಳನ್ನು ಚರ್ಚಿಸಲಾಯಿತು. 1

ಸಂತರು ಯಾವ ಕಾರಣಕ್ಕಾಗಿ ಭೂಮಿಯ ಮೇಲೆ ಅವತಾರವೆತ್ತುತ್ತಾರೆ ಮತ್ತು ಮಾನವರ ಪಾಪಕರ್ಮಗಳೇ ಅದಕ್ಕೆ ಕಾರಣವೆಂಬುದನ್ನೂ ಈಗ ಪ್ರಸ್ತಾಪಿಸುತ್ತೇನೆ. ॥2॥

ಓ ಶ್ರೋತೃ ಮಹಾಶಯರೇ! ನಾನು ನಿಮ್ಮ ಚರಣಧೂಲಿಯ ಒಂದು ಕಣ, ಗಮನವಿಟ್ಟು ಕೇಳಿರಿ ಎಂದು ನಿಮ್ಮನ್ನು ಯಾಚಿಸುತ್ತೇನೆ. ನನಗೇನೂ ಯಾಚಿಸಲು ನಾಚಿಕೆ ಇಲ್ಲ. 3

ಅದಾಗಿ ಒಬ್ಬ ಸಂತರ ಜೀವನ ಚರಿತ್ರೆಯು ಆಹ್ಲಾದಕರ. ಅದೂ ಅಲ್ಲದೆ ಸಾಯಿಕಥೆಯಂತೂ ಅಮೃತವೇ. ಸಾಯಿಯ ಅಸಂಖ್ಯಾತ ಭಕ್ತರು ಇದನ್ನು ಅನುಭವಿಸಿ ಆನಂದ ಭರಿತರಾಗುತ್ತಾರೆ. 4

ಬ್ರಾಹ್ಮಣರು ತಮ್ಮ ವರ್ಣಾಶ್ರಮ ಧರ್ಮವನ್ನು ಅಲಕ್ಷ್ಯ ಮಾಡುತ್ತಿದ್ದಾರೆ. ಶೂದ್ರರು ಬ್ರಾಹ್ಮಣರನ್ನು ಮೀರುತ್ತಿದ್ದಾರೆ. ಧಾರ್ಮಿಕ ಗುರುಗಳು ಅಗೌರವ ಹೊಂದುತ್ತಿದ್ದಾರೆ ಮತ್ತು ಜನರು ಇತರರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. 5

ಧರ್ಮ ಸೂಕ್ಷ್ಮಗಳನ್ನು ಯಾರೂ ಪಾಲಿಸುತ್ತಿಲ್ಲ. ಪ್ರತಿ ಮನೆಯಲ್ಲೂ ಎಲ್ಲರೂ ಸ್ವಾರ್ಥಪರ ಪಂಡಿತರೇ. ಒಬ್ಬರು ಮತ್ತೊಬ್ಬರನ್ನು ವಶೀಕರಣ ಮಾಡುತ್ತಿದ್ದಾರೆ ಮತ್ತು ಯಾರೂ ಇನ್ನೊಬ್ಬರ ಮಾತನ್ನು ಕೇಳುತ್ತಿಲ್ಲ. 6

ನಿಷಿದ್ಧವಾದ ಪಾನಿಯಗಳನ್ನು ಸೇವಿಸುತ್ತಿದ್ದಾರೆ. ಭಕ್ಷ್ಯಗಳನ್ನು ಭಕ್ಷಿಸುತ್ತಿದ್ದಾರೆ. ಆಚಾರ ವಿಚಾರಗಳನ್ನು ಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಮತ್ತು ಬ್ರಾಹ್ಮಣರು ಮದ್ಯ, ಮಾಂಸ ಇತ್ಯಾದಿಗಳನ್ನು ಬಹಿರಂಗವಾಗಿ ತಗೆದುಕೊಳ್ಳುತ್ತಿದ್ದಾರೆ. ॥7

ಧರ್ಮದ ಮುಖವಾಡ ಹಾಕಿ ಅತ್ಯಾಚಾರದಲ್ಲಿ ಮಗ್ನರಾಗುತ್ತಾರೆ ಮತ್ತು ಪರಸ್ಪರ ಮತದ್ವೇಷವನ್ನು ಹರಡುತ್ತಾರೆ. ಅದರಿಂದಾಗಿ ಜನರು ಬಳಲುತ್ತಾರೆ. 8

ಬ್ರಾಹ್ಮಣರು ಸಂಧ್ಯಾಸ್ನಾನ ಮಾಡದೆ ಕರ್ಮಗಳ ಅನುಷ್ಠಾನ ಮಾಡುತ್ತಾರೆ. ಯೋಗಿಗಳು ತಪ, ಧ್ಯಾನಗಳಿ೦ದ ವಿಮುಖರಾಗಿದ್ದಾರೆ. ಆಗಲೇ ಸ೦ತರ ಅವತಾರದ ಸಮಯ. 9

ಯಾವಾಗ ಜನರು ಸಮಾಜದಲ್ಲಿ ಆಸ್ತಿ, ಅಧಿಕಾರ, ವಂಶ ಮತ್ತು ಕುಟುಂಬದಲ್ಲೇ ಸಂತೋಷ ಇರುವುದೆಂದು ನಂಬುತ್ತಾರೋ, ಪರಮಾರ್ಥ ವಿಷಯಗಳಿಂದ ವಿಮುಖರಾಗುವರೋ, ಆಗಲೇ ಸಂತರು ಜನ್ಮತಾಳುತ್ತಾರೆ. 10

ಸಂಸಾರ, ಸಮಾಜ, ಹಣ, ಅಂತಸ್ತು, ಮಕ್ಕಳು, ಮರಿ ಅಂತ ಲೌಕಿಕ ವಿಚಾರಗಳನ್ನೇ ಮುಖ್ಯ ಎಂದು ನಂಬಿ ಆಧ್ಯಾತ್ಮಿಕ ಮೌಲ್ಯಗಳಿಂದ ಜನತೆ ವಿಮುಖರಾದಾಗ, ಸಂತರು ಅವತರಿಸುತ್ತಾರೆ.11

ಜನರು ಯಾವಾಗ ಆಯಸ್ಸು, ಆರೋಗ್ಯ, ಐಶ್ಚರ್ಯಗಳನ್ನು ಕಳೆದುಕೊಳ್ಳುತ್ತಾರೋ, ಯಾವಾಗ ಕಾಮದಾಟದಲ್ಲಿ ದಾರಿತಪ್ಪಿದವರಾಗುತ್ತಾರೋ, ಆಗ ಅವರು ಸಂಪೂರ್ಣವಾಗಿ ಮುಕ್ತಿ ಮಾರ್ಗದಿಂದ ದೂರವಾಗುತ್ತಾರೆ. ಆಗ ಸಂತರು ಜನ್ಮತಾಳುತ್ತಾರೆ. 12॥

ವೇದದಲ್ಲಿರುವ ವರ್ಣಾಶ್ರಮಧರ್ಮವನ್ನು ಕಾಪಾಡಲು, ಅಧರ್ಮವನ್ನು ನಾಶಮಾಡಲು, ದೀನರನ್ನು, (ಉದ್ಧಾರ ಮಾಡಲು) ಬಡವರು ಮತ್ತು ಅಶಕ್ತರನ್ನು ಸಂರಕ್ಷಣೆಮಾಡಲು ಸಂತರು ಅವತರಿಸುತ್ತಾರೆ. 13॥

ಸ೦ತರು ಸ್ವತಃ ಮುಕ್ತರು, ದೀನರನ್ನು ಉದ್ಧಾರಮಾಡಲು ಸದಾ ನಿರತರಾಗಿರುತ್ತಾರೆ. ಅವತಾರವಾಗುವುದು ಕೇವಲ ಪರಾರ್ಥಕ್ಕಾಗಿ. ಅವರಲ್ಲಿ ಸ್ವಲ್ಪವೂ ಸ್ಟಾರ್ಥವಿರುವುದಿಲ್ಲ. 14

ನಿವೃತ್ತಿ ಎಂಬ ಅಡಿಪಾಯವನ್ನು ಹಾಕಿ, ಸಂಸಾರವೆಂಬ ಗರ್ಭಗುಡಿಯ ಸುತ್ತಲೂ ಹಾಕುತ್ತಾರೆ. ಪರಮ ಶಿವ ಮಂದಿರವನ್ನು ಕಟ್ಟಿ ಭಕ್ತರನ್ನು ಸುಲಭವಾಗಿ ಉದ್ಧರಿಸುತ್ತಾರೆ. 15

ಧರ್ಮ ಕಾರ್ಯಕ್ಕಾಗಿ, ಧರ್ಮಜಾಗ್ಯತಿಗಾಗಿ ಬ೦ದ ಅವರು ತಮ್ಮ ಜೀವನದಲ್ಲಿ ಆ ಧ್ಯೇಯವನ್ನು ಸಾಧಿಸುತ್ತಾರೆ ಮತ್ತು ತಮ್ಮ ಕಾರ್ಯ ಮುಗಿದಕೂಡಲೇ ತಮ್ಮ ಪಾರ್ಥಿವ ಶರೀರವನ್ನು ತೊರೆದು ಬಿಡುತ್ತಾರೆ. ॥16॥

ಪ್ರತಿಯೊಂದು ಜೀವಾತ್ಮನೂ, ಪರಮಾತ್ಮನೇ ಇಡೀ ಪ್ರಪಂಚಕ್ಕೆ ಆನಂದದಾಯಕನು ಮತ್ತು ಪರಮಾತ್ಮನೇ ಗುರುವೂ ಸಹ, ಶಂಕರನು ಮಂಗಳಕರನು. ॥17॥

ಅವನು ಸರ್ವಶ್ರೇಷ್ಠ ಪ್ರೇಮ ಮಂದಿರ; ಅವನು ನಿತ್ಯ, ನಿರಂತರ, ಅಭೇದ್ಯ; ಅವನು ದೇಶ, ಕಾಲ, ವಸ್ತುಗಳಿಗೆ ಅತೀತ ಮತ್ತು ಪರಿಚ್ಛೇದನಾತೀತನೂ ಹೌದು. ॥18॥

ನಾಲ್ಕು ರೀತಿಯ ವಾಣಿಯು ಇರುತ್ತದೆ. ಅವುಗಳು ಪರ (ಕೇವಲ ಯೋಗಿಗಳು ತಪಸ್ಸಿನಿಂದ ಸಾಧಿಸಿದ ಓಂಕಾರ), ಪಶ್ಯಂತಿ (ವಾಣಿಯು ತನ್ನ ಎರಡನೆಯ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟಿದೆ), ಮಧ್ಯಮ (ವಾಣಿಯು ಮೂರನೆಯ ಸ್ಥಿತಿಯಲ್ಲಿ ಅದು ಗಂಟಲಿನಲ್ಲಿರುವ ಶ್ವಾಸನಾಳದಲ್ಲಿದೆ), ವೈಖರಿ (ಸ್ಪಷ್ಟೋಚ್ಚಾರಣೆಯ ಮಾತುಗಳು) ಈ ನಾಲ್ಕು ವಾಣಿಗಳೂ ಅವನನ್ನು ವರ್ಣಿಸಲಾರದೆ ಹೋಗಿವೆ. ಜ್ಞಾನವೂ ವೇದ ಸಾರಗಳೂ ತಮ್ಮ ಸೋಲನ್ನು ಒಪ್ಪಿಕೊಂಡಿವೆ ಮತ್ತು ತಿಳಿಸುತ್ತವೆ ನೇತಿ; ನೇತಿ; ಇದು ಅಲ್ಲ, ಇದು ಅಲ್ಲ ಎಂದು ಮಾತ್ರ ॥19॥

ಷಟ್‌ ದರ್ಶನಗಳು ಮತ್ತು ಅವುಗಳ ಆರು ಶಾಖೆಗಳೂ ಅವನನ್ನು ವಿವರಿಸಲು ಆಗದೆ ದೂರ ಸರಿದಿವೆ. ಪುರಾಣಗಳು ಮತ್ತು ಕೀರ್ತನೆಗಳು ಸಹ ದಣಿದಿವೆ. ಕಾಯಾ, ವಾಚಾ, ಮನಸಾ ಪ್ರಾರ್ಥನೆ ಮಾಡುವುದೊಂದೇ ಅವನನ್ನು ಅರ್ಥ ಮಾಡಿಕೊಳ್ಳಲು ಇರುವ ಮಾರ್ಗ. ॥20॥

ಈ ರೀತಿ ಇರುವುದು ಸಂತ ಸಾಯಿ ಸಮರ್ಥರ ಚರಿತ್ರೆ. ಅವರ ಲೀಲೆಗಳು ಅತ್ಯಂತ ವಿಚಿತ್ರವಾದುವು. ಅವರ ಪವಿತ್ರ ಕತೆಯನ್ನು ಕೇಳಿ ನಮ್ಮ ಕಿವಿಗಳೇಕೆ ಪಾವನವಾಗುವುದಿಲ್ಲ? ।21

ಸಕಲ ಇಂದ್ರಿಯಗಳಿಗೂ ಚಾಲಕರು ಅವರೇ. ಈ ಗ್ರಂಥ ರಚನೆ ಮಾಡಲು ಬುದ್ಧಿಯನ್ನು ಕೊಡುವವರೂ, ಅನಾಯಾಸವಾಗಿ ಕ್ರಮಬದ್ಧವಾಗಿ ಚರಿತ್ರೆಯನ್ನು ಬರೆಯಲು ಪ್ರೋತ್ಸಾಹ ನೀಡುವವರೂ ಅವರೇ. ॥22॥

ಅವರು ಸರ್ವಾಂತರ್ಯಾಮಿ, ಅವರು ಒಳಗೂ ಹೊರಗೂ ವಾಸಿಸುವರು. ಅವರು ಎಲ್ಲೆಲ್ಲೂ ಇರುವವರು. ಹಾಗಿರಲು ನಾನು ಅನವಶ್ಯಕವಾಗಿ ಏಕೆ ಚಿಂತಿಸಲಿ? ಮತ್ತು ಯಾವುದಕ್ಕಾಗಿ ಚಿಂತಿಸಲಿ? ॥23॥

ಅವರ ಒಂದೊಂದು ಗುಣಗಳನ್ನು ನೆನಸಿಕೊ೦ಡಾಗಲೂ ನನ್ನ ಮನಸ್ಸು ಬಾಗುತ್ತದೆ. ಹಾಗಿರುವಾಗ ಮಾತಿನಲ್ಲಿ ಅವುಗಳನ್ನು ವರ್ಣಿಸಲು ಹೇಗೆ ಸಾಧ್ಯ? ಅವರ ಬಗ್ಗೆ ಮೌನವಾಗಿರುವುದೇ ಉತ್ತಮ. ॥24॥ 

ನಾಸಿಕವು ಹೂವಿನ ಪರಿಮಳವನ್ನು ಆಘ್ರಾಣಿಸುತ್ತದೆ. ಚರ್ಮವು ಸ್ಪರ್ಶಜ್ಞಾನದಿಂದ ಬಿಸಿ ಅಥವಾ ತಣ್ಣಗಿರುವುದನ್ನು ಅರಿಯುತ್ತದೆ. ಕಣ್ಣುಗಳು ಸೌಂದರ್ಯವನ್ನು ಅನುಭವಿಸುತ್ತವೆ. ಈ ರೀತಿ ಇಂದ್ರಿಯಗಳು ಸುಖಪಡುತ್ತವೆ. ॥25॥

ನಾಲಿಗೆಗೆ ಸಕ್ಕರೆಯ ಸಿಹಿಯು ತಿಳಿಯುತ್ತದೆ. ಆದರೆ ಅದನ್ನು ವಿವರಿಸಲು ಅದಕ್ಕೆ ಸಾಧ್ಯವಿಲ್ಲ. ಅದೇ ರೀತಿ ನಾನು ಸಾಯಿಯ ಗುಣಗಾನ ಮಡಲು ಅಸಮರ್ಥನಾಗಿದ್ದೇನೆ. ॥26॥

ಸದ್ಗುರುವು ನಿರ್ಧಾರ ಮಾಡಿದಾಗ, ಅವರು ತಾವೇ ದೈವೀಪ್ರೇರಣೆಯನ್ನು ದಯಪಾಲಿಸುತ್ತಾರೆ. ಅವರು ವಿವರಣೆಯನ್ನು ನೀಡಲಾಗದ ಪದಗಳ ಅರ್ಥಕ್ಕಾಗಿ ಆಯ್ದ ವ್ಯಕ್ತಿಗಳಿಂದ ಮಾಡಿಸುತ್ತಾರೆ. 27

ಇದು ಕೇವಲ ಶಿಷ್ಟಾಚಾರವಲ್ಲ. ಈ ಮಾತುಗಳು ಕೇವಲ ಉಪಚಾರಕ್ಕಾಗಿ ಅಲ್ಲ. ಇವುಗಳು ಮನಃಪೂರ್ವಕವಾಗಿ ಹೊರಬಂದ ಸತ್ಯವಾದ ಉದ್ಗಾರಗಳು. ನಾನು ತಾವೆಲ್ಲರೂ ಆದರದಿಂದ ನೀಡುವ ಗಮನಕ್ಕಾಗಿ ಪ್ರಾರ್ಥಿಸುತ್ತೇನೆ. 28

ಗಾಣಗಾಪುರ, ನರಸಿಂಹವಾಡಿ, ಔದುಂಬರ ಮತ್ತು ಬಿಲ್ಲವಾಡಿ ಇವುಗಳ ರೀತಿಯಲ್ಲಿ, ಹಾಗೆಯೇ ಪವಿತ್ರ ಗೋದಾವರಿ ನದಿ ತೀರದಲ್ಲಿರುವ ಶಿರಡಿ ಕ್ಷೇತ್ರವೂ ಪ್ರಸಿದ್ಧವಾಗಿದೆ. 29

ಗೋದಾವರಿ ನದಿಯ ಪವಿತ್ರ ಜಲ, ಪರಿಶುದ್ಧವಾದ ತಂಗಾಳಿ, ಇವೆಲ್ಲವೂ ಭವ ಸಾಗರದ ಅಹಂಕಾರವನ್ನು ನಾತಮಾಡುತ್ತವೆ. 30॥

ಗೋದಾವರಿ ನದಿಯ ಪಾವಿತ್ರ್ಯವು ಸಕಲ ಜಗತ್ತಿನಲ್ಲಿ ಪ್ರಖ್ಯಾತಾಗಿದೆ. ಅವಳ ಮಡಿಲು ಒಬ್ಬರಿಗಿ೦ತ ಮತ್ತೊಬ್ಬ ವಹಾನ್‌ ಸಂತರು ನೆಲೆಸಿದ ಭೂಮಿಯಾಗಿದೆ. ॥31

ಗೋಮತೀ ನದಿಯ ತೀರದಲ್ಲಿ ಅನೇಕ ಪವಿತ್ರ ತೀರ್ಥಕ್ಷೇತ್ರಗಳಿವೆ. ಅವಳ ನೀರು ಪಾಪನಾಶಕ, ಆ ನೀರಿನ ಪಾನ ಹಾಗೂ ಸ್ನಾನಗಳಿ೦ದ ಭವರೋಗಗಳೆಲ್ಲವೂ ನಿವಾರಿಸಲ್ಪಡುತ್ತದೆ. ಹೀಗೆಂದು ಪುರಾಣಗಳು ವರ್ಣಸಿವೆ. 32

ಆ ಗೋದಾವರಿಯು ಅಹಮದ್‌ ನಗರ ಜಿಲ್ಲೆಯ ಕೋಪರಗಾ೦ವ ತಾಲೂಕಿನ ಕೋಪರಗಾಂವನ ಹತ್ತಿರವೇ ಇರುವ ಶಿರಡಿಗೆ ಮಾರ್ಗದರ್ಶನ ಮಾಡುತ್ತದೆ. 33

ಗೋದಾವರಿಯ ಮತ್ತೊಂದು ತೀರದಲ್ಲಿ ಆರು ಮೈಲು ದೂರದಲ್ಲಿ ಟಾಂಗಾವು ನೀಂಮ್‌ಗಾವ್‌ ತಲಪುತ್ತಲೇ ಶಿರಡಿಯ ಕ್ಷೇತ್ರವು ದೃಷ್ಟಿಗೆ ಬೀಳುತ್ತದೆ. 34

ನಿವೃತ್ತಿದೇವ, ಜ್ಞಾನದೇವ, ಮುಕ್ತಾಬಾಯಿ, ನಾಮದೇವ, ಜನೀಬಾಯಿ, ಗೋರಕುಂಬಾರ, ಗೋರಾಯಿ, ತುಕಾರಾಮ, ನರಹರಿ, ನರಸೀಬಾಯಿಮೆಹ್ತ, ಸಾಜನ್‌ ಕಸಾಯಿ ಮತ್ತು ಸಾವತಾ ಮಾಲಿ ॥35॥

ಇವರೆಲ್ಲರೂ ಪೂರ್ಣಕಾಲದ ಸಂತರು. ಈ ಕಾಲದಲ್ಲಿಯೂ ಅಂತಹ ಅನೇಕ ಜನರಿದ್ದಾರೆ. ಇಡೀ ವಿಶ್ವ ಒಂದೇ ಕುಟುಂಬವೆಂದು ಭಾವಿಸಿದವರು ಮತ್ತು ದೀನರಿಗೆ, ದುಃಖಿಗಳಿಗೆ, ಆಸರೆ ನೀಡುವವರು. ॥36॥

ರಾಮದಾಸರೆಂಬ ಸಂತಶ್ರೇಷ್ಠರು ಗೋದಾವರಿ ತೀರವನ್ನು ತೊರೆದು ಕೃಷ್ಣಾನದಿಯ ದಡದಲ್ಲಿ ಜಗತ್ತಿನ ಉದ್ಧಾರಕ್ಕಾಗಿ ಪ್ರಕಟಗೊ೦ಡರು. 37॥

ಅದೇ ರೀತಿಯಲ್ಲಿ ಯೋಗಿಶ್ರೇಷ್ಠ ಸಾಯಿಯೂ ಶಿರಡಿಯ ಮಹಾ ಪುಣ್ಯವಶಾತ್‌ ಜಗತ್ತಿನ ಉದ್ಧಾರಕ್ಕಾಗಿ ಗೋದಾವರಿಯ ತಟದಲ್ಲಿ ಅವತರಿಸಿದರು. 38॥

'ಪರಸ'ಮಣಿಯು ಕಬ್ಬಿಣವನ್ನು ಚಿನ್ನವನ್ನಾಗಿ ಮಾಡುತ್ತದೆ. ಅದೇ ರೀತಿ ಸಂತರೆಲ್ಲರೂ ಸಹ ಪರಸು ಮಣಿಗಳೇ. ಸ೦ತರ ಕೆಲಸಗಳೆಲ್ಲವೂ ಅಲೌಕಿಕವೆ. ತಮ್ಮ ಭಕ್ತರಿಗೆ ತಮ್ಮ ನಿಜ ಸ್ವರೂಪವನ್ನು ತೋರಿಸುತ್ತಾರೆ. 39॥

ಸ೦ತರು ಯಾವಾಗಲೂ ಭೇದ ಭಾವವನ್ನು ದೂರ ಮಾಡಿ ಪ್ರತಿಯೊಂದರಲ್ಲೂ ಇಡೀ ವಿಶ್ವವನ್ನೇ ಬ್ರಹ್ಮಸ್ವರೂಪವೆಂದು ತನ್ನಲ್ಲೂ ಸುತ್ತಲಿನ ಜಗತ್ತಿನಲ್ಲೂ ಇರುವುದು ಒಂದೇ ಎಂದು ಅರಿತವರು. ॥40॥ 

ಈ ರೀತಿ ಯಾವಾಗ ಇಡೀ ವಿಶ್ವವೇ ತನ್ನ ಆತ್ಮಸ್ಪರೂಪ ಎಂಬ ಅರಿವು ಉಂಟಾಗುತ್ತದೋ ಆಗ ಆ ಆನ೦ದವನ್ನು ಯಾವ ರೀತಿ ವರ್ಣಿಸಬಹುದು? ಅದು ಪರಮಸತ್ಯದ ಸಾಕ್ಷಾತ್ಕಾರವನ್ನು ಅನುಭವಿಸುವುದು. 41

ಈ ರೀತಿ ಏಕತ್ಟವನ್ನು ಅನುಭವಿಸಿದನಂತರ ಯಾರ ಬಗ್ಗೆಯಾದರೂ ದ್ವೇಷ ಅಥವಾ ಭಯ ಏಕಿರಬೇಕು? ನೀವು ಯಾರ ಆಶ್ರಯವನ್ನೂ ಪಡೆಯಬೇಕಿಲ್ಲ. 42

ಮಂಗಳವಾಡೆಯ ದಾಮಾಜಿ, ಸಜ್ಜನಗಡದ ರಾಮದಾಸ, ವಾಡಿಯ ನರಸಿಂಹಸರಸ್ವತಿ, ಅದೇ ರೀತಿ ಸಾಯಿನಾಥರು ಶಿರಡಿಯಲ್ಲಿದ್ದರು. 43॥

ಈ ಸಂಸಾರದಲ್ಲಿ ಜೀವಿಸುವುದು ಅತಿಕಷ್ಟಕರವಾದದ್ದು. ಅಂತಹುದನ್ನು ಗೆದ್ದಿರುವವರು. ಶಾಂತಿಯೇ ಅವರ ಆಭರಣ ಮತ್ತು ಅವರು ಗುಣನಿಧಿಯು. 44

ಅವರು ವೈಷ್ಣವರ ವೈಕುಂಠಧಾಮ, ಕರುಣಾಳುಗಳಲ್ಲಿ ದಯಾಳು, ಪರಮಾರ್ಥ ಜ್ಞಾನವನ್ನು ಕರುಣಿಸುವವರು, ಕರ್ಣನ ಅಪರಾವತಾರವೂ ಹೌದು. ಸಾಯಿಯು ಸತ್ಯಸ್ತರೂಪದ ಸಾರವೂ ಹೌದು. 45

ನಶ್ಚರವಸ್ತುವಿನ ಮೇಲೆ ಯಾವುದೇ ಅಭಿಲಾಷೆ ಇಲ್ಲದೆ, ಆತ್ಮಸ್ಪರೂಪದಲ್ಲೇ ತಲ್ಲೀನರಾಗಿ, ಪರಮಾರ್ಥದ ಪ್ರಾಪ್ತಿಯ ಲಕ್ಷ್ಯವೊಂದೇ ಉಳ್ಳವರು. ಅಂತಹವರು ಆ ಸ್ಥಿತಿಯನ್ನು ನಿಜವಾಗಿಯೂ ವರ್ಣಿಸಲಾರರು. 46॥

ಲೌಕಿಕ ಸಂಪತ್ತಿಗೆ ಯಾವುದೇ ಬಂಧನವಿಲ್ಲದೆ ಅಥವಾ ಅದಿಲ್ಲದೆ ಇರುವಾಗಲೂ ಪರಲೋಕದ ಸುಖದುಃಖಗಳಿಂದ ವಿಚಲಿತನಾಗದೆ (ಮೃತನಾದಮೇಲೆ ಉಂಟಾಗುವ ಅನುಭವ);ಅವನ ಹೃದಯವು ಕನ್ನಡಿಯಷ್ಟು ಪರಿಶುದ್ಧವಾಗಿರುತ್ತದೆ ಹಾಗೂ ವಾಣಿಯು ಅಮೃತವರ್ಷ ನೀಡುತ್ತಿರುತ್ತದೆ. 47॥

ರಾಜ, ದರಿದ್ರ ಬಡವ, ಅಬಲ ಎಲ್ಲರೂ ಅವರ ದೃಷ್ಟಿಯಲ್ಲಿ ಸರಿಸಮಾನರು. ಅವರಾದರೋ ಮಾನಾಪಮಾನಗಳನ್ನು ಮೀರಿದವರು. ಅವರು ಪ್ರತಿಯೊಂದು ಜೀವಿಯಲ್ಲಿಯೂ ಪರಮಾತ್ಮನನ್ನು ಕಾಣುತ್ತಿದ್ದರು. 48

ಅವರು ಎಲ್ಲ ಜನರೊಡನೆಯೂ ಸಾಧಾರಣವಾಗಿಯೇ ವ್ಯವಹರಿಸುತ್ತಿದ್ದರು. ನೃತ್ಯವನ್ನು ವೀಕ್ಷಿಸುತ್ತಿದ್ದರು. ಮುರಳಿನಾದವನ್ನು ಸವಿಯುತ್ತಿದ್ದರು. ಹಾಡುಗಳನ್ನು, ಗಜಲ್‌ಗಳನ್ನು ಆಲಿಸುತ್ತ ಅವಕ್ಕೆ ಆನಂದದಿಂದ ತಲೆದೂಗುತ್ತಿದ್ದರು. ಆದರೆ ಅವರ ಅಂತರಂಗದ ಸಮಾಧಿಸ್ಥಿತಿಯು ನಿಶ್ಚಲವಾಗಿರುತ್ತಿತ್ತು. 49॥

'ಅಲ್ಲಾ'ನ ಹೆಸರು ಅವರ ಹೃದಯದಲ್ಲಿ ಅಚ್ಚಾಗಿತ್ತು. ಅವರು ಜಗವೆಲ್ಲ ಮಲಗಿರಲು ಎಚ್ಚರವಾಗಿದ್ದರು. ಮತ್ತು ಜಗತ್ತು ಎಚ್ಚರವಾಗಿದ್ದಾಗ ತಾನು ಮಲಗುತ್ತಿದ್ದರು. ಅವರ ಸ್ವಭಾವ ಸಮುದ್ರದ ಅ೦ತರಾಳವು ಶಾಂತವಾಗಿರುವಂತೆ ಇರುತ್ತಿತ್ತು. 50

ಅವರು ಯಾವ ಆಶ್ರಮ‌ ಅಥವಾ ಜೀವನದ ಹಂತದಲ್ಲಿದ್ದಾರೆ ಎಂಬುದನ್ನು ನಿರ್ಧರಿಸುವುದು ಬಹಳಷ್ಟು ಕಷ್ಟ ಅಥವಾ ಅವರ ಕಾರ್ಯಗಳ ವ್ಯವಹಾರಗಳ ಉದ್ದೇಶವನ್ನು ತಿಳಿಯುವುದೂ ಕಷ್ಟ ಬಹುಮಟ್ಟಿಗೆ ಅವರು ತಮ್ಮ ಜಾಗದಿಂದ ಕದಲದಿದ್ದರೂ ಅವರಿಗೆ ಎಲ್ಲಾ ವ್ಯವಹಾರಗಳೂ ತಿಳಿದಿರುತ್ತಿತ್ತು.51

ಹೊರನೋಟಕ್ಕೆ ದರ್ಬಾರ್‌ ರೀತಿಯ ವೈಭವ ಇತ್ತು. ಅವರು ಸಾವಿರಾರು ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಇದು ಒಂದು ನಿತ್ಯ ಪ್ರದರ್ಶನವಾಗಿತ್ತು. ಆದರೆ ಅವರು ಅಂತರಂಗದಲ್ಲಿ ಅಖಂಡವಾದ ಮೌನದಲ್ಲಿ ನೆಲಸಿದ್ದರು. 52

ಅವರು ಗೋಡೆ ಒರಗಿಕೊಂಡು ನಿಂತಿರುತ್ತಿದ್ದರು. ಬೆಳಗಿನಹೊತ್ತು ಓಡಾಡುತ್ತಿದ್ದರು. ಮಧ್ಯಾಹ್ನ ಲೇಂಡಿಗೆ ಅಥವಾ ಚಾವಡಿಗೆ ಹೋಗುತ್ತಿದ್ದರು. ಆದರೆ ಅವರ ಚಿತ್ತಮಾತ್ರ ಕದಡದೆ ಶಾಂತವಾಗಿರುತ್ತಿತ್ತು. 53

ನಾನು ಯಾವ ಜನ್ಮದಲ್ಲಿ ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಯಾವ ರೀತಿಯ ತಪಸ್ಸು ಮಾಡಿದ್ದೇನೆಂದು ನನಗೆ ತಿಳಿದಿಲ್ಲ. ಅದರ ಫಲವಾಗಿ ಈಗ ಸಾಯಿಯು ನನ್ನನ್ನು ತಮ್ಮ ಆಶ್ರಯಕ್ಕೆ ತೆಗೆದುಕೊಂಡಿದ್ದಾರೆ. ॥54॥

ನನ್ನ ತಪಸ್ಸಿನ ಫಲವೆಂದು ಹೇಳಬೇಕೇ? ಆದರೆ, ಇಲ್ಲ. ನಾನು ಪಾಪಿಯಾಗಿ ಹುಟ್ಟಿದ್ದೇನೆ. ಸಾಯಿಯೇ ದಯಾಳು, ಪ್ರೇಮಮಯಿ, ನಿಶ್ಚಲವಾಗಿ ಇದು ಅವರ ಕೃಪೆ. ॥55॥

'ಸಿದ್ಧ'ರಾಗಿ ಹುಟ್ಟಿದ್ದರೂ ಅವರ ರೀತಿಗಳು, 'ಸಾಧಕ'ರಂತೆ ಇದ್ದುವು. ಅವರಿಗೆ ಯಾವದೇ ಅಹಂಕಾರವಿರಲಿಲ್ಲ. ಕರುಣಾಮಯಿಯಾಗಿದ್ದರು. ಮತ್ತು ಎಲ್ಲರನ್ನೂ ಸಂತೋಷಪಡಿಸುತ್ತಿದ್ದರು. 56

ಸಂತ ಏಕನಾಥರು ಪೈಠಾಣ ಮತ್ತು ಜ್ಞಾನದೇವರು ಆಳ೦ದಿಯನ್ನು ಪ್ರಖ್ಯಾತಗೊಳಿಸಿದಂತೆ ಸಾಯಿಯು ಶಿರಡಿಯನ್ನು ಮಹಿಮಾಸಂಪನ್ನವಾಗಿ ಮಾಡಿದರು. 57

ಶಿರಡಿಯ ಹುಲ್ಲು, ಶಿಲೆಗಳು ಧನ್ಯ, ಅನಾಯಾಸವಾಗಿ ಪ್ರತಿನಿತ್ಯ ಅವು ಬಾಬಾರವರ ಚರಣಗಳನ್ನು ಮುತ್ತಿಡುತ್ತಿದ್ದವು. ಬಾಬಾರವರ ಚರಣಧೂಲಿಯನ್ನು ಮಸ್ತಕದಲ್ಲಿ ಧರಿಸುತ್ತಿದ್ದವು. 58

ನಮಗೆ ಶಿರಡಿಯೇ ಪಂಡರಾಷುರ, ಶಿರಡಿಯೇ ಜಗನ್ನಾಥಪುರಿ, ದ್ವಾರಕ, ಗಯ, ಕಾಶಿಯ ವಿಶ್ವೇಶ್ವರ (ದೇವಾಲಯ) ಶಿರಡಿಯೇ ನಮ್ಮ ರಾಮೇಶ್ವರ. 59

ಶಿರಡಿಯೇ ನಮ್ಮ ಬದರಿ, ಕೇದಾರ, ಶಿರಡಿಯೇ ನಾಸಿಕ, ತ್ರಯಂಬಕೇಶ್ವರ, ಶಿರಡಿಯೇ ಉಜ್ಜಯಿನಿ ಮಹಾಕಾಳೇಶ್ವರ, ಶಿರಡಿಯೇ ಮಹಾಬಲೇಶ್ವರ ಮತ್ತು ಗೋಕರ್ಣ. ॥60॥

ಶಿರಡಿಯಲ್ಲಿ ಸಾಯಿಯ ಸಮಾಗಮವೇ ಆಗಮ (ವೇದ) ಮತ್ತು ನಿಗಮ (ವೇದಾನಂತರದ ಶೈವ, ಶಾಕ್ತ ಮತ್ತು ವೈಷ್ಣವ ಶಾಸ್ತ್ರಗಳ) ಅಧ್ಯಯನ ಮಾಡಿದಂತೆ. ಮತ್ತು ಎಲ್ಲಾ ನೋವಿಗೂ ಗುಣಪಡಿಸುವ ಸ್ಪರ್ಶ. ಪರಮಾರ್ಥವನ್ನು ಸಾಧಿಸಲು ಅತ್ಯಂತ ಸುಗಮ ಮಾರ್ಗ. 61

ಸಮರ್ಥ ಸಾಯಿಯ ದರ್ಶನವೇ ನಮ್ಮ ಯೋಗಸಾಧನ. ಅವರ ಜೊತೆಯ ಸಂಭಾಷಣೆಯಿಂದಲೇ ನಮ್ಮ ಪಾಪಗಳೆಲ್ಲವೂ ತೊಳೆದುಹೋಗುತ್ತವೆ. 62

ಅವರ ಪಾದನಮಸ್ಕಾರ ಮಾಡುವುದು ನಾವು ತ್ರಿವೇಣಿ (ಗಂಗಾ, ಯಮುನಾ, ಸರಸ್ಪತಿ) ಸಂಗಮದಲ್ಲಿ ಸ್ನಾನ ಮಾಡಿದಂತೆ. ಮತ್ತು ಅವರ ಚರಣ ತೀರ್ಥವನ್ನು ಸೇವಿಸುವುದರಿಂದ ನಮ್ಮ ವಾಸನೆಗಳು ನಿರ್ಮೂಲನವಾಗುತ್ತವೆ. 63॥

ಅವರ ಆಜ್ಞೆಯು ನಮಗೆ ಘೋಷವು. ಅವರ ಉದಿ ಮತ್ತು ಪ್ರಸಾದಗಳು ನಮ್ಮನ್ನು ನಿರ್ಮಲಗೊಳಿಸುವುವು. ಮತ್ತು ಎಲ್ಲ ರೀತಿಯಲ್ಲೂ ಪುಣ್ಯ ಪಾವನವಾದವು. 64

ಸಾಯಿಯೇ ನಮಗೆ ಪರಬ್ರಹ್ಮ. ಸಾಯಿಯೇ ನಮ್ಮ ಶ್ರೇಷ್ಠವಾದ ಪರಮಾರ್ಥ ಮತ್ತು ಸಾಯಿಯೇ ಶ್ರೀಕೃಷ್ಣ, ಶ್ರೀರಾಮ ಮತ್ತು ಸಾಯಿಯೇ ನಮಗೆ ಆಶ್ರಯ ಮತ್ತು ಆರಾಮ. ॥65॥

ಸಾಯಿಯು ಸ್ವತಃ ಧ್ವಂದ್ವಾತೀತ. ನಿರಂತರ ತನ್ನ ಸ್ಪಸ್ವರೂಪದಲ್ಲಿ ನೆಲೆಸಿರುವವರು ಮತ್ತು ಶಾಶ್ಚತವಾಗಿ ಬ್ರಹ್ಮನಲ್ಲಿ ಸ್ಥಿತವಾದವರು. ॥66॥

ಶಿರಡಿಯು ಕೇವಲ ಕೇಂದ್ರಸ್ಥಾನ. ಬಾಬಾರವರ ಕ್ಷೇತ್ರ ಅತ್ಯಂತ ವಿಸ್ತಾರವಾಗಿದೆ. ಪಂಜಾಬ್‌, ಕಲಕತ್ತ, ಸಿಂಧುಸ್ಥಾನ, ಗುಜರಾತ, ದಕ್ಷಿಣಕನ್ನಡ ಇವೆಲ್ಲವನ್ನೂ ವ್ಯಾಪಿಸಿದೆ. 67

ಶಿರಡಿಯಲ್ಲಿರುವ ಸಾಯಿಯ ಸಮಾಧಿಯು ಎಲ್ಲಾ ಸಂತರು ಸೇರುವ ಸ್ಥಳವಾಗಿದೆ. ಅದರ ಕಡೆಗೆ ಇಡುವ ಪ್ರತಿಯಾಂದು ಹೆಜ್ಜೆಯೂ ಒಂದೊಂದು ಭವಬಂಧನವನ್ನು ಕಳಚುತ್ತದೆ. 68

ಕೇವಲ ಸಮಾಧಿ ದರ್ಶನದಿಂದಲೇ ಪ್ರತಿಯೊಬ್ಬರ ಜೀವನ ಸಾರ್ಥಕವಾಗುತ್ತದೆ. ಹಾಗಿರುವಾಗ ಅವರ ಸೇವೆಯಲ್ಲಿ ಜೀವನ ಕಳೆದವರ ಭಾಗ್ಯವನ್ನು ಹೇಗೆ ವರ್ಣಿಸಲಿ? ॥69॥

ಮಸೀದಿ ಮತ್ತು ವಾಡಾಗಳ ಮೇಲೆ ಸುಂದರವಾದ ಬಾವುಟಗಳು ಸಾಲುಸಾಲಾಗಿ ಆಕಾಶದಲ್ಲಿ ಎತ್ತರವಾಗಿ ರಾರಾಜಿಸುತ್ತಿವೆ. ಅವು ತಮ್ಮ ಭಕ್ತರಿಗೆ ಮಾರ್ಗದರ್ಶಕ ಬೆಳಕಾಗಿವೆ. 70॥

ಬಾಬಾರವರು ಪ್ರಸಿದ್ಧ ಸಂತರು. ಅವರ ಕೀರ್ತಿ ಹಳ್ಳಿಹಳ್ಳಿಗೆ ಹರಡಿದೆ. ಕೆಲವರು ತಮ್ಮ ಇಷ್ಟಾರ್ಥಗಳು ನೆರವೇರಿದುದಕ್ಕೆ ಅವರಿಗೆ ಯಣಿಯಾಗಿದ್ದಾರೆ. ಕೆಲವು ಜನರು ಕೇವಲ ದರ್ಶನಮಾತ್ರದಿಂದ ಶಾಂತಿ ಪಡೆಯುತ್ತಾರೆ. 71

ಯಾರೊಬ್ಬನ ಮನದಾಳದ ಆಸೆಗಳೇನೇ ಇರಲಿ, ಶುದ್ಧ ಬುದ್ಧಿ ಅಥವಾ ಕುತ್ಸಿತ ಬುದ್ಧಿಯದಾಗಲಿ, ಬಾಬಾರವರ ದರ್ಶನ ಮಾತ್ರದಿಂದಲೇ ಮನಸ್ಸು ಶಾಂತವಾಗುತ್ತದೆ. ಜನರು ಅದರಿಂದ ಅಂತರಂಗದಲ್ಲೇ ವಿಸ್ಮಿತರಾಗುವರು. 72

ಪಂಡರಾಪುರದ ವಿಠಲ ಮತ್ತು ರಖುಮಾಯಿಯವರ ಅತ್ಯದ್ಭುತ ದರ್ಶನದಿಂದ ಆಗುವ ಅನುಭವವೇ ಶಿರಡಿಯಲ್ಲಿ ಬಾಬಾರವರ ದರ್ಶನದಿಂದಲೂ ದೊರೆಯುತ್ತದೆ. ॥73॥

ಯಾರಾದರೂ ಇದನ್ನು ಅತಿಶಯೋಕ್ತಿ ಎಂದು ಭಾವಿಸಿದರೆ ಗೌಳಿ ಬುವಾನ ಮಾತುಗಳನ್ನು ಕೇಳಿರಿ. ಅವನು ವಿಠಲನ ಪರಮಭಕ್ತನು. ಸಂದೇಹಗಳು ನಿಶ್ಚಯವಾಗಿ ದೂರವಾಗುವುದು. 74

ಅವನು ಪಂಡರಾಪುರಕ್ಕೆ ನಿಯತಕಾಲಿಕ ಯಾತ್ರಿಕ. ಅವನು ಪ್ರತಿವರ್ಷವೂ ಪಂಡರಾಷುರಕ್ಕೆ ಯಾತ್ರೆ ಹೋಗುತ್ತಿದ್ದನು. ಅವನು ಶಿರಡಿಗೂ ವರ್ಷಕ್ಕೊಮ್ಮೆ ಬರುತ್ತಿದ್ದನು. ಬಾಬಾರವರನ್ನು ಕಂಡರೆ ಬಹಳ ಪ್ರೀತಿ. 75॥

ಬುವಾನು ಒಂದು ಕತ್ತೆ ಮತ್ತು ಒಬ್ಬ ಶಿಷ್ಯನ ಜೊತೆ ಇದ್ದನು. ನಿರಂತರ ರಾಮ, ಕೃಷ್ಣ, ಹರಿ ಎಂದು ಭಜಿಸುತ್ತಿದ್ದನು. 76॥

ಅವನಿಗೆ 94 ವರ್ಷ ವಯಸ್ಸು ಅವನು ಚಾತುರ್ಮಾಸವನ್ನು ಗೋದಾವರಿ ತೀರದಲ್ಲಿ ಮಾಡುತ್ತಿದ್ದನು. ಸುಮಾರು 8 ತಿಂಗಳುಗಳ ಕಾಲ ಪಂಡರಾಷುರದಲ್ಲಿ ವಾಸಮಾಡುತ್ತಿದ್ದನು. ಹಾಗೆಯೇ ಅವನು ಬಾಬಾರವರನ್ನು ಪ್ರತಿವರ್ಷ ದರ್ಶಿಸುತ್ತಿದ್ದನು. 77

ಬಾಬಾರವರನ್ನು ನಮ್ರತೆಯಿಂದ ನೋಡುತ್ತ ಹೇಳುತ್ತಿದ್ದನು - "ಇದು ಪಂಡರೀನಾಥನ ಅವತಾರ, ಅನಾಥರಕ್ಷಕ, ದಯಾಮಯ". ॥78॥

ಕೇವಲ ರೇಶ್ಮೆಯ ಅಂಚಿನ ಧೋತಿಯನ್ನು ತೊಟ್ಟಮಾತ್ರಕ್ಕೆ ಅವರು ಸನ್ಯಾಸಿಯಾಗುತ್ತಾರೆಯೇ? ಸಂತನಾಗಬೇಕಾದರೆ ಕಠಿಣ ತಪಸ್ಸು ಮಾಡಬೇಕು. ಎಷ್ಟೆಂದರೆ ಮೂಳೆ ಸವೆಯಬೇಕು ಮತ್ತು ರಕ್ತ ನೀರಾಗಬೇಕು. 79

ಯಾರಾದರೂ ಪ್ರಯತ್ನ ಮಾಡದೆ ದೈವತ್ಚವನ್ನು ಪಡೆಯಲು ಸಾಧ್ಯವೇ? ಇದು ಪಂಡರೀನಾಥನ ಅವತರ, ಈ ಪ್ರಪಂಚವು ಅಜ್ಞಾನದಿಂದ ತುಂಬಿದೆ. ಅದನ್ನು ದೃಢವಾಗಿ ನಂಬಿ ಅದರ ಹಿಂದೆ ಇರುವ ದೈವತ್ವವನ್ನು ನಿಮ್ಮದಾಗಿಸಿಕೊಳ್ಳಿರಿ. ॥80॥

ಇವು ಪಂಡರೀನಾಥನ ಪ್ರೀತಿಯ ಪರಮ ಭಕ್ತನ ವಚನಗಳು. ಅವನಿಗೆ ಹೋಲಿಸಿದಾಗ ದೀನನಾದ ನಾನು ಏನನ್ನು ಅನುಭವಿಸಲಿ? ಶ್ರೋತೃಗಳ ಅವರವರ ಅನುಭವಗಳೇ ಉತ್ತಮವಾದ ಮಾರ್ಗದರ್ಶಿ. 81

ನಾಮಸ್ಮರಣೆ ಬಾಬಾಗೆ ಅತಿಪ್ರಿಯ. ಅವರೇ ನಿರಂತರ "ಅಲ್ಲಾ-ಮಾಲಿಕ್‌" ಎಂದು ಪುನರುಚ್ಚರಣ ಮಾಡುತ್ತಿದ್ದರು. ಅವರು ನಾಮ ಸಪ್ತಾಹಗಳನ್ನು ಏರ್ಪಡಿಸುತ್ತಿದ್ದರು. (ಸಪ್ತಾಹ ತಡೆಯಿಲ್ಲದೆ ಹಗಲು ರಾತ್ರಿ ಭಜಿಸುವುದು.) 82

ಬಾಬಾರವರು ಒಮ್ಮೆ ದಾಸಗಣುವಿಗೆ ಈ ರೀತಿಯ ನಾಮಸಪ್ತಾಹವನ್ನು ಆಚರಿಸಲು ಆಜ್ಞಾಪಿಸಿದರು. ಆಗ ದಾಸಗಣು ಬಾಬಾರವರಿಂದ ವಿಠಲನ ಪ್ರತ್ಯಕ್ಷ ದರ್ಶನವಾಗಬೇಕೆಂಬ ಭರವಸೆಯನ್ನು ಪಡೆದನು. 83॥

ಬಾಬಾರವರು ಅವನ ಹೃದಯದ ಮೇಲೆ ಕೈಯಿಟ್ಟು ಆತ್ಮವಿಶ್ವಾಸದಿಂದ ಭರವಸೆ ನೀಡಿದರು ಮತ್ತು ಜೋರಾಗಿ ಹೇಳಿದರು, "ಹೌದು, ಮತ್ತೆ, ವಿಠಲನು ಪ್ರತ್ಯಕ್ಷನಾಗುವನು. ಆದರೆ ಭಕ್ತನು ಪೂರ್ಣ ವಿಶ್ವಾಸವನ್ನಿಡಬೇಕು." ॥84

ಡಕುರನಾಥದ ಡಂಕಪುರಿ ಅಥವಾ ಪಂಡರಿಯ ವಿಠಲ ಅಥವಾ ರಣಚೋಡದ ದ್ವಾರಕಾನಗರ ಅವುಗಳು ಇಲ್ಲಿ ಅವೆ, ಇವುಗಳನ್ನು ಹುಡುಕಿಕೊಂಡು ಬಹಳ ದೂರ ಹೋಗಬೇಕಾಗಿಲ್ಲ. 85

ವಿಠಲನು ತನ್ನ ಏಕಾಂತವನ್ನು ಬಿಟ್ಟು ಬರುತ್ತಾನೆಯೇ? ಎಲ್ಲಿಂದಾದರೂ ಬರುವನೆ? ಇಲ್ಲಿ ಭಕ್ತನ ಉತ್ಕಟ ಭಕ್ತಿಯಿಂದ ಬರುತ್ತಾನೆ. ॥86॥

ತನ್ನ ಮಾತಾಪಿತೃಗಳ ಸೇವೆಯನ್ನು ಮಾಡುತ್ತ ಪುಂಡಲೀಕನು ದೇವಾದಿದೇವನನ್ನು ಒಲಿಸಿಕೊಂಡನು. ಪುಂಡಲೀಕನ ಭಕ್ತಿಯನ್ನು ನೋಡಿ ಪರಮಾತ್ಮನು ಒಂದು ಇಟ್ಟಿಗೆಯ ಮೇಲೆ ನಿಂತನು. ॥87॥

ಏಳನೆಯ ದಿನದ ನಾಮ ಸ್ವರಣೆಯಾದ ಮೇಲೆ ಬಾಬಾರವರ ನುಡಿಗಳು ಸತ್ಯವಾದವು. ಶಿರಡಿಯಲ್ಲಿ ದಾಸಗಣುವಿಗೆ ವಿಠಲನ ದರ್ಶನವಾಯಿತೆಂದು ಹೇಳುತ್ತಾರೆ. ಈ ರೀತಿ ಬಾಬಾರವರ ಭವಿಷ್ಯವಾಣಿಯನ್ನು ಅನುಭವಿಸಲಾಯಿತು ಮತ್ತು ಪ್ರಮಾಣೀಕರಿಸಲಾಯಿತು ಎಂದು ತಿಳಿಯಿತು. 88

ಒಮ್ಮೆ ಕಾಕಾಸಾಹೇಬ ದೀಕ್ಷಿತ್‌ನು ಧ್ಯಾನಸ್ಥನಾಗಿದ್ದನು. ಬೆಳಗಿನ ನಿತ್ಯ ಸ್ನಾನವಾದ ನಂತರ ಅವನೂ ವಿಠಲನ ದರ್ಶನ ಮಾಡಿದನು. 89॥

ಅನ೦ತರ, ಬಾಬಾರವರ ದರ್ಶನಕ್ಕಾಗಿ ಹೋದಾಗ ಬಾಬಾರವರು ಅವನನ್ನು - "ವಿಠಲ ಪಾಟೀಲನು ಬಂದಿರಲಿಲ್ಲವೇ? ಅವನನ್ನು ಭೇಟಿಮಾಡಿದೆಯಾ? ॥90॥

“ಆ ವಿಠಲನು ಬಹಳ ಜಾರಿಕೊಳ್ಳುವವನು. ಅವನನ್ನು ಗಟ್ಟಿಯಾಗಿ ಹಿಡಿದುಕೋ. ಇಲ್ಲದಿದ್ದಲ್ಲಿ ಅವನು ಜಾರಿಕೊಳ್ಳುತ್ತಾನೆ. ನಿನ್ನ ಗಮನ ಒಂದು ಕ್ಷಣ ತಪ್ಪಿದರೂ ಸಾಕು.” 91

ಈ ಘಟನೆ ಬೆಳಗ್ಗೆ ನಡೆಯಿತು. ಪುನಃ ಮಧ್ಯಾಹ್ನದ ಸಮಯದಲ್ಲಿ ವಿಠಲನು ಸಂತಸದ ದರ್ಶನ ನೀಡಿದ ನಿದರ್ಶನವನ್ನು ನೋಡಿರಿ. 92

ಒಬ್ಬ ಸಂಚಾರಿ ವ್ಯಾಪಾರಿಯು ಶಿರಡಿಯ ಹೊರಗಿನ ಬೇರೊ೦ದು ಊರಿಂದ ಹಳ್ಳಿಗೆ 20-25 ಸುಂದರವಾದ ವಿಠಲನ ಫೋಟೋಗಳನ್ನು ಮಾರಲು ಬಂದನು. 93

ಅದು ಬೆಳಗಿನ ಧ್ಯಾನದಲ್ಲಿ ಕಂಡ ಮೂರ್ತಿಯ ಪ್ರತಿರೂಪವಾಗಿತ್ತು. ದೀಕ್ಷಿತನು ಅಚ್ಚರಿಗೊ೦ಡನು. ಬಾಬಾರವರ ಮಾತುಗಳೆಲ್ಲವನ್ನು ಸ್ಮರಿಸಿಕೊಂಡನು. 94॥

ದೀಕ್ಷಿತನು ಅತಿ ಪ್ರೀತಿಯಿಂದ ಒಂದು ಚಿತ್ರಪಟವನ್ನು ಬೆಲೆಕೊಟ್ಟು ಕೊಂಡನು. ಅದನ್ನು ನಿತ್ಯ ಪೂಜೆಗಾಗಿ ಭಕ್ತಿಯಿಂದ ಪ್ರತಿಷ್ಠಾಪಿಸಿದನು. 95

ಮತ್ತೊಂದು ಅತಿಸುಂದರವಾದ ಘಟನೆಯು ವಿಠಲನ ಪೂಜೆಯೂ ಸಾಯಿಯ ಆರಾಧನೆಗೆ ಸಮನಾದದ್ದು ಎಂದು ತಿಳಿಸುತ್ತದೆ. ಅದನ್ನು ಸಂತೋಷದಿಂದ ಆಲಿಸಿರಿ. 96

ಭಗವಂತರಾವ್‌ ಕ್ಷೀರಸಾಗರ್‌ನ ತಂದೆ, ವಿಠಲನ ಪ್ರಮುಖ ಭಕ್ತರಲ್ಲೊಬ್ಬನು. ಆಗಾಗ್ಗೆ ಪಂಡರಾಪುರಕ್ಕೆ ಹೋಗಿ ಬರುತ್ತಿದ್ದನು. 97॥

ಅವನ ಮನೆಯಲ್ಲಿ ವಿಠಲನ ಒ೦ದು ಮೂರ್ತಿಯು ಇತ್ತು. ಆದರೆ ತಂದೆಯ ಕಾಲವಾದನಂತರ ಪೂಜಾ ಕೈಂಕರ್ಯ, 'ನೈವೇದ್ಯ' ಸಮರ್ಪಣೆ ಇತ್ಯಾದಿಗಳು ನಿಂತು ಹೋದವು. ವಾರ್ಷಿಕ ಶ್ರಾದ್ಧ, ತಿಥಿಕರ್ಮಗಳೂ ನಿಂತುಹೋದವು. ॥98॥

ಭಗವಂತರಾಯನು ಪಂಡರಾಪುರದ ವಾರ್ಷಿಕ ತೀರ್ಥಯಾತ್ರೆಯನ್ನೂ ಬಿಟ್ಟುಬಿಟ್ಟನು. ಆದರೆ ಅವನು ಶಿರಡಿಗೆ ಬಂದಾಗ ಬಾಬಾ ಅವನ ತಂದೆಯನ್ನು ನೆನಪಿಸಿಕೊಂಡು ಈ ರೀತಿ ಹೇಳಿದರು; "ಅವನು ನನ್ನ ಮಿತ್ರನಾಗಿದ್ದನು. 99

"ಅವನು ನನ್ನ ಆಪ್ತ ಮಿತ್ರನ ಪುತ್ರ ಆದ್ದರಿಂದಲೇ ನಾನು ಅವನನ್ನು ಶಿರಡಿಗೆ ಎಳೆದು ತಂದೆ. ಅವನು ನೈವೇದ್ಯವನ್ನು ಕೊಡುವುದಿಲ್ಲ. ನನ್ನನ್ನೂ ಉಪವಾಸ ಕೆಡವುತ್ತಾನೆ. 100

"ಅವನು ವಿಠಲನನ್ನೂ ಉಪವಾಸದಲ್ಲಿರಿಸುತ್ತಾನೆ. ಆದ್ದರಿಂದ ನಾನು ಅವನನ್ನು ಶಿರಡಿಗೆ ಕರೆತಂದೆ. ಈಗ ನಾನು ಅವನಿಗೆ ಜ್ಞಾಪಿಸುತ್ತೇನೆ ಮತ್ತು ಪೂಜೆಮಾಡುವ ಹಾಗೆ ಮಾಡುತ್ತೇನೆ". ॥101

ಒಂದು ಸಲ ಪರ್ವಕಾಲವೆಂದು ದಾಸಗಣು ಪ್ರಯಾಗತೀರ್ಥದಲ್ಲಿ ಸ್ನಾನ ಮಾಡಬೇಕೆಂದು ಇಚ್ಛಿಸಿ ಬಾಬಾರವರ ಅನುಮತಿಗಾಗಿ ಬಂದನು. ॥102॥

ಪ್ರತ್ಯುತ್ತರವಾಗಿ ಬಾಬಾರವರು ಹೇಳಿದರು - "ನೀನು ಅದಕ್ಕಾಗಿ ಅಷ್ಟು ದೂರಹೋಗಬೇಕಾಗಿಲ್ಲ. ಇದೇ ನಮ್ಮ ಪ್ರಯಾಗದ ತೀರ. ನಿನ್ನ ಹೃದಯದಲ್ಲಿ ದೃಢವಾದ ವಿಶ್ವಾಸವನ್ನಿಡು." ॥103॥

ಓಹ್‌! ಬಾಬಾರವರ ಮಹತ್ವವನ್ನಿ ನಾನು ಹೇಗೆ ತಾನೇ ಹೊಗಳಲಿ? ದಾಸಗಣು ತನ್ನ ಮಸ್ತಕವನ್ನು ಬಾಬಾರವರ ಚರಣಗಳಲ್ಲಿಟ್ಟಕೂಡಲೇ ಪವಿತ್ರ ಜಲವು ಅವರ ಎರಡೂ ಹೆಬ್ಬೆರಳುಗಳಿಂದ ಗಂಗಾ ಮತ್ತು ಯಮುನೆಯರ ರೀತಿಯಲ್ಲಿ ಉಕ್ಕಿಬಂದವು. 104

ಈ ಪವಾಡವನ್ನು ವೀಕ್ಷಿಸಿದ ದಾಸಗಣು ಭಾವೋದ್ವೇಗಕ್ಕೊಳಗಾದನು. ಅದೆಂತಹಮಹದುಪಕಾರ ಬಾಬಾರವರು ಅವನ ಮೇಲೆ ಅನುಗ್ರಹಿಸಿದರು! ಎರಡು ಕಣ್ಣುಗಳಿ೦ದಲೂ ಆನಂದಭಾಷ್ಪ ಹರಿಯಿತು. 105



ಅವರ ಮಾತು ಪ್ರೋತ್ಸಾಹಕರವಾಗಿತ್ತು. ಅವರ ಹೃದಯ ಪ್ರೇಮದಿಂದ ಉಕ್ಕಿ ಬಂತು. ಬಾಬಾರವರ ಅನಂತ ಗುಣಗಾನ, ಅಳತೆಗೆ ಸಿಕ್ಕದ ಮಹತ್ತು ಮತ್ತು ಅಚ್ಚರಿಮೂಡುವ೦ತಹ ಕಾರ್ಯಗಳನ್ನು ವಿವರಿಸಿದಾಗಲೇ ತೃಪ್ತಿಹೊಂದಿದನು. ॥106॥

ಶ್ರೋತೃಗಳ ಕುತೂಹಲವನ್ನು ತಣಿಸಲು ನಾನು ಅವರ ಒಂದು ಮಧುರ ರಚನೆಯನ್ನು ಈ ಮಧ್ಯದಲ್ಲಿ ಅಳವಡಿಸುತ್ತೇನೆ. ॥107

ಹಾಡು

ಪಲ್ಲವಿ: ಓ ಸದ್ಗುರುರಾಯ, ನಿನ್ನ ಶಕ್ತಿ ಅಪಾರ. ನಿನ್ನ ಲೀಲೆಗಳು ಅಸಾಧಾರಣ. ಜಡ ಮತ್ತು ಜೀವಿಗಳನ್ನು ಭವಸಾಗರದಿಂದ ದಾಟಿಸುವ ನಾವೆಯು ನೀನು.

1) ನೀನು ನಿನ್ನನ್ನೇ ವೇಣಿಮಾಧವ(ವಿಷ್ಣುನಾಗಿ ರೂಪಾಂತರಗೊಂಡು, ನಿನ್ನ ಪಾದಗಳನ್ನು ಇಲ್ಲಿ ಪ್ರಯಾಗವನ್ನಾಗಿ ಮಾಡಿದೆ. ನಿನ್ನ ಹೆಬ್ಬೆರಳುಗಳಿಂದ ಗಂಗೆ ಮತ್ತು ಯಮುನೆಯರು ಪ್ರವಹಿಸುವುದನ್ನು ತೋರಿಸಿದೆ.

2) ನೀನು ಕಮಲದಿಂದ ಉತ್ಪತ್ತಿಯಾದ ಬ್ರಹ್ಮನು. ಕಮಲಾಕರನಾದ ವಿಷ್ಣು ಮತ್ತು ಶಿವ ಮತ್ತು ತ್ರಿಮೂರ್ತಿಸ್ಟರೂಪನು. ಈ ಭೂಮಿಯಲ್ಲಿ ಸಾಯಿ ಸಮರ್ಥನಾಗಿ ಅವತರಿಸಿರುವೆ.

3) ಬೆಳಗಿನ ಜಾವದಲ್ಲಿ ಬ್ರಹ್ಮನ ಹಾಗೆ ಜ್ಞಾನದ ನುಡಿಗಳನ್ನು ನುಡಿಯುವೆ ಮತ್ತು ಕೆಲವೊಮ್ಮೆ ನೀನು ನಿನ್ನ ಆವೇಶಭರಿತ ಸ್ಪಭಾವ ಮತ್ತು ಭಯಹುಟ್ಟಿಸುವಂತಹ ರುದ್ರನ ತೋರಿಕೆ, ತಮೋಗುಣಗಳನ್ನು ಅವಲಂಬಿಸಿರುವೆ.

4) ಕೆಲವೊಮ್ಮೆ ಶ್ರೀಕೃಷ್ಣನ ಬಾಲಲೀಲೆಗಳನ್ನು ಪ್ರಕಟಿಸಿರುವೆ. ಭಕ್ತನ ಹೃದಯ ಸರೋವರದಲ್ಲಿ ಹಂಸನಾಗಿರುವೆ.

5) ನಿನ್ನನ್ನು ಮುಸಲ್ಮಾನನೆಂದು ಕರೆಯೋಣವೆಂದರೆ ನಿನಗೆ ಶ್ರೀಗಂಧದ ಲೇಪನವು ಪ್ರಿಯ. ನಿನ್ನನ್ನು ಹಿ೦ದುವೆಂದು ಕರೆಯೋಣವೆಂದರೆ ನೀನು ಯಾವಾಗಲೂ ಮಸೀದಿಯಲ್ಲಿ ವಾಸಮಾಡುತ್ತಿರುವೆ.

6) ನಿನ್ನನ್ನು ಶ್ರೀಮಂತನೆಂದು ಕರೆಯೋಣವೇ? ನೀನು ಭಿಕ್ಷಾಟನೆಗಾಗಿ ಹೋಗುವೆ. ನಾನು ನಿನ್ನನ್ನು ಫಕೀರನೆಂದು ಕರೆಯೋಣವೇ? ನಿನ್ನ ದಯಾಸ್ವಭಾವದಿಂದ ನೀನು ಕುಬೇರನನ್ನೇ ನಾಚಿಸುವೆ.

7) ಮಸೀದಿಯೇ ನಿನ್ನ ಮನೆಯೆಂದು ಕರೆಯೋಣವೇ? ಅಲ್ಲಿ ಅಗ್ನಿಯು ಪ್ರಜ್ವಲಿಸುತ್ತಿದೆ. ಧುನಿ (ಬಾಬಾರವರು ಉರಿಸಿದ ಆಗ್ನಿ) ಯಾವಾಗಲೂ ಉರಿಯುತ್ತಿದ್ದು ಉದಿ(ಭಸ್ಮ)ಯನ್ನು ಜನರಿಗೆ ಕೊಡಲಾಗುತ್ತಿದೆ.

8) ಬೆಳಗಿನಿಂದಲೂ ಭಕ್ತರು ಸರಳತೆಯಿಂದ ಬಂದು ನಿನ್ನನ್ನು ಪೂಜಿಸುವರು. ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲೆ ಬಂದಾಗ ನಿನ್ನ ಆರತಿ ಮಾಡಲಾಗುವುದು.

9) ಭಕ್ತರು ನಿನ್ನ ಸುತ್ತಲೂ ಭಗವಂತನ ಮುಂದೆ ನಿಲ್ಲುವ ಸೇವಕರಂತೆ ನಿಲ್ಲುತ್ತಾರೆ. ಕೈಯಲ್ಲಿ ಚಾಮರ ಹಿಡಿದು ಬೀಸುತ್ತಾರೆ.

10) ಕಹಳೆ, ಶಹನಾಯಿ, ಜಾಗಟೆ, ಘಂಟೆಗಳು ಧ್ವನಿಗೈಯುತ್ತಿವೆ. ಪರಿಚಾರಕರು ಸಮವಸ್ತ್ರಗಳಲ್ಲಿ ದ್ವಾರದಲ್ಲಿ ನಿಂತು ನಿನ್ನ ಕೀರ್ತಿಯನ್ನು ಉಗ್ಗಡಿಸುತ್ತಾರೆ.

11) ಆರತಿಯ ಸಮಯದಲ್ಲಿ ವಿಷ್ಣುವಿನ ಹಾಗೆ ಕಾಣುವೆ. ಸಂಜೆ ಹೊತ್ತಿನಲ್ಲಿ ನೀನು ಧುನಿಯ ಮುಂದೆ ಕುಳಿತಾಗ ಕಾಮನನ್ನು ಸುಟ್ಟುಹಾಕಿದ ಶಿವನ ಹಾಗೆ ಶೋಭಿಸುವೆ.

12) ಓ ಬಾಬಾ ಸಾಯಿ! ಈ ರೀತಿ ನಿನ್ನಲ್ಲಿ ಪ್ರದರ್ಶಿತವಾಗುತ್ತಿರುವ ತ್ರಿಮೂರ್ತಿ ಸ್ವರೂಪದ ಲೀಲೆಗಳು ನಿತ್ಯವೂ ನಮ್ಮ ಅನುಭವಕ್ಕೆ ಬರುತ್ತಿವೆ.

13) ಹೀಗಿದ್ದರೂ ನನ್ನ ಮನಸ್ಸು ಚಂಚಲವಾಗಿ ಸುತ್ತುತ್ತಿರುತ್ತದೆ. ದಯ ತೋರಿ ಈ ಮನಸ್ಸನ್ನು ಸ್ಥಿರಗೊಳಿಸು ಎಂದು ಪ್ರಾರ್ಥಿಸುತ್ತೇನೆ.

14) ಅಧಮಾಧಮನೂ, ಮಹಾಪಾತಕಿಯೂ ಆದ ನಾನು ನಿನ್ನಲ್ಲಿ ಆಶ್ರಯ ಬೇಡಿ ಬಂದಿದ್ದೇನೆ. ದಯವಿಟ್ಟು ಈ ದಾಸಗಣುವಿನ ತಾಪತ್ರಯಗಳನ್ನು (ಆದಿಭೌತಿಕ, ಆದಿದೈವಿಕ, ಆಧ್ಯಾತ್ಮಿಕ) ಪರಿಹರಿಸು.


ಅದು ಹಾಗಿರಲಿ. ಅಘೋರವಾದ ಪಾಪಗಳನ್ನು ಪರಿಹಾರ ಮಾಡಲು ಜನರು ಗಂಗೆಯ ನೀರಿನ ಮೊರೆಹೋಗುತ್ತಾರೆ. ಆದರೆ ಗಂಗೆಯು ತನ್ನಲ್ಲಿನ ಪಾಪಗಳನ್ನು ತೊಳೆಯಲು, ತಾನೇ ಸಂತರ ಚರಣಗಳನ್ನು ಆಶ್ರಯಿಸುತ್ತಾಳೆ. ॥108॥
ಪವಿತ್ರ ಚರಣಗಳನ್ನು ಬಿಟ್ಟು, ಗಂಗಾ-ಗೋದಾವರಿಯಲ್ಲಿಗೆ ತೀರ್ಥಯಾತ್ರೆ ಮಾಡುವ ಅವಶ್ಯಕತೆ ಇರುವುದಿಲ್ಲ. ಸಂತ ಸಾಯಿಯ ಮಧುರವಾದ ಜೀವನ ಚರಿತ್ರೆ ಹಾಗೂ ಕೀರ್ತನೆಯನ್ನು ಆಲಿಸಿರಿ. ॥109
ಅದೃಷ್ಟವಶಾತ್‌ ಭೀಮಾರತಿ ನದಿಯಲ್ಲಿ ಗೋಣಾರು ನಾಮದೇವರನ್ನು ಕಂಡಂತೆ, ಭಾಗೀರಥಿ ನದಿಯಲ್ಲಿ ಮುತ್ತಿನ ಕಪ್ಪೆಚಿಪ್ಪಿನಲ್ಲಿ ತಾಮಲನಿಗೆ ಕಬೀರರು ಕಂಡರು. ॥110॥
ಅದೇ ರೀತಿಯಲ್ಲಿ, ಶ್ರೀ ಸಾಯಿನಾಥರು ಭಕ್ತರಿಗಾಗಿ ಶಿರಡಿಯೆಂಬ ಹಳ್ಳಿಯಲ್ಲಿ ಬೇವಿನ ಮರದ ಕೆಳಗೆ 15 ವರ್ಷಗಳ ಬಾಲಕನಾಗಿ ಕಾಣಿಸಿಕೊಂಡರು. ॥111
ಅವರು ಪ್ರಕಟವಾದಾಗಲೇ ಬ್ರಹ್ಮಚ್ಞಾನಿಯಾಗಿದ್ದರು. ಅವರಿಗೆ ಕನಸಿನಲ್ಲಿಯೂ ವಿಷಯವಾಸನೆ ಇರಲಿಲ್ಲ. ಮುಕ್ತಿಯು ಅವರ ಚರಣಗಳಲ್ಲಿ ನೂಪುರವಾಗಿ ಶೋಭಿತವಾಗಿದೆ. ॥112॥
ಬಾಬಾರವರು ಯಾವ ದೇಶದಲ್ಲಿ ಜನ್ಮತಾಳಿದರು ಅಥವಾ ಯಾವ ಪವಿತ್ರ ವಂಶದವರು. ಅವರ ಮಾತಾಪಿತೃಗಳು ಯಾರು ಎಂಬ ವಿಷಯ ಯಾರಿಗೂ ತಿಳಿದಿಲ್ಲ. ॥113
ಯಾರಿಗೂ ಅವರ ಪೂರ್ವಾವಸ್ಥೆಯು ತಿಳಿದಿಲ್ಲ. ಅವರ ತಂದೆ. ತಾಯಿ ಯಾರು? ಎಂಬುದನ್ನು ತಿಳಿಯಲು ಜನರು ತಮ್ಮ ಬುದ್ಧಿಯನ್ನೆಲ್ಲ ಖರ್ಚುಮಾಡಿದರೂ ಆಗಲಿಲ್ಲ. ॥114
ತಂದೆ, ತಾಯಿ, ಬಂಧುಗಳು, ಆಪ್ತರು ಮತ್ತು ಜಾತಿ, ಅಷ್ಟೇಕೆ ಎಲ್ಲಾ ಸಂಸಾರ ಬಂಧನಗಳನ್ನು ತ್ಯಾಗ ಮಾಡಿ ಜನರ ಹಿತಕ್ಕಾಗಿ ಶಿರಡಿಯಲ್ಲಿ ಪ್ರಕಟಗೊ೦ಡರು. ॥115
ಶಿರಡಿಯಲ್ಲಿನ ಒಬ್ಬ ವೃದ್ಧ ಮಹಿಳೆ, ನಾನಾ ಚೋಪದಾರ್‌ನ ತಾಯಿ, ಸಾಯಿಬಾಬಾರವರ ಆಶ್ಚರ್ಯಕರವಾದ ಅತ್ಯದ್ಭುತವಾದ ಚರಿತ್ರೆಯನ್ನು ಹೇಳುತ್ತಿದ್ದಳು. 116॥
ಆಕೆ ಈ ರೀತಿ ಹೇಳುತ್ತಾಳೆ. "ಪ್ರಾರಂಭದಲ್ಲಿ ಈ ಸಣ್ಣ ಬಾಲಕ ಬೆಳ್ಳಗೆ, ಅತಿ ಸುಂದರವಾಗಿ ಮತ್ತು ಮನೋಹರವಾಗಿ ಮೊದಲು ಕಾಣಿಸಿದ್ದು ಬೇವಿನ ಮರದ ಕೆಳಗೆ, ಶಾಂತವಾಗಿ ಪದ್ಮಾಸನದಲ್ಲಿ ಕುಳಿತಿದ್ದನು. ॥117॥
"ಆ ಎಳೆ ವಯಸ್ಸಿನಲ್ಲಿ ಚಳಿ, ಬಿಸಿಲನ್ನು ಲೆಕ್ಕಿಸದೆ ಅತ್ಯಂತ ಕಠಿಣ ತಪಸ್ಸಿನಲ್ಲಿ ನಿರತನಾಗಿದ್ದ ಆ ಸುಂದರ ಬಾಲಕನ ರೂಪವನ್ನು ನೋಡಿದ ಜನರು ಅತ್ಯಂತ ವಿಸ್ಮಯಗೊಂಡರು. 118
"ಆ ಎಳೆ ವಯಸ್ಸಿನ ಬಾಲಕನ ಈ ಸ್ಥಿತಿಯು ದೂರದಿಂದ ಮತ್ತು ಹತ್ತಿರದಿಂದ ಬಾಲಕನ ದರ್ಶನಕ್ಕೆಂದು ಬಂದ ಎಲ್ಲಾ ಹಳ್ಳಿಗರನ್ನೂ ಅಚ್ಚರಿಗೊಳಿಸಿತ್ತು. 119
ಅವನಿಗೆ ಹಗಲಿನಲ್ಲಿ ಯಾರ ಸಹವಾಸವೂ ಇರಲಿಲ್ಲ. ರಾತ್ರಿಯಲ್ಲಿ ಎಂದಿಗೂ ಭಯಗೊಂಡಿರಲಿಲ್ಲ. ಇಂತಹ ಚಿಕ್ಕಬಾಲಕ ಎಲ್ಲಿಂದ ಬಂದು ಕಾಣಿಸಿಕೊಂಡನು ಎಂದು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ॥120॥
"ಅವನು ಬಹು ಸುಂದರನಾಗಿದ್ದನು. ಅವನನ್ನು ನೋಡುತ್ತಲೇ ಜನರು ಅವನ ಕಡೆಗೆ ಆಕರ್ಷಿತರಾಗುತ್ತಿದ್ದರು. ಅವನು ಯಾರ ಮನೆಯಲ್ಲಿಯೂ ವಾಸಿಸಲಿಲ್ಲ ಅಥವಾ ಯಾರ ಬಾಗಿಲಿಗೂ ಹೋಗಲಿಲ್ಲ. ಹಗಲೂ ರಾತ್ರಿ ಅವನು ಆ ಬೇವಿನ ಮರದ ಕೆಳಗೆಯೇ ವಾಸಿಸುತ್ತಿದ್ದನು. ॥121
ಪ್ರತಿಯೊಬ್ಬರೂ ಆ ಬಾಲಕನನ್ನು ನೋಡಿ ವಿಸ್ಮಯ ಪಟ್ಟಿದ್ದರು. ಈ ಎಳೆ ವಯಸ್ಸಿನ ಬಾಲಕ ಇಷ್ಟು ಸ್ಪುರದ್ರೂಪಿ, ಹಗಲು - ರಾತ್ರಿ ಬಯಲಿನಲ್ಲಿ ವಾಸವಾಗಿದ್ದನು. 122
ಪ್ರತಿಯೊಬ್ಬರೂ ಆಶ್ಚರ್ಯ ಚಕಿತರಾಗಿದ್ದರು. ಈ ಹುಡುಗ ಹೊರನೋಟಕ್ಕೆ ಮಗುವಿನಂತೆ ಕಂಡರೂ, ಕರ್ಮದಲ್ಲಿ ಮಹಾನ್‌ಗಿಂತ ಮಹಾನ್‌ ಅಗಿ, ವೈರಾಗ್ಯದಲ್ಲಿ ಪೂರ್ಣಾವತಾರವಾಗಿದ್ದನು. ॥123॥
ಒಂದು ದಿನ, ಒಂದು ಅಪರೂಪದ ಸಂಗತಿ ನಡೆಯಿತು. ಕೆಲವು ಜನರ ಮೇಲೆ ಖಂಡೋಬಾದೇವರು ಬಂದು ಮೈತಿರುಗಿಸುತ್ತಿದ್ದು, ಜನರು ಪ್ರಶ್ನೆಗಳನ್ನು ಕೇಳತೊಡಗಿದರು. ॥124
"ಆ ಚಿಕ್ಕ ಬಾಲಕನ ಮಾತಾಪಿತೃಗಳು ಯಾರು? ಮತ್ತು ಅವನು ಎಲ್ಲಿಂದ ಹೇಗೆ ಇಲ್ಲಿಗೆ ಬಂದನು? ಖಂಡೋಬಾದೇವನೇ, ನೀನಾದರೂ ಅದನ್ನು ಕಂಡುಹಿಡಿ" ಎಲ್ಲರ ಪ್ರಶ್ನೆಯೂ ಇದೇ ಆಗಿತ್ತು. 125
ಆ ದೇವನು ಉತ್ತರಿಸಿದನು, "ಹೋಗಿ, ಒ೦ದು ಪಿಕಾಸಿಯನ್ನು ತೆಗೆದುಕೊ೦ಡು ಬನ್ನಿ. ನಾನು ತೋರಿಸಿದ ಜಾಗದಲ್ಲಿ ಅಗೆಯಿರಿ. ಆಗ ನಿಮಗೆ ಆ ಬಾಲಕನ ಪತ್ತೆಯ ಬಗ್ಗೆ ತಿಳಿಯುತ್ತದೆ. ಈ ಜಾಗದಲ್ಲಿ ಅಗೆಯಿರಿ. 126
ಅನ೦ತರ ಹಳ್ಳಿಯ ಸರಹದ್ದಿನಲ್ಲಿ, ಅದೇ ಬೇವಿನ ಮರದ ಕೆಳಗೆ ಮತ್ತೆಮತ್ತೆ ಅಗೆದಾಗ ಅವರಿಗೆ ಅಲ್ಲಿ ಇಟ್ಟಿಗೆಗಳು ಕಂಡವು. ॥127॥
ಇಟ್ಟಿಗೆಗಳ ಕೊನೆಯ ಸಾಲಿನವರೆಗೆ ಅಗೆದಾಗ ಮತ್ತು ಕೆಳಗಿದ್ದ ಕಲ್ಲು ಚಪ್ಪಡಿಯನ್ನು ಅರ್ಧ ಸರಿಸಿದಾಗ, ಆ ಚಪ್ಪಡಿಯು ಪ್ರವೇಶ ದ್ವಾರವನ್ನು ಮುಚ್ಚಿತ್ತು. ಅಲ್ಲಿ ಅವರಿಗೆ ಕಂಡದ್ದು ಒಂದು ನೆಲದಡಿಯ ಗುಹೆ. ಅದರಲ್ಲಿ ನಾಲ್ಕು ದೀಪದ ಕಂಬಗಳು ಉರಿಯುತ್ತಿದ್ದವು. ॥128॥
 ಗುಹೆಯ ನಾಲ್ಕು ಕಡೆಯಲ್ಲೂ ಕಲ್ಲು ಚಪ್ಪಡಿ ಹಾಸಲಾಗಿತ್ತು. ಅಲ್ಲಿ ಗೋಮುಖ ಆಕಾರದ ಮರದ ಮಣೆಯು, ಸುಂದರವಾದ ಜಪಮಾಲೆಯೂ ಇದ್ದುವು. ಆ ದೇವನು ಹೇಳಿದನು - "ಇದೇ ಜಾಗದಲ್ಲಿ ಆ ಬಾಲಕನು 12 ವರ್ಷಗಳ ಕಾಲ ತಪಸ್ಪು ಮಾಡಿದ್ದನು." ॥129॥
ಎಲ್ಲ ಜನರೂ ಅಚ್ಚರಿಗೊಂಡರು ಮತ್ತು ಆ ಹುಡುಗನನ್ನು ಪ್ರಚೋದಕರ ಪ್ರಶ್ನೆಗಳನ್ನು ಕೇಳಿದರು. ಅದರೆ ಈ ಹುಡುಗ ಬಹಳ ತುಂಟತನದಿಂದ ಅವರಿಗೆ ಬೇರೆಯೇ ಒಂದು ಕಥೆಯನ್ನು ಹೇಳಿದನು. 130॥
ಅವನು ಹೇಳಿದನು, "ಇದು ನನ್ನ ಗುರುವಿನ ಸ್ಥಾನ. ಈ ಪವಿತ್ರ ಸ್ಥಳವು ಅನುವಂಶಿಕವಾದುದು. ಇದನ್ನು ಇದೇ ರೀತಿಯಲ್ಲಿ ಸಂರಕ್ಷಣೆ ಮಾಡಿ". 131


ಬಾಬಾರವರು ಈ ರೀತಿ ಹೇಳಿದುದನ್ನು ಜನರು ಕೇಳಿದರು. ಆದರೆ ನನ್ನ ನಾಲಿಗೆ ಏಕೆ ಬಾಬಾರವರು ತಿಳಿಸಿದ ವಿಷಯವು ಸತ್ಯವಲ್ಲ ಎಂದು ಹೇಳುತ್ತೆ? ॥132॥
ನನ್ನ ಬಗ್ಗೆಯೇ ನನಗೆ ಅಚ್ಚರಿ ಆಗಿದೆ. ನನಗೆ ಏಕೆ ಬಾಬಾರವರ ಬಗ್ಗೆ ಈ ಅಭಿಪ್ರಾಯ ಉಂಟಾಯಿತು? ಬಾಬಾರವರು ಇದನ್ನು ತೇಲಿಸಿ ಹೇಳಿದ್ದಾರೆ ಎಂಬುದು ನನಗೆ ಈಗ ಮನವರಿಕೆಯಾಯಿತು. 133॥
ಬಾಬಾರವರು ಸ್ವಭಾವತಃ ವಿನೋದ ಪ್ರಿಯರು. ಆ ಗುಹೆಯು ಅವರದೇ ನಿವಾಸ ಸ್ಥಾನವಾಗಿದ್ದಿರಬಹುದು. ಅದನ್ನು ಗುರುವಿಗೆ ಅನ್ವಯಿಸಿದರೆ ಏನಾಗುತ್ತದೆ? ಪ್ರಾಮುಖ್ಯತೆಗೆ ಏನೂ ಕುಂದಾಗುವುದಿಲ್ಲ. 134
ಹಾಗೇಯೇ ಇರಲಿ, ಬಾಬಾರವರ ಆಜ್ಞೆಯ ಪ್ರಕಾರ ಆ ಗುಹೆಯನ್ನು ಇಟ್ಟಿಗೆಗಳಿಂದ ಮುಚ್ಚಲಾಯಿತು. ಅದನ್ನು ಬಾಬಾರವರು ಗುರುಸ್ಥಾನವೆಂದು ತಿಳಿಸಿದ್ದರು. ॥135॥
ಅಶ್ವತ್ಥ ವೃಕ್ಷ ಮತ್ತು ಔದುಂಬರ ವೃಕ್ಷಗಳು ಪ್ರಾಮುಖ್ಯವಾಗಿವೆ. ಅದೇ ರೀತಿ ಬೇವಿನ ಮರವು ಬಾಬಾರವರಿಗೆ ಮುಖ್ಯವಾದುದು. ಅವರು ಅದನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಅದಕ್ಕೆ ಮಹತ್ತಾದ ಸ್ಥಾನ ಕೊಟ್ಟಿದ್ದರು. 136
ಮ್ಹಾಲಸಾಪತಿ ಮತ್ತಿತರರು, ಶಿರಡಿ ಗ್ರಾಮಸ್ಥರು ಆ ಸ್ಥಳಕ್ಕೆ ಬಂದು ವಂದಿಸುತ್ತಿದ್ದರು. ಅದು ಬಾಬಾರವರ ಗುರುವಿನ ಸಮಾಧಿ ಸ್ಥಳವೆಂದು ನಂಬಿದ್ದರು. ॥137॥
ಸಮಾಧಿಯ ಹತ್ತಿರದ ಜಾಗದಲ್ಲಿ, 12 ವರ್ಷಗಳ ಕಾಲ ಬಾಬಾರವರು ತಪಸ್ಪು ಮಾಡಿದ್ದರು. ಇದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಹಾಗೆಂದೇ ಪ್ರಸಿದ್ಧವಾಗಿತ್ತು. 138
ಬಾಬಾರವರ ಭಕ್ತರಲ್ಲಿ ಒಬ್ಬನಾದ ಸಾಥೆಸಾಹೇಬನು ಸಮಾಧಿಯ ಮತ್ತು ಬೇವಿನ ಮರದ ಜಾಗವನ್ನು ಸ್ವಾಧೀನ ಪಡಿಸಿಕೊಂಡನು ಮತ್ತು ಸುತ್ತಲೂ ವರಾಂಡವಿರುವ ಕಟ್ಟಡವೊಂದನ್ನು ಕಟ್ಟಿಸಿದನು. ॥139॥ 
ಇದೇ ಕಟ್ಟಡ ಮತ್ತು ವಾಡಾ ಮೊದಲು ಯಾತ್ರಾರ್ಥಿಗಳಿಗೆ ಕೇಂದ್ರ ಸಭಾಗೃಹವಾಗಿತ್ತು. ಅದು ಸದಾ ಕಾಲ ಜನಜಂಗುಳಿಯಿಂದ ಕೂಡಿರುತ್ತಿತ್ತು ಮತ್ತು ಅಲ್ಲಿ ಅನೇಕ ವಾಗ್ಯುದ್ಧಗಳು ನಡೆಯುತ್ತಿದ್ದವು. ॥140॥
ಸಾಥೆಯು ಜೇವಿನ ಮರದ ಸುತ್ತಲೂ ಕಟ್ಟೆಯನ್ನು ಕಟ್ಟಿಸಿದನು. ಉತ್ತರದಕ್ಷಿಣಕ್ಕೆ ಮಹಡಿಯನ್ನು ಕಟ್ಟಿಸಿದನು. ಅವನು ಮಹಡಿಯ ಮೆಟ್ಟಲು ಕಟ್ಟಿಸುವಾಗ ನೆಲಮನೆಯ ಬಗ್ಗೆ ಸೂಚಿಸಿದ್ದನು. ॥141
ಸೋಪಾನ ಮಾರ್ಗದ (ಮೆಟ್ಟಲು) ಕೆಳಗೆ, ದಕ್ಷಿಣಾಭಿಮುಖವಾಗಿ ಒಂದು ಸುಂದರವಾದ ಮಾಡು ಇದೆ. ಅದರ ಮುಂದೆ ಒಂದು ಜಗಲಿ ಇದ್ದು ಅಲ್ಲಿ ಭಕ್ತರು ಉತ್ತರಾಭಿಮುಖವಾಗಿ ಕುಳಿತುಕೊಳ್ಳುತ್ತಾರೆ. 142
ಗುರುವಾರ ಮತ್ತು ಶುಕ್ರವಾರಗಳಂದು ಸೂರ್ಯಾಸ್ತಮವಾದ ನಂತರ ಯಾರಾದರೂ ನೆಲವನ್ನು ಸೆಗಣಿಯಿಂದ ಸಾರಿಸಿ ಅಗರಬತ್ತಿಯನ್ನು ಹಚ್ಚಿಟ್ಟು ಕ್ಷಣವಾದರೂ ಪ್ರಾರ್ಥಿಸಿದಲ್ಲಿ ಶ್ರೀಹರಿಯಿಂದ ಅನುಗ್ರಹಿಸಲ್ಪಡುತ್ತಾನೆ. 143
ಬಹುಶಃ ಶ್ರೋತೃಗಳು ತಮ್ಮ ಮನಸ್ಸಿನಲ್ಲಿ ಇದನ್ನು ಅತಿತಯೋಕ್ತಿಯೆಂದೇ ಊಹಿಸಬಹುದು ಮತ್ತು ಅದರ ಸತ್ಯಾಸತ್ಯತೆಯನ್ನು ಪ್ರಶ್ನಿಸಬಹುದು, ಆದರೆ ಇವುಗಳು ಸಾಯಿಯ ಮಾತುಗಳೇ ಮತ್ತು ನಾನು ಅವುಗಳನ್ನು ಸ್ವತಃ ಬಾಬಾರವರ ಮುಖದಿಂದಲೇ ಬಂದಿರುವುದನ್ನು ಕೇಳಿರುತ್ತೇನೆ. ॥144
ಇದು ನಾನು ಕಲ್ಪಿಸಿ ಹೇಳಿದುದಲ್ಲ, ಕಿಂಚಿತ್ತೂ ಶಂಕೆ ಬೇಡ, ಅವುಗಳನ್ನು ಪ್ರತ್ಯಕ್ಷವಾಗಿ ಕೇಳಿದವರು ಇನ್ನೂ ಬದುಕಿದ್ದಾರೆ ಮತ್ತು ಅವರು ಇದಕ್ಕೆ ಸಾಕ್ಷಿಯಾಗಿದ್ದಾರೆ. 145॥
ಅನ೦ತರ ದೀಕ್ಷಿತ ವಾಡೆಯನ್ನು ಕಟ್ಟಲಾಯಿತು. ಅದರಲ್ಲಿ ದೊಡ್ಡ ಕುಟುಂಬಗಳು ವಿಶ್ರಮಿಸಬಹುದು. ಅನ೦ತರ ಅಲ್ಪಕಾಲದಲ್ಲಿಯೇ ಅಲ್ಲಿಕಲ್ಲಿನ ಒಂದು ವಾಡೆಯನ್ನು ಕಟ್ಟಲಾಯಿತು. ॥146॥
ಮೊದಲಿನಿಂದಲೂ ದೀಕ್ಷಿತನು ಪುಣ್ಯವಂತನೆಂದು ಕೀರ್ತಿಪಡೆದಿದ್ದನು. ಭಕ್ತಿಭಾವದ ಸಾಕಾರಮೂರ್ತಿಯಾಗಿದ್ದನು ಅವನೊಮ್ಮೆ ಇಂಗ್ಲೆಂಡಿಗೆ ಯಾತ್ರೆ ಹೋಗಿದ್ದಾಗ ಅಲ್ಲಿ ತನ್ನದೇ ಆದ ಭಕ್ತಿಯ ಬೀಜವನ್ನು ಬಿತ್ತಿದನು. ॥147॥
ಈ ಹಂತದಲ್ಲಿ ಶ್ರೋತೃಗಳಿಗೆ ಶಂಕೆ ಏಳಬಹುದು. ಮಥುರ, ಕಾಶಿ, ದ್ವಾರಕ ಇವುಗಳಲ್ಲದೆ ಆಂಗ್ಲ ಭೂಮಿಯಲ್ಲಿಯೂ ಬೇರೆ ಬೇರೆ ಮತಗಳನ್ನು ಅವಲಂಬಿಸಿರುವ ಜನರು ಪರಮ ಸತ್ಯವನ್ನು ಅರಿಯುವ ಮಾರ್ಗ ತೋರಿಸುವ ಕಾರಣಕರ್ತನಾಗುವುದು ಹೇಗೆ? ॥148
ಶ್ರೋತೃಗಳ ಶಂಕೆಯು ಸಹಜ. ಅದನ್ನು ನಿವಾರಿಸಿದಾಗ ಅವರು ಆಶ್ಚರ್ಯಚಕಿತರಾಗುವರು. ನಾನೇನಾದರೂ ಸ್ಟಲ್ಪ ಮಿತಿಮೀರಿದರೆ ದಯಮಾಡಿ ಎಲ್ಲರೂ ನನ್ನನ್ನು ಕ್ಷಮಿಸವರೆಂದು ನಂಬುತ್ತೇನೆ. ॥149॥
ಕಾಶಿ, ಪ್ರಯಾಗ, ಬದರಿ, ಕೇದಾರ, ಮಥುರ, ಬೃಂದಾವನ, ದ್ವಾರಕ ಅತ್ಯಾದಿ ಯಾತ್ರಾ ಸ್ಥಳಗಳನ್ನು ದರ್ಶಿಸಿ ಈ ಮೊದಲೇ ಸಾಕಷ್ಟು ಪುಣ್ಯಗಳಿಸಿದ್ದನು. ॥150॥
ಅದಲ್ಲದೆ, ಅವನ ತಂದೆಯ ಪುಣ್ಯಕಾರ್ಯಗಳ ಫಲದಿಂದ ಅವನ ಅಪೂರ್ವವಾದ ಅದೃಷ್ಟದಿಂದ ಅವನ ಹಿಂದಿನಜನ್ಮದ ಪುಣ್ಯಕರ್ಮಗಳ ಫಲದಿಂದ, ಅವನಿಗೆ ಸಾಯಿ ದರ್ಶನ ಭಾಗ್ಯ ದೊರಕಿತು. ॥151
ಮೂಲವಾದ ಕಾರಣ ಸಾಯಿದರ್ಶನವಾಗಲು ಅವನು ಆಂಗ್ಲಭೂಮಿಯಲ್ಲಿದ್ದಾಗ, ಬಿದ್ದು ವಿಧಿವಶಾತ್‌ ಕು೦ಟನಾಗಿದ್ದುದು. ॥152॥
ಹೊರನೋಟಕ್ಕೆ ಅದು ಒಂದು ದುಷ್ಪಲವಾಗಿ ಕಂಡರೂ, ಅದರ ಪರಿಣಾಮವೊಂದು ಶುಭ ಶಕುನವಾಯಿತು. ಏಕೆಂದರೆ ಅದು ಫಲಪ್ರದವಾಗಿ ಸಾಯಿ ಸಂಗ ಸಿಗುವಂತಹ ಅಪರೂಪದ ಅವಕಾಶ ಕಲ್ಪಿಸಿತು. 153
ಅವನು ಚಂದೋರ್‌ಕರ್‌ನನ್ನು ಭೇಟಿಮಾಡಲಾಗಿ ಸಾಯಿಯ ಕೀರ್ತಿಯ ಬಗ್ಗೆ ಅರಿತನು. ಚಂದೋರಕರ್‌ನು ತಿಳಿಸುತ್ತಾನೆ - "ಸಾಯಿಯು ಅನುಗ್ರಹವನ್ನು ವರ್ಷಿಸಿದರೆ ಈ ಅ೦ಗನ್ಯೂನತೆಯು ಕೂಡಲೇ ಮಾಯವಾಗುತ್ತದೆ." ॥154
ಆದರೆ ದೀಕ್ಷಿತ್‌ ತನ್ನ ಅಂಗವಿಕಲತೆಯನ್ನು ಒಂದು ನ್ಯೂನತೆಯಾಗಿ ಪರಿಗಣಿಸಲಿಲ್ಲ. ಅವನು ಸಾಯಿಯಲ್ಲಿ ತನ್ನ ಮನಸ್ಸಿನ ಕೊರತೆಗಳನ್ನು ನಿವಾರಿಸಲು ಪ್ರಾರ್ಥಿಸಿದನು. ॥155
ಈ ಮಾನವ ದೇಹ ಕೇವಲ ಕ್ಷಣಿಕ. ಚರ್ಮ, ರಕ್ತ, ಮಾಂಸ, ಮೂಳೆಗಳಿಂದಾದ ಆಕಾರ ಮಾತ್ರ ಈ ಸಂಸಾರದಲ್ಲಿ ಕೆಲಸ ಮಾಡುವ ಸಾಧನವಷ್ಟೇ. ಅದರಿಂದ ಒಂದು ಕಾಲು ಕುಂಟಾದರೂ ಏನಾಗುತ್ತೆ? ॥156॥
ಸನ್‌ 1909ನೆಯ ಇಸವಿಯ ನವಂಬರ್‌ 2ನೆಯ ತಾರೀಖು ದೀಕ್ಷಿತನು ಮೊದಲಬಾರಿಗೆ ಸಾಯಿಯನ್ನು ಭೇಟಿಮಾಡಿದ್ದು, ಪುಣ್ಯ ಪಾವನ ದರ್ಶನ ಪಡೆದನು. ॥157॥
ಆನ೦ತರ, ಅದೇ ವರ್ಷದಲ್ಲಿ, ಡಿಸಂಬರ್‌ ತಿಂಗಳಲ್ಲಿ ಅವನು ಶಿರಡಿಗೆ ಮತ್ತೆ ದರ್ಶನಕ್ಕಾಗಿ ಹೋದನು ಮತ್ತು ಅಲ್ಲಿಯೇ ನೆಲಸಲು ಯೋಚಿಸಿದನು. ॥158॥
ಅವನು ಮೊದಲು ತನ್ನ 25 ಶೇರ್‌ಗಳನ್ನು ಮಾರಾಟಮಾಡಿ ಒಂದು ತೆಳುವಾದ ತಗಡಿನ ಗುಡಿಸಲನ್ನು ಕಟ್ಟಬೇಕೆಂದು ಯೋಚಿಸಿದನು. ಅದು ಯಾತ್ರಾರ್ಥಿಗಳಿಗೂ ಸಹಾಯಕವಾಗಿತ್ತು. 159
ಅನ೦ತರ ಅವನು ಒಂದು ವಾಡೆಯನ್ನು ಕಟ್ಟಲು ನಿಶ್ಚಯಿಸಿದನು. ಮತ್ತು ಬರುವ ಸಂವತ್ಸರದಲ್ಲಿ ತಳಪಾಯ ಹಾಕಲು ಒಂದು ಶುಭ ಮುಹೂರ್ತವನ್ನು ನಿರ್ಧರಿಸಲು ಯೋಚಿಸಿದನು. 160
ಡಿಸೆಂಬರ್‌ 9ನೆಯ ತಾರೀಖು, ಅವನು ಬಾಬಾರವರ ಅನುಮತಿ ಪಡೆದನು. ಆ ದಿನವೇ ಅಸ್ತಿಭಾರ ಹಾಕಲು ಮಂಗಳಕರ ದಿನವೆಂದು ನಿರ್ಧರಿಸಿದನು. ॥161॥
ದೀಕ್ಷಿತನ ಸೋದರನು, ಆಹ್ವಾನಿಸಿದರೂ ಬಾರದೇ ಇರುವವನು, ಆ ಮಂಗಳಕರ ಶುಭಮಹೂರ್ತದಂದೇ ಬಂದಿಳಿದನು. 162
ದಾದಾ ಸಾಹೇಬ್‌ ಖಾಪರ್ಡೆ'ಯು ಈಗಾಗಲೇ ಒಬ್ಬನೇ ಅಲ್ಲಿಗೆ ಬಂದನು. ಅವನು ಬಾಬಾರವರಿಂದ ತನ್ನ ಮನೆಗೆ ಹಿಂದಿರುಗುವ ಬಗ್ಗೆ ಅನುಮತಿ ಪಡೆಯಲು ಸ್ವಲ್ಪ ಎಡವಟ್ಟು ಅನುಭವಿಸಿದನು. ॥163
ಆದರೆ ಡಿಸೆಂಬರ್‌ 10ನೆಯ ತಾರೀಖು ಖಾಪರ್ಡೆಯು ಶಿರಡಿಯಿಂದ ಹೊರಡಲು ಮತ್ತು ದೀಕ್ಷಿತನು ಅಸ್ತಿಭಾರ ಹಾಕಲು - ಈ ಎರಡಕ್ಕೂ ಆ ದಿನ ಅನುಮತಿಯನ್ನು ನೀಡಲಾಯಿತು. ॥164॥
ಮತ್ತೊಂದು ಮುಖ್ಯವಾದ ಘಟನೆ ಆ ದಿವಸ ನಡೆಯಿತು. ಆ ದಿನ ಶೇಜಾರತಿಯು ಚಾವಡಿಯಲ್ಲಿ ಅತಿ ಪರಮಭಕ್ತಿ ಶ್ರದ್ಧೆಗಳಿಂದ ಪ್ರಾರಂಭವಾಯಿತು. ॥165॥
ಅನ೦ತರ, ಸನ್‌ 1911ನೆಯ ಇಸವಿಯಲ್ಲಿ ಅತಿ ಮಂಗಳಕರವಾದ ರಾಮನವಮಿಯಂದು ಗೃಹಪ್ರವೇಶ ಸಂಸ್ಕಾರವನ್ನು ವಿಧಿವಿಧಾನಪೂರ್ವಕವಾಗಿ ನೆರವೇರಿಸಲಾಯಿತು. ॥166॥
ಅನ೦ತರ, ಶ್ರೀಮಂತನಾದ ಬೂಟಿಯು ಭವ್ಯವಾದ ಕಟ್ಟಡವನ್ನು ಬಹಳ ಹಣವನ್ನು ಖರ್ಚುಮಾಡಿ ಕಟ್ಟಿಸಿದನು. ಆದರೆ ಈ ಹಣವು ಅತ್ಯಂತ ಉಪಯುಕ್ತವಾಯಿತೆಂದು ಸಾಬೀತಾಯಿತು. ಏಕೆಂದರೆ ಬಾಬಾರವರ ಸಮಾಧಿಯನ್ನು ಅಲ್ಲಿ ಮಾಡಲಾಗಿದೆ. ॥167॥
ಈಗ ಅಲ್ಲಿ ಮೂರು ವಾಡೆಗಳು ಇವೆ. ಮೊದಲು ಅಲ್ಲಿ ಏನೊಂದೂ ಇರಲಿಲ್ಲ, ಆದರೆ ಮೊದಲು ಸಾಠೆಯ ವಾಡೆಯು ಎಲ್ಲರಿಗೂ ಅತ್ಯಂತ ಉಪಯುಕ್ತವಾಗಿತ್ತು. ॥168
ಈ ವಾಡೆಗೆ ಮತ್ತೊಂದು ಮಹತ್ಪವಿದೆ. ಏನೆಂದರೆ ಆ ಜಾಗದಲ್ಲಿ ಬಾಬಾರವರು ಒಂದು ಹೂವಿನ ತೋಟವನ್ನು ಅವರ ಕೈಯಿಂದಲೇ ನಿರ್ಮಿಸಿದ್ದರು. 169
ಈ ತೋಟದ ಅಲ್ಪ ಕಥೆಯನ್ನು ಮುಂದಿನ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗುತ್ತದೆ.
ಹೇಮಾದನು ಎಲ್ಲಾ ಶ್ರೋತೃಗಳೊಡನೆ ಸಾಯಿ ಚರಣಗಳಲ್ಲಿ ಮಸ್ತಕವನ್ನು ಇಡುತ್ತಾನೆ. ॥170 ವಾಮನ ತಾತ್ಯಾ, ಸಾಯಿ ಸಮರ್ಥರಿಗೆ ಮಣ್ಣಿನ ಮಡಕೆಗಳನ್ನು ತಂದು ಕೊಡುತ್ತಿದ್ದನು. ॥171
ಅನ೦ತರ ಚಾಂದ್‌ ಪಾಟೀಲ್‌ ಅವನನ್ನು ಔರಂಗಾಬಾದ್‌ ಹತ್ತಿರ ಭೇಟಿಯಾದನು ಮತ್ತು ಸಾಯಿಯು ಅವನ ಜೊತೆಯಲ್ಲಿ ಶಿರಡಿಗೆ ಮದುವೆಯ ದಿಬ್ಬಣದ ಜೊತೆಯಲ್ಲಿ ಬಂದರು. ॥172
ಅನಂತರ ಅವನು ದೇವಿದಾಸನನ್ನು ಭೇಟಿಯಾದನು. ಜಾನಕಿದಾಸನ ಸಹಿತ ಗಂಗಾಗೀರ್‌ ಸಹ ಅವನ ಗಮನದಲ್ಲಿ ಬಂದನು. ಈ ರೀತಿ ಈ ಮೂವರೂ ಶಿರಡಿಯಲ್ಲಿ ಒಂದಾಗಿ ಭೇಟಿಯಾದರು. ॥173॥
ಅನಂತರ ಮೊಹಿದ್ದೀನನ ಜೊತೆ ಕುಸ್ತಿ ಪಂದ್ಯ ನಡೆಯಿತು. ಅದರ ನಂತರ ಅವರು ಮಸೀದಿಗೆ ಬಂದು ನೆಲೆಸಿದರು. ಆಲ್ಲಿ ಅವರು ಡೆಂಗಲೆಯವರ ಜೊತೆ ಬಾಂಧವ್ಯ ಬೆಳಸಿದರು ಮತ್ತು ಜನರು ಅವರ ಸುತ್ತ ಸೇರಲು ಪ್ರಾರಂಭಿಸಿದರು. ॥174॥ ಈ ಎಲ್ಲ ಕಥೆಗಳನ್ನು, ವಚನಗಳನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಸಲಾಗುತ್ತದೆ. ಈಗ ಹೇಮಾದನು ಸಾಯಿಗೆ ಶರಣಾಗಿ ಸಾಷ್ಟಾಂಗ ಪ್ರಣಾಮಗಳನ್ನು ಅನನ್ಯ ಭಾವದಿಂದ ಮಾಡುತ್ತಾನೆ. ॥175॥

ಎಲ್ಲರಿಗೂ ಶುಭವಾಗಲಿ.
ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಸಾಯಿ ಸಮರ್ಥರ ಅವತರಣ" ಎಂಬ ನಾಲ್ಕನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.

ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.

।ಸನ್ಮಂಗಳವಾಗಲಿ|

03 ಈ ಗ್ರಂಥ ರಚನೆಗೆ ನೀಡಿದ ಒಪ್ಪಿಗೆ/Sai Baba's sanction and promise

 ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

 

"ಈ ಗ್ರಂಥ ರಚನೆಗೆ ನೀಡಿದ ಒಪ್ಪಿಗೆ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


ಈಗ ನಾನು ಪೂರ್ವಕತೆಯನ್ನು ತೆಗೆದುಕೊಳ್ಳುತ್ತೇನೆ. ಸಾಯಿಯು ನನಗೆ ಸಂಪೂರ್ಣ ಆತ್ವಾಸನೆ ನೀಡಿ ಹೇಳುತ್ತಾರೆ – "ನನ್ನ ಚರಿತ್ರೆಯನ್ನು ವರ್ಣಿಸಲು ಸಂಪೂರ್ಣ ಅನುಮತಿಯನ್ನು ನೀಡುತ್ತೇನೆ. ॥1॥

"ನೀನು ನಿನ್ನ ಕಾರ್ಯವನ್ನು ಮಾಡು, ಮನಸ್ಸಿನಲ್ಲಿ ಸ್ಪಲ್ಪವೂ ಸಂಶಯವನ್ನು ಇಟ್ಟುಕೊಳ್ಳಬೇಡ. ನನ್ನ ಮಾತಿನಲ್ಲಿ ಪೂರ್ಣ ವಿಶ್ವಾಸವನ್ನಿಡು. ಮನಸ್ಸಿನಲ್ಲಿ ದೃಢತೆ ಇರಲಿ. ॥2॥

"ನೀನು ನನ್ನ ಲೀಲೆಗಳನ್ನು ಬರೆದಲ್ಲಿ, ಅದು ಆ ಅಜ್ಞಾನದಿಂದ ಮಾಡಿದ ಅಪರಾಧಗಳನ್ನು ನಾಶಮಾಡುತ್ತದೆ. ನೀನು ಇವುಗಳನ್ನು ಶ್ರದ್ಧೆಯಿಂದ ಆಲಿಸಿದಾಗ ನಿನ್ನ ಸಂಸಾರ ಬಂಧನಗಳೆಲ್ಲವೂ ಕಳಚಿ ಹೋಗುತ್ತವೆ. ॥3॥

"ಅವು ಮನಸ್ಸೆಂಬ ಸಾಗರದಲ್ಲಿ ಭಕ್ತಿಪ್ರೇಮಾಮೃತವೆಂಬ ಅಲೆಗಳನ್ನು ಉಂಟುಮಾಡುತ್ತವೆ. ಮತ್ತು ಅವುಗಳಲ್ಲಿ ಮುಳುಗಿದಾಗ 

ಆಗಾಗ್ಗೆ ಜ್ಞಾನ ರತ್ನಗಳನ್ನು ಮೇಲೆ ತರಬಹುದು." ॥4॥

ಈ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಎಲ್ಲಾ ಸಂದೆಹಗಳೂ ನಿವಾರಣೆಯಾದವು. ನಂತರ ಸಾಯಿಯ ಚರಣಗಳಿಗೆ ನಮಿಸಿದೆನು ಮತ್ತು ಅನ೦ತರ ನನ್ನ ನೆನಪಿನಲ್ಲಿದ್ದಂತೆ ನಾನು ಸಾಯಿ ಸಚ್ಚರಿತೆಯನ್ನು ಬರೆಯಲು ಪ್ರಾರಂಭಿಸಿದೆನು. ॥5॥

ಬಾಬಾರವರ ಮುಖದಿಂದ ಆಶೀರ್ವಾದದ ಮಾತು ಹೊರಹೊಮ್ಮುತ್ತಲೇ, ನಾನು ಅದನ್ನು ಒಂದು ಶುಭ ಶಕುನವೆಂದು ಅರಿತೆ. ಗ್ರಂಥವು ತಾನಾಗಿಯೇ ಪೂರ್ಣಗೊಳ್ಳುತ್ತದೆ. ನಾನು ಕೇವಲ ಭೌತಿಕವಾಗಿ ಬರೆಯುವ ಸಾಧನವಷ್ಟೇ. ॥6॥

ನೋಡಿ! ಹರಿಯ ಲೀಲೆಯು ಎಷ್ಟು ಅಗಮ್ಯ! ವರ್ಣನಾತೀತ! ಅವು ಅನುಭವಕ್ಕೆ ಮೀರಿದವು. ಕೇವಲ ಅವನಿಗೆ ಮಾತ್ರ ತಿಳಿದಿದೆ. ಶೃತಿ, ಶಾಸ್ತ್ರ ವೇದಗಳೂ ಮೌನವಾಗಿವೆ ಮತ್ತು ಯಾರೂ ಅದರ ಆಳವನ್ನು ಅರಿಯಲು ಸಾಧ್ಯವಿಲ್ಲ. ॥7॥

ವೇದ-ಶಾಸ್ತ್ರ ವಿಶಾರದರು, ಮೇಧಾವಿಗಳು, ವಿದ್ವಾಂಸರು, ಓದಿದವರು, ತರ್ಕವೇತ್ತರು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ॥8॥

ಭಗವಂತನು ತನ್ನ ನಿಜ ಭಕ್ತರ ಸ್ಪಸ್ವರೂಪವೇ. ಅವನು ಮುಗ್ಧ ನಿಷ್ಕಲ್ಮಶ ಭಕ್ತರಿಗಾಗಿ ಕಾತರಿಸುತ್ತಾನೆ. ಅವನನ್ನು ಪ್ರೀತಿಸುವವರಿಗೆ ಪೂರ್ಣವಾಗಿ ಆಭಾರಿಯಾಗಿರುತ್ತಾನೆ. ಆದರೆ ಆಷಾಢಭೂತಿಗಳನ್ನು ದೂರಮಾಡುತ್ತಾನೆ. ॥9॥

"ಅದರಲ್ಲಿ ಕೇವಲ ನಿನ್ನ ಕಲ್ಯಾಣ ಅಡಗಿದೆ. ಇದು ನನ್ನ ಅವತಾರದ ಸಾರ್ಥಕತೆಯೂ ಸಹ. ಇದು ನನ್ನ ನಿತ್ಯ ಬೋಧನೆ. ನನಗೆ ಯಾವಾಲೂ ಇದರ ಬಗ್ಗೆ ಕಾಳಜಿ ಇದೆ. ॥10॥

"ಓ ಶ್ಯಾಮ, ನಾನು ಹೇಳುತ್ತೇನೆ. ಇನ್ನು ಮುಂದೆ ನನ್ನ ನಾಮವನ್ನು ಯಾರು ಪ್ರೀತಿಯಿಂದ ಸ್ಮರಿಸುತ್ತಾರೋ ಅವರ ಆಸೆಗಳನ್ನು ಪೂರೈಸುತ್ತೇನೆ ಮತ್ತು ಅವರ ಭಕ್ತಿಭಾವವನ್ನು ಹೆಚ್ಚಿಸುತ್ತೇನೆ. ॥11॥

"ಯಾರು ನನ್ನ ಚರಿತ್ರೆಯನ್ನು ಅನುಭವದಿಂದ ಹಾಡುತ್ತಾರೋ ಅವರು ನನ್ನ ಶಕ್ತಿ, ಸದ್ಗುಣ ಮತ್ತು ಪಾಂಡಿತ್ಯಗಳನ್ನು ಪಡೆಯುತ್ತಾರೆ. ನಾನು ಅವರನ್ನು ಪೂರ್ಣವಾಗಿ ಆವರಿಸಿ ರಕ್ಷಿಸುತ್ತೇನೆ. ॥12॥

"ಯಾವ ಭಕ್ತರು ಹೃದಯಪೂರ್ವಕವಾಗಿ ಆತ್ಮಪೂರ್ವಕವಾಗಿ ನನ್ನಲ್ಲಿ ಒಂದಾಗುತ್ತಾರೋ ಅವರು ನನ್ನ ಜೀವನ ಚರಿತ್ರೆಯನ್ನು ಕೇಳುತ್ತ ಆನಂದವಾಗಿರುವರು. ॥13॥

"ನನ್ನ ಗುಣಗಾನ ಮಾಡುವವರಿಗೆ, ಸಂಪೂರ್ಣ ಆನಂದ, ಶಾಶ್ಚತ ಸುಖ ಮತ್ತು ಸಂತೃಪ್ತಿಯನ್ನು ದಯಪಾಲಿಸುತ್ತೇನೆ. ಇದು ಸತ್ಯವೆಂದು ನಂಬು. ॥14॥

"ಯಾರು ನನ್ನಲ್ಲಿ ಅನನ್ಯ ಶರಣಾಗತರಾಗಿರುವರೋ, ಶ್ರದ್ಧೆಯಿ೦ದ ನನ್ನ ಗುಣಗಾನಮಾಡುವರೋ, ನನ್ನ ಸ್ಮರಣೆ, ಚಿಂತನೆಗಳನ್ನು ಮಾಡುವರೋ, ಅವರನ್ನು ಉದ್ಧರಿಸುತ್ತೇನೆ. ಆದು ನನ್ನ ಆಶ್ಚಾಸನೆ. ॥15॥

"ನನ್ನ ನಾಮ ಸ್ಮರಣೆ ಮಾಡುವವನು, ಭಕ್ತಿಯಿಂದ ಪೂಜಿಸುವವನು, ಅಧ್ಯಯನ ಮಾಡುವವನು, ನನ್ನ ಚರಿತ್ರೆಯನ್ನು ಪಾರಾಯಣ ಮಾಡುವವನು, ನನ್ನನ್ನು ಧ್ಯಾನಿಸುವವನು, ಸದಾ ಸ್ಮರಿಸುವವನು ಹೇಗೆ ತಾನೆ ಲೌಕಿಕ ವಿಷಯ ವಸ್ತುಗಳನ್ನು ಬಯಸುತ್ತಾನೆ? ॥16॥

ನನ್ನ ನಿಜಭಕ್ತರನ್ನು ಸಾವಿನ ದವಡೆಗಳಿಂದ ಪಾರುಮಾಡುತ್ತೇನೆ. ನನ್ನ ಚರಿತ್ರೆಯನ್ನು ಕೇಳಿದಮಾತ್ರದಿಂದಲೇ ರೋಗಗಳು ವಾಸಿಯಾಗುತ್ತವೆ. ॥17॥

ಆದರಪೂರ್ವಕವಾಗಿ ನನ್ನ ಚರಿತ್ರೆಯನ್ನು ಕೇಳುವವನು, ಪೂರ್ಣವಾಗಿ ಧ್ಯಾನಿಸುವವನು, ಮನಸ್ಸಿನಲ್ಲಿ ನಿದಿಧ್ಯಾಸನ ಮಾಡುವವನು ನಿಶ್ಚಯವಾಗಿ ಶಾಂತಿಯನ್ನು ಪಡೆಯುತ್ತಾನೆ. ॥18॥

"'ನಾನು ಮತ್ತು ನೀನು' ಎಂಬುದು ಮಾಯವಾಗುತ್ತದೆ. ಶ್ರೋತೃಗಳ ಮನಸ್ಸು ಭಗವಂತನಲ್ಲಿ ಲೀನವಾಗುತ್ತದೆ. ಚಿತ್ತವು ಚೈತನ್ಯದ ಗಣಿಯಾಗುತ್ತದೆ ಮತ್ತು ಮನಸ್ಸು ಅನನ್ಯ ಪರಿಷೂರ್ಣತೆ ಮತ್ತು ಶ್ರದ್ಧೆಯಿಂದ ತುಂಬುತ್ತದೆ. ॥19॥

"'ಸಾಯಿ, ಸಾಯಿ' ಎಂಬ ನಾಮಸ್ಮರಣೆಯು ಸಕಲ ಕಲಿದೋಷವನ್ನು ನಾಶಮಾಡುತ್ತದೆ. ಒಮ್ಮೆ ನಮಸ್ಕರಿಸಿದರೆ ಸಾಕು ಹಿಂದಿನ ವಾಕ್‌ ಮತ್ತು ಶ್ರವಣದ ಪಾಪಗಳನ್ನು ನಾಶಮಾಡುತ್ತದೆ". ॥20॥

ಈ ಕಾರ್ಯವು ಸಾಮಾನ್ಯವಾದುದಲ್ಲವಾದರೂ ನಾನು ಶಿರಸಾವಹಿಸಿ ಆಜ್ಞೆಯನ್ನು ಪರಿಪಾಲಿಸಿರುವೆ. ವಾಕ್ಕೋವಿದರಾದ ಬಾಬಾರವರು ಇರುವಾಗ ನಾನು ದೀನನೆಂದೇಕೆ ಭಾವಿಸಬೇಕು. ॥21॥

ಕೆಲವು ಭಕ್ತರನ್ನು ಮಂದಿರಗಳನ್ನು ನಿರ್ಮಿಸಲು, ಕೆಲವರನ್ನು ಸಂಕೀರ್ತನೆಯಲ್ಲಿ ಮೈಮರೆಯುವಂತೆ ಮಾಡಿದರು. ಕೆಲವರನ್ನು ತೀರ್ಥಯಾತ್ರೆ ಮಾಡಲು ಕಳಿಸಿದರು ಮತ್ತು ನನ್ನನ್ನು ಕುಳಿತುಕೊಂಡು ಬರೆಯುವಂತೆ ಮಾಡಿದರು. ॥22॥

ಭಕ್ತರಲ್ಲೆಲ್ಲ ನಾನು ಪಾಮರ. ಕರುಣಾಸಾಗರ ಮತ್ತು ದಯಾಘನನಾದ ಸಾಯಿಯು ನನ್ನ ಯಾವ ಗುಣವನ್ನು ಕಂಡು ನನ್ನ ಮೇಲೆ ತಮ್ಮ ಕರುಣೆಯನ್ನು ಹರಿಸಿದರೋ ನನಗೆ ತಿಳಿಯದು. ॥23॥

ಗುರುವಿನ ಕೃಪೆ ಎಷ್ಟು ಅಭೂತಪೂರ್ವವಾಗಿದೆ. ಒಣಗಿರುವ ಗಿಡವು ಯಾವುದೇ ಪ್ರಯತ್ನವಿಲ್ಲದೆಯೇ ಚಿಗುರುತ್ತದೆ. ಎಂತಹ ಒಣಗಿದ ಮಣ್ಣೂ ಫಲಭರಿತವಾಗುತ್ತದೆ. ॥24॥

ಭವಿಷ್ಯದಲ್ಲಿ ಕೆಲವರು ಆಶ್ರಮಗಳನ್ನು, ಕೆಲವರು ಮಂದಿರಗಳನ್ನು, ಕೆಲವರು ಸ್ನಾನಘಟ್ಟಗಳನ್ನು ಕಟ್ಟಬಹುದು. ಆದರೆ ನಾನು ಮಾತ್ರ ಸಾಯಿಯ ಗುಣಗಾನ ಮಾಡುವ ನೇರವಾದ ಮಾರ್ಗವನ್ನು ಹಿಡಿಯುವೆ. ॥25॥

ಕೆಲವರು ಭಕ್ತಿಯಿಂದ ಸಾಯಿಯ ಉಪಾಸನೆ ಮಾಡಬಹುದು. ಕೆಲವರು ಪಾದವೊತ್ತಿ ಸೇವೆ ಮಾಡಬಹುದು. ಆದರೆ ನನ್ನ ಮನಸ್ಸು ಸಾಯಿಯ ಗುಣಗಾನ ಮಾಡಲು ಉತ್ಕಂಠಿತವಾಗಿದೆ. ॥26॥

ಕೃತಯುಗದಲ್ಲಿ ಧ್ಯಾನದಿಂದ ಪ್ರಾಪ್ತವಾಗುವ, ತ್ರೇತಾಯುಗದಲ್ಲಿ ಯಜ್ಞಕಾರ್ಯಗಳಿಂದ, ದ್ಧಾಪರಯುಗದಲ್ಲಿ ಅರ್ಚನೆಯಿಂದ ಲಭಿಸಿವುದನ್ನು ಈಗ ಕಲಿಯುಗದಲ್ಲಿ ನಾಮಸಂಕೀರ್ತನೆಯಿಂದ ಗುರುಭಜನೆಯಿಂದ ಪಡೆಯಬಹುದು. ॥27॥

ನಾನಾದರೊ ಅರ್ಹನಲ್ಲ, ಯಾವುದೇ ಕೆಲಸಕ್ಕೆ ಬಾರದವನು ಹಾಗೂ ಏನನ್ನೂ ತಿಳಿಯದವನು, ಹಾಗಿರಲು ಇಂತಹ ಕಷ್ಟ ಸಾಧ್ಯವಾದ ಕೆಲಸವನ್ನು ನಾನು ನಿರ್ವಹಿಸಲು ಹೇಗೆ ಸಾಧ್ಯ? ॥28॥

ನಾನು ಏನೂ ಪ್ರಯತ್ನಪಡದೆಯೇ ನಿಷ್ಕ್ರಿಯನಾಗಿ ಕುಳಿತಲ್ಲಿ ಅದು ಅವಿಧೇಯತೆಯ ಪಾಪಕರ್ಮವಾಗುತ್ತದೆ. ಮತ್ತು ಆಜ್ಞಾಪಾಲನೆ ಮಾಡಿದಲ್ಲಿ ಈ ಕಾರ್ಯವನ್ನು ನಿರ್ವಹಿಸಲು ಸಾಧ್ಯವೇ? ॥29॥

ಸಾಯಿ ಸಮರ್ಥರ ಸಹಜ ಸ್ಥಿತಿಯನ್ನು ವರ್ಣಿಸಲು ಯಾರಿಗೆ ಸಾಧ್ಯ? ಕೇವಲ ಸಾಯಿಮಾತ್ರ ಕೃಪೆತೋರಿ ಭಕ್ತನ ಮೂಲಕ ಮಾಡಿಸಲು ಸಾಧ್ಯ. ॥30॥

ಮಾತು ಸಮರ್ಥವಾಗಿ ತನ್ನ ಕೆಲಸ ಮಾಡಲಾರದು ಎಂದಾಗ ನಾನೇಕೆ ಹಂಬಲ ಬೆಳೆಸಿಕೊಂಡೆ? ಈ ವಿಚಾರವಾಗಿ ಮಾತನಾಡಲು ಸಾಯಿಯು ಯಾವುದೇ ಅವಕಾಶವನ್ನಾಗಲೀ ಸಂದರ್ಭವನ್ನಾಗಲೀ ಕೊಡಲಿಲ್ಲ. ॥31॥

ನಾನು ಲೇಖನಿಯನ್ನು ಹಿಡಿದಾಗ ಬಾಬಾರವರು ನಾನು ನನ್ನ ಭಾವವನ್ನೇ ಕಳೆದುಕೊಳ್ಳುವಂತೆ ಮಾಡಿದರು. ತಮ್ಮ ಕತೆಯನ್ನು ತಾವೇ ಬರೆಯಲು ಪ್ರಾರಂಭಿಸಿದರು. ಆದ್ದರಿಂದ ಎಲ್ಲಾ ಹೆಗ್ಗಳಿಕೆಯೂ ಅವರದೇ. ॥32॥

ಒಬ್ಬ ಸಂತನ ಚರಿತ್ರೆಯನ್ನು ಸಂತನೇ ಬರೆಯಬಲ್ಲನು. ಸಾಯಿಯ ತರ್ಕರಹಿತ ಗುಣಗಳನ್ನು ಅರ್ಥಮಾಡಿಕೊಳ್ಳುವುದು ಆಕಾಶವನ್ನು ಆಲಿಂಗನ ಮಾಡಿದಂತೆ. ॥33॥

ಸಾಯಿಯ ಅತಿ ಗಹನವಾದ ಮಹಿಮೆಗಳನ್ನು ವಿವರಿಸಲು ನಾನು ಬುದ್ಧಿಹೀನ. ತಾವೇ ಸ್ವತಃ ಇದನ್ನು ಮಾಡಬಹುದಿತ್ತು ಮತ್ತು ಕೊಟ್ಟ ವಚನದಿಂದ ಮುಕ್ತರಾಗಬಹುದಿತ್ತು. ॥34॥

ಆದರೆ, ಬಾಬಾ! ನಾನು ಬ್ರಾಹ್ಮಣನಾಗಿ ಜನಿಸಿದ್ದರೂ, ನನಗೆ ಶೃತಿ ಮತ್ತು ಸ್ಮೃತಿಗಳ ಜ್ಞಾನವಿಲ್ಲದಿದ್ದರೂ, ಅದು ನನ್ನ ಹುಟ್ಟಿಗೆ ಬಂದ ಕಷ್ಪು ಚುಕ್ಕೆಯಾಗಿದ್ದರೂ ನಾನು ನಿಮ್ಮ ಸಹವಾಸದಲ್ಲಿ ಇರುವುದೇ ಒಂದು ಭೂಷಣವಾಗಿದೆ. ॥35॥

ಶೃತಿ ಮತ್ತು ಸ್ಮೃತಿಗಳು ಬ್ರಾಹ್ಮಣನ ಎರಡು ಕಣ್ಣುಗಳು. ಒಂದರ ಜ್ಞಾನವಿಲ್ಲದಿದ್ದರೂ ಅವನು ಮಾಲೆಗಣ್ಣಿನವನು, ಎರಡೂ ಇಲ್ಲದವನು ಪೂರ್ಣ ಕುರುಡ. ನಾನಾದರೂ ಅತೀ ಕೆಳಮಟ್ಟದವನೂ, ನಮ್ರನೂ, ದೀನನೂ ಆಗಿರುವೆ. ಏಕೆಂದರೆ ನನಗೆ ಎರಡರಲ್ಲೂ ಕೊರತೆಯಿದೆ. ॥36॥

ಅಂಧರಿಗೆ ಊರುಗೋಲು ಹೇಗೋ ಹಾಗೆ ನೀನು ನನಗೆ ಆಸರೆ. ಹಾಗಿರುವಾಗ ನಾನೇಕೆ ಚಿಂತಿಸಲಿ? ನಿನ್ನ ಆಧಾರದಿಂದ ನಾನು ಈ ಕಷ್ಟವಾದ ಮಾರ್ಗದಲ್ಲಿ ನಿನ್ನನ್ನು ಹಿಂಬಾಲಿಸುತ್ತೇನೆ. ॥37॥

ಹೇಗೆ ಮುಂದುವರೆಯಬೇಕೆಂದು ನನಗೆ ತಿಳಿಯದು, ದೀನನಾದ ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನೀವೇ ನನಗೆ ಬುದ್ಧಿಶಕ್ತಿಯನ್ನು ನೀಡಿ ನಿಮ್ಮ ಕೆಲಸವನ್ನು ನೀವೇ ಮಾಡಿಸಿಕೊಳ್ಳಿರಿ. ॥38॥

ಮೂಕನನ್ನು 'ಬೃಹಸ್ಪತಿ'ಯಂತೆ ವಾಚಾಳನನ್ನಾಗಿ ಮಾಡುವ, ಹೆಳವನಿಗೆ ಮೇರುಪರ್ವತವನ್ನು ದಾಟುವ ಶಕ್ತಿನೀಡುವ, ಮತಿಗೆ ಮೀರಿದ ದೈವೀ ಶಕ್ತಿಯ ನಿಗೂಢತೆಯನ್ನು ಬಾಬಾ ಮಾತ್ರ ಅರಿಯಬಲ್ಲರು. ॥39॥

ನಾನು ಕೇವಲ ನಿಮ್ಮ ನಮ್ರನಾದ ದಾಸ. ನನ್ನನ್ನು ಪರಾವಲಂಬಿಯಾಗಿ ಮಾಡಬೇಡಿ. ನನ್ನ ಈ ದೇಹದಲ್ಲಿ ಉಸಿರು ಇರುವವರೆಗೆ ನನ್ನಿಂದ ನಿಮ್ಮ ಕೆಲಸವನ್ನು ನನ್ನ ಕೈಯಲ್ಲಿ ಮಾಡಿಸಿರಿ. ॥40॥

ಈಗ, ಓ ಶೋತ್ಕಗಳೇ! ನಿಮಗೆ ಈ ಗ್ರಂಥದ ಉದ್ದೇಶ ತಿಳಿದಿದೆ. ಸಾಯಿಯು ತಾವೇ ಸ್ವತಃ ಭಕ್ತರ ಕಲ್ಯಾಣಕ್ಕಾಗಿ ಬರೆಯುತ್ತಿದ್ದಾರೆ. ನಾನು ಕೇವಲ ಅವರ ಉಪಕರಣ. ॥41॥

ಮುರಳಿಗಾಗಲೀ, ಹಾರ್ಮೋನಿಯಂ ಪೆಟ್ಟಿಗೆಗಾಗಲಿ ಅವುಗಳಿಂದ ಹೊರಡುವ ಸ್ವರಗಳ ಬಗ್ಗೆ ಯೋಚನೆ ಇಲ್ಲ. ಕೇವಲ ವಾಚಕರಿಗೆ ಮಾತ್ರ ಅದರ ಬಗ್ಗೆ ಕಾಳಜಿ ಇದೆ. ಅದೇ ರೀತಿ ನಾವು ಏಕೆ ತೊಂದರೆಪಟ್ಟುಕೊಳ್ಳಬೇಕು? ॥42॥

'ಚಂದ್ರಕಾ೦ತ' ಸುರಿಸುವ ಅಮೃತ ಅದರದ್ದೇ! ಚಂದ್ರೋದಯವಾಗುವಾಗ ಚಂದ್ರ ನಿರ್ಮಿತವಾದದ್ದು. ಚಂದ್ರನಿಂದ ಸೃಷ್ಟಿಸಲ್ಪಟ್ಟ ಪವಾಡವೇ ಆಗಿದೆ. ॥43॥ ಸಮುದ್ರದ ಪೂರ್ಣ ಉಬ್ಬರ ಅದರ ಕಾರ್ಯವಲ್ಲ. ಅದೂ ಸಹ ಚಂದ್ರನ ಕೈಯಲ್ಲಿದೆ. ಸಾಗರಕ್ಕೆ ಅದನ್ನುಂಟುಮಾಡುವ ಶಕ್ತಿ ಇಲ್ಲ. ॥44॥

ಹಾಗೆಯೇ ಆಗಲಿ. ಸಾಗರದಲ್ಲಿ ಕೆಂಪುದೀಪವನ್ನು, ಹಡಗಿನ ಮಾರ್ಗದರ್ಶನಕ್ಕಾಗಿ ಹಾಗೂ ಅವು ಬಂಡೆಗಳಿಗೆ ಬಡಿಯದಿರಲಿ ಮತ್ತು ಸುಳಿಗಳಲ್ಲಿ ಸಿಕ್ಕಿಕೊಳ್ಳದಿರಲಿ ಎಂದು ಎಚ್ಚರಿಕೆ ನೀಡಿ ರಕ್ಷಿಸಲು ಇಟ್ಟಿರುತ್ತಾರೆ. ॥45॥

ಹಾಗೆಯೇ ಸಾಯಿನಾಥನ ಕತೆಗಳು ಅಮೃತದ ಮಧುರತ್ಚವನ್ನೂ ಮೀರಿಸುತ್ತವೆ. ದುಸ್ತರವಾದ ಭವಸಾಗರದ ಕಠಿಣ ಮಾರ್ಗಗಳನ್ನು ಸುಲಭವಾಗಿ ದಾಟಿಸಿ ನಮ್ಮನ್ನು ಸುಕ್ಷೇಮವಾಗಿ ದಡಸೇರಿಸುತ್ತವೆ. ॥46॥

ಆ ಸ೦ತಕಥೆಗಳು ಧನ್ಯ, ಧನ್ಯ. ಅವು ನಮ್ಮ ಕಿವಿಗಳಿಂದ ಒಳಗೆ ಪ್ರವೇಶಿಸಿ ಅ೦ತರಂಗವನ್ನು ಸ್ಪರ್ಶಿಸಿ ದೇಹದ 'ಅಹಂ'ಭಾವವನ್ನು ಹೊಡೆದೋಡಿಸಿ ಶುದ್ಧಮಾಡಿ ದ್ವಂದ್ವ ಭಾವವನ್ನು ನಾಶಮಾಡುತ್ತವೆ. ॥47॥

ನಮ್ಮ ಹೃದಯದಲ್ಲಿ ಹೆಚ್ಚು ಹೆಚ್ಚು ಕತೆಗಳು ಸೇರಿದಾಗ, ಸಂದೇಹಗಳು ಅತ್ತಿತ್ತ ಓಡುತ್ತವೆ ಮತ್ತು ಜ್ಞಾನವೃದ್ಧಿಯಾಗುತ್ತದೆ. ನಮ್ಮ ದೇಹದೊಡನೆ ನಮ್ಮನ್ನು ಗುರುತಿಸಿಕೊಳ್ಳುವುದು ಕ್ಲೀಣವಾಗುತ್ತದೆ. ॥48॥

ಬಾಬಾರವರ ಶುದ್ಧ ಯಶೋಗಾಥೆಯನ್ನು ವಿವರಿಸುವುದು ಮತ್ತು ಅವುಗಳನ್ನು ಹೃದಯಪೂರ್ವಕವಾಗಿ ಕೇಳುವುದು ಭಕ್ತರ ಪಾಪಗಳನ್ನೆಲ್ಲ ಸುಟ್ಟು ಹಾಕುತ್ತವೆ. ಇದು ಮೋಕ್ಟಕ್ಕೆ ಸುಲಭ ಸಾಧನೆ. ॥49॥

ಬ್ರಹ್ಮನ ಸೃಷ್ಟಿಯೂ ಮಾಯಾತೀತವಾಗಿದೆ. ಮಾಯೆಯನ್ನು ಗೆಲ್ಲುವ ಉಪಾಯಗಳೇನು? ನೈತಿಕ - ಸಾತ್ವಿಕ ಜೀವನವನ್ನು ನಡೆಸುವ ಭಕ್ತರನ್ನು ದೇವರು ಅನುಗ್ರಹಿಸುತ್ತಾನೆ. ಹಾಗಲ್ಲದೆ ಭಕ್ತರು ಮಾಯೆಯನ್ನು ಹೇಗೆ ತಾನೆ ಗೆಲ್ಲಲು ಸಾಧ್ಯ? ॥50॥

ಪರಿಷೂರ್ಣವಾದ ಆನಂದ ಎಂದರೇನು? ಭಕ್ತಿ, ಮುಕ್ತಿ, ವಿರಕ್ತಿಗಳು ಎಂದರೇನು? ನಾಲ್ಕು ವರ್ಣಗಳಿಗೆ ಮತ್ತು ನಾಲ್ಕು ಆಶ್ರಮಗಳಿಗೆ ಸೇರಿದ ತತ್ತ್ವಗಳೆಲ್ಲವೂ ಒಂದೇ, ಅಮೂರ್ತವಿಚಾರಗಳು. ॥51॥

ಈ ವಿಷಯಗಳ ಬಗ್ಗೆ ತಿಳಿಯಲು ಇಚ್ಛಿಸುವವರು ಜ್ಞಾನೇಶ್ವರ, ಏಕನಾಥ ಮತ್ತಿತರರು ರಚಿಸಿದ ಗ್ರಂಥಗಳನ್ನು ಅಧ್ಯಯನ ಮಾಡಿ ಅವು ನೀಡುವ ಸಂತೋಷವನ್ನು ಅನುಭವಿಸಲಿ. ॥52॥

ಕೃತಯುಗದಲ್ಲಿ 'ಶಮ' - ಇ೦ದ್ರಿಯನಿಗ್ರಹ ಮತ್ತು 'ದಮ' - ವಾಸನೆಗಳನ್ನು ತ್ಯಜಿಸುವುದು, ತ್ರೇತಾಯುಗದಲ್ಲಿ ಯಜ್ಞಯಾಗಾದಿಗಳು, ದ್ವಾಪರಯುಗದಲ್ಲಿ ಉಪಾಸನೆ ಮತ್ತು ಕಲಿಯುಗದಲ್ಲಿ ನಾಮಜಪ ಮತ್ತು ಸಂಕೀರ್ತನೆಯು ಮೋಕ್ಷಪಡೆಯಲು ಸರಳ ಸಾಧನೆಯಾಗಿವೆ. ॥53॥

ಬ್ರಾಹ್ಮಣ ಇತ್ಯಾದಿ ನಾಲ್ಕು ವರ್ಣದವರೆಲ್ಲರಿಗೂ ಗುರುಕಥಾಶ್ರವಣವು ಸರಳ ಸಾಧನೆ. ಸ್ತೀ, ಶೂದ್ರ ಅಥವಾ ಜಾತಿಹೀನರಿಗೂ ಇದೇ ಒಂದು ಸರಳ ಸಾಧನೆ. ॥54॥

ಹಿಂದಿನ ಜನ್ಮದ ಪುಣ್ಯಕಾರ್ಯಗಳ ಫಲಹೊಂದಿರುವವರು ಮತ್ರ ಈ ಕಥೆಗಳನ್ನು ಶ್ರವಣ ಮಾಡುವರು. ಯಾರಾದರೂ ನಿದ್ರೆಹೋದರೆ ದೇವರೇ ಅವರನ್ನು ಎಚ್ಚರಗೊಳಿಸುವನು. ॥55॥

ಯಾರು ವಿಷಯ ಭೋಗಗಳಲ್ಲೇ ಸದಾ ಮುಳುಗಿರುತ್ತಾರೋ ಮತ್ತು ಅವು ದೊರಕದಿದ್ದಲ್ಲಿ ದೀನಚಿತ್ತರಾಗಿರುವರೋ ಅವರನ್ನು ಈ ಸಂತ ಕಥಾಮೃತವು ವಿಷಯವಾಸನೆಗಳಿಂದ ವಿಮುಕ್ತಗೊಳಿಸುವುದು. ॥56॥

ಯೋಗ, ಯಾಗಗಳಿಗೆ, ಧ್ಯಾನಕ್ಕೆ, ಏಕಾಗ್ರತೆಗೆ ಸತತಾಭ್ಯಾಸ ಪ್ರಯತ್ನ ಬೇಕಾಗುತ್ತದೆ. ಆದರೆ ಕಥಾತ್ರವಣಕ್ಕೆ ಗಮನವಿಟ್ಟು ಕೇಳುವುದು ಹೊರತು ಪ್ರಯಾಸಪಡಬೇಕಾಗಿಲ್ಲ. ॥57॥

ಈ ರೀತಿ ಸಾಯಿ ಕತೆಯು ನಿರ್ಮಲವಾಗಿದೆ. ಇದನ್ನು ಪರಿಶುದ್ಧ ಮನಸ್ಸಿನ ಸಜ್ಜನರು ಪ್ರೇಮದಿಂದ ಆಲಿಸಿದರೆ ಪ್ರಯೋಜನವುಂಟು. ಪ್ರಬಲವಾದ ಪಂಚಮಹಾಪಾಪಗಳೂ ಭಸ್ಮವಾಗುತ್ತವೆ. ॥58॥

ನಾವು ಭವಪಾಶದಿಂದ ಬಂಧಿತರಾಗಿದ್ದೇವೆ. ಇದರಿಂದ ನಮ್ಮ ಸ್ವಸ್ವರೂಪವು ಮರೆಯಾಗಿದೆ. ಈ ಕತೆಗಳನ್ನು ಕೇಳಿದ ನಂತರ ಬಂಧಗಳು ಸಡಿಲಗೊಂಡು ನಾವು ಆತ್ಮಸ್ಪರೂಪವನ್ನು ಅರಿಯುತ್ತೇವೆ. ॥59॥

ಈ ಕತೆಗಳನ್ನು ಜೀವನ ಪೂರ್ತಿ ನೆನೆಸಿಕೊಳ್ಳುತ್ತಿರಬೇಕು ಮತ್ತು ನಿತ್ಯವೂ ಅವುಗಳನ್ನು ಪಠನ ಮಾಡುತ್ತಿರಬೇಕು ಅವು ಶ್ರೋತೃಗಳನ್ನು ಭವಬಂಧನದಿಂದ ಬಿಡಿಸಿ ಅವರಿಗೆ ಶಾಂತಿ, ಸಮಾಧಾನಗಳನ್ನು ತಂದುಕೊಡುತ್ತವೆ. ॥60॥

ಭಕ್ತಿ ಮತ್ತು ಶ್ರದ್ಧೆಯಿಂದ ಓದುವಾಗ, ಶ್ರವಣ ಮಾಡುವಾಗ, ನಾನು ಸಾಯಿಯನ್ನು ಧ್ಯಾನಿಸುವಂತಾಗಲಿ. ಅವರು ತಮ್ಮ ಸಗುಣ ರೂಪದಲ್ಲಿ ನನ್ನ ಮುಂದೆ ದರ್ಶನ ನೀಡಲಿ ಮತ್ತು ಅದು ನನ್ನ ಮನಸ್ಸಿನ ಮೇಲೆ ತಾಶ್ವತ ಮುದ್ರೆ ಒತ್ತಲಿ. ॥61॥

ಈರೀತಿ ಸದ್ಗುರು ಭಕ್ತಿಯು ಹೆಚ್ಚಲಿ. ಪ್ರಪಂಚದಿಂದ ವಿರಕ್ತಿ ಉಂಟಾಗಲಿ, ಗುರುಸ್ಮರಣೆಯನ್ನು ಪ್ರೇಮದಿಂದ ಮಾಡಲು ಉತ್ಸಾಹ ತುಂಬಲಿ ಮತ್ತು ನನ್ನ ಮನಸ್ಸನ್ನು ಪರಿಶುದ್ಧಗೊಳಿಸಲಿ. ॥62॥

ಈ ಉದ್ದೇಶವನ್ನು ಮನದಲ್ಲಿಟ್ಟುಕೊಂಡು ಸಾಯಿನಾಥರು ನನ್ನನ್ನು ಅನುಗ್ರಹಿಸಲಿ. ನನ್ನನ್ನು ನಿಮಿತ್ತಮಾತ್ರವನ್ನಾಗಿ ಮಾಡಿ ತಾವೇ ಸ್ವಯಂ ಗ್ರಂಥ ರಚನೆ ಮಾಡಲಿ. ॥63॥

ಹಸುವಿನ ಕೆಚ್ಚಲಿನಲ್ಲಿ ಹಾಲು ಉಕ್ಕಿ ಹರಿಯುತ್ತಿದ್ದರೂ ಅದು ತನ್ನ ಕರುವಿಗೆ ಮಾತ್ರ ಹಾಲು ಕುಡಿಸುತ್ತದೆ. ಅದೇ ರೀತಿ ಸಾಯಿನಾಥರ ಪ್ರೇಮವೂ ಸಹ. ॥64॥ ಚಾತಕಪಕ್ಷಿಯಂತೆ ಕಾತರದಿಂದ ನನಗಾಗಿ ಸಾಯಿಮಾತೆಯು ಘನವಾದ ಆನಂದದ ಮಳೆ ಸುರಿಸಿದಳು, ನನ್ನ ಅಲ್ಪ ಬಾಯಾರಿಕೆಯನ್ನು ಹಿಂಗಿಸಿದಳು ಮತ್ತು ತನ್ನ ಭಕ್ತರ ಬಾಯಾರಿಕೆಯನ್ನು ಪೂರ್ಣವಾಗಿ ಇಂಗಿಸುತ್ತಾಳೆ. ॥65॥

ಪ್ರೀತಿ ಮತ್ತು ಭಕ್ತಿಗಳು ಎಷ್ಟು ಕೌತುಕ. ತಾಯಿಯು ತನ್ನ ಮಗುವಿನ ಬಗ್ಗೆ ಉಕ್ಕಿ ಬರುವ ಪ್ರೀತಿಯಿಂದ ಮಗು ಕೇಳದಿರುವಾಗಲೂ ತನ್ನ ಹಾಲನ್ನು ಆ ಮಗುವಿನ ಬಾಯಿಗೆ ಒತ್ತಾಯಪೂರ್ವಕವಾಗಿ ಕುಡಿಸುತ್ತಾಳೆ. ॥66॥

ಅವಳ ಆಯಾಸ ಯಾರಿಗೆ ಗೊತ್ತು? ಮಗು ಏನನ್ನೂ ಅರಿಯದು. ತಾಯಿಯಲ್ಲದೆ ಮತ್ಯಾರು ಆ ಮಗುವಿಗೆ ಕೇಳದೇನೇ ತನ್ನ ಮೊಲೆಯೂಡಿಸುತ್ತಾಳೆ? ॥167॥ ಆ ಮಗುವನ್ನು ಆಭರಣಗಳಿಂದ ಅಲಂಕರಿಸಿದಾಗ ಮಗುವಿಗೆ ಅದರ ಯಾವ ಪ್ರಾಮುಖ್ಯತೆಯೂ ತಿಳಿದಿರುವುದಿಲ್ಲ. ತಾಯಿ ಈ ಆನಂದವನ್ನು ಅನುಭವಿಸುತ್ತಾಳೆ. ಸದ್ಗುರುವಿನ ರೀತಿಯೂ ಹಾಗೇನೆ. ॥68॥

ನನ್ನಲ್ಲಿರುವ ಈ ಮಗುವಿನ ಮುಗ್ಧತೆಯನ್ನು ಯಾರು ಪ್ರೀತಿಯಿಂದ ತೃಪ್ತಿಪಡಿಸುತ್ತಾರೆ? ತಾಯಿಯಲ್ಲದೆ ಮತ್ಯಾರಿಗೆ ಈ ರೀತಿಯ ನಿಜವಾದ ಕಾಳಜಿ ಇರುತ್ತದೆ. ಈ ರೀತಿಯ ವಾತ್ಸಲ್ಯ ಬಹು ಅಪರೂಪವಾದದ್ದು. ॥69॥

ಸದ್ಗುಣಿಮಾತೆಯನ್ನು ಪಡೆಯುವುದೂ, ಭಗವಂತನ ಅನುಗ್ರಹ ಪಡೆಯುವುದೂ ಮಹಾ ಪುಣ್ಯದ ಫಲ. ಆದರೂ ಮಗು ತಾಯಿಯ ಪ್ರಸವವೇದನೆಯನ್ನು ಅರಿತಿರುವುದಿಲ್ಲ. ॥70॥

ಅದೇನೇ ಇರಲಿ, ಈ ಬಗ್ಗೆ ಬಾಬಾರವರು ಮತ್ತಷ್ಟು ಹೆಚ್ಚಿಗೆ ಹೇಳಿರುವುದನ್ನು ನಾನು ನಿಮಗೆ ಹೇಳುತ್ತೇನೆ. ಓ ಸಜ್ಜನ ಶ್ರೋತೃಗಳೇ, ದಯಮಾಡಿ ಅದನ್ನು ಗಮನವಿಟ್ಟು ಆದರ ಪೂರ್ವಕವಾಗಿ ಕೇಳಿರಿ. ॥71॥

ಕ್ರಿ. ಶ. 1916 ರಲ್ಲಿ ನನ್ನ ಸರ್ಕಾರಿ ಸೇವೆ ಮುಗಿಯಿತು ಮತ್ತು ಒಂದು ನಿಶ್ಚಿತವಾದ ಪಿಂಚಣಿಯನ್ನು ನಿಗದಿಪಡಿಸಲಾಯಿತು. ನನಗೆ ಶಿರಡಿ ಯಾತ್ರೆ ಮಾಡುವ ಸಮಯ ಕೂಡಿ ಬಂದಿತು. ॥72॥

ಅದು ಗುರು ಪೂರ್ಣಿಮೆಯ ದಿನ. ಗುರುಪೂಜೆಯನ್ನು ಮಾಡಲು ಭಕ್ತರು ನೆರೆದಿದ್ದರು. ಚಿಂಚೋಣಿಕರ ಅಣ್ಣನು, ತಾನಾಗಿಯೇ ಬಾಬಾರವರಲ್ಲಿ ವಿನಂತಿ ಮಾಡಿದನು. ಅವನ ಕೋರಿಕೆ ಏನೆಂದು ನೋಡೋಣ. ॥73॥

ನನ್ನ ಬಗ್ಗೆ ಅಣ್ಣನಿಗೆ ಬಹಳ ಕಾಳಜಿ ಇತ್ತು. ಅವನು ಬಾಬಾರವರಲ್ಲಿ ನಿವೇದಿಸಿಕೊಂಡನು. "ಸಂಸಾರವು ಬೆಳೆಯುತ್ತಿರುವುದರಿಂದ ಅವನ ಮೇಲೆ ಕರುಣೆ ತೋರಿಸಿರಿ ॥74॥

"ಅವನಿಗೆ ಮತ್ತೇನಾದರೂ ಕೆಲಸ ಕೊಡಿ. ಈ ಪಿಂಚಣಿ ಸಾಕಾಗುವುದಿಲ್ಲ. ಅಣ್ಣಾ ಸಾಹೇಬನ ಚಿಂತೆಯನ್ನು ದೂರಮಾಡಿ. ಈ ರೀತಿ ಏನನ್ನಾದರೂ ಮಾಡಿ." ॥75॥

ಅದಕ್ಕೆ ಉತ್ತರವಾಗಿ ಬಾಬಾ ಹೇಳಿದರು - "ಅವನಿಗೆ ಮತ್ತೊಂದು ನೌಕರಿಯು ಸಿಗುತ್ತದೆ. ಈಗ ಅವನು ನನ್ನ ಸೇವೆ ಮಾಡಲಿ. ಅವನಿಗೆ ಸಂಸಾರ ಸುಖವೂ ದೊರೆಯುತ್ತದೆ.॥76॥

"ಅವನ ಸಂಸಾರ ಯಾವಾಗಲೂ ಉದ್ಧಾರವಾಗುತ್ತದೆ ಮತ್ತು ಯಾವಜ್ಜೀವಪರ್ಯಂತ ಅವನಿಗೆ ಬೇರೆ ಏನೂ ಬೇಕಾಗುವುದಿಲ್ಲ. ಅವನು ಪೂರ್ಣ ಶ್ರದ್ಧೆಯಿಂದ ನನ್ನನ್ನು ಅವಲಂಬಿಸಿದ್ದೇ ಆದಲ್ಲಿ ಅವನ ಆಪತ್ತುಗಳನ್ನೆಲ್ಲಾ ಪರಿಹರಿಸುತ್ತೇನೆ. ॥77॥

"ತಮ್ಮ ಇಚ್ಛಾನುಸಾರ ವರ್ತಿಸುತ್ತೇವೆ ಎಂದು ಹೇಳುವ ಜನರು ಇರುತ್ತಾರೆ, ಅವರು ದಾರಿ ತಪ್ಪಿದವರಾಗಿರುತ್ತಾರೆ. ಧಮ್ಮಾಚರಣೆಯಿಂದ ವಿಮುಖರಾದವರು ಮೊದಲು ಅಂತಹ ಜನರಿಂದ ದೂರವಾಗಿರುತ್ತಾರೆ. ॥78॥

"ಅ೦ತಹ ಜನರು ಸಿಕ್ಕಲಿ ಅವರಿಂದ ದೂರವಾಗಿರಿ. ಅವರನ್ನು ಅತಿಭಯಂಕರವೆಂದು ತಿಳಿಯಿರಿ. ಅವರ ನೆರಳಿಗೂ ಸಹ ಭಯಪಡಬೇಕು ಮತ್ತು ಅವರನ್ನು ಅತ್ಯಂತ ಕಷ್ಟದಿ೦ದಾದರೂ ದೂರವಿಡಬೇಕು. ॥79॥

"ಆಚಾರಹೀನನೂ, ಶೀಲಭ್ರಷ್ಟನೂ, ವಿಚಾರಹೀನನೂ, ಕರ್ಮಭ್ರಷ್ಟನೂ, ಇಷ್ಟಾನಿಷ್ಟಗಳನ್ನು ಪರಾಮರ್ಶಿಸದೆ ಇರುವವನೂ ಜೀವನದಲ್ಲಿ ಏನಾದರೂ ಒಳ್ಳೆಯದನ್ನೂ, ಅಭೀಷ್ಟವನ್ನೂ ಹೇಗೆ ಸಾಧಿಸಬಲ್ಲನು? ॥80॥

"ಹಿ೦ದಿನ ಜನ್ಮಗಳ ವಿಶೇಷ ಅನುಬಂಧಗಳ ಪಾಶವಿಲ್ಲದಿದ್ದಲ್ಲಿ ಯಾರೂ ನನ್ನ ಹತ್ತಿರ ಬರುವುದಿಲ್ಲ. ಅದು ನಾಯಿಯೋ, ಹಂದಿಯೋ, ಸೊಳ್ಳೆಯೋ ಆಗಿರಬಹುದು. ಆದುದರಿಂದ ಯಾರನ್ನೂ ದೂರಮಾಡಬೇಡ. ॥81॥

"ಇಂದಿನಿಂದ ಅವನು ನನ್ನ ಸೇವೆಯನ್ನು ಪ್ರೀತಿ ಮತ್ತು ಭಕ್ತಿಗಳಿಂದ ಮಾಡಲಿ. ದೇವಾದಿ ದೇವನು ಅವನನ್ನು ಅನುಗ್ರಹಿಸುವನು. ಅವನು ಅಕ್ಷಯ ಫಲವನ್ನು ಪಡೆಯುವನು. ॥82॥

"ಅವನು ಯಾವ ರೀತಿ ಪೂಜೆ ಮಾಡಬೇಕು? 'ನಾನು ಯಾರು' ಎಂಬುದನ್ನು ಅವನು ನಿಶ್ಚಯವಾಗಿ ಅರಿಯಬಹುದು. ಸಾಯಿಯ ದೇಹವೂ ನಶಿಸುತ್ತದೆ. ಆದರೆ ಬ್ರಹ್ಮನು ಮಾತ್ರ ಅವಿನಾಶಿ ಮತ್ತು ಪೂಜಿಸಲ್ಪಡುವವನು. ॥83॥

"ನಾನು ಸರ್ವವ್ಯಾಪಿ, ನಾನು ಅಷ್ಟಧಾತು ಪ್ರಕೃತಿ ಸ್ವರೂಪದ ಮೂರ್ತಸ್ವರೂಪ" ಹೀಗೆಂದು ಅರ್ಜುನನಿಗೆ ಭಗವಂತನು ಭಗವದ್ಗೀತೆಯಲ್ಲಿ ಹೇಳಿರುವನು. ॥84॥

ಈ ಜಗತ್ತು ಅನೇಕ ನಾಮ, ರೂಪಗಳಿಂದ, ಚರ ಮತ್ತು ಅಚರ ವಸ್ತುಗಳಿಂದ ಉಂಟಾಗಿದೆ. ಅದು ನನ್ನಲ್ಲಿ ಅಷ್ಟಧಾತುಗಳ ಪ್ರಕೃತಿಯನ್ನೊಳಗೊಂಡಿದೆ. ಈ ತತ್ತ್ವವು ನನ್ನಿಂದಲೇ ಸೃಷ್ಟಿಸಲ್ಪಟ್ಟಿದೆ. ॥85॥

"ನನ್ನ ಸ್ಪಸ್ವರೂಪವೇ 'ಓಂ'ಕಾರ. ನಾನು ಕೇವಲ ಅದರ ವಾಚಕ. ವಿಶ್ವದಲ್ಲಿ ಅನೇಕ ವಸ್ತುಗಳಿವೆ.ಅದರಲ್ಲೆಲ್ಲಾ ವ್ಯಾಪಿಸಿರುವವನು ನಾನೇ. ॥86॥

"ಆತ್ಮಕ್ಕಿಂತ ಭಿನ್ನ ವಸ್ತುವಿಲ್ಲ ಆದುದರಿಂದ ಯಾವ ಕಾಮನೆಯು ಇರಬೇಕು? ನಾನು ದಶ ದಿಕ್ಕುಗಳಲ್ಲಿಯೂ ಎಲ್ಲದರಲ್ಲಿಯೂ ವ್ಯಾಪಿಸಿದ್ದೇನೆ. ॥87॥

"ಎಲ್ಲವೂ ಪರಿಷೂರ್ಣದಿಂದ ಕೂಡಿರುವಾಗ, 'ನಾನು' ಮತ್ತು 'ನನ್ನದು' ಎಂಬ ಭಾವಗಳು ಕರಗಿ ಹೋಗುತ್ತವೆ. ಸರ್ವ ವಸ್ತುಗಳಲ್ಲಿಯೂ ಸರ್ವಸ್ವ ನಾನೇ ಇರುವಾಗ ಯಾವ ಆಸೆಗಳನ್ನು ಹೊ೦ದಲಾಗುತ್ತದೆ? ॥88॥

"ಕಾಮನೆಗಳು ಬುದ್ಧಿಯಿಂದ ಹುಟ್ಟುತ್ತವೆ. ಅವುಗಳಿಗೆ ಆತ್ಮದ ಜೊತೆ ಯಾವುದೇ ಸಂಬಂಧ ಇರುವುದಿಲ್ಲ. ಸಾಯಿ ಮಹಾರಾಜರೂ ಆತ್ಮ ಸ್ಟರೂಪರು. ಅವರಲ್ಲಿ ಆಸೆಗಳು ಹೇಗೆ ಹುಟ್ಟುತ್ತವೆ? ॥89॥

ಅನೇಕ ಪ್ರಕಾರಗಳ ಕಾಮನೆಗಳು ಇವೆ. ಆದರೆ ಅದರ ಸಾರವಾದ 'ನಾನು ಯಾರು?' ಎಂಬುದನ್ನು ಅರಿತಾಗ ಆ ಕಾಮನೆಗಳು ಸೂರ್ಯನ ಬಿಸಿ ಕಿರಣಗಳು ಕರಗಿಸುವ ಮಂಜಿನ ಹನಿಗಳಂತೆ ಕರಗಿಹೋಗುತ್ತವೆ. ॥90॥

"ನಾನು ಮನಸ್ಸು, ಬುದ್ಧಿ, ಇಂದ್ರಿಯಗಳು ಅಲ್ಲ. ಅಥವಾ ನಾನು ಸ್ಥೂಲವಾದ ವಿರಾಟ್‌ ಸಹ ಅಲ್ಲ. ವಿಶ್ವ ಸೃಷ್ಟಿಯ ಮೊದಲಿನ ಹಿರಣ್ಯ ಗರ್ಭದ ರೂಪವೂ ನಾನಲ್ಲ. ಆದರೆ ನಾನು ಆದಿ ಇಲ್ಲದ ಸನಾತನದ ಸಾಕ್ಷಿ ಆಗಿರುವೆ. ॥91॥

"ಈರೀತಿ ನಾನು ಇ೦ದ್ರಿಯಾತೀತನಾಗಿರುವೆ. ನನಗೆ ಯಾವುದೇ ಇಂದ್ರಿಯ ವಸ್ತುಗಳಲ್ಲಿ ಆಸಕ್ತಿ ಇಲ್ಲ. ಆದರೆ ನಾನಿಲ್ಲದ ಸ್ಥಳ ಯಾವುದೂ ಇಲ್ಲ. ನಾನು ಕರ್ತನೂ ಅಲ್ಲ ಅಥವಾ ಯಾವುದೇ ಕಾರ್ಯದ ಕಾರಣನೂ ಅಲ್ಲ. ॥92॥

"ಮನಸ್ಸು, ಬುದ್ಧಿ, ಮತ್ತಿತರ ಇಂದ್ರಿಯಗಳು ಸ್ಥೂಲ ದೇಹದ ಕರಣಗಳು. ಇದನ್ನು ಅರಿತಲ್ಲಿ ಈ ಜ್ಞಾನದಿಂದ ಅಂತರಾತ್ಮದ ಆವರಣವನ್ನು ತೆಗೆದಲ್ಲಿ ವಿರಕ್ತಿಯು ಪ್ರಕಟವಾಗುತ್ತದೆ. ॥93॥

"ತನ್ನ ಆತ್ಮಸ್ಪರೂಪವನ್ನು ಮರೆಯುವುದೇ ಮಾಯೆ. ಶುದ್ಧ ಪೂರ್ಣಾನಂದವನ್ನು ಸ್ಮರಿಸುವುದೇ ನಾನು. ಚೈತನ್ಯ ಘನರೂಪನೇ ನಾನು. ॥94॥

"ಎಲ್ಲರನ್ನೂ ಆತ್ಮದೆಡೆಗೆ ಅಂದರೆ ನನ್ನೆಡೆಗೆ ತಿರುಗಿಸುವುದೇ ಒಂದು ಸೇವೆ ಮತ್ತು ನನಗೆ ತೋರುವ ಭಕ್ತಿ. ನಾನು ಯಾವಾಗ ಚಿದಾನಂದವನ್ನು ಅನುಭವಿಸುವೆನೋ ಅದೇ ಶುದ್ಧ ಸ್ಥಿತಿಯ ಜ್ಞಾನ. ॥95॥

"ನಾನೇ ಬ್ರಹ್ಮ ಸ್ವರೂಪ. ಪ್ರಜ್ಞಾನವೇ ಬ್ರಹ್ಮ. ಮಿಥ್ಯಾ ಜಗತ್ತಿನ ಬಗ್ಗೆ ಅರಿತೊಡನೆ ಲೌಕಿಕ ಮಾಯೆ ಹೊರಟುಹೋಗುತ್ತದೆ. ಬ್ರಹ್ಮನೇ ಸತ್ಯಸ್ತ್ವರೂಪ. ಅದೇ ನಾನು. ॥96॥

"ನಾನು ಶುದ್ಧ, ಬುದ್ಧ, ಮುಕ್ತ. ನಾನು ವಾಸುದೇವ (ಸರ್ವವ್ಯಾಪಿ). ನಾನೇ ಓಂಕಾರ. ನಾನೇ ಸತ್ಯ. ನನ್ನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸುವುದರಲ್ಲೇ ನಿನ್ನ ಹಿತವು ಅಡಗಿದೆ. ॥97॥

"ಈ ರೀತಿ ನನ್ನ ಸತ್ಯಸ್ತರೂಪವನ್ನು ಅರಿತು ಸೇವಿಸುವುದೇ ಸರಿಯಾದ ಮಾರ್ಗ. ಮತ್ತೆ ನನ್ನಲ್ಲಿ ಪೂರ್ಣ ಶರಣಾಗಿ ಮತ್ತು ನನ್ನಲ್ಲೇ ಒಂದಾಗಿ. ॥98॥

"ನದಿಯು ಸಮುದ್ರದಲ್ಲಿ ಶರಣಾದಾಗ, ಅದು ಹಿಂದೆ ಬರಲು ಸಾಧ್ಯವೇ? ನದಿಯು ಸಾಗರವನ್ನು ಆಲಂಗಿಸಿದಾಗ ಪ್ರತ್ಯೇಕತೆಯು ಎಲ್ಲಿ ಉಳಿಯುತ್ತದೆ? ॥99॥

"ಎಣ್ಣೆಯಲ್ಲಿ ನೆನೆಸಿದ ಬತ್ತಿಯನ್ನು ದೀಪಕ್ಕೆ ಹಿಡಿದಾಗ ಅದೇ ಪ್ರಕಾಶಯುಕ್ತ ಜ್ಯೋತಿಯಾಗುತ್ತದೆ. ಅದೇ ರೀತಿ ಸಂತರ ಚರಣಗಳಲ್ಲಿ ಶರಣಾದ ವ್ಯಕ್ತಿಯೂ ಸಂತನಾಗುತ್ತಾನೆ. ॥100॥

"'ಅಲ್ಲಾ-ಮಾಲಿಕ್‌'ನು ಚೈತನ್ಯಘನ ಪರಬ್ರಹ್ಮನು. ಅವನನ್ನೇಚಿಂತಿಸುವವನು ಶಾಂತನಾಗಿರುತ್ತಾನೆ. ಆಶೆಗಳಿರುವುದಿಲ್ಲ ಮತ್ತು ಸಮದೃಷ್ಟಿಯುಳ್ಳವನಾಗಿರುತ್ತಾನೆ. ಅವನಿಗೆ ಪರಬ್ರಹ್ಮನಲ್ಲದೆ ಬೇರೆ ಅಸ್ತಿತ್ವವೆಲ್ಲಿದೆ?॥101॥

"ಆತ್ಮಜ್ಞಾನ ಎಲ್ಲಿರುವುದಿಲ್ಲವೋ, ಅಹಂಭಾವ ಎಲ್ಲಿರುವುದಿಲ್ಲವೋ, ಶಾಂತಿ ಮತ್ತು ಜಗಳ (ಲೌಕಿಕವಾದ) ಎರಡು ಮುಖಗಳು ಎಲ್ಲಿರುವುದಿಲ್ಲವೋ, ಲೌಕಿಕ ವಸ್ತುಗಳ ಮೇಲೆ ಮೋಹವಿಲ್ಲವೋ ಈ ನಾಲ್ಕೂ ಗುಣಗಳು ಇರುವಲ್ಲಿ 'ಅಹಂಕಾರ' ಹೇಗೆ ಇರಲು ಸಾಧ್ಯ?" ॥102॥

ಸಾರಾಂಶದಲ್ಲಿ, ಸಾಯಿಯಲ್ಲಿ ಈ ಎಂಟುಗುಣಗಳೂ ಸಂಪೂರ್ಣವಾಗಿ ಇದ್ದುವು. ಆಗ ಅಹಂಕಾರಕ್ಕೆ ಜಾಗ ಎಲ್ಲಿದೆ? ಹಾಗಿರುವಾಗ ಅಹಂಕಾರವನ್ನು ಹೇಗೆ ಪ್ರಚೋದಿಸಲಿ. ॥103॥

ಯಾರ ಆತ್ಮವು ವಿಶ್ವದ ಕಣಕಣಗಳಲ್ಲಿ ಸಮ್ಮಿಳಿತವಾಗಿದೆಯೋ ಅಂತಹವನ ಭಾಗವೇ ನಾನು ಆಗಿದ್ದೇನೆ. ಸಾಯಿ ಚರಣಗಳಲ್ಲಿ ಸಮರ್ಪಿಸಿಕೊಳ್ಳಿ. ಅದೇ ನನ್ನ ಸೇವೆ. ॥104॥

"ನನ್ನ ಸೇವೆ ಮಾಡುವುದು, ನನ್ನ ಭಜನೆ ಮಾಡುವುದು ಮತ್ತು ನನ್ನಲ್ಲಿ ಸಂಪೂರ್ಣ ಶರಣಾಗುವುದು ನನ್ನಲ್ಲಿ ಒಂದಾಗುವಂತೆ ಮಾಡುತ್ತವೆ". ಹೀಗೆಂದು ಶ್ರೀಕೃಷ್ಣನು ಭಾಗವತದಲ್ಲಿ ಹೇಳಿರುವನು. ॥105॥

"ಕೀಟವು ಭ್ರಮರದ ಧ್ಯಾನದಲ್ಲೇ ಇದ್ದರೆ ತಾನೇ ಭ್ರಮರವಾಗಿಬಿಡುತ್ತದೆ. ಅದೇ ರೀತಿ ಒಬ್ಬ ಶಿಷ್ಯನು ನಿರಂತರ ತನ್ನ ಗುರುವಿನ ಭಜನೆ ಮಾಡುತ್ತಲೇ ಅವನು ಗುರುಸಮಾನನೇ ಆಗುವನು. ॥106॥

'ಸಮಾನ' ಎಂಬ ಪದವನ್ನು ಉಪಯೋಗಿಸಿದರೂ ಒಂದು ಪ್ರತ್ಯೇಕತೆ ಉಳಿಯುತ್ತದೆ. ಗುರುವು ಅದನ್ನು ಸಹಿಸಲಾಗದಿದ್ದರೂ, ಒಂದು ಕ್ಷಣವಾದರೂ ಗುರುವಿನ ಇರುವಿಕೆಯು ಶಿಷ್ಯನಿಲ್ಲದೆ ಇರಲು ಸಾಧ್ಯವಿಲ್ಲ ಮತ್ತು ಶಿಷ್ಯನು ಗುರುವಿನಿಂದ ಪ್ರತ್ಯೇಕವಾಗಿಲ್ಲ. ॥107॥

ಅದು ಈ ರೀತಿ ಆಯಿತು. ನಾನು ಪೂಜಿಸಬೇಕೆಂದು ಅಪ್ಪಣೆ ನೀಡಿದವನು, ಅವನು ತಾನು ಯಾರೆಂದು ವಿವರಿಸಿದನು. ನಾನು ಹೇಳುತ್ತಿರುವುದನ್ನು ಸಮರ್ಥಿಸುತ್ತಿರುವುದಕ್ಕೆ ನನ್ನ ನೆನಪಿನಿಂದ ಮರುಕಳಿಸಿದ ಘಟನೆಯನ್ನು ನಾನು ಈಗ ತಿಳಿಸುತ್ತೇನೆ. ॥108॥

ಒಬ್ಬ ಪಠಾಣನು (ರೋಹಿಲ) ಶಿರಡಿಗೆ ಬಂದನು. ಅವನು ಬಾಬಾರವರ ಸದ್ಗುಣಗಳಿಂದ ಆಕರ್ಷಿತನಾದನು. ಅಲ್ಲಿ ಬಹಳ ಕಾಲ ನೆಲೆಸಿದನು ಮತ್ತು ಬಾಬಾರವರಿಗೆ ಪ್ರೀತಿಯಿಂದ ಭಕ್ತಿಪೂರ್ವಕವಾಗಿ ಅರ್ಪಿಸಿಕೊ೦ಡನು. ॥109॥ ಅವನು ಕೋಣದ ರೀತಿಯಲ್ಲಿ ಭಾರಿ ದೇಹದವನಾಗಿದ್ದನು. ಅವನು ಸ್ಟೇಚ್ಛಾಚಾರಿಯೂ, ಯಾರನ್ನೂ ಲಕ್ಷಿಸದವನೂ ಆಗಿದ್ದನು. ಕೇವಲ ಕಫನಿಯನ್ನು ಕೀಲುಗಳ(ಮಣಿಕಟ್ಟಿನ)ವರೆಗೆ ಧರಿಸುತಿದ್ದನು. ॥101॥

ಹಗಲಾದರೇನು,ಇರುಳಾದರೇನು, ಮಸೀದಿಯಾದರೇನು, ಚಾವಡಿಯಾದರೇನು, ಅವನು ಕುರಾನ್‌ ಪಠಣವನ್ನು ಎತ್ತರದ ದ್ಹನಿಯಲ್ಲಿ, ಅತಿ ಉತ್ಸಾಹದಿಂದ ಮತ್ತು ಮೈಚಳಿಬಿಟ್ಟು ಮಾಡುತ್ತಿದ್ದನು. ॥111॥

ಮಹಾರಾಜರು ಶಾಂತಿಯ ಅಪರಾವತಾರ. ಆದರೆ ಹಳ್ಳಿಗರು ಅತಿಯಾಗಿ ಅತಾಂತಿ ಹೊಂದಿದ್ದರು. ಅರ್ಧರಾತ್ರಿಯಲ್ಲೂ ನಿಲ್ಲದಅವನ ವಾಚನವು ಎಲ್ಲರ ನಿದ್ರೆಯನ್ನು ಭಂಗಗೊಳಿಸುತ್ತಿತ್ತು. ॥112॥

ಹಗಲಲ್ಲಿ ಜನರು ಸುಡುತ್ತಿರುವ ಸೂರ್ಯನ ಬಿಸಿಲಲ್ಲಿ ಗದ್ದೆ ಮತ್ತು ಕಾಡುಗಳಲ್ಲಿ ಕಷ್ಟಪಡಬೇಕಾಗುತ್ತಿತ್ತು. ರಾತ್ರಿಯಾದಾಗ ಆರಾಮವಾಗಿ ನಿದ್ರೆಮಾಡಲು ಆಗುತ್ತಿರಲಿಲ್ಲ. ಆದುದರಿ೦ದ ಜನರು ಬೇಸರಗೊಂಡಿದ್ದರು. ॥113॥

ಅದಿರಲಿ. ಬಾಬಾರವರು ಮಾತ್ರ ಏನೂ ತೊಂದರೆಗೊಂಡಿರಲಿಲ್ಲ. ಜನರ ಮಟ್ಟಿಗೆ ತಾವು ದೊಡ್ಡ ಪಾಪವನ್ನು ಮಾಡಿದ್ದೇವೆಂದೇ ಅಂದುಕೊಂಡರು. ರಾತ್ರಿಶಾಂತಿಯುತ ನಿದ್ರೆಯಿಲ್ಲ, ಅವರು ರೋಹಿಲಾನ ಮೇಲೆ ಬೇಸರಗೊಂಡಿದ್ದರು. ॥114॥

ಅವರು ಸಂದಿಗ್ಧಪರಿಸ್ಥಿತಿಯಲ್ಲಿದ್ದರು. ಎಷ್ಟು ಸಮಯ ಇದನ್ನು ಸಹಿಸಲು ಸಾಧ್ಯ? ಹಗಲು ರಾತ್ರಿ ಈ ಪೀಡೆಯು ಅವರಿಗೆ ಒಂದು ದೊಡ್ಡ ಸಮಸ್ಯೆಯಾಯಿತು. ಅವರು ಇದರಿಂದ ಚಿಂತಿತರಾದರು. ॥115॥



ರೋಹಿಲಾನಾದರೋ ಬಹುದೊಡ್ಡ ತಲೆಹರಟೆಯ ಮನುಷ್ಯ ಅದಕ್ಕೆ ಸರಿಯಾಗಿ ಅವನಿಗೆ ಬಾಬಾರವರ ಉತ್ತೇಜನವೂ ಇತ್ತು. ಮೊದಲಿಗಿಂತ ಹೆಚ್ಚಾಗಿ ಅವನನ್ನು ಹಿಡಿಯುವರೇ ಇಲ್ಲದೆ ಪರಿಸ್ಥಿತಿ ಹದಗೆಟ್ಟಿತು. ॥116॥

ಅವನು ಬಹಳ ದುರಹಂಕಾರಿಯೂ, ಅವಿಧೇಯನೂ, ಜನರ ಹತ್ತಿರ ದುರ್ವರ್ತನೆ ಮಾಡುತ್ತಲೂ ಇದ್ದನು. ಮತ್ತೆ ಇಡೀ ಹಳ್ಳಿಯೇ ಅವನ ಮೇಲೆ ತಿರುಗಿಬಿದ್ದಿತು. ॥117॥

ಸಾಯಿಯಾದರೋ ಅತ್ಯಂತದಯಾರ್ದ್ರ ಹೃದಯಿಯಾಗಿ, ತಾಯಿಯ ರೀತಿಯಲ್ಲಿ ಸದಾ ತನ್ನಲ್ಲಿ ತರಣಾಗತರಾದವರ ಪರ ವಹಿಸುತ್ತಿದ್ದರು. ಆದುದರಿಂದ ಎಲ್ಲಾ ಹಳ್ಳಿಗರೂ ಒಟ್ಟಾಗಿ ಅವನಿಗೆ ತಿರುಗಿಬಿದ್ದರು. ॥118॥

ಆದರೆ ಬಾಬಾರವರು ಯಾವುದಕ್ಕೂ ಗಮನಕೊಡಲಿಲ್ಲ. ಬದಲಾಗಿ, ಅವರು ಹಳ್ಳಿಗರಿಗೆ ಹೇಳಿದರು, "ರೋಹಿಲನಿಗೆ ತೊಂದರೆ

ಕೊಡಬೇಡಿ. ಅವನು ನನಗೆ ಅತ್ಯಂತ ಪ್ರಿಯವ್ಯಕ್ತಿ. ॥1191॥

"ಈ ರೋಹಿಲನ ಪತ್ನಿ ಒಬ್ಬ ತಾಟಕಿ. ಮತ್ತು ಅವನೊಡನೆ ವಾಸಮಾಡಲು ತಯಾರಿಲ್ಲ. ಅವನನ್ನು ಮೋಸಗೊಳಿಸಿ ನನ್ನಲ್ಲಿಗೆ ಬರಲು ಕಾತರಳಾಗಿದ್ದಾಳೆ. ॥120॥

"ಆ ಲಜ್ಜೆಗೆಟ್ಟ ಹೆಂಗಸು ಪರದೆ ಮರ್ಯಾದೆಯಿಂದ ಇರುವುದಿಲ್ಲ. ಅವಳು ನೀತಿಗೆಟ್ಟವಳು ಮತ್ತು ಲಜ್ಜೆಗೆಟ್ಟವಳು. ಅವಳನ್ನು ಹೊರಗೋಡಿಸಿದರೆ ಮತ್ತೆ ಬಲವಂತವಾಗಿ ಮನೆಯೊಳಗೆ ನುಗ್ಗುತ್ತಾಳೆ. ॥121॥

"ಅವನು ಜೋರಾಗಿ ಕೂಗಿ ಹೇಳುವುದನ್ನ ನಿಲ್ಲಿಸಿದ ಕೂಡಲೇ ಈ ದುರ್ಬುದ್ಧಿಯುಳ್ಳ ಹೆಂಗಸು ಒಳಗೆ ಪ್ರವೇಶಿಸಲು ಅವಕಾಶಪಡೆಯುತ್ತಾಳೆ. ಅವನು ಕೂಗಿದಾಗ ಅವಳು ಅವನನ್ನು ಕಾಯಾ, ವಾಚಾ, ಮನಸಾ ಶುದ್ಧನನ್ನಾಗಿ ಮಾಡಿ ಓಡಿಹೋಗುತ್ತಾಳೆ. ಆದ್ದರಿಂದ ನನಗೆ ಅಗಾಧವಾದ ಸಂತೋಷ ಉಕ್ಕಿಬರುತ್ತದೆ. ॥122॥

"ಯಾರೂ ಅವನನ್ನು ವಿರೋಧಿಸಬೇಡಿ. ಅವನ ಮನಸ್ಸಿಗೆ ತೃಪ್ತಿಯಾಗುವಷ್ಟು ಅರಚಲಿ. ಅವನಿಲ್ಲದೆ ನಾನು ರಾತ್ರಿಯನ್ನು ಕಳೆಯಲಾರೆ. ಅವನಿಂದಾಗಿ ನನಗೆ ಅತಿ ಸಂತೋಷವಾಗುತ್ತದೆ. ॥123॥

"ಈ ರೀತಿಯ ಕೂಗಾಟಗಳು ನನಗೆ ಅತ್ಯಂತ ಹಿತಕರವಾಗಿರುತ್ತವೆ. ಈ ರೀತಿಯಿಂದಲಾದರೂ ರೋಹಿಲನು ಪರೋಪಕಾರಿಯಾಗಿರುತ್ತಾನೆ. ನನ್ನನ್ನು ಬಹುಸಂತೋಷ ಪಡಿಸುತ್ತಾನೆ. ॥124॥

"ಅವನು ಯಥೇಚ್ಛವಾಗಿ ಕೂಗಲಿ, ಅದೇ ನನಗೆ ಬಹಳ ಇಷ್ಟ ಇಲ್ಲದಿದ್ದಲ್ಲಿ ರೋಹಿಲನ ಪತ್ನಿ ಬಹಳ ದುಷ್ಟಳು. ನನಗೆ ತುಂಬ ಕಷ್ಟಕೊಡುತ್ತಾಳೆ‌. ॥125॥

"ಆಯಾಸಗೊಂಡಾಗ, ತಾನಾಗಿಯೇ ಶಾಂತನಾಗುತ್ತಾನೆ. ನಿಮ್ಮ ಉದ್ದೇಶ ನೆರವೇರುತ್ತದೆ. ಮತ್ತು ದುಷ್ಟ ಹೆಂಗಸು ನನಗೆ ತೊಂದರೆ ಕೊಡುವುದಿಲ್ಲ?” ॥126॥

ಈ ರೀತಿ ಸಾಯಿಗುರು ಹೇಳಿದಾಗ, ಮುಂದಿನ ಯಾವುದೇ ಪ್ರಯತ್ನವೆಲ್ಲ ವ್ಯರ್ಥ, ಬಾಬಾರವರ ಮನಸ್ಸು ಆಂದೋಲನಗೊಳ್ಳದಿದ್ದಲ್ಲಿ ನಾವು ಏಕೆ ಅದರಬಗ್ಗೆ ಯೋಚಿಸಬೇಕು? ॥127॥

ಹಾಗೆಯೇ ರೋಹಿಲನೂ ಬಹಳ ಉತ್ತೇಜಿತನಾಗಿದ್ದನು. ಅದಲ್ಲದೆ ಈಗ ಅವನಿಗೆ ಬಾಬಾರವರ ಅನುಮತಿಯೂ ದೊರಕಿದೆ. ಆದ್ದರಿಂದ ಅವನು ಕುರಾನಿನ ಪದಗಳನ್ನು ಬಹಳ ಜೋರಾಗಿ ಹೇಳಲು ಪ್ರಾರಂಭಿಸಿದನು ಮತ್ತು ಗಲಾಟೆ ಎಬ್ಬಿಸಿದನು.॥128॥

ಬಾಬಾರವರ ತಾಳ್ಮೆಯನ್ನು ನೋಡಿ ಜನರು ಬಹಳ ಅಚ್ಚರಿಗೊಂಡರು. ಅದರಿಂದ ಉಂಟಾಗುವ ತಲೆಸಿಡಿತದ ಬದಲು ಅವನ ಜೋರಾದ ಕೂಗುವಿಕೆಯೂ ಅವರನ್ನು ತಲ್ಲೀನರನ್ನಾಗಿಸಿತು. ॥129॥

ಅವನ ಅರಚಾಟ ಎಷ್ಟು ಭಯಂಕರವಾಗಿತ್ತು? ಅವು ಅವನ ಗಂಟಲನ್ನು ಹೇಗೆ ಒಣಗಿಸಿಲ್ಲವೋ? ಆದರೂ ಬಾಬಾರವರು ಒಂದೇ ಸಮನೆ ಹೇಳುತ್ತಿದ್ದರು, 'ಅವನನ್ನು ದೂಷಿಸಬೇಡಿ.' ॥130॥

ತೋರಿಕೆಗೆ, ರೋಹಿಲನು ಹುಚ್ಚನಾದ ಆಧುನಿಕ ಸಂತನ ರೀತಿ ಕಾಣುತ್ತಿದ್ದನು. ಆದರೆ ಅವನು ಬಾಬಾರವರನ್ನು ಅತ್ಯಂತ ಆದರದಿಂದ ನೋಡುತ್ತಿದ್ದನು. ಅವನು ಧರ್ಮದತತ್ತ್ವಗಳಿಗನುಸಾರವಾಗಿ ಸಂತೋಷದಿಂದ ಕುರಾನಿನ ಪದಗಳನ್ನು ಹಾಡುತ್ತಿದ್ದನು. ॥131॥

ಅವನು ತನ್ನ ಧ್ವನಿಯು ಮೃದುವಾಗಿದೆಯೋ ಕೀರಲು ಆಗಿದೆಯೋ ತಿಳಿಯದೆ ಅವನಿಗೆ ಸ್ಫೂರ್ತಿ ಬಂದೊಡನೆ ಭಗವ೦ತನ ನಾಮವನ್ನು ಗರ್ಜಿಸತ್ತಿದ್ದ. ॥132॥

ಗೊಗ್ಗರ ದನಿ ಅವನಿಗೆ ನಿಸರ್ಗದತ್ತವಾಗಿತ್ತು. ಅವನು ನಿರಂತರ ಗರ್ಜಿಸುತ್ತಿದ್ದನು - ಅಲ್ಲಾಹೋ ಅಕ್ಬರ್ ಎಂದು ಮತ್ತು ಗೀತೆಗಳನ್ನು ಆನಂದದಿಂದ ಹಾಡುತ್ತಿದ್ದನು. ॥133॥

ಬಾಬಾರವರು ನಾಸ್ತಿಕರ ಸಂಗವನ್ನು ಇಷ್ಟಪಡುತ್ತಿರಲಿಲ್ಲ. ಹೀಗಿರುವಾಗ ನಿರಂತರ ಭಗವನ್ನಾಮಸ್ಕರಣೆ ಮಾಡುತ್ತಿದ್ದ ಆಸ್ತಿಕನಾದ ರೋಹಿಲನನ್ನು ಓಡಿಸಲು ಯೋಚಿಸುವರೇ? ॥134॥

ಎಲ್ಲಿ ನನ್ನ ಭಕ್ತರು ನನ್ನ ಭಜನೆಗಳನ್ನು ಹಾಡುತ್ತಾರೋ, ಅಲ್ಲೆಲ್ಲ ನಾನು ನೆಲಸಿರುತ್ತೇನೆ. ಅಲ್ಲಿ ನಾನು ನಿದ್ರೆ ಮಾಡದೆ ಎಚ್ಚರವಾಗಿ ಇರುತ್ತೇನೆ. ಭಗವದ್ಗೀತೆಯ ಈ ಭಗವದ್ವಾಣಿಯನ್ನು ನಿಜವಾಗಿಸುವಂತೆ ಬಾಬಾರವರು ಈ ರೀತಿ ವರ್ತಿಸಿದರು. ॥135॥

ರೋಹಿಲನು ಭಿಕ್ಷೆಯಿಂದ ಬಂದಿದ್ದರಲ್ಲಿ ಬದುಕುತ್ತಿದ್ದನು. ಆಗಾಗ್ಗೆ ಉಪವಾಸವೇ ಇರುತ್ತಿದ್ದನು. ಅವನಿಗೆ ಹೆಂಡತಿ ಹೇಗಿರಲು ಸಾಧ್ಯ ಮತ್ತು ಆಕೆ ಬಾಬಾರವರನ್ನು ತೊಂದರೆಕೊಡಲು ಹೇಗೆ ಸಾಧ್ಯ? ॥136॥

ರೋಹಿಲನು ದಟ್ಟದರಿದ್ರನು. ಅವನ ಮದುವೆ ಹೇಗೆ ಸಾಧ್ಯ? ಅಥವಾ ಹೇಗೆ ಪತ್ನಿ ಇರುವಳು? ಬಾಬಾರವರು ಬಾಲ್ಯದಿಂದಲೇ ಬ್ರಹ್ಮಚಾರಿ. ಹಾಗಿರುವಾಗ ಇಡೀ ಕತೆಯೇ ಅಯೋಮಯ. ॥137॥

ಅವನು ಕಂಠಶೋಷಣೆ ಮಾಡಿಕೊಳ್ಳಲಿ, ಬಾಬಾರವರು ನಾಮಸ್ಕರಣೆಯಿಂದ ತೃಪ್ತರಾಗಿದ್ದಾರೆ. ಪ್ರತಿನಿತ್ಯ ಅವರು ಅವುಗಳನ್ನು ಆಲಿಸಿದ್ದಾರೆ. ಆ ಪಠನೆಯಮುಂದೆ ನಿದ್ರೆಯು ವಿಷವಾಗಿತ್ತು. ॥138॥

ಪದಗಳ ಮೋಕ್ಷಪ್ರದಾಯಕ ಬೋಧನೆಗಳಿಗೆ ಹೋಲಿಸಿದಾಗ ಹಳ್ಳಿಗರ ಫಿರ್ಯಾದು ಬಹಳ ಹಗುರವಾಯಿತು. ಬಾಬಾರವರ ಈ ನಡವಳಿಕೆ ಹಳ್ಳಿಗರಿಗೆ ಸರಿಯಾದ ನೀತಿಪಾಠಕಲಿಸುವ ಹಾಗಿತ್ತು. ॥139॥

ಭಗವಂತನ ನಾಮವನ್ನು ಪ್ರೀತಿಸುವ ಕಾರಣಕ್ಕಾಗಿ ತಾವು ರೋಹಿಲನ ಸಹವಾಸವನ್ನು ಇಷ್ಟಪಡುತ್ತಾರೆಂಬ ವಿಷಯವನ್ನು ಎಲ್ಲರಿಗೂ ತಿಳಿಸಿದರು. ॥140॥



ದೃಶ್ಯ, ದೃಷ್ಟಾರ, ದೃಕ್‌ ಇವು ಮೂರೂ ಅವನಿಗೆ ಭಗವತ್ಸ್ವರೂಪವೇ. ಅಂತಹ ವ್ಯಕ್ತಿ ಬ್ರಾಹ್ಮಣನೇ ಆಗಲಿ, ಪಠಾಣನೇ ಆಗಲಿ ಸರಿಸಮಾನರೆಂದು ಪರಿಗಣಿಸಲ್ಪಡುತ್ತಾರೆ. ॥141॥

ಒಮ್ಮೆ, ಮಧ್ಯಾಹ್ನದ ಆರತಿಯ ನಂತರ ಜನರು ತಮ್ಮ ಮನೆಗಳಿಗೆ ಹಿಂತಿರುಗಲು ಪ್ರಾರಂಭಿಸಿದಾಗ ಬಾಬಾರವರು ಮಧುರ ವಚನಗಳನ್ನು ತಮ್ಮ ಮುಖದಿಂದ ನುಡಿದರು. ಅದನ್ನು ಕೇಳಿ. ॥142॥

"ನೀವು ಎಲ್ಲೇ ಇರಲಿ, ಏನೇ ಮಾಡುತ್ತಿರಲಿ, ಯಾವಾಗಲೂ ನೆನಪಿಡಿ; ಏನೆಂದರೆ ನೀವು ಮಾಡಿದ ಕಾರ್ಯಗಳ ಒಂದು ಸಣ್ಣ ವಿವರವೂ ನನಗೆ ತಿಳಿಯುತ್ತಿರುತ್ತದೆ. ॥143॥

"ಈ ರೀತಿ, ನಾನು ವಿವರಿಸಿದ ಹಾಗೆ, ನಾನು ಎಲ್ಲರ ಹೃದಯವಾಸಿ, ಸರ್ವವ್ಯಾಪಿ. ನಾನು ಸರ್ವೇಶ. ॥144॥

"ನಾನು ಇಡೀ ಸೃಷ್ಟಿಯನ್ನು ಒಳಗೆ ಮತ್ತು ಹೊರಗೆ ಉಕ್ಕಿ ಹೋಗುವಷ್ಟು ವ್ಯಾಪಿಸಿದ್ದೇನೆ. ಈ ವಿಶ್ವಕ್ಕೆ ಭಗವಂತನೇ ಸೂತ್ರಧಾರ ಮತ್ತು ನಾನು ಸೂತ್ರವನ್ನು ಹಿಡಿದವನು. ॥145॥

"ನಾನು ಸಕಲ ಜೀವಿಗಳಿಳೂ ತಾಯಿ. ನಾನು ತ್ರಿಗುಣಗಳಲ್ಲೂ ಸಮಾನಾವಸ್ಥೆಯಲ್ಲಿರುತ್ತೇನೆ. ನಾನು ಸಕಲ ಇಂದ್ರಿಯಗಳನ್ನು ಪ್ರವರ್ತನೆಗೊಳಿಸುವವನು. ನಾನೇ ಸೃಷ್ಟಿ ಸುರಕ್ಷಕ ಮತ್ತು ಸೃಷ್ಟಿ ಸಂಹಾರಕ. ॥146॥

"ನನ್ನನ್ನೇ ಧ್ಯಾನಿಸುವವನಿಗೆ ಯಾವ ಸಂಕಟವೂ ಇರುವುದಿಲ್ಲ. ಆದರೆ ನನ್ನ ಮರೆತ ಕ್ಷಣವೇ ಮಾಯೆಯು ಅವನನ್ನು ಆವರಿಸುತ್ತದೆ. ॥147॥

"ಯಾವ ರೂಪವನ್ನು ಆವಾಹಿಸಿದರೂ ಅದು ನನ್ನ ಪ್ರತಿಬಿ೦ಬಮಾತ್ರ. ಅದು ಒ೦ದು ಹುಳವೋ, ಇರುವೆಯೋ, ಬಡಪಾಯಿಯೋ, ರಾಜನೋ ಆಗಿರಬಹುದು". ಈ ಅಪರಿಮಿತ ವಿಶ್ವವು ಚರ ಮತ್ತು ಅಚರ ವಸ್ತುಗಳಿಂದ ಕೂಡಿದೆ. ಇವೆಲ್ಲವೂ ಬಾಬಾರವರ ಸ್ವಸ್ವರೂಪವೇ. ॥148॥

ಇದೆಂತಹ ಅಚ್ಚರಿಯ ಸಂಕೇತ? ಸಂತನಿಗೂ ಭಗವಂತನಿಗೂ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ. ಅಭೇದ ರೂಪಿಯಾಗಿ, ಚರ ಮತ್ತು ಅಚರವಾದ ವಿಶ್ವದ ಉದ್ಧಾರಕ್ಕಾಗಿ ಅವತಾರವೆತ್ತುತ್ತಾನೆ. ॥149॥

ಗುರುವಿನ ಚರಣಗಳಲ್ಲಿ ಶರಣಾಗಲು ಇಚ್ಛಿಸುವವನು ಗುರುವಿನ ಗುಣಗಾನ ಮಾಡಬೇಕು ಅಥವಾ ಗುರುಚರಿತ್ರೆಯ ಕೀರ್ತನೆ ಮಾಡಬೇಕು ಅಥವಾ ಅಂತಹ ಕತೆಗಳನ್ನು ಭಕ್ತಿಯಿಂದ ಕೇಳಬೇಕು. ॥150॥

ಈ ಜ್ಞಾನವನ್ನು ಪಡೆಯಲು ಇಚ್ಛಿಸುವವನು, ತೀವ್ರವಾಗಿ ಆಲಿಸಿ ಅವನು ಅದರೊಂದಿಗೆ ಲೀನವಾಗಿ ಉಪದೇಶಮಾಡುತ್ತಲೇ ತದ್ರೂಪನಾಗುವನು. ಅದರಿಂದ ಪರಮಚೇತನವು ಅವನ ಮುಂದೆ ಪ್ರಕಟವಾಗುತ್ತದೆ ಮತ್ತು ಅವನ ಮನಸ್ಸು ಉನ್ಮತ್ತವಾಗುತ್ತದೆ. ॥151॥

ಲೌಕಿಕ ಸಂಸಾರದಲ್ಲಿ ಪೂರ್ಣವಾಗಿ ಮುಳುಗಿದ್ದರೂ ಸಂತರ ಚರಿತ್ರೆಗಳನ್ನು ಕೇಳುವವರು ಸ್ವಲ್ಪವೂ ಪ್ರಯತ್ನವಿಲ್ಲದೆ ಸದ್ಗುಣಿಗಳಾಗುತ್ತಾರೆ. ಏಕೆಂದರೆ ಅದು ಅವರ ಸ್ವಭಾವವೇ ಆಗುತ್ತದೆ. ॥152॥

ಹಾಗಿದ್ದಲ್ಲಿ, ಶ್ರದ್ಧಾ ಭಕ್ತಿಗಳಿಂದ ಕೇಳಿದವರು ಮತ್ತೆಷ್ಟು ಒಳ್ಳೆಯದನ್ನು ಪಡೆಯಬಹುದು. ಓ ಶ್ರೋತೃಗಳೇ, ಕೇಳಿರಿ, ನಿಮ್ಮ ಸ್ವಹಿತಕ್ಕಾಗಿಯೇ ಯೋಚಿಸಿರಿ. ॥153॥

ಗುರುವಿನ ಚರಣಗಳಲ್ಲಿ ಭಕ್ತಿ ವೃದ್ಧಿಯಾಗುತ್ತದೆ ಮತ್ತು ಯಾವುದೇ ನೇಮನಿಷ್ಠೆಗಳೂ ಬೇಕಾಗುವುದಿಲ್ಲ. ಪರಮಾನಂದವು ದೊರಕುತ್ತದೆ. ॥154॥

ಒಮ್ಮೆ ಮನಸ್ಸನ್ನು ನಿರ್ಬಂಧಗೊಳಿಸಿದಲ್ಲಿ, ಕಥಾಶ್ರವಣದ ಆಕಾಂಕ್ಷೆ ಉತ್ಕಟವಾಗುತ್ತದೆ. ಇ೦ದ್ರಿಯಾಭಿಲಾಷೆಯ ಒಲವು ಸುಲಭವಾಗಿ ಬಿಡಿಸಿಕೊಳ್ಳುತ್ತದೆ ಮತ್ತು ಪರಮಾನಂದವು ಪ್ರಕಟವಾಗುತ್ತದೆ. ॥155॥

ಬಾಬಾರವರ ಈ ಮಧುರ ವಚನಗಳನ್ನು ಕೇಳಿ, ನಾನು ನನ್ನ ಮನಸ್ಸಿನಲ್ಲೇ ಯಾವ ಉದ್ಯೋಗವನ್ನೂ ಇನ್ನು ಮುಂದೆ ತೆಗೆದು ಕೊಳ್ಳಬಾರದೆಂದೂ ಮತ್ತು, ನನ್ನ ಉಳಿದ ಜೀವನವನ್ನು ಗುರುಸೇವೆಗೆ ಮೀಸಲಾಗಿಡಬೇಕೆಂದು ನಿರ್ಧರಿಸಿದೆನು. ॥156॥

ಆದರೆ ನನ್ನ ಮನಸ್ಸು ಬಾಬಾರವರ ಭರವಸೆಯ ಸುತ್ತ ಸುತ್ತುತ್ತಿತ್ತು - "ಅವನಿಗೆ ಊವ್ಯೋಗ ಸುಲಭವಾಗಿ ದೊರೆಯುತ್ತದೆ". ನನಗೆ ಅದರ ಬಗ್ಗೆ ರುಜುವಾತು ದೊರೆಯುವ ಬಗ್ಗೆ ಅಚ್ಚರಿಯಾಯಿತು. ॥157॥

ಬಾಬಾರವರ ಶಬ್ಧಗಳು ಎಂದಿಗೂ ಸುಳ್ಳಾಗುವುದಿಲ್ಲ. ಅವು ಎಂದಿಗೂ ನಡೆಯದಿರುವುದಿಲ್ಲ. ನಾನು ಮತ್ತೆ ಅದೇ ಜನರ ಮಧ್ಯೆ ಕೆಲಸಮಾಡಬೇಕಾಗಬಹುದು. ಆದರೆ ಅದು ನನಗೆ ಹಿತಕಾರಿಯಾಗಿರುವುದಿಲ್ಲ. ॥158॥

ಅಣ್ಣಾನು ಸ್ವಯಂಪ್ರೇರಿತನಾಗಿ ನನ್ನ ಬಗ್ಗೆ ಕೇಳಿದ್ದು ನಿಜವೇ. ನನಗೆ ಇಚ್ಚೆ ಇರಲಿಲ್ಲ. ಆದರೆ ನಮ್ಮ ಪ್ರಾರಬ್ಧಕರ್ಮವನ್ನು ನಾವೇ ಭೋಗಿಸಬೇಕಲ್ಲವೆ? ॥159॥ ನನ್ನ ಅಂತರಂಗದಲ್ಲಿ ನನ್ನ ಸಂಸಾರದ ನಿರ್ವಹಣೆಗಾಗಿ ಉದ್ಯೋಗ ಮಾಡಲು ಆಸೆ ಪಟ್ಟೆ. ಸಾಯಿಯು ಪರಿಹಾರ ರೂಪಕವಾಗಿ ಒಂದು ಸಿಹಿ ಗುಳಿಗೆಯನ್ನು ಔಷಧಿಯ ರೂಪದಲ್ಲಿ ನೀಡಿದರು. ॥160॥

ಆ ಔಷಧಿಯು ಸಿಹಿ ಇರುವುದೆಂಬ ನಿರೀಕ್ಷೆಯಲ್ಲಿ ನಾನು ಪಡೆದು ಭಾಗ್ಯವಂತನಾದೆ. ಅನಿರೀಕ್ಷಿತವಾಗಿ ಒಂದು ಉದ್ಯೋಗ ಬಂದಿತು, ನಾನು ಅದನ್ನು ಹಣದಾಸೆಗಾಗಿ ಸ್ವೀಕರಿಸಿದೆ. ॥161॥

ಅದು ಬೆಲ್ಲವಾದರೂ ಸಿಹಿ, ಸದಾಕಾಲ ಅದನ್ನೇ ತಿನ್ನುತ್ತಿದ್ದರೆ ಸಾಕಾಗುತ್ತದೆ. ನಾನು ಬಾಬಾರವರ ಉಪದೇಶಾಮೃತದಲ್ಲಿ ಅದ್ದಿದ ಬೆರಳುಗಳನ್ನು ನೆಕ್ಕುವುದನ್ನು ಆರಿಸಿಕೊಂಡೆನು. ॥162॥

ಆ ಉದ್ಯೋಗವು ಶಾಶ್ಚತವಾದುದಲ್ಲ. ಅದು ಅನಿರೀಕ್ಷಿತವಾಗಿ ಬಂದ ರೀತಿಯಲ್ಲೇ ನಿಂತು ಹೋಯಿತು. ಬಾಬಾರವರು ನನ್ನನ್ನು ಒಂದೇ ಸ್ಥಳದಲ್ಲಿರಿಸಿ ನಾನು ಮಾಡುತ್ತಿದ್ದುದರ ಆನಂದವನ್ನು ಅವರೊಡನಿದ್ದುಕೊಂಡೇ ಆಸ್ಪಾದಿಸುವಂತೆ ಮಾಡಿದರು. ॥163॥

ವಿಶ್ವವು ಪೂರ್ಣವಾಗಿ ಜಡ ಹಾಗೂ ಅಚರ ವಸ್ತುಗಳು ಪರಮಾತ್ಮನ ಸ್ವರೂಪವೇ ಆದ ಜೀವದಿಂದ ತುಂಬಿದೆ, ಆದರೆ ಪರಮಾತ್ಮನು

ಬ್ರಹ್ಮಾಂಡದ ಆಚೆಗೂ ಇದ್ದಾನೆ ಮತ್ತು ಪರಬ್ರಹ್ಮ ವಸ್ತು ಪರಾತ್ಪರನಾಗಿದ್ದಾನೆ ॥164॥

ಭಗವಂತನು ಜಗತ್ತಿಗಿಂತ ಬೇರೆ ಇಲ್ಲ. ಆದರೆ ಜಗತ್ತು ಭಗವಂತನಿಗಿಂತ ಬೇರೆಯೇ, ಏಕೆಂದರೆ ಜಗತ್ತು ಅವನಿಂದ ಚೇತನವನ್ನು ಸ್ವೀಕರಿಸುತ್ತದೆ ಮತ್ತು ಅದರಿಂದಲೇ ಅಸ್ತಿತ್ವದಲ್ಲಿದೆ. ಆದರೆ ಭಗವಂತನು ಜಗತ್ತಿಗೇ ಆಧಾರ. ॥165॥

ದಯಮಾಡಿ ಅರ್ಥಮಾಡಿಕೊಳ್ಳಿರಿ. ಭಗವಂತನ ಉಪಾಸನೆಗೆ ಎಂಟು ಮಾರ್ಗಗಳು ಇವೆ. ವಿಗ್ರಹಾರಾಧನೆ, ಯಜ್ಞ ಇತ್ಯಾದಿ. ಎಲ್ಲವನ್ನೂ ಹೋಲಿಸಿದಾಗ ಗುರುವೇ ಉತ್ತಮನು. ॥166॥

ಕೃಷ್ಣನು ತಾನೇ ಸ್ಪತಃ ಪೂರ್ಣ ಬ್ರಹ್ಮನು. ಆದರೂ ಸಹ ಅವನು ಸಾಂದೀಪನಿಯ ಚರಣಗಳಿಗೆ ಶಿರಬಾಗಿ ಹೇಳುವನು - "ಸದ್ಗುರುವಿನ ಸ್ಮರಣೆಯು ನಾರಾಯಣನಾದ ನನ್ನನ್ನು ಸಂತಸಗೊಳಿಸಲು ಸತ್ಯವಾದ ಮಾರ್ಗ. ॥167॥

"ಸದ್ಗುರುವಿನ ಭಜನೆಯು ನನ್ನನ್ನು ಸ್ತುತಿಮಾಡುವುದಕ್ಕಿಂತ ಸಹಸ್ರಪಾಲು ಶ್ರೇಷ್ಠವಾದದ್ದು, ಅದೇ ಸದ್ಗುರುವಿನ ಶ್ರೇಷ್ಠತೆ ಮತ್ತು ಗಹನವಾದ ಮಹಿಮೆ." ॥168॥

ಯಾರು ಗುರು ಸ್ಮರಣೆಯಿಂದ ವಿಮುಖನಾಗಿರುವನೋ ಅವನು ದುರದೃಷ್ಟವಂತ ಮತ್ತು ಪಾಪಿ. ಅವನು ದುಃಖಕರವಾದ ಜನನ ಮರಣದ ಚಕ್ರದಲ್ಲಿ ಸಿಲುಕಿ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಾನೆ. ॥169॥

ಹುಟ್ಟು ಮತ್ತು ಸಾವು, ಒಂದರ ನಂತರ ಮತ್ತೊಂದು. ಇದು ಅಂತ್ಯವಿಲ್ಲದ ಚಕ್ರವ್ಯೂಹ. ಆದ್ದರಿಂದ ಈ ಕತೆಗಳ ಶ್ರವಣ ಮಾಡಿ ಆತ್ಮೋದ್ಧಾರ ಮಾಡಿಕೊಳ್ಳಿರಿ. ॥170॥

ಸ೦ತರ ಮುಖದಿಂದ ಬರುವ ಸಹಜವಾಣಿಯೂ ಅವಿದ್ಯೆಯ ಬಂಧವನ್ನು ಹರಿದು ನಮ್ಮನ್ನು ಅತಿ ಸಂಕಟದಿಂದ ಪಾರುಮಾಡುತ್ತದೆ. ಆದುದರಿಂದ ನಾವೆಲ್ಲರೂ ಈ ಕತೆಗಳನ್ನು ಜೀರ್ಣಿಸಿಕೊಳ್ಳೋಣ. ॥171॥

ನಮಗೆ ಭವಿಷ್ಯ ಯಾವ ರೀತಿ ಇರಬಹುದೆಂಬುದು ತಿಳಿದಿಲ್ಲ ಅಂತಹ ಸಮಯಗಳಲ್ಲಿ ಯಾವ ರೀತಿಯ ಸಹಾಯ ದೊರೆಯುವುದೆಂಬುದು ತಿಳಿದಿಲ್ಲ. ಇದು ವಿಧಿಯ ಆಟ. ಪ್ರೀತಿಯ ಭಕ್ತನು ಕೇವಲ ಒಬ್ಬ ಪ್ರೇಕ್ಟಕನಷ್ಟೇ. ॥172॥

ಸಾಕಷ್ಟು ಬುದ್ಧಿಶಕ್ತಿ ಅಥವಾ ಯಾವುದೇ ವಿವೇಚನಾ ಶಕ್ತಿಯಿಲ್ಲದಿರುವಾಗ, ಸಾಯಿಯಂತಹ ಸಮರ್ಥ ಗುರುವು ನನಗೆ ದೊರಕಿದ ಅದೃಷ್ಟವನ್ನು ಹೇಗೆ ತಾನೇ ವಿವರಿಸಲಿ! ಆದೂ ಸಹ ಅವರ ಲೀಲೆ. ॥173॥

ಈ ಗ್ರಂಥದ ಪ್ರಯೋಜನವನ್ನು ಈಗಾಗಲೇ ನಿವೇದಿಸಿದ್ದೇನೆ ಮತ್ತು ಬಾಬಾರವರು ನೀಡಿರುವ ಆಶ್ಚಾಸನೆಗಳನ್ನೂ ಸಹ. ಅವರಿಂದಾಗಿ, ನಾನು, ನೀನು ಮತ್ತು ಉಪಾಸನೆ ಈ ಮೂರು ವಿಷಯಗಳ ಭಿನ್ನತೆಯ ಬಗ್ಗೆ ನಿರ್ದೇಶನ ದೊರಕಿತು. ॥174॥

ಈಗ ನೀವು ಶ್ರೋತೃಗಳು ಕೇಳುತ್ತಿರುವಿರಿ. ಮುಂದಿನ ಅಧ್ಯಾಯದಲ್ಲಿ ಸಾಯಿನಾಥ ಸಮರ್ಥರು ಶಿರಡಿಯಲ್ಲಿ ಯಾವ ರೀತಿ ಪ್ರಕಟಗೊ೦ಡರು ಎಂಬುದರ ಬಗ್ಗೆ ಆಲಿಸಿರಿ. ॥175॥

ನೀವೆಲ್ಲರೂ, ಯುವಕರು ಮತ್ತು ವೃದ್ಧರು, ಸರಳರು ಮತ್ತು ನಂಬಲರ್ಹರ, ನಿಮ್ಮ ಸಂಸಾರ ಜೀವನದ ಕೆಲವು ಕ್ಷಣಗಳನ್ನು ವಿನಿಯೋಗಿಸಿ ಸಾಯಿಯ ಅದ್ಭುತವಾದ ಚರಿತ್ರೆಯನ್ನು ಆಲಿಸಿರಿ. ॥176॥

ಸಾಯಿಯು ಸ್ವತಃ ಅವತಾರಪುರುಷರಾಗಿದ್ದರೂ, ನಿರ್ವಿಕಾರಿಯಾಗಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ಒಬ್ಬ ಗೃಹಸ್ಥನು ತನ್ನ ನಿತ್ಯ ಜೀವನದಲ್ಲಿ ವ್ಯವಹಾರಿಕ ಕಾರ್ಯಗಳಲ್ಲಿ ನಿಮಗ್ನನಾಗಿರುವಂತೆ, ಮಾಯೆಯು ನಿರ್ದೇಶಿಸಿದಂತೆ ನಟಿಸುತ್ತಾರೆ. ॥177॥

"ಸಮರ್ಥಸಾಯಿ" ಈ ಮಂತ್ರ ಜಪಿಸುತ್ತ ಅವರ ಪವಿತ್ರ ಚರಣಗಳಲ್ಲಿ ಸೇವಿಸಪವರಿಗೆ ಅವರು ಸೂತ್ರವನ್ನು, ಭಕ್ತರನ್ನು ಸಾಂಸಾರಿಕ ಬಂಧನದಿ೦ದ ಮುಕ್ತ ಮಾಡಲು ಬೇಕಾದಂತೆ ಆಡಿಸುತ್ತಾರೆ ಅವರ ಜೀವನ ಚರಿತ್ರೆಯು ಪವಿತ್ರವಾದುದು. ॥178॥

ಸಾರಾಂಶದಲ್ಲಿ, ಸಾಯಿ ಚರಿತ್ರೆಯು ಪವಿತ್ರವಾದುದು. ಯಾರು ಇದನ್ನು ವಾಚನ ಮಾಡುತ್ತಾರೋ, ಯಾರು ಆಲಿಸುತ್ತಾರೋ, ಅಂತಹವರ ಹೃದಯಗಳು ಶುದ್ಧೀಕರಣ ಹೊಂದುತ್ತದೆ. ಅಂತರಂಗಗಳು ಪವಿತ್ರವಾಗುತ್ತವೆ. ॥179॥

ಪ್ರೀತಿಯಿಂದ ಕಥಾ ಶ್ರವಣ ಮಾಡಿದಲ್ಲಿ ಎಲ್ಲಾ ಭವ ಬ೦ಧನಗಳೂ ಕಳಚಿಕೊಳ್ಳುವುವು. ಸಾಯಿ ಕೃಪಾಘನನು. ತನ್ನ ಕೃಪೆಯನ್ನು ಸುರಿಸುತ್ತಾನೆ. ಪರಿಷೂರ್ಣ ಶುದ್ಧ ಜ್ಞಾನವು ಪ್ರಕಟಗೊಳ್ಳುತ್ತದೆ. ॥180॥

ಆಲಸಿ, ಚಂಚಲ ಮನಸ್ಸು ಇಂದ್ರಿಯ ವಸ್ತುಗಳಿಗೆ ಅಂಟಿಕೊಳ್ಳುವುದು ಮತ್ತು ಜಿಹ್ವಾ ಚಾಪಲ್ಯ ಇವುಗಳು ಶ್ರವಣ ಮಾರ್ಗದಲ್ಲಿ ಅಡಚಣೆಯಾಗಿ ನಿಲ್ಲುತ್ತವೆ. ಅವುಗಳನ್ನು ದೂರಮಾಡಿದಾಗ ಮಾತ್ರ ಶ್ರವಣವು ಒಂದು ಸು೦ದರ ಅನುಭವ. ॥181॥

ವ್ರತಗಳನ್ನು ಪೂರ್ಣಗೊಳಿಸಲು ಉದ್ಯಾಪನೆ ಮಾಡಬೇಕಾಗಿಲ್ಲ. ದೇಹವನ್ನು ಹಿಂಸಿಸಲು ಉಪವಾಸ ಮಾಡಬೇಕಗಿಲ್ಲ. ತೀರ್ಥಯಾತ್ರೆ ಮಾಡಬೇಕಾಗಿಲ್ಲ. ಕಥಾ ಶ್ರವಣ ಮಾಡಿದರೆ ಸಾಕು. ॥182॥

ಅಕೃತ್ರಿಮವಾದ ಪ್ರೀತಿ ಮತ್ತು ಭಕ್ತಿಯ ತಿರುಳನ್ನು ಅರಿತಾಗ ಪರಮಾರ್ಥ ಸ್ಥಿತಿಯನ್ನು ಸುಲಭವಾಗಿ ಪಡೆಯಬಹುದು, ದ್ವೈತಭಾವವು ನಾಶವಾಗುತ್ತದೆ. ॥183॥

ನೀವು ಬೇರೆ ಯಾವುದೇ ರೀತಿಯ ಸಾಧನೆ ಮಾಡಬೇಕಿಲ್ಲ, ಸಾಯಿ ಸಚ್ಚರಿತೆಯ ಶ್ರವಣ ಮಾಡೋಣ. ಅದು ಎಲ್ಲಾ

ಸಂಚಿತ ಕರ್ಮಗಳನ್ನು, (ಹಿಂದಿನ ಮತ್ತು ಈಗಿನ ಜನ್ಮದ ಕರ್ಮಗಳು ಪುನರ್ಜನ್ಮಕ್ಕೆ ಕಾರಣವಾದುದು,) ನಾಶಮಾಡುತ್ತದೆ. ಇಲ್ಲದಿದ್ದರೆ ಅವು ಕ್ಷೀಣವಾಗುತ್ತವೆ. ॥184॥

ಒಬ್ಬ ಜಿಪುಣಾಗ್ರೇಸರನು ಎಲ್ಲಿದ್ದರೂ, ಅವನ ಮನಸ್ಸು ಹುದುಗಿರುವ ಸಂಪತ್ತಿನ ಮೇಲೆಯೇ ಹಗಲು ರಾತ್ರಿ ಇರುತ್ತದೆ. ಅದೇ ರೀತಿ ಸಾಯಿಯು ನಮ್ಮ ಮನಸ್ಸಿನಲ್ಲಿ ನೆಲೆಯಾಗಬೇಕು. ॥185॥


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಈ ಗ್ರಂಥ ರಚನೆಗೆ ನೀಡಿದ ಒಪ್ಪಿಗೆ" ಎಂಬ ಮೂರನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।




08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....