Saturday, October 10, 2020

04 ಸಾಯಿ ಸಮರ್ಥರ ಅವತರಣ/ Sai Baba's First Advent in Shirdi

 ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ಸಾಯಿ ಸಮರ್ಥರ ಅವತರಣ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.


 

ಹಿಂದಿನ ಎರಡು ಅಧ್ಯಾಯಗಳಲ್ಲಿ ಪ್ರಥಮ ಪ್ರಾರ್ಥನೆ ಮಾಡಲಾಯಿತು. ಅನಂತರ ಈ ಗ್ರಂಥ ರಚನೆಯ ಉದ್ದೇಶ ತಿಳಿಸಲಾಯಿತು ಮತ್ತು ಗ್ರಂಥರಚನಕಾರನ ಅರ್ಹತೆ, ಮುನ್ನುಡಿಯಲ್ಲಿ ಗ್ರಂಥ ರಚನೆಯ ಗುಣಲಕ್ಷಣ ಮತ್ತು ಇತರ ವಿವರಗಳನ್ನು ಚರ್ಚಿಸಲಾಯಿತು. 1

ಸಂತರು ಯಾವ ಕಾರಣಕ್ಕಾಗಿ ಭೂಮಿಯ ಮೇಲೆ ಅವತಾರವೆತ್ತುತ್ತಾರೆ ಮತ್ತು ಮಾನವರ ಪಾಪಕರ್ಮಗಳೇ ಅದಕ್ಕೆ ಕಾರಣವೆಂಬುದನ್ನೂ ಈಗ ಪ್ರಸ್ತಾಪಿಸುತ್ತೇನೆ. ॥2॥

ಓ ಶ್ರೋತೃ ಮಹಾಶಯರೇ! ನಾನು ನಿಮ್ಮ ಚರಣಧೂಲಿಯ ಒಂದು ಕಣ, ಗಮನವಿಟ್ಟು ಕೇಳಿರಿ ಎಂದು ನಿಮ್ಮನ್ನು ಯಾಚಿಸುತ್ತೇನೆ. ನನಗೇನೂ ಯಾಚಿಸಲು ನಾಚಿಕೆ ಇಲ್ಲ. 3

ಅದಾಗಿ ಒಬ್ಬ ಸಂತರ ಜೀವನ ಚರಿತ್ರೆಯು ಆಹ್ಲಾದಕರ. ಅದೂ ಅಲ್ಲದೆ ಸಾಯಿಕಥೆಯಂತೂ ಅಮೃತವೇ. ಸಾಯಿಯ ಅಸಂಖ್ಯಾತ ಭಕ್ತರು ಇದನ್ನು ಅನುಭವಿಸಿ ಆನಂದ ಭರಿತರಾಗುತ್ತಾರೆ. 4

ಬ್ರಾಹ್ಮಣರು ತಮ್ಮ ವರ್ಣಾಶ್ರಮ ಧರ್ಮವನ್ನು ಅಲಕ್ಷ್ಯ ಮಾಡುತ್ತಿದ್ದಾರೆ. ಶೂದ್ರರು ಬ್ರಾಹ್ಮಣರನ್ನು ಮೀರುತ್ತಿದ್ದಾರೆ. ಧಾರ್ಮಿಕ ಗುರುಗಳು ಅಗೌರವ ಹೊಂದುತ್ತಿದ್ದಾರೆ ಮತ್ತು ಜನರು ಇತರರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. 5

ಧರ್ಮ ಸೂಕ್ಷ್ಮಗಳನ್ನು ಯಾರೂ ಪಾಲಿಸುತ್ತಿಲ್ಲ. ಪ್ರತಿ ಮನೆಯಲ್ಲೂ ಎಲ್ಲರೂ ಸ್ವಾರ್ಥಪರ ಪಂಡಿತರೇ. ಒಬ್ಬರು ಮತ್ತೊಬ್ಬರನ್ನು ವಶೀಕರಣ ಮಾಡುತ್ತಿದ್ದಾರೆ ಮತ್ತು ಯಾರೂ ಇನ್ನೊಬ್ಬರ ಮಾತನ್ನು ಕೇಳುತ್ತಿಲ್ಲ. 6

ನಿಷಿದ್ಧವಾದ ಪಾನಿಯಗಳನ್ನು ಸೇವಿಸುತ್ತಿದ್ದಾರೆ. ಭಕ್ಷ್ಯಗಳನ್ನು ಭಕ್ಷಿಸುತ್ತಿದ್ದಾರೆ. ಆಚಾರ ವಿಚಾರಗಳನ್ನು ಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಮತ್ತು ಬ್ರಾಹ್ಮಣರು ಮದ್ಯ, ಮಾಂಸ ಇತ್ಯಾದಿಗಳನ್ನು ಬಹಿರಂಗವಾಗಿ ತಗೆದುಕೊಳ್ಳುತ್ತಿದ್ದಾರೆ. ॥7

ಧರ್ಮದ ಮುಖವಾಡ ಹಾಕಿ ಅತ್ಯಾಚಾರದಲ್ಲಿ ಮಗ್ನರಾಗುತ್ತಾರೆ ಮತ್ತು ಪರಸ್ಪರ ಮತದ್ವೇಷವನ್ನು ಹರಡುತ್ತಾರೆ. ಅದರಿಂದಾಗಿ ಜನರು ಬಳಲುತ್ತಾರೆ. 8

ಬ್ರಾಹ್ಮಣರು ಸಂಧ್ಯಾಸ್ನಾನ ಮಾಡದೆ ಕರ್ಮಗಳ ಅನುಷ್ಠಾನ ಮಾಡುತ್ತಾರೆ. ಯೋಗಿಗಳು ತಪ, ಧ್ಯಾನಗಳಿ೦ದ ವಿಮುಖರಾಗಿದ್ದಾರೆ. ಆಗಲೇ ಸ೦ತರ ಅವತಾರದ ಸಮಯ. 9

ಯಾವಾಗ ಜನರು ಸಮಾಜದಲ್ಲಿ ಆಸ್ತಿ, ಅಧಿಕಾರ, ವಂಶ ಮತ್ತು ಕುಟುಂಬದಲ್ಲೇ ಸಂತೋಷ ಇರುವುದೆಂದು ನಂಬುತ್ತಾರೋ, ಪರಮಾರ್ಥ ವಿಷಯಗಳಿಂದ ವಿಮುಖರಾಗುವರೋ, ಆಗಲೇ ಸಂತರು ಜನ್ಮತಾಳುತ್ತಾರೆ. 10

ಸಂಸಾರ, ಸಮಾಜ, ಹಣ, ಅಂತಸ್ತು, ಮಕ್ಕಳು, ಮರಿ ಅಂತ ಲೌಕಿಕ ವಿಚಾರಗಳನ್ನೇ ಮುಖ್ಯ ಎಂದು ನಂಬಿ ಆಧ್ಯಾತ್ಮಿಕ ಮೌಲ್ಯಗಳಿಂದ ಜನತೆ ವಿಮುಖರಾದಾಗ, ಸಂತರು ಅವತರಿಸುತ್ತಾರೆ.11

ಜನರು ಯಾವಾಗ ಆಯಸ್ಸು, ಆರೋಗ್ಯ, ಐಶ್ಚರ್ಯಗಳನ್ನು ಕಳೆದುಕೊಳ್ಳುತ್ತಾರೋ, ಯಾವಾಗ ಕಾಮದಾಟದಲ್ಲಿ ದಾರಿತಪ್ಪಿದವರಾಗುತ್ತಾರೋ, ಆಗ ಅವರು ಸಂಪೂರ್ಣವಾಗಿ ಮುಕ್ತಿ ಮಾರ್ಗದಿಂದ ದೂರವಾಗುತ್ತಾರೆ. ಆಗ ಸಂತರು ಜನ್ಮತಾಳುತ್ತಾರೆ. 12॥

ವೇದದಲ್ಲಿರುವ ವರ್ಣಾಶ್ರಮಧರ್ಮವನ್ನು ಕಾಪಾಡಲು, ಅಧರ್ಮವನ್ನು ನಾಶಮಾಡಲು, ದೀನರನ್ನು, (ಉದ್ಧಾರ ಮಾಡಲು) ಬಡವರು ಮತ್ತು ಅಶಕ್ತರನ್ನು ಸಂರಕ್ಷಣೆಮಾಡಲು ಸಂತರು ಅವತರಿಸುತ್ತಾರೆ. 13॥

ಸ೦ತರು ಸ್ವತಃ ಮುಕ್ತರು, ದೀನರನ್ನು ಉದ್ಧಾರಮಾಡಲು ಸದಾ ನಿರತರಾಗಿರುತ್ತಾರೆ. ಅವತಾರವಾಗುವುದು ಕೇವಲ ಪರಾರ್ಥಕ್ಕಾಗಿ. ಅವರಲ್ಲಿ ಸ್ವಲ್ಪವೂ ಸ್ಟಾರ್ಥವಿರುವುದಿಲ್ಲ. 14

ನಿವೃತ್ತಿ ಎಂಬ ಅಡಿಪಾಯವನ್ನು ಹಾಕಿ, ಸಂಸಾರವೆಂಬ ಗರ್ಭಗುಡಿಯ ಸುತ್ತಲೂ ಹಾಕುತ್ತಾರೆ. ಪರಮ ಶಿವ ಮಂದಿರವನ್ನು ಕಟ್ಟಿ ಭಕ್ತರನ್ನು ಸುಲಭವಾಗಿ ಉದ್ಧರಿಸುತ್ತಾರೆ. 15

ಧರ್ಮ ಕಾರ್ಯಕ್ಕಾಗಿ, ಧರ್ಮಜಾಗ್ಯತಿಗಾಗಿ ಬ೦ದ ಅವರು ತಮ್ಮ ಜೀವನದಲ್ಲಿ ಆ ಧ್ಯೇಯವನ್ನು ಸಾಧಿಸುತ್ತಾರೆ ಮತ್ತು ತಮ್ಮ ಕಾರ್ಯ ಮುಗಿದಕೂಡಲೇ ತಮ್ಮ ಪಾರ್ಥಿವ ಶರೀರವನ್ನು ತೊರೆದು ಬಿಡುತ್ತಾರೆ. ॥16॥

ಪ್ರತಿಯೊಂದು ಜೀವಾತ್ಮನೂ, ಪರಮಾತ್ಮನೇ ಇಡೀ ಪ್ರಪಂಚಕ್ಕೆ ಆನಂದದಾಯಕನು ಮತ್ತು ಪರಮಾತ್ಮನೇ ಗುರುವೂ ಸಹ, ಶಂಕರನು ಮಂಗಳಕರನು. ॥17॥

ಅವನು ಸರ್ವಶ್ರೇಷ್ಠ ಪ್ರೇಮ ಮಂದಿರ; ಅವನು ನಿತ್ಯ, ನಿರಂತರ, ಅಭೇದ್ಯ; ಅವನು ದೇಶ, ಕಾಲ, ವಸ್ತುಗಳಿಗೆ ಅತೀತ ಮತ್ತು ಪರಿಚ್ಛೇದನಾತೀತನೂ ಹೌದು. ॥18॥

ನಾಲ್ಕು ರೀತಿಯ ವಾಣಿಯು ಇರುತ್ತದೆ. ಅವುಗಳು ಪರ (ಕೇವಲ ಯೋಗಿಗಳು ತಪಸ್ಸಿನಿಂದ ಸಾಧಿಸಿದ ಓಂಕಾರ), ಪಶ್ಯಂತಿ (ವಾಣಿಯು ತನ್ನ ಎರಡನೆಯ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟಿದೆ), ಮಧ್ಯಮ (ವಾಣಿಯು ಮೂರನೆಯ ಸ್ಥಿತಿಯಲ್ಲಿ ಅದು ಗಂಟಲಿನಲ್ಲಿರುವ ಶ್ವಾಸನಾಳದಲ್ಲಿದೆ), ವೈಖರಿ (ಸ್ಪಷ್ಟೋಚ್ಚಾರಣೆಯ ಮಾತುಗಳು) ಈ ನಾಲ್ಕು ವಾಣಿಗಳೂ ಅವನನ್ನು ವರ್ಣಿಸಲಾರದೆ ಹೋಗಿವೆ. ಜ್ಞಾನವೂ ವೇದ ಸಾರಗಳೂ ತಮ್ಮ ಸೋಲನ್ನು ಒಪ್ಪಿಕೊಂಡಿವೆ ಮತ್ತು ತಿಳಿಸುತ್ತವೆ ನೇತಿ; ನೇತಿ; ಇದು ಅಲ್ಲ, ಇದು ಅಲ್ಲ ಎಂದು ಮಾತ್ರ ॥19॥

ಷಟ್‌ ದರ್ಶನಗಳು ಮತ್ತು ಅವುಗಳ ಆರು ಶಾಖೆಗಳೂ ಅವನನ್ನು ವಿವರಿಸಲು ಆಗದೆ ದೂರ ಸರಿದಿವೆ. ಪುರಾಣಗಳು ಮತ್ತು ಕೀರ್ತನೆಗಳು ಸಹ ದಣಿದಿವೆ. ಕಾಯಾ, ವಾಚಾ, ಮನಸಾ ಪ್ರಾರ್ಥನೆ ಮಾಡುವುದೊಂದೇ ಅವನನ್ನು ಅರ್ಥ ಮಾಡಿಕೊಳ್ಳಲು ಇರುವ ಮಾರ್ಗ. ॥20॥

ಈ ರೀತಿ ಇರುವುದು ಸಂತ ಸಾಯಿ ಸಮರ್ಥರ ಚರಿತ್ರೆ. ಅವರ ಲೀಲೆಗಳು ಅತ್ಯಂತ ವಿಚಿತ್ರವಾದುವು. ಅವರ ಪವಿತ್ರ ಕತೆಯನ್ನು ಕೇಳಿ ನಮ್ಮ ಕಿವಿಗಳೇಕೆ ಪಾವನವಾಗುವುದಿಲ್ಲ? ।21

ಸಕಲ ಇಂದ್ರಿಯಗಳಿಗೂ ಚಾಲಕರು ಅವರೇ. ಈ ಗ್ರಂಥ ರಚನೆ ಮಾಡಲು ಬುದ್ಧಿಯನ್ನು ಕೊಡುವವರೂ, ಅನಾಯಾಸವಾಗಿ ಕ್ರಮಬದ್ಧವಾಗಿ ಚರಿತ್ರೆಯನ್ನು ಬರೆಯಲು ಪ್ರೋತ್ಸಾಹ ನೀಡುವವರೂ ಅವರೇ. ॥22॥

ಅವರು ಸರ್ವಾಂತರ್ಯಾಮಿ, ಅವರು ಒಳಗೂ ಹೊರಗೂ ವಾಸಿಸುವರು. ಅವರು ಎಲ್ಲೆಲ್ಲೂ ಇರುವವರು. ಹಾಗಿರಲು ನಾನು ಅನವಶ್ಯಕವಾಗಿ ಏಕೆ ಚಿಂತಿಸಲಿ? ಮತ್ತು ಯಾವುದಕ್ಕಾಗಿ ಚಿಂತಿಸಲಿ? ॥23॥

ಅವರ ಒಂದೊಂದು ಗುಣಗಳನ್ನು ನೆನಸಿಕೊ೦ಡಾಗಲೂ ನನ್ನ ಮನಸ್ಸು ಬಾಗುತ್ತದೆ. ಹಾಗಿರುವಾಗ ಮಾತಿನಲ್ಲಿ ಅವುಗಳನ್ನು ವರ್ಣಿಸಲು ಹೇಗೆ ಸಾಧ್ಯ? ಅವರ ಬಗ್ಗೆ ಮೌನವಾಗಿರುವುದೇ ಉತ್ತಮ. ॥24॥ 

ನಾಸಿಕವು ಹೂವಿನ ಪರಿಮಳವನ್ನು ಆಘ್ರಾಣಿಸುತ್ತದೆ. ಚರ್ಮವು ಸ್ಪರ್ಶಜ್ಞಾನದಿಂದ ಬಿಸಿ ಅಥವಾ ತಣ್ಣಗಿರುವುದನ್ನು ಅರಿಯುತ್ತದೆ. ಕಣ್ಣುಗಳು ಸೌಂದರ್ಯವನ್ನು ಅನುಭವಿಸುತ್ತವೆ. ಈ ರೀತಿ ಇಂದ್ರಿಯಗಳು ಸುಖಪಡುತ್ತವೆ. ॥25॥

ನಾಲಿಗೆಗೆ ಸಕ್ಕರೆಯ ಸಿಹಿಯು ತಿಳಿಯುತ್ತದೆ. ಆದರೆ ಅದನ್ನು ವಿವರಿಸಲು ಅದಕ್ಕೆ ಸಾಧ್ಯವಿಲ್ಲ. ಅದೇ ರೀತಿ ನಾನು ಸಾಯಿಯ ಗುಣಗಾನ ಮಡಲು ಅಸಮರ್ಥನಾಗಿದ್ದೇನೆ. ॥26॥

ಸದ್ಗುರುವು ನಿರ್ಧಾರ ಮಾಡಿದಾಗ, ಅವರು ತಾವೇ ದೈವೀಪ್ರೇರಣೆಯನ್ನು ದಯಪಾಲಿಸುತ್ತಾರೆ. ಅವರು ವಿವರಣೆಯನ್ನು ನೀಡಲಾಗದ ಪದಗಳ ಅರ್ಥಕ್ಕಾಗಿ ಆಯ್ದ ವ್ಯಕ್ತಿಗಳಿಂದ ಮಾಡಿಸುತ್ತಾರೆ. 27

ಇದು ಕೇವಲ ಶಿಷ್ಟಾಚಾರವಲ್ಲ. ಈ ಮಾತುಗಳು ಕೇವಲ ಉಪಚಾರಕ್ಕಾಗಿ ಅಲ್ಲ. ಇವುಗಳು ಮನಃಪೂರ್ವಕವಾಗಿ ಹೊರಬಂದ ಸತ್ಯವಾದ ಉದ್ಗಾರಗಳು. ನಾನು ತಾವೆಲ್ಲರೂ ಆದರದಿಂದ ನೀಡುವ ಗಮನಕ್ಕಾಗಿ ಪ್ರಾರ್ಥಿಸುತ್ತೇನೆ. 28

ಗಾಣಗಾಪುರ, ನರಸಿಂಹವಾಡಿ, ಔದುಂಬರ ಮತ್ತು ಬಿಲ್ಲವಾಡಿ ಇವುಗಳ ರೀತಿಯಲ್ಲಿ, ಹಾಗೆಯೇ ಪವಿತ್ರ ಗೋದಾವರಿ ನದಿ ತೀರದಲ್ಲಿರುವ ಶಿರಡಿ ಕ್ಷೇತ್ರವೂ ಪ್ರಸಿದ್ಧವಾಗಿದೆ. 29

ಗೋದಾವರಿ ನದಿಯ ಪವಿತ್ರ ಜಲ, ಪರಿಶುದ್ಧವಾದ ತಂಗಾಳಿ, ಇವೆಲ್ಲವೂ ಭವ ಸಾಗರದ ಅಹಂಕಾರವನ್ನು ನಾತಮಾಡುತ್ತವೆ. 30॥

ಗೋದಾವರಿ ನದಿಯ ಪಾವಿತ್ರ್ಯವು ಸಕಲ ಜಗತ್ತಿನಲ್ಲಿ ಪ್ರಖ್ಯಾತಾಗಿದೆ. ಅವಳ ಮಡಿಲು ಒಬ್ಬರಿಗಿ೦ತ ಮತ್ತೊಬ್ಬ ವಹಾನ್‌ ಸಂತರು ನೆಲೆಸಿದ ಭೂಮಿಯಾಗಿದೆ. ॥31

ಗೋಮತೀ ನದಿಯ ತೀರದಲ್ಲಿ ಅನೇಕ ಪವಿತ್ರ ತೀರ್ಥಕ್ಷೇತ್ರಗಳಿವೆ. ಅವಳ ನೀರು ಪಾಪನಾಶಕ, ಆ ನೀರಿನ ಪಾನ ಹಾಗೂ ಸ್ನಾನಗಳಿ೦ದ ಭವರೋಗಗಳೆಲ್ಲವೂ ನಿವಾರಿಸಲ್ಪಡುತ್ತದೆ. ಹೀಗೆಂದು ಪುರಾಣಗಳು ವರ್ಣಸಿವೆ. 32

ಆ ಗೋದಾವರಿಯು ಅಹಮದ್‌ ನಗರ ಜಿಲ್ಲೆಯ ಕೋಪರಗಾ೦ವ ತಾಲೂಕಿನ ಕೋಪರಗಾಂವನ ಹತ್ತಿರವೇ ಇರುವ ಶಿರಡಿಗೆ ಮಾರ್ಗದರ್ಶನ ಮಾಡುತ್ತದೆ. 33

ಗೋದಾವರಿಯ ಮತ್ತೊಂದು ತೀರದಲ್ಲಿ ಆರು ಮೈಲು ದೂರದಲ್ಲಿ ಟಾಂಗಾವು ನೀಂಮ್‌ಗಾವ್‌ ತಲಪುತ್ತಲೇ ಶಿರಡಿಯ ಕ್ಷೇತ್ರವು ದೃಷ್ಟಿಗೆ ಬೀಳುತ್ತದೆ. 34

ನಿವೃತ್ತಿದೇವ, ಜ್ಞಾನದೇವ, ಮುಕ್ತಾಬಾಯಿ, ನಾಮದೇವ, ಜನೀಬಾಯಿ, ಗೋರಕುಂಬಾರ, ಗೋರಾಯಿ, ತುಕಾರಾಮ, ನರಹರಿ, ನರಸೀಬಾಯಿಮೆಹ್ತ, ಸಾಜನ್‌ ಕಸಾಯಿ ಮತ್ತು ಸಾವತಾ ಮಾಲಿ ॥35॥

ಇವರೆಲ್ಲರೂ ಪೂರ್ಣಕಾಲದ ಸಂತರು. ಈ ಕಾಲದಲ್ಲಿಯೂ ಅಂತಹ ಅನೇಕ ಜನರಿದ್ದಾರೆ. ಇಡೀ ವಿಶ್ವ ಒಂದೇ ಕುಟುಂಬವೆಂದು ಭಾವಿಸಿದವರು ಮತ್ತು ದೀನರಿಗೆ, ದುಃಖಿಗಳಿಗೆ, ಆಸರೆ ನೀಡುವವರು. ॥36॥

ರಾಮದಾಸರೆಂಬ ಸಂತಶ್ರೇಷ್ಠರು ಗೋದಾವರಿ ತೀರವನ್ನು ತೊರೆದು ಕೃಷ್ಣಾನದಿಯ ದಡದಲ್ಲಿ ಜಗತ್ತಿನ ಉದ್ಧಾರಕ್ಕಾಗಿ ಪ್ರಕಟಗೊ೦ಡರು. 37॥

ಅದೇ ರೀತಿಯಲ್ಲಿ ಯೋಗಿಶ್ರೇಷ್ಠ ಸಾಯಿಯೂ ಶಿರಡಿಯ ಮಹಾ ಪುಣ್ಯವಶಾತ್‌ ಜಗತ್ತಿನ ಉದ್ಧಾರಕ್ಕಾಗಿ ಗೋದಾವರಿಯ ತಟದಲ್ಲಿ ಅವತರಿಸಿದರು. 38॥

'ಪರಸ'ಮಣಿಯು ಕಬ್ಬಿಣವನ್ನು ಚಿನ್ನವನ್ನಾಗಿ ಮಾಡುತ್ತದೆ. ಅದೇ ರೀತಿ ಸಂತರೆಲ್ಲರೂ ಸಹ ಪರಸು ಮಣಿಗಳೇ. ಸ೦ತರ ಕೆಲಸಗಳೆಲ್ಲವೂ ಅಲೌಕಿಕವೆ. ತಮ್ಮ ಭಕ್ತರಿಗೆ ತಮ್ಮ ನಿಜ ಸ್ವರೂಪವನ್ನು ತೋರಿಸುತ್ತಾರೆ. 39॥

ಸ೦ತರು ಯಾವಾಗಲೂ ಭೇದ ಭಾವವನ್ನು ದೂರ ಮಾಡಿ ಪ್ರತಿಯೊಂದರಲ್ಲೂ ಇಡೀ ವಿಶ್ವವನ್ನೇ ಬ್ರಹ್ಮಸ್ವರೂಪವೆಂದು ತನ್ನಲ್ಲೂ ಸುತ್ತಲಿನ ಜಗತ್ತಿನಲ್ಲೂ ಇರುವುದು ಒಂದೇ ಎಂದು ಅರಿತವರು. ॥40॥ 

ಈ ರೀತಿ ಯಾವಾಗ ಇಡೀ ವಿಶ್ವವೇ ತನ್ನ ಆತ್ಮಸ್ಪರೂಪ ಎಂಬ ಅರಿವು ಉಂಟಾಗುತ್ತದೋ ಆಗ ಆ ಆನ೦ದವನ್ನು ಯಾವ ರೀತಿ ವರ್ಣಿಸಬಹುದು? ಅದು ಪರಮಸತ್ಯದ ಸಾಕ್ಷಾತ್ಕಾರವನ್ನು ಅನುಭವಿಸುವುದು. 41

ಈ ರೀತಿ ಏಕತ್ಟವನ್ನು ಅನುಭವಿಸಿದನಂತರ ಯಾರ ಬಗ್ಗೆಯಾದರೂ ದ್ವೇಷ ಅಥವಾ ಭಯ ಏಕಿರಬೇಕು? ನೀವು ಯಾರ ಆಶ್ರಯವನ್ನೂ ಪಡೆಯಬೇಕಿಲ್ಲ. 42

ಮಂಗಳವಾಡೆಯ ದಾಮಾಜಿ, ಸಜ್ಜನಗಡದ ರಾಮದಾಸ, ವಾಡಿಯ ನರಸಿಂಹಸರಸ್ವತಿ, ಅದೇ ರೀತಿ ಸಾಯಿನಾಥರು ಶಿರಡಿಯಲ್ಲಿದ್ದರು. 43॥

ಈ ಸಂಸಾರದಲ್ಲಿ ಜೀವಿಸುವುದು ಅತಿಕಷ್ಟಕರವಾದದ್ದು. ಅಂತಹುದನ್ನು ಗೆದ್ದಿರುವವರು. ಶಾಂತಿಯೇ ಅವರ ಆಭರಣ ಮತ್ತು ಅವರು ಗುಣನಿಧಿಯು. 44

ಅವರು ವೈಷ್ಣವರ ವೈಕುಂಠಧಾಮ, ಕರುಣಾಳುಗಳಲ್ಲಿ ದಯಾಳು, ಪರಮಾರ್ಥ ಜ್ಞಾನವನ್ನು ಕರುಣಿಸುವವರು, ಕರ್ಣನ ಅಪರಾವತಾರವೂ ಹೌದು. ಸಾಯಿಯು ಸತ್ಯಸ್ತರೂಪದ ಸಾರವೂ ಹೌದು. 45

ನಶ್ಚರವಸ್ತುವಿನ ಮೇಲೆ ಯಾವುದೇ ಅಭಿಲಾಷೆ ಇಲ್ಲದೆ, ಆತ್ಮಸ್ಪರೂಪದಲ್ಲೇ ತಲ್ಲೀನರಾಗಿ, ಪರಮಾರ್ಥದ ಪ್ರಾಪ್ತಿಯ ಲಕ್ಷ್ಯವೊಂದೇ ಉಳ್ಳವರು. ಅಂತಹವರು ಆ ಸ್ಥಿತಿಯನ್ನು ನಿಜವಾಗಿಯೂ ವರ್ಣಿಸಲಾರರು. 46॥

ಲೌಕಿಕ ಸಂಪತ್ತಿಗೆ ಯಾವುದೇ ಬಂಧನವಿಲ್ಲದೆ ಅಥವಾ ಅದಿಲ್ಲದೆ ಇರುವಾಗಲೂ ಪರಲೋಕದ ಸುಖದುಃಖಗಳಿಂದ ವಿಚಲಿತನಾಗದೆ (ಮೃತನಾದಮೇಲೆ ಉಂಟಾಗುವ ಅನುಭವ);ಅವನ ಹೃದಯವು ಕನ್ನಡಿಯಷ್ಟು ಪರಿಶುದ್ಧವಾಗಿರುತ್ತದೆ ಹಾಗೂ ವಾಣಿಯು ಅಮೃತವರ್ಷ ನೀಡುತ್ತಿರುತ್ತದೆ. 47॥

ರಾಜ, ದರಿದ್ರ ಬಡವ, ಅಬಲ ಎಲ್ಲರೂ ಅವರ ದೃಷ್ಟಿಯಲ್ಲಿ ಸರಿಸಮಾನರು. ಅವರಾದರೋ ಮಾನಾಪಮಾನಗಳನ್ನು ಮೀರಿದವರು. ಅವರು ಪ್ರತಿಯೊಂದು ಜೀವಿಯಲ್ಲಿಯೂ ಪರಮಾತ್ಮನನ್ನು ಕಾಣುತ್ತಿದ್ದರು. 48

ಅವರು ಎಲ್ಲ ಜನರೊಡನೆಯೂ ಸಾಧಾರಣವಾಗಿಯೇ ವ್ಯವಹರಿಸುತ್ತಿದ್ದರು. ನೃತ್ಯವನ್ನು ವೀಕ್ಷಿಸುತ್ತಿದ್ದರು. ಮುರಳಿನಾದವನ್ನು ಸವಿಯುತ್ತಿದ್ದರು. ಹಾಡುಗಳನ್ನು, ಗಜಲ್‌ಗಳನ್ನು ಆಲಿಸುತ್ತ ಅವಕ್ಕೆ ಆನಂದದಿಂದ ತಲೆದೂಗುತ್ತಿದ್ದರು. ಆದರೆ ಅವರ ಅಂತರಂಗದ ಸಮಾಧಿಸ್ಥಿತಿಯು ನಿಶ್ಚಲವಾಗಿರುತ್ತಿತ್ತು. 49॥

'ಅಲ್ಲಾ'ನ ಹೆಸರು ಅವರ ಹೃದಯದಲ್ಲಿ ಅಚ್ಚಾಗಿತ್ತು. ಅವರು ಜಗವೆಲ್ಲ ಮಲಗಿರಲು ಎಚ್ಚರವಾಗಿದ್ದರು. ಮತ್ತು ಜಗತ್ತು ಎಚ್ಚರವಾಗಿದ್ದಾಗ ತಾನು ಮಲಗುತ್ತಿದ್ದರು. ಅವರ ಸ್ವಭಾವ ಸಮುದ್ರದ ಅ೦ತರಾಳವು ಶಾಂತವಾಗಿರುವಂತೆ ಇರುತ್ತಿತ್ತು. 50

ಅವರು ಯಾವ ಆಶ್ರಮ‌ ಅಥವಾ ಜೀವನದ ಹಂತದಲ್ಲಿದ್ದಾರೆ ಎಂಬುದನ್ನು ನಿರ್ಧರಿಸುವುದು ಬಹಳಷ್ಟು ಕಷ್ಟ ಅಥವಾ ಅವರ ಕಾರ್ಯಗಳ ವ್ಯವಹಾರಗಳ ಉದ್ದೇಶವನ್ನು ತಿಳಿಯುವುದೂ ಕಷ್ಟ ಬಹುಮಟ್ಟಿಗೆ ಅವರು ತಮ್ಮ ಜಾಗದಿಂದ ಕದಲದಿದ್ದರೂ ಅವರಿಗೆ ಎಲ್ಲಾ ವ್ಯವಹಾರಗಳೂ ತಿಳಿದಿರುತ್ತಿತ್ತು.51

ಹೊರನೋಟಕ್ಕೆ ದರ್ಬಾರ್‌ ರೀತಿಯ ವೈಭವ ಇತ್ತು. ಅವರು ಸಾವಿರಾರು ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಇದು ಒಂದು ನಿತ್ಯ ಪ್ರದರ್ಶನವಾಗಿತ್ತು. ಆದರೆ ಅವರು ಅಂತರಂಗದಲ್ಲಿ ಅಖಂಡವಾದ ಮೌನದಲ್ಲಿ ನೆಲಸಿದ್ದರು. 52

ಅವರು ಗೋಡೆ ಒರಗಿಕೊಂಡು ನಿಂತಿರುತ್ತಿದ್ದರು. ಬೆಳಗಿನಹೊತ್ತು ಓಡಾಡುತ್ತಿದ್ದರು. ಮಧ್ಯಾಹ್ನ ಲೇಂಡಿಗೆ ಅಥವಾ ಚಾವಡಿಗೆ ಹೋಗುತ್ತಿದ್ದರು. ಆದರೆ ಅವರ ಚಿತ್ತಮಾತ್ರ ಕದಡದೆ ಶಾಂತವಾಗಿರುತ್ತಿತ್ತು. 53

ನಾನು ಯಾವ ಜನ್ಮದಲ್ಲಿ ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಯಾವ ರೀತಿಯ ತಪಸ್ಸು ಮಾಡಿದ್ದೇನೆಂದು ನನಗೆ ತಿಳಿದಿಲ್ಲ. ಅದರ ಫಲವಾಗಿ ಈಗ ಸಾಯಿಯು ನನ್ನನ್ನು ತಮ್ಮ ಆಶ್ರಯಕ್ಕೆ ತೆಗೆದುಕೊಂಡಿದ್ದಾರೆ. ॥54॥

ನನ್ನ ತಪಸ್ಸಿನ ಫಲವೆಂದು ಹೇಳಬೇಕೇ? ಆದರೆ, ಇಲ್ಲ. ನಾನು ಪಾಪಿಯಾಗಿ ಹುಟ್ಟಿದ್ದೇನೆ. ಸಾಯಿಯೇ ದಯಾಳು, ಪ್ರೇಮಮಯಿ, ನಿಶ್ಚಲವಾಗಿ ಇದು ಅವರ ಕೃಪೆ. ॥55॥

'ಸಿದ್ಧ'ರಾಗಿ ಹುಟ್ಟಿದ್ದರೂ ಅವರ ರೀತಿಗಳು, 'ಸಾಧಕ'ರಂತೆ ಇದ್ದುವು. ಅವರಿಗೆ ಯಾವದೇ ಅಹಂಕಾರವಿರಲಿಲ್ಲ. ಕರುಣಾಮಯಿಯಾಗಿದ್ದರು. ಮತ್ತು ಎಲ್ಲರನ್ನೂ ಸಂತೋಷಪಡಿಸುತ್ತಿದ್ದರು. 56

ಸಂತ ಏಕನಾಥರು ಪೈಠಾಣ ಮತ್ತು ಜ್ಞಾನದೇವರು ಆಳ೦ದಿಯನ್ನು ಪ್ರಖ್ಯಾತಗೊಳಿಸಿದಂತೆ ಸಾಯಿಯು ಶಿರಡಿಯನ್ನು ಮಹಿಮಾಸಂಪನ್ನವಾಗಿ ಮಾಡಿದರು. 57

ಶಿರಡಿಯ ಹುಲ್ಲು, ಶಿಲೆಗಳು ಧನ್ಯ, ಅನಾಯಾಸವಾಗಿ ಪ್ರತಿನಿತ್ಯ ಅವು ಬಾಬಾರವರ ಚರಣಗಳನ್ನು ಮುತ್ತಿಡುತ್ತಿದ್ದವು. ಬಾಬಾರವರ ಚರಣಧೂಲಿಯನ್ನು ಮಸ್ತಕದಲ್ಲಿ ಧರಿಸುತ್ತಿದ್ದವು. 58

ನಮಗೆ ಶಿರಡಿಯೇ ಪಂಡರಾಷುರ, ಶಿರಡಿಯೇ ಜಗನ್ನಾಥಪುರಿ, ದ್ವಾರಕ, ಗಯ, ಕಾಶಿಯ ವಿಶ್ವೇಶ್ವರ (ದೇವಾಲಯ) ಶಿರಡಿಯೇ ನಮ್ಮ ರಾಮೇಶ್ವರ. 59

ಶಿರಡಿಯೇ ನಮ್ಮ ಬದರಿ, ಕೇದಾರ, ಶಿರಡಿಯೇ ನಾಸಿಕ, ತ್ರಯಂಬಕೇಶ್ವರ, ಶಿರಡಿಯೇ ಉಜ್ಜಯಿನಿ ಮಹಾಕಾಳೇಶ್ವರ, ಶಿರಡಿಯೇ ಮಹಾಬಲೇಶ್ವರ ಮತ್ತು ಗೋಕರ್ಣ. ॥60॥

ಶಿರಡಿಯಲ್ಲಿ ಸಾಯಿಯ ಸಮಾಗಮವೇ ಆಗಮ (ವೇದ) ಮತ್ತು ನಿಗಮ (ವೇದಾನಂತರದ ಶೈವ, ಶಾಕ್ತ ಮತ್ತು ವೈಷ್ಣವ ಶಾಸ್ತ್ರಗಳ) ಅಧ್ಯಯನ ಮಾಡಿದಂತೆ. ಮತ್ತು ಎಲ್ಲಾ ನೋವಿಗೂ ಗುಣಪಡಿಸುವ ಸ್ಪರ್ಶ. ಪರಮಾರ್ಥವನ್ನು ಸಾಧಿಸಲು ಅತ್ಯಂತ ಸುಗಮ ಮಾರ್ಗ. 61

ಸಮರ್ಥ ಸಾಯಿಯ ದರ್ಶನವೇ ನಮ್ಮ ಯೋಗಸಾಧನ. ಅವರ ಜೊತೆಯ ಸಂಭಾಷಣೆಯಿಂದಲೇ ನಮ್ಮ ಪಾಪಗಳೆಲ್ಲವೂ ತೊಳೆದುಹೋಗುತ್ತವೆ. 62

ಅವರ ಪಾದನಮಸ್ಕಾರ ಮಾಡುವುದು ನಾವು ತ್ರಿವೇಣಿ (ಗಂಗಾ, ಯಮುನಾ, ಸರಸ್ಪತಿ) ಸಂಗಮದಲ್ಲಿ ಸ್ನಾನ ಮಾಡಿದಂತೆ. ಮತ್ತು ಅವರ ಚರಣ ತೀರ್ಥವನ್ನು ಸೇವಿಸುವುದರಿಂದ ನಮ್ಮ ವಾಸನೆಗಳು ನಿರ್ಮೂಲನವಾಗುತ್ತವೆ. 63॥

ಅವರ ಆಜ್ಞೆಯು ನಮಗೆ ಘೋಷವು. ಅವರ ಉದಿ ಮತ್ತು ಪ್ರಸಾದಗಳು ನಮ್ಮನ್ನು ನಿರ್ಮಲಗೊಳಿಸುವುವು. ಮತ್ತು ಎಲ್ಲ ರೀತಿಯಲ್ಲೂ ಪುಣ್ಯ ಪಾವನವಾದವು. 64

ಸಾಯಿಯೇ ನಮಗೆ ಪರಬ್ರಹ್ಮ. ಸಾಯಿಯೇ ನಮ್ಮ ಶ್ರೇಷ್ಠವಾದ ಪರಮಾರ್ಥ ಮತ್ತು ಸಾಯಿಯೇ ಶ್ರೀಕೃಷ್ಣ, ಶ್ರೀರಾಮ ಮತ್ತು ಸಾಯಿಯೇ ನಮಗೆ ಆಶ್ರಯ ಮತ್ತು ಆರಾಮ. ॥65॥

ಸಾಯಿಯು ಸ್ವತಃ ಧ್ವಂದ್ವಾತೀತ. ನಿರಂತರ ತನ್ನ ಸ್ಪಸ್ವರೂಪದಲ್ಲಿ ನೆಲೆಸಿರುವವರು ಮತ್ತು ಶಾಶ್ಚತವಾಗಿ ಬ್ರಹ್ಮನಲ್ಲಿ ಸ್ಥಿತವಾದವರು. ॥66॥

ಶಿರಡಿಯು ಕೇವಲ ಕೇಂದ್ರಸ್ಥಾನ. ಬಾಬಾರವರ ಕ್ಷೇತ್ರ ಅತ್ಯಂತ ವಿಸ್ತಾರವಾಗಿದೆ. ಪಂಜಾಬ್‌, ಕಲಕತ್ತ, ಸಿಂಧುಸ್ಥಾನ, ಗುಜರಾತ, ದಕ್ಷಿಣಕನ್ನಡ ಇವೆಲ್ಲವನ್ನೂ ವ್ಯಾಪಿಸಿದೆ. 67

ಶಿರಡಿಯಲ್ಲಿರುವ ಸಾಯಿಯ ಸಮಾಧಿಯು ಎಲ್ಲಾ ಸಂತರು ಸೇರುವ ಸ್ಥಳವಾಗಿದೆ. ಅದರ ಕಡೆಗೆ ಇಡುವ ಪ್ರತಿಯಾಂದು ಹೆಜ್ಜೆಯೂ ಒಂದೊಂದು ಭವಬಂಧನವನ್ನು ಕಳಚುತ್ತದೆ. 68

ಕೇವಲ ಸಮಾಧಿ ದರ್ಶನದಿಂದಲೇ ಪ್ರತಿಯೊಬ್ಬರ ಜೀವನ ಸಾರ್ಥಕವಾಗುತ್ತದೆ. ಹಾಗಿರುವಾಗ ಅವರ ಸೇವೆಯಲ್ಲಿ ಜೀವನ ಕಳೆದವರ ಭಾಗ್ಯವನ್ನು ಹೇಗೆ ವರ್ಣಿಸಲಿ? ॥69॥

ಮಸೀದಿ ಮತ್ತು ವಾಡಾಗಳ ಮೇಲೆ ಸುಂದರವಾದ ಬಾವುಟಗಳು ಸಾಲುಸಾಲಾಗಿ ಆಕಾಶದಲ್ಲಿ ಎತ್ತರವಾಗಿ ರಾರಾಜಿಸುತ್ತಿವೆ. ಅವು ತಮ್ಮ ಭಕ್ತರಿಗೆ ಮಾರ್ಗದರ್ಶಕ ಬೆಳಕಾಗಿವೆ. 70॥

ಬಾಬಾರವರು ಪ್ರಸಿದ್ಧ ಸಂತರು. ಅವರ ಕೀರ್ತಿ ಹಳ್ಳಿಹಳ್ಳಿಗೆ ಹರಡಿದೆ. ಕೆಲವರು ತಮ್ಮ ಇಷ್ಟಾರ್ಥಗಳು ನೆರವೇರಿದುದಕ್ಕೆ ಅವರಿಗೆ ಯಣಿಯಾಗಿದ್ದಾರೆ. ಕೆಲವು ಜನರು ಕೇವಲ ದರ್ಶನಮಾತ್ರದಿಂದ ಶಾಂತಿ ಪಡೆಯುತ್ತಾರೆ. 71

ಯಾರೊಬ್ಬನ ಮನದಾಳದ ಆಸೆಗಳೇನೇ ಇರಲಿ, ಶುದ್ಧ ಬುದ್ಧಿ ಅಥವಾ ಕುತ್ಸಿತ ಬುದ್ಧಿಯದಾಗಲಿ, ಬಾಬಾರವರ ದರ್ಶನ ಮಾತ್ರದಿಂದಲೇ ಮನಸ್ಸು ಶಾಂತವಾಗುತ್ತದೆ. ಜನರು ಅದರಿಂದ ಅಂತರಂಗದಲ್ಲೇ ವಿಸ್ಮಿತರಾಗುವರು. 72

ಪಂಡರಾಪುರದ ವಿಠಲ ಮತ್ತು ರಖುಮಾಯಿಯವರ ಅತ್ಯದ್ಭುತ ದರ್ಶನದಿಂದ ಆಗುವ ಅನುಭವವೇ ಶಿರಡಿಯಲ್ಲಿ ಬಾಬಾರವರ ದರ್ಶನದಿಂದಲೂ ದೊರೆಯುತ್ತದೆ. ॥73॥

ಯಾರಾದರೂ ಇದನ್ನು ಅತಿಶಯೋಕ್ತಿ ಎಂದು ಭಾವಿಸಿದರೆ ಗೌಳಿ ಬುವಾನ ಮಾತುಗಳನ್ನು ಕೇಳಿರಿ. ಅವನು ವಿಠಲನ ಪರಮಭಕ್ತನು. ಸಂದೇಹಗಳು ನಿಶ್ಚಯವಾಗಿ ದೂರವಾಗುವುದು. 74

ಅವನು ಪಂಡರಾಪುರಕ್ಕೆ ನಿಯತಕಾಲಿಕ ಯಾತ್ರಿಕ. ಅವನು ಪ್ರತಿವರ್ಷವೂ ಪಂಡರಾಷುರಕ್ಕೆ ಯಾತ್ರೆ ಹೋಗುತ್ತಿದ್ದನು. ಅವನು ಶಿರಡಿಗೂ ವರ್ಷಕ್ಕೊಮ್ಮೆ ಬರುತ್ತಿದ್ದನು. ಬಾಬಾರವರನ್ನು ಕಂಡರೆ ಬಹಳ ಪ್ರೀತಿ. 75॥

ಬುವಾನು ಒಂದು ಕತ್ತೆ ಮತ್ತು ಒಬ್ಬ ಶಿಷ್ಯನ ಜೊತೆ ಇದ್ದನು. ನಿರಂತರ ರಾಮ, ಕೃಷ್ಣ, ಹರಿ ಎಂದು ಭಜಿಸುತ್ತಿದ್ದನು. 76॥

ಅವನಿಗೆ 94 ವರ್ಷ ವಯಸ್ಸು ಅವನು ಚಾತುರ್ಮಾಸವನ್ನು ಗೋದಾವರಿ ತೀರದಲ್ಲಿ ಮಾಡುತ್ತಿದ್ದನು. ಸುಮಾರು 8 ತಿಂಗಳುಗಳ ಕಾಲ ಪಂಡರಾಷುರದಲ್ಲಿ ವಾಸಮಾಡುತ್ತಿದ್ದನು. ಹಾಗೆಯೇ ಅವನು ಬಾಬಾರವರನ್ನು ಪ್ರತಿವರ್ಷ ದರ್ಶಿಸುತ್ತಿದ್ದನು. 77

ಬಾಬಾರವರನ್ನು ನಮ್ರತೆಯಿಂದ ನೋಡುತ್ತ ಹೇಳುತ್ತಿದ್ದನು - "ಇದು ಪಂಡರೀನಾಥನ ಅವತಾರ, ಅನಾಥರಕ್ಷಕ, ದಯಾಮಯ". ॥78॥

ಕೇವಲ ರೇಶ್ಮೆಯ ಅಂಚಿನ ಧೋತಿಯನ್ನು ತೊಟ್ಟಮಾತ್ರಕ್ಕೆ ಅವರು ಸನ್ಯಾಸಿಯಾಗುತ್ತಾರೆಯೇ? ಸಂತನಾಗಬೇಕಾದರೆ ಕಠಿಣ ತಪಸ್ಸು ಮಾಡಬೇಕು. ಎಷ್ಟೆಂದರೆ ಮೂಳೆ ಸವೆಯಬೇಕು ಮತ್ತು ರಕ್ತ ನೀರಾಗಬೇಕು. 79

ಯಾರಾದರೂ ಪ್ರಯತ್ನ ಮಾಡದೆ ದೈವತ್ಚವನ್ನು ಪಡೆಯಲು ಸಾಧ್ಯವೇ? ಇದು ಪಂಡರೀನಾಥನ ಅವತರ, ಈ ಪ್ರಪಂಚವು ಅಜ್ಞಾನದಿಂದ ತುಂಬಿದೆ. ಅದನ್ನು ದೃಢವಾಗಿ ನಂಬಿ ಅದರ ಹಿಂದೆ ಇರುವ ದೈವತ್ವವನ್ನು ನಿಮ್ಮದಾಗಿಸಿಕೊಳ್ಳಿರಿ. ॥80॥

ಇವು ಪಂಡರೀನಾಥನ ಪ್ರೀತಿಯ ಪರಮ ಭಕ್ತನ ವಚನಗಳು. ಅವನಿಗೆ ಹೋಲಿಸಿದಾಗ ದೀನನಾದ ನಾನು ಏನನ್ನು ಅನುಭವಿಸಲಿ? ಶ್ರೋತೃಗಳ ಅವರವರ ಅನುಭವಗಳೇ ಉತ್ತಮವಾದ ಮಾರ್ಗದರ್ಶಿ. 81

ನಾಮಸ್ಮರಣೆ ಬಾಬಾಗೆ ಅತಿಪ್ರಿಯ. ಅವರೇ ನಿರಂತರ "ಅಲ್ಲಾ-ಮಾಲಿಕ್‌" ಎಂದು ಪುನರುಚ್ಚರಣ ಮಾಡುತ್ತಿದ್ದರು. ಅವರು ನಾಮ ಸಪ್ತಾಹಗಳನ್ನು ಏರ್ಪಡಿಸುತ್ತಿದ್ದರು. (ಸಪ್ತಾಹ ತಡೆಯಿಲ್ಲದೆ ಹಗಲು ರಾತ್ರಿ ಭಜಿಸುವುದು.) 82

ಬಾಬಾರವರು ಒಮ್ಮೆ ದಾಸಗಣುವಿಗೆ ಈ ರೀತಿಯ ನಾಮಸಪ್ತಾಹವನ್ನು ಆಚರಿಸಲು ಆಜ್ಞಾಪಿಸಿದರು. ಆಗ ದಾಸಗಣು ಬಾಬಾರವರಿಂದ ವಿಠಲನ ಪ್ರತ್ಯಕ್ಷ ದರ್ಶನವಾಗಬೇಕೆಂಬ ಭರವಸೆಯನ್ನು ಪಡೆದನು. 83॥

ಬಾಬಾರವರು ಅವನ ಹೃದಯದ ಮೇಲೆ ಕೈಯಿಟ್ಟು ಆತ್ಮವಿಶ್ವಾಸದಿಂದ ಭರವಸೆ ನೀಡಿದರು ಮತ್ತು ಜೋರಾಗಿ ಹೇಳಿದರು, "ಹೌದು, ಮತ್ತೆ, ವಿಠಲನು ಪ್ರತ್ಯಕ್ಷನಾಗುವನು. ಆದರೆ ಭಕ್ತನು ಪೂರ್ಣ ವಿಶ್ವಾಸವನ್ನಿಡಬೇಕು." ॥84

ಡಕುರನಾಥದ ಡಂಕಪುರಿ ಅಥವಾ ಪಂಡರಿಯ ವಿಠಲ ಅಥವಾ ರಣಚೋಡದ ದ್ವಾರಕಾನಗರ ಅವುಗಳು ಇಲ್ಲಿ ಅವೆ, ಇವುಗಳನ್ನು ಹುಡುಕಿಕೊಂಡು ಬಹಳ ದೂರ ಹೋಗಬೇಕಾಗಿಲ್ಲ. 85

ವಿಠಲನು ತನ್ನ ಏಕಾಂತವನ್ನು ಬಿಟ್ಟು ಬರುತ್ತಾನೆಯೇ? ಎಲ್ಲಿಂದಾದರೂ ಬರುವನೆ? ಇಲ್ಲಿ ಭಕ್ತನ ಉತ್ಕಟ ಭಕ್ತಿಯಿಂದ ಬರುತ್ತಾನೆ. ॥86॥

ತನ್ನ ಮಾತಾಪಿತೃಗಳ ಸೇವೆಯನ್ನು ಮಾಡುತ್ತ ಪುಂಡಲೀಕನು ದೇವಾದಿದೇವನನ್ನು ಒಲಿಸಿಕೊಂಡನು. ಪುಂಡಲೀಕನ ಭಕ್ತಿಯನ್ನು ನೋಡಿ ಪರಮಾತ್ಮನು ಒಂದು ಇಟ್ಟಿಗೆಯ ಮೇಲೆ ನಿಂತನು. ॥87॥

ಏಳನೆಯ ದಿನದ ನಾಮ ಸ್ವರಣೆಯಾದ ಮೇಲೆ ಬಾಬಾರವರ ನುಡಿಗಳು ಸತ್ಯವಾದವು. ಶಿರಡಿಯಲ್ಲಿ ದಾಸಗಣುವಿಗೆ ವಿಠಲನ ದರ್ಶನವಾಯಿತೆಂದು ಹೇಳುತ್ತಾರೆ. ಈ ರೀತಿ ಬಾಬಾರವರ ಭವಿಷ್ಯವಾಣಿಯನ್ನು ಅನುಭವಿಸಲಾಯಿತು ಮತ್ತು ಪ್ರಮಾಣೀಕರಿಸಲಾಯಿತು ಎಂದು ತಿಳಿಯಿತು. 88

ಒಮ್ಮೆ ಕಾಕಾಸಾಹೇಬ ದೀಕ್ಷಿತ್‌ನು ಧ್ಯಾನಸ್ಥನಾಗಿದ್ದನು. ಬೆಳಗಿನ ನಿತ್ಯ ಸ್ನಾನವಾದ ನಂತರ ಅವನೂ ವಿಠಲನ ದರ್ಶನ ಮಾಡಿದನು. 89॥

ಅನ೦ತರ, ಬಾಬಾರವರ ದರ್ಶನಕ್ಕಾಗಿ ಹೋದಾಗ ಬಾಬಾರವರು ಅವನನ್ನು - "ವಿಠಲ ಪಾಟೀಲನು ಬಂದಿರಲಿಲ್ಲವೇ? ಅವನನ್ನು ಭೇಟಿಮಾಡಿದೆಯಾ? ॥90॥

“ಆ ವಿಠಲನು ಬಹಳ ಜಾರಿಕೊಳ್ಳುವವನು. ಅವನನ್ನು ಗಟ್ಟಿಯಾಗಿ ಹಿಡಿದುಕೋ. ಇಲ್ಲದಿದ್ದಲ್ಲಿ ಅವನು ಜಾರಿಕೊಳ್ಳುತ್ತಾನೆ. ನಿನ್ನ ಗಮನ ಒಂದು ಕ್ಷಣ ತಪ್ಪಿದರೂ ಸಾಕು.” 91

ಈ ಘಟನೆ ಬೆಳಗ್ಗೆ ನಡೆಯಿತು. ಪುನಃ ಮಧ್ಯಾಹ್ನದ ಸಮಯದಲ್ಲಿ ವಿಠಲನು ಸಂತಸದ ದರ್ಶನ ನೀಡಿದ ನಿದರ್ಶನವನ್ನು ನೋಡಿರಿ. 92

ಒಬ್ಬ ಸಂಚಾರಿ ವ್ಯಾಪಾರಿಯು ಶಿರಡಿಯ ಹೊರಗಿನ ಬೇರೊ೦ದು ಊರಿಂದ ಹಳ್ಳಿಗೆ 20-25 ಸುಂದರವಾದ ವಿಠಲನ ಫೋಟೋಗಳನ್ನು ಮಾರಲು ಬಂದನು. 93

ಅದು ಬೆಳಗಿನ ಧ್ಯಾನದಲ್ಲಿ ಕಂಡ ಮೂರ್ತಿಯ ಪ್ರತಿರೂಪವಾಗಿತ್ತು. ದೀಕ್ಷಿತನು ಅಚ್ಚರಿಗೊ೦ಡನು. ಬಾಬಾರವರ ಮಾತುಗಳೆಲ್ಲವನ್ನು ಸ್ಮರಿಸಿಕೊಂಡನು. 94॥

ದೀಕ್ಷಿತನು ಅತಿ ಪ್ರೀತಿಯಿಂದ ಒಂದು ಚಿತ್ರಪಟವನ್ನು ಬೆಲೆಕೊಟ್ಟು ಕೊಂಡನು. ಅದನ್ನು ನಿತ್ಯ ಪೂಜೆಗಾಗಿ ಭಕ್ತಿಯಿಂದ ಪ್ರತಿಷ್ಠಾಪಿಸಿದನು. 95

ಮತ್ತೊಂದು ಅತಿಸುಂದರವಾದ ಘಟನೆಯು ವಿಠಲನ ಪೂಜೆಯೂ ಸಾಯಿಯ ಆರಾಧನೆಗೆ ಸಮನಾದದ್ದು ಎಂದು ತಿಳಿಸುತ್ತದೆ. ಅದನ್ನು ಸಂತೋಷದಿಂದ ಆಲಿಸಿರಿ. 96

ಭಗವಂತರಾವ್‌ ಕ್ಷೀರಸಾಗರ್‌ನ ತಂದೆ, ವಿಠಲನ ಪ್ರಮುಖ ಭಕ್ತರಲ್ಲೊಬ್ಬನು. ಆಗಾಗ್ಗೆ ಪಂಡರಾಪುರಕ್ಕೆ ಹೋಗಿ ಬರುತ್ತಿದ್ದನು. 97॥

ಅವನ ಮನೆಯಲ್ಲಿ ವಿಠಲನ ಒ೦ದು ಮೂರ್ತಿಯು ಇತ್ತು. ಆದರೆ ತಂದೆಯ ಕಾಲವಾದನಂತರ ಪೂಜಾ ಕೈಂಕರ್ಯ, 'ನೈವೇದ್ಯ' ಸಮರ್ಪಣೆ ಇತ್ಯಾದಿಗಳು ನಿಂತು ಹೋದವು. ವಾರ್ಷಿಕ ಶ್ರಾದ್ಧ, ತಿಥಿಕರ್ಮಗಳೂ ನಿಂತುಹೋದವು. ॥98॥

ಭಗವಂತರಾಯನು ಪಂಡರಾಪುರದ ವಾರ್ಷಿಕ ತೀರ್ಥಯಾತ್ರೆಯನ್ನೂ ಬಿಟ್ಟುಬಿಟ್ಟನು. ಆದರೆ ಅವನು ಶಿರಡಿಗೆ ಬಂದಾಗ ಬಾಬಾ ಅವನ ತಂದೆಯನ್ನು ನೆನಪಿಸಿಕೊಂಡು ಈ ರೀತಿ ಹೇಳಿದರು; "ಅವನು ನನ್ನ ಮಿತ್ರನಾಗಿದ್ದನು. 99

"ಅವನು ನನ್ನ ಆಪ್ತ ಮಿತ್ರನ ಪುತ್ರ ಆದ್ದರಿಂದಲೇ ನಾನು ಅವನನ್ನು ಶಿರಡಿಗೆ ಎಳೆದು ತಂದೆ. ಅವನು ನೈವೇದ್ಯವನ್ನು ಕೊಡುವುದಿಲ್ಲ. ನನ್ನನ್ನೂ ಉಪವಾಸ ಕೆಡವುತ್ತಾನೆ. 100

"ಅವನು ವಿಠಲನನ್ನೂ ಉಪವಾಸದಲ್ಲಿರಿಸುತ್ತಾನೆ. ಆದ್ದರಿಂದ ನಾನು ಅವನನ್ನು ಶಿರಡಿಗೆ ಕರೆತಂದೆ. ಈಗ ನಾನು ಅವನಿಗೆ ಜ್ಞಾಪಿಸುತ್ತೇನೆ ಮತ್ತು ಪೂಜೆಮಾಡುವ ಹಾಗೆ ಮಾಡುತ್ತೇನೆ". ॥101

ಒಂದು ಸಲ ಪರ್ವಕಾಲವೆಂದು ದಾಸಗಣು ಪ್ರಯಾಗತೀರ್ಥದಲ್ಲಿ ಸ್ನಾನ ಮಾಡಬೇಕೆಂದು ಇಚ್ಛಿಸಿ ಬಾಬಾರವರ ಅನುಮತಿಗಾಗಿ ಬಂದನು. ॥102॥

ಪ್ರತ್ಯುತ್ತರವಾಗಿ ಬಾಬಾರವರು ಹೇಳಿದರು - "ನೀನು ಅದಕ್ಕಾಗಿ ಅಷ್ಟು ದೂರಹೋಗಬೇಕಾಗಿಲ್ಲ. ಇದೇ ನಮ್ಮ ಪ್ರಯಾಗದ ತೀರ. ನಿನ್ನ ಹೃದಯದಲ್ಲಿ ದೃಢವಾದ ವಿಶ್ವಾಸವನ್ನಿಡು." ॥103॥

ಓಹ್‌! ಬಾಬಾರವರ ಮಹತ್ವವನ್ನಿ ನಾನು ಹೇಗೆ ತಾನೇ ಹೊಗಳಲಿ? ದಾಸಗಣು ತನ್ನ ಮಸ್ತಕವನ್ನು ಬಾಬಾರವರ ಚರಣಗಳಲ್ಲಿಟ್ಟಕೂಡಲೇ ಪವಿತ್ರ ಜಲವು ಅವರ ಎರಡೂ ಹೆಬ್ಬೆರಳುಗಳಿಂದ ಗಂಗಾ ಮತ್ತು ಯಮುನೆಯರ ರೀತಿಯಲ್ಲಿ ಉಕ್ಕಿಬಂದವು. 104

ಈ ಪವಾಡವನ್ನು ವೀಕ್ಷಿಸಿದ ದಾಸಗಣು ಭಾವೋದ್ವೇಗಕ್ಕೊಳಗಾದನು. ಅದೆಂತಹಮಹದುಪಕಾರ ಬಾಬಾರವರು ಅವನ ಮೇಲೆ ಅನುಗ್ರಹಿಸಿದರು! ಎರಡು ಕಣ್ಣುಗಳಿ೦ದಲೂ ಆನಂದಭಾಷ್ಪ ಹರಿಯಿತು. 105



ಅವರ ಮಾತು ಪ್ರೋತ್ಸಾಹಕರವಾಗಿತ್ತು. ಅವರ ಹೃದಯ ಪ್ರೇಮದಿಂದ ಉಕ್ಕಿ ಬಂತು. ಬಾಬಾರವರ ಅನಂತ ಗುಣಗಾನ, ಅಳತೆಗೆ ಸಿಕ್ಕದ ಮಹತ್ತು ಮತ್ತು ಅಚ್ಚರಿಮೂಡುವ೦ತಹ ಕಾರ್ಯಗಳನ್ನು ವಿವರಿಸಿದಾಗಲೇ ತೃಪ್ತಿಹೊಂದಿದನು. ॥106॥

ಶ್ರೋತೃಗಳ ಕುತೂಹಲವನ್ನು ತಣಿಸಲು ನಾನು ಅವರ ಒಂದು ಮಧುರ ರಚನೆಯನ್ನು ಈ ಮಧ್ಯದಲ್ಲಿ ಅಳವಡಿಸುತ್ತೇನೆ. ॥107

ಹಾಡು

ಪಲ್ಲವಿ: ಓ ಸದ್ಗುರುರಾಯ, ನಿನ್ನ ಶಕ್ತಿ ಅಪಾರ. ನಿನ್ನ ಲೀಲೆಗಳು ಅಸಾಧಾರಣ. ಜಡ ಮತ್ತು ಜೀವಿಗಳನ್ನು ಭವಸಾಗರದಿಂದ ದಾಟಿಸುವ ನಾವೆಯು ನೀನು.

1) ನೀನು ನಿನ್ನನ್ನೇ ವೇಣಿಮಾಧವ(ವಿಷ್ಣುನಾಗಿ ರೂಪಾಂತರಗೊಂಡು, ನಿನ್ನ ಪಾದಗಳನ್ನು ಇಲ್ಲಿ ಪ್ರಯಾಗವನ್ನಾಗಿ ಮಾಡಿದೆ. ನಿನ್ನ ಹೆಬ್ಬೆರಳುಗಳಿಂದ ಗಂಗೆ ಮತ್ತು ಯಮುನೆಯರು ಪ್ರವಹಿಸುವುದನ್ನು ತೋರಿಸಿದೆ.

2) ನೀನು ಕಮಲದಿಂದ ಉತ್ಪತ್ತಿಯಾದ ಬ್ರಹ್ಮನು. ಕಮಲಾಕರನಾದ ವಿಷ್ಣು ಮತ್ತು ಶಿವ ಮತ್ತು ತ್ರಿಮೂರ್ತಿಸ್ಟರೂಪನು. ಈ ಭೂಮಿಯಲ್ಲಿ ಸಾಯಿ ಸಮರ್ಥನಾಗಿ ಅವತರಿಸಿರುವೆ.

3) ಬೆಳಗಿನ ಜಾವದಲ್ಲಿ ಬ್ರಹ್ಮನ ಹಾಗೆ ಜ್ಞಾನದ ನುಡಿಗಳನ್ನು ನುಡಿಯುವೆ ಮತ್ತು ಕೆಲವೊಮ್ಮೆ ನೀನು ನಿನ್ನ ಆವೇಶಭರಿತ ಸ್ಪಭಾವ ಮತ್ತು ಭಯಹುಟ್ಟಿಸುವಂತಹ ರುದ್ರನ ತೋರಿಕೆ, ತಮೋಗುಣಗಳನ್ನು ಅವಲಂಬಿಸಿರುವೆ.

4) ಕೆಲವೊಮ್ಮೆ ಶ್ರೀಕೃಷ್ಣನ ಬಾಲಲೀಲೆಗಳನ್ನು ಪ್ರಕಟಿಸಿರುವೆ. ಭಕ್ತನ ಹೃದಯ ಸರೋವರದಲ್ಲಿ ಹಂಸನಾಗಿರುವೆ.

5) ನಿನ್ನನ್ನು ಮುಸಲ್ಮಾನನೆಂದು ಕರೆಯೋಣವೆಂದರೆ ನಿನಗೆ ಶ್ರೀಗಂಧದ ಲೇಪನವು ಪ್ರಿಯ. ನಿನ್ನನ್ನು ಹಿ೦ದುವೆಂದು ಕರೆಯೋಣವೆಂದರೆ ನೀನು ಯಾವಾಗಲೂ ಮಸೀದಿಯಲ್ಲಿ ವಾಸಮಾಡುತ್ತಿರುವೆ.

6) ನಿನ್ನನ್ನು ಶ್ರೀಮಂತನೆಂದು ಕರೆಯೋಣವೇ? ನೀನು ಭಿಕ್ಷಾಟನೆಗಾಗಿ ಹೋಗುವೆ. ನಾನು ನಿನ್ನನ್ನು ಫಕೀರನೆಂದು ಕರೆಯೋಣವೇ? ನಿನ್ನ ದಯಾಸ್ವಭಾವದಿಂದ ನೀನು ಕುಬೇರನನ್ನೇ ನಾಚಿಸುವೆ.

7) ಮಸೀದಿಯೇ ನಿನ್ನ ಮನೆಯೆಂದು ಕರೆಯೋಣವೇ? ಅಲ್ಲಿ ಅಗ್ನಿಯು ಪ್ರಜ್ವಲಿಸುತ್ತಿದೆ. ಧುನಿ (ಬಾಬಾರವರು ಉರಿಸಿದ ಆಗ್ನಿ) ಯಾವಾಗಲೂ ಉರಿಯುತ್ತಿದ್ದು ಉದಿ(ಭಸ್ಮ)ಯನ್ನು ಜನರಿಗೆ ಕೊಡಲಾಗುತ್ತಿದೆ.

8) ಬೆಳಗಿನಿಂದಲೂ ಭಕ್ತರು ಸರಳತೆಯಿಂದ ಬಂದು ನಿನ್ನನ್ನು ಪೂಜಿಸುವರು. ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲೆ ಬಂದಾಗ ನಿನ್ನ ಆರತಿ ಮಾಡಲಾಗುವುದು.

9) ಭಕ್ತರು ನಿನ್ನ ಸುತ್ತಲೂ ಭಗವಂತನ ಮುಂದೆ ನಿಲ್ಲುವ ಸೇವಕರಂತೆ ನಿಲ್ಲುತ್ತಾರೆ. ಕೈಯಲ್ಲಿ ಚಾಮರ ಹಿಡಿದು ಬೀಸುತ್ತಾರೆ.

10) ಕಹಳೆ, ಶಹನಾಯಿ, ಜಾಗಟೆ, ಘಂಟೆಗಳು ಧ್ವನಿಗೈಯುತ್ತಿವೆ. ಪರಿಚಾರಕರು ಸಮವಸ್ತ್ರಗಳಲ್ಲಿ ದ್ವಾರದಲ್ಲಿ ನಿಂತು ನಿನ್ನ ಕೀರ್ತಿಯನ್ನು ಉಗ್ಗಡಿಸುತ್ತಾರೆ.

11) ಆರತಿಯ ಸಮಯದಲ್ಲಿ ವಿಷ್ಣುವಿನ ಹಾಗೆ ಕಾಣುವೆ. ಸಂಜೆ ಹೊತ್ತಿನಲ್ಲಿ ನೀನು ಧುನಿಯ ಮುಂದೆ ಕುಳಿತಾಗ ಕಾಮನನ್ನು ಸುಟ್ಟುಹಾಕಿದ ಶಿವನ ಹಾಗೆ ಶೋಭಿಸುವೆ.

12) ಓ ಬಾಬಾ ಸಾಯಿ! ಈ ರೀತಿ ನಿನ್ನಲ್ಲಿ ಪ್ರದರ್ಶಿತವಾಗುತ್ತಿರುವ ತ್ರಿಮೂರ್ತಿ ಸ್ವರೂಪದ ಲೀಲೆಗಳು ನಿತ್ಯವೂ ನಮ್ಮ ಅನುಭವಕ್ಕೆ ಬರುತ್ತಿವೆ.

13) ಹೀಗಿದ್ದರೂ ನನ್ನ ಮನಸ್ಸು ಚಂಚಲವಾಗಿ ಸುತ್ತುತ್ತಿರುತ್ತದೆ. ದಯ ತೋರಿ ಈ ಮನಸ್ಸನ್ನು ಸ್ಥಿರಗೊಳಿಸು ಎಂದು ಪ್ರಾರ್ಥಿಸುತ್ತೇನೆ.

14) ಅಧಮಾಧಮನೂ, ಮಹಾಪಾತಕಿಯೂ ಆದ ನಾನು ನಿನ್ನಲ್ಲಿ ಆಶ್ರಯ ಬೇಡಿ ಬಂದಿದ್ದೇನೆ. ದಯವಿಟ್ಟು ಈ ದಾಸಗಣುವಿನ ತಾಪತ್ರಯಗಳನ್ನು (ಆದಿಭೌತಿಕ, ಆದಿದೈವಿಕ, ಆಧ್ಯಾತ್ಮಿಕ) ಪರಿಹರಿಸು.


ಅದು ಹಾಗಿರಲಿ. ಅಘೋರವಾದ ಪಾಪಗಳನ್ನು ಪರಿಹಾರ ಮಾಡಲು ಜನರು ಗಂಗೆಯ ನೀರಿನ ಮೊರೆಹೋಗುತ್ತಾರೆ. ಆದರೆ ಗಂಗೆಯು ತನ್ನಲ್ಲಿನ ಪಾಪಗಳನ್ನು ತೊಳೆಯಲು, ತಾನೇ ಸಂತರ ಚರಣಗಳನ್ನು ಆಶ್ರಯಿಸುತ್ತಾಳೆ. ॥108॥
ಪವಿತ್ರ ಚರಣಗಳನ್ನು ಬಿಟ್ಟು, ಗಂಗಾ-ಗೋದಾವರಿಯಲ್ಲಿಗೆ ತೀರ್ಥಯಾತ್ರೆ ಮಾಡುವ ಅವಶ್ಯಕತೆ ಇರುವುದಿಲ್ಲ. ಸಂತ ಸಾಯಿಯ ಮಧುರವಾದ ಜೀವನ ಚರಿತ್ರೆ ಹಾಗೂ ಕೀರ್ತನೆಯನ್ನು ಆಲಿಸಿರಿ. ॥109
ಅದೃಷ್ಟವಶಾತ್‌ ಭೀಮಾರತಿ ನದಿಯಲ್ಲಿ ಗೋಣಾರು ನಾಮದೇವರನ್ನು ಕಂಡಂತೆ, ಭಾಗೀರಥಿ ನದಿಯಲ್ಲಿ ಮುತ್ತಿನ ಕಪ್ಪೆಚಿಪ್ಪಿನಲ್ಲಿ ತಾಮಲನಿಗೆ ಕಬೀರರು ಕಂಡರು. ॥110॥
ಅದೇ ರೀತಿಯಲ್ಲಿ, ಶ್ರೀ ಸಾಯಿನಾಥರು ಭಕ್ತರಿಗಾಗಿ ಶಿರಡಿಯೆಂಬ ಹಳ್ಳಿಯಲ್ಲಿ ಬೇವಿನ ಮರದ ಕೆಳಗೆ 15 ವರ್ಷಗಳ ಬಾಲಕನಾಗಿ ಕಾಣಿಸಿಕೊಂಡರು. ॥111
ಅವರು ಪ್ರಕಟವಾದಾಗಲೇ ಬ್ರಹ್ಮಚ್ಞಾನಿಯಾಗಿದ್ದರು. ಅವರಿಗೆ ಕನಸಿನಲ್ಲಿಯೂ ವಿಷಯವಾಸನೆ ಇರಲಿಲ್ಲ. ಮುಕ್ತಿಯು ಅವರ ಚರಣಗಳಲ್ಲಿ ನೂಪುರವಾಗಿ ಶೋಭಿತವಾಗಿದೆ. ॥112॥
ಬಾಬಾರವರು ಯಾವ ದೇಶದಲ್ಲಿ ಜನ್ಮತಾಳಿದರು ಅಥವಾ ಯಾವ ಪವಿತ್ರ ವಂಶದವರು. ಅವರ ಮಾತಾಪಿತೃಗಳು ಯಾರು ಎಂಬ ವಿಷಯ ಯಾರಿಗೂ ತಿಳಿದಿಲ್ಲ. ॥113
ಯಾರಿಗೂ ಅವರ ಪೂರ್ವಾವಸ್ಥೆಯು ತಿಳಿದಿಲ್ಲ. ಅವರ ತಂದೆ. ತಾಯಿ ಯಾರು? ಎಂಬುದನ್ನು ತಿಳಿಯಲು ಜನರು ತಮ್ಮ ಬುದ್ಧಿಯನ್ನೆಲ್ಲ ಖರ್ಚುಮಾಡಿದರೂ ಆಗಲಿಲ್ಲ. ॥114
ತಂದೆ, ತಾಯಿ, ಬಂಧುಗಳು, ಆಪ್ತರು ಮತ್ತು ಜಾತಿ, ಅಷ್ಟೇಕೆ ಎಲ್ಲಾ ಸಂಸಾರ ಬಂಧನಗಳನ್ನು ತ್ಯಾಗ ಮಾಡಿ ಜನರ ಹಿತಕ್ಕಾಗಿ ಶಿರಡಿಯಲ್ಲಿ ಪ್ರಕಟಗೊ೦ಡರು. ॥115
ಶಿರಡಿಯಲ್ಲಿನ ಒಬ್ಬ ವೃದ್ಧ ಮಹಿಳೆ, ನಾನಾ ಚೋಪದಾರ್‌ನ ತಾಯಿ, ಸಾಯಿಬಾಬಾರವರ ಆಶ್ಚರ್ಯಕರವಾದ ಅತ್ಯದ್ಭುತವಾದ ಚರಿತ್ರೆಯನ್ನು ಹೇಳುತ್ತಿದ್ದಳು. 116॥
ಆಕೆ ಈ ರೀತಿ ಹೇಳುತ್ತಾಳೆ. "ಪ್ರಾರಂಭದಲ್ಲಿ ಈ ಸಣ್ಣ ಬಾಲಕ ಬೆಳ್ಳಗೆ, ಅತಿ ಸುಂದರವಾಗಿ ಮತ್ತು ಮನೋಹರವಾಗಿ ಮೊದಲು ಕಾಣಿಸಿದ್ದು ಬೇವಿನ ಮರದ ಕೆಳಗೆ, ಶಾಂತವಾಗಿ ಪದ್ಮಾಸನದಲ್ಲಿ ಕುಳಿತಿದ್ದನು. ॥117॥
"ಆ ಎಳೆ ವಯಸ್ಸಿನಲ್ಲಿ ಚಳಿ, ಬಿಸಿಲನ್ನು ಲೆಕ್ಕಿಸದೆ ಅತ್ಯಂತ ಕಠಿಣ ತಪಸ್ಸಿನಲ್ಲಿ ನಿರತನಾಗಿದ್ದ ಆ ಸುಂದರ ಬಾಲಕನ ರೂಪವನ್ನು ನೋಡಿದ ಜನರು ಅತ್ಯಂತ ವಿಸ್ಮಯಗೊಂಡರು. 118
"ಆ ಎಳೆ ವಯಸ್ಸಿನ ಬಾಲಕನ ಈ ಸ್ಥಿತಿಯು ದೂರದಿಂದ ಮತ್ತು ಹತ್ತಿರದಿಂದ ಬಾಲಕನ ದರ್ಶನಕ್ಕೆಂದು ಬಂದ ಎಲ್ಲಾ ಹಳ್ಳಿಗರನ್ನೂ ಅಚ್ಚರಿಗೊಳಿಸಿತ್ತು. 119
ಅವನಿಗೆ ಹಗಲಿನಲ್ಲಿ ಯಾರ ಸಹವಾಸವೂ ಇರಲಿಲ್ಲ. ರಾತ್ರಿಯಲ್ಲಿ ಎಂದಿಗೂ ಭಯಗೊಂಡಿರಲಿಲ್ಲ. ಇಂತಹ ಚಿಕ್ಕಬಾಲಕ ಎಲ್ಲಿಂದ ಬಂದು ಕಾಣಿಸಿಕೊಂಡನು ಎಂದು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ॥120॥
"ಅವನು ಬಹು ಸುಂದರನಾಗಿದ್ದನು. ಅವನನ್ನು ನೋಡುತ್ತಲೇ ಜನರು ಅವನ ಕಡೆಗೆ ಆಕರ್ಷಿತರಾಗುತ್ತಿದ್ದರು. ಅವನು ಯಾರ ಮನೆಯಲ್ಲಿಯೂ ವಾಸಿಸಲಿಲ್ಲ ಅಥವಾ ಯಾರ ಬಾಗಿಲಿಗೂ ಹೋಗಲಿಲ್ಲ. ಹಗಲೂ ರಾತ್ರಿ ಅವನು ಆ ಬೇವಿನ ಮರದ ಕೆಳಗೆಯೇ ವಾಸಿಸುತ್ತಿದ್ದನು. ॥121
ಪ್ರತಿಯೊಬ್ಬರೂ ಆ ಬಾಲಕನನ್ನು ನೋಡಿ ವಿಸ್ಮಯ ಪಟ್ಟಿದ್ದರು. ಈ ಎಳೆ ವಯಸ್ಸಿನ ಬಾಲಕ ಇಷ್ಟು ಸ್ಪುರದ್ರೂಪಿ, ಹಗಲು - ರಾತ್ರಿ ಬಯಲಿನಲ್ಲಿ ವಾಸವಾಗಿದ್ದನು. 122
ಪ್ರತಿಯೊಬ್ಬರೂ ಆಶ್ಚರ್ಯ ಚಕಿತರಾಗಿದ್ದರು. ಈ ಹುಡುಗ ಹೊರನೋಟಕ್ಕೆ ಮಗುವಿನಂತೆ ಕಂಡರೂ, ಕರ್ಮದಲ್ಲಿ ಮಹಾನ್‌ಗಿಂತ ಮಹಾನ್‌ ಅಗಿ, ವೈರಾಗ್ಯದಲ್ಲಿ ಪೂರ್ಣಾವತಾರವಾಗಿದ್ದನು. ॥123॥
ಒಂದು ದಿನ, ಒಂದು ಅಪರೂಪದ ಸಂಗತಿ ನಡೆಯಿತು. ಕೆಲವು ಜನರ ಮೇಲೆ ಖಂಡೋಬಾದೇವರು ಬಂದು ಮೈತಿರುಗಿಸುತ್ತಿದ್ದು, ಜನರು ಪ್ರಶ್ನೆಗಳನ್ನು ಕೇಳತೊಡಗಿದರು. ॥124
"ಆ ಚಿಕ್ಕ ಬಾಲಕನ ಮಾತಾಪಿತೃಗಳು ಯಾರು? ಮತ್ತು ಅವನು ಎಲ್ಲಿಂದ ಹೇಗೆ ಇಲ್ಲಿಗೆ ಬಂದನು? ಖಂಡೋಬಾದೇವನೇ, ನೀನಾದರೂ ಅದನ್ನು ಕಂಡುಹಿಡಿ" ಎಲ್ಲರ ಪ್ರಶ್ನೆಯೂ ಇದೇ ಆಗಿತ್ತು. 125
ಆ ದೇವನು ಉತ್ತರಿಸಿದನು, "ಹೋಗಿ, ಒ೦ದು ಪಿಕಾಸಿಯನ್ನು ತೆಗೆದುಕೊ೦ಡು ಬನ್ನಿ. ನಾನು ತೋರಿಸಿದ ಜಾಗದಲ್ಲಿ ಅಗೆಯಿರಿ. ಆಗ ನಿಮಗೆ ಆ ಬಾಲಕನ ಪತ್ತೆಯ ಬಗ್ಗೆ ತಿಳಿಯುತ್ತದೆ. ಈ ಜಾಗದಲ್ಲಿ ಅಗೆಯಿರಿ. 126
ಅನ೦ತರ ಹಳ್ಳಿಯ ಸರಹದ್ದಿನಲ್ಲಿ, ಅದೇ ಬೇವಿನ ಮರದ ಕೆಳಗೆ ಮತ್ತೆಮತ್ತೆ ಅಗೆದಾಗ ಅವರಿಗೆ ಅಲ್ಲಿ ಇಟ್ಟಿಗೆಗಳು ಕಂಡವು. ॥127॥
ಇಟ್ಟಿಗೆಗಳ ಕೊನೆಯ ಸಾಲಿನವರೆಗೆ ಅಗೆದಾಗ ಮತ್ತು ಕೆಳಗಿದ್ದ ಕಲ್ಲು ಚಪ್ಪಡಿಯನ್ನು ಅರ್ಧ ಸರಿಸಿದಾಗ, ಆ ಚಪ್ಪಡಿಯು ಪ್ರವೇಶ ದ್ವಾರವನ್ನು ಮುಚ್ಚಿತ್ತು. ಅಲ್ಲಿ ಅವರಿಗೆ ಕಂಡದ್ದು ಒಂದು ನೆಲದಡಿಯ ಗುಹೆ. ಅದರಲ್ಲಿ ನಾಲ್ಕು ದೀಪದ ಕಂಬಗಳು ಉರಿಯುತ್ತಿದ್ದವು. ॥128॥
 ಗುಹೆಯ ನಾಲ್ಕು ಕಡೆಯಲ್ಲೂ ಕಲ್ಲು ಚಪ್ಪಡಿ ಹಾಸಲಾಗಿತ್ತು. ಅಲ್ಲಿ ಗೋಮುಖ ಆಕಾರದ ಮರದ ಮಣೆಯು, ಸುಂದರವಾದ ಜಪಮಾಲೆಯೂ ಇದ್ದುವು. ಆ ದೇವನು ಹೇಳಿದನು - "ಇದೇ ಜಾಗದಲ್ಲಿ ಆ ಬಾಲಕನು 12 ವರ್ಷಗಳ ಕಾಲ ತಪಸ್ಪು ಮಾಡಿದ್ದನು." ॥129॥
ಎಲ್ಲ ಜನರೂ ಅಚ್ಚರಿಗೊಂಡರು ಮತ್ತು ಆ ಹುಡುಗನನ್ನು ಪ್ರಚೋದಕರ ಪ್ರಶ್ನೆಗಳನ್ನು ಕೇಳಿದರು. ಅದರೆ ಈ ಹುಡುಗ ಬಹಳ ತುಂಟತನದಿಂದ ಅವರಿಗೆ ಬೇರೆಯೇ ಒಂದು ಕಥೆಯನ್ನು ಹೇಳಿದನು. 130॥
ಅವನು ಹೇಳಿದನು, "ಇದು ನನ್ನ ಗುರುವಿನ ಸ್ಥಾನ. ಈ ಪವಿತ್ರ ಸ್ಥಳವು ಅನುವಂಶಿಕವಾದುದು. ಇದನ್ನು ಇದೇ ರೀತಿಯಲ್ಲಿ ಸಂರಕ್ಷಣೆ ಮಾಡಿ". 131


ಬಾಬಾರವರು ಈ ರೀತಿ ಹೇಳಿದುದನ್ನು ಜನರು ಕೇಳಿದರು. ಆದರೆ ನನ್ನ ನಾಲಿಗೆ ಏಕೆ ಬಾಬಾರವರು ತಿಳಿಸಿದ ವಿಷಯವು ಸತ್ಯವಲ್ಲ ಎಂದು ಹೇಳುತ್ತೆ? ॥132॥
ನನ್ನ ಬಗ್ಗೆಯೇ ನನಗೆ ಅಚ್ಚರಿ ಆಗಿದೆ. ನನಗೆ ಏಕೆ ಬಾಬಾರವರ ಬಗ್ಗೆ ಈ ಅಭಿಪ್ರಾಯ ಉಂಟಾಯಿತು? ಬಾಬಾರವರು ಇದನ್ನು ತೇಲಿಸಿ ಹೇಳಿದ್ದಾರೆ ಎಂಬುದು ನನಗೆ ಈಗ ಮನವರಿಕೆಯಾಯಿತು. 133॥
ಬಾಬಾರವರು ಸ್ವಭಾವತಃ ವಿನೋದ ಪ್ರಿಯರು. ಆ ಗುಹೆಯು ಅವರದೇ ನಿವಾಸ ಸ್ಥಾನವಾಗಿದ್ದಿರಬಹುದು. ಅದನ್ನು ಗುರುವಿಗೆ ಅನ್ವಯಿಸಿದರೆ ಏನಾಗುತ್ತದೆ? ಪ್ರಾಮುಖ್ಯತೆಗೆ ಏನೂ ಕುಂದಾಗುವುದಿಲ್ಲ. 134
ಹಾಗೇಯೇ ಇರಲಿ, ಬಾಬಾರವರ ಆಜ್ಞೆಯ ಪ್ರಕಾರ ಆ ಗುಹೆಯನ್ನು ಇಟ್ಟಿಗೆಗಳಿಂದ ಮುಚ್ಚಲಾಯಿತು. ಅದನ್ನು ಬಾಬಾರವರು ಗುರುಸ್ಥಾನವೆಂದು ತಿಳಿಸಿದ್ದರು. ॥135॥
ಅಶ್ವತ್ಥ ವೃಕ್ಷ ಮತ್ತು ಔದುಂಬರ ವೃಕ್ಷಗಳು ಪ್ರಾಮುಖ್ಯವಾಗಿವೆ. ಅದೇ ರೀತಿ ಬೇವಿನ ಮರವು ಬಾಬಾರವರಿಗೆ ಮುಖ್ಯವಾದುದು. ಅವರು ಅದನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಅದಕ್ಕೆ ಮಹತ್ತಾದ ಸ್ಥಾನ ಕೊಟ್ಟಿದ್ದರು. 136
ಮ್ಹಾಲಸಾಪತಿ ಮತ್ತಿತರರು, ಶಿರಡಿ ಗ್ರಾಮಸ್ಥರು ಆ ಸ್ಥಳಕ್ಕೆ ಬಂದು ವಂದಿಸುತ್ತಿದ್ದರು. ಅದು ಬಾಬಾರವರ ಗುರುವಿನ ಸಮಾಧಿ ಸ್ಥಳವೆಂದು ನಂಬಿದ್ದರು. ॥137॥
ಸಮಾಧಿಯ ಹತ್ತಿರದ ಜಾಗದಲ್ಲಿ, 12 ವರ್ಷಗಳ ಕಾಲ ಬಾಬಾರವರು ತಪಸ್ಪು ಮಾಡಿದ್ದರು. ಇದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಹಾಗೆಂದೇ ಪ್ರಸಿದ್ಧವಾಗಿತ್ತು. 138
ಬಾಬಾರವರ ಭಕ್ತರಲ್ಲಿ ಒಬ್ಬನಾದ ಸಾಥೆಸಾಹೇಬನು ಸಮಾಧಿಯ ಮತ್ತು ಬೇವಿನ ಮರದ ಜಾಗವನ್ನು ಸ್ವಾಧೀನ ಪಡಿಸಿಕೊಂಡನು ಮತ್ತು ಸುತ್ತಲೂ ವರಾಂಡವಿರುವ ಕಟ್ಟಡವೊಂದನ್ನು ಕಟ್ಟಿಸಿದನು. ॥139॥ 
ಇದೇ ಕಟ್ಟಡ ಮತ್ತು ವಾಡಾ ಮೊದಲು ಯಾತ್ರಾರ್ಥಿಗಳಿಗೆ ಕೇಂದ್ರ ಸಭಾಗೃಹವಾಗಿತ್ತು. ಅದು ಸದಾ ಕಾಲ ಜನಜಂಗುಳಿಯಿಂದ ಕೂಡಿರುತ್ತಿತ್ತು ಮತ್ತು ಅಲ್ಲಿ ಅನೇಕ ವಾಗ್ಯುದ್ಧಗಳು ನಡೆಯುತ್ತಿದ್ದವು. ॥140॥
ಸಾಥೆಯು ಜೇವಿನ ಮರದ ಸುತ್ತಲೂ ಕಟ್ಟೆಯನ್ನು ಕಟ್ಟಿಸಿದನು. ಉತ್ತರದಕ್ಷಿಣಕ್ಕೆ ಮಹಡಿಯನ್ನು ಕಟ್ಟಿಸಿದನು. ಅವನು ಮಹಡಿಯ ಮೆಟ್ಟಲು ಕಟ್ಟಿಸುವಾಗ ನೆಲಮನೆಯ ಬಗ್ಗೆ ಸೂಚಿಸಿದ್ದನು. ॥141
ಸೋಪಾನ ಮಾರ್ಗದ (ಮೆಟ್ಟಲು) ಕೆಳಗೆ, ದಕ್ಷಿಣಾಭಿಮುಖವಾಗಿ ಒಂದು ಸುಂದರವಾದ ಮಾಡು ಇದೆ. ಅದರ ಮುಂದೆ ಒಂದು ಜಗಲಿ ಇದ್ದು ಅಲ್ಲಿ ಭಕ್ತರು ಉತ್ತರಾಭಿಮುಖವಾಗಿ ಕುಳಿತುಕೊಳ್ಳುತ್ತಾರೆ. 142
ಗುರುವಾರ ಮತ್ತು ಶುಕ್ರವಾರಗಳಂದು ಸೂರ್ಯಾಸ್ತಮವಾದ ನಂತರ ಯಾರಾದರೂ ನೆಲವನ್ನು ಸೆಗಣಿಯಿಂದ ಸಾರಿಸಿ ಅಗರಬತ್ತಿಯನ್ನು ಹಚ್ಚಿಟ್ಟು ಕ್ಷಣವಾದರೂ ಪ್ರಾರ್ಥಿಸಿದಲ್ಲಿ ಶ್ರೀಹರಿಯಿಂದ ಅನುಗ್ರಹಿಸಲ್ಪಡುತ್ತಾನೆ. 143
ಬಹುಶಃ ಶ್ರೋತೃಗಳು ತಮ್ಮ ಮನಸ್ಸಿನಲ್ಲಿ ಇದನ್ನು ಅತಿತಯೋಕ್ತಿಯೆಂದೇ ಊಹಿಸಬಹುದು ಮತ್ತು ಅದರ ಸತ್ಯಾಸತ್ಯತೆಯನ್ನು ಪ್ರಶ್ನಿಸಬಹುದು, ಆದರೆ ಇವುಗಳು ಸಾಯಿಯ ಮಾತುಗಳೇ ಮತ್ತು ನಾನು ಅವುಗಳನ್ನು ಸ್ವತಃ ಬಾಬಾರವರ ಮುಖದಿಂದಲೇ ಬಂದಿರುವುದನ್ನು ಕೇಳಿರುತ್ತೇನೆ. ॥144
ಇದು ನಾನು ಕಲ್ಪಿಸಿ ಹೇಳಿದುದಲ್ಲ, ಕಿಂಚಿತ್ತೂ ಶಂಕೆ ಬೇಡ, ಅವುಗಳನ್ನು ಪ್ರತ್ಯಕ್ಷವಾಗಿ ಕೇಳಿದವರು ಇನ್ನೂ ಬದುಕಿದ್ದಾರೆ ಮತ್ತು ಅವರು ಇದಕ್ಕೆ ಸಾಕ್ಷಿಯಾಗಿದ್ದಾರೆ. 145॥
ಅನ೦ತರ ದೀಕ್ಷಿತ ವಾಡೆಯನ್ನು ಕಟ್ಟಲಾಯಿತು. ಅದರಲ್ಲಿ ದೊಡ್ಡ ಕುಟುಂಬಗಳು ವಿಶ್ರಮಿಸಬಹುದು. ಅನ೦ತರ ಅಲ್ಪಕಾಲದಲ್ಲಿಯೇ ಅಲ್ಲಿಕಲ್ಲಿನ ಒಂದು ವಾಡೆಯನ್ನು ಕಟ್ಟಲಾಯಿತು. ॥146॥
ಮೊದಲಿನಿಂದಲೂ ದೀಕ್ಷಿತನು ಪುಣ್ಯವಂತನೆಂದು ಕೀರ್ತಿಪಡೆದಿದ್ದನು. ಭಕ್ತಿಭಾವದ ಸಾಕಾರಮೂರ್ತಿಯಾಗಿದ್ದನು ಅವನೊಮ್ಮೆ ಇಂಗ್ಲೆಂಡಿಗೆ ಯಾತ್ರೆ ಹೋಗಿದ್ದಾಗ ಅಲ್ಲಿ ತನ್ನದೇ ಆದ ಭಕ್ತಿಯ ಬೀಜವನ್ನು ಬಿತ್ತಿದನು. ॥147॥
ಈ ಹಂತದಲ್ಲಿ ಶ್ರೋತೃಗಳಿಗೆ ಶಂಕೆ ಏಳಬಹುದು. ಮಥುರ, ಕಾಶಿ, ದ್ವಾರಕ ಇವುಗಳಲ್ಲದೆ ಆಂಗ್ಲ ಭೂಮಿಯಲ್ಲಿಯೂ ಬೇರೆ ಬೇರೆ ಮತಗಳನ್ನು ಅವಲಂಬಿಸಿರುವ ಜನರು ಪರಮ ಸತ್ಯವನ್ನು ಅರಿಯುವ ಮಾರ್ಗ ತೋರಿಸುವ ಕಾರಣಕರ್ತನಾಗುವುದು ಹೇಗೆ? ॥148
ಶ್ರೋತೃಗಳ ಶಂಕೆಯು ಸಹಜ. ಅದನ್ನು ನಿವಾರಿಸಿದಾಗ ಅವರು ಆಶ್ಚರ್ಯಚಕಿತರಾಗುವರು. ನಾನೇನಾದರೂ ಸ್ಟಲ್ಪ ಮಿತಿಮೀರಿದರೆ ದಯಮಾಡಿ ಎಲ್ಲರೂ ನನ್ನನ್ನು ಕ್ಷಮಿಸವರೆಂದು ನಂಬುತ್ತೇನೆ. ॥149॥
ಕಾಶಿ, ಪ್ರಯಾಗ, ಬದರಿ, ಕೇದಾರ, ಮಥುರ, ಬೃಂದಾವನ, ದ್ವಾರಕ ಅತ್ಯಾದಿ ಯಾತ್ರಾ ಸ್ಥಳಗಳನ್ನು ದರ್ಶಿಸಿ ಈ ಮೊದಲೇ ಸಾಕಷ್ಟು ಪುಣ್ಯಗಳಿಸಿದ್ದನು. ॥150॥
ಅದಲ್ಲದೆ, ಅವನ ತಂದೆಯ ಪುಣ್ಯಕಾರ್ಯಗಳ ಫಲದಿಂದ ಅವನ ಅಪೂರ್ವವಾದ ಅದೃಷ್ಟದಿಂದ ಅವನ ಹಿಂದಿನಜನ್ಮದ ಪುಣ್ಯಕರ್ಮಗಳ ಫಲದಿಂದ, ಅವನಿಗೆ ಸಾಯಿ ದರ್ಶನ ಭಾಗ್ಯ ದೊರಕಿತು. ॥151
ಮೂಲವಾದ ಕಾರಣ ಸಾಯಿದರ್ಶನವಾಗಲು ಅವನು ಆಂಗ್ಲಭೂಮಿಯಲ್ಲಿದ್ದಾಗ, ಬಿದ್ದು ವಿಧಿವಶಾತ್‌ ಕು೦ಟನಾಗಿದ್ದುದು. ॥152॥
ಹೊರನೋಟಕ್ಕೆ ಅದು ಒಂದು ದುಷ್ಪಲವಾಗಿ ಕಂಡರೂ, ಅದರ ಪರಿಣಾಮವೊಂದು ಶುಭ ಶಕುನವಾಯಿತು. ಏಕೆಂದರೆ ಅದು ಫಲಪ್ರದವಾಗಿ ಸಾಯಿ ಸಂಗ ಸಿಗುವಂತಹ ಅಪರೂಪದ ಅವಕಾಶ ಕಲ್ಪಿಸಿತು. 153
ಅವನು ಚಂದೋರ್‌ಕರ್‌ನನ್ನು ಭೇಟಿಮಾಡಲಾಗಿ ಸಾಯಿಯ ಕೀರ್ತಿಯ ಬಗ್ಗೆ ಅರಿತನು. ಚಂದೋರಕರ್‌ನು ತಿಳಿಸುತ್ತಾನೆ - "ಸಾಯಿಯು ಅನುಗ್ರಹವನ್ನು ವರ್ಷಿಸಿದರೆ ಈ ಅ೦ಗನ್ಯೂನತೆಯು ಕೂಡಲೇ ಮಾಯವಾಗುತ್ತದೆ." ॥154
ಆದರೆ ದೀಕ್ಷಿತ್‌ ತನ್ನ ಅಂಗವಿಕಲತೆಯನ್ನು ಒಂದು ನ್ಯೂನತೆಯಾಗಿ ಪರಿಗಣಿಸಲಿಲ್ಲ. ಅವನು ಸಾಯಿಯಲ್ಲಿ ತನ್ನ ಮನಸ್ಸಿನ ಕೊರತೆಗಳನ್ನು ನಿವಾರಿಸಲು ಪ್ರಾರ್ಥಿಸಿದನು. ॥155
ಈ ಮಾನವ ದೇಹ ಕೇವಲ ಕ್ಷಣಿಕ. ಚರ್ಮ, ರಕ್ತ, ಮಾಂಸ, ಮೂಳೆಗಳಿಂದಾದ ಆಕಾರ ಮಾತ್ರ ಈ ಸಂಸಾರದಲ್ಲಿ ಕೆಲಸ ಮಾಡುವ ಸಾಧನವಷ್ಟೇ. ಅದರಿಂದ ಒಂದು ಕಾಲು ಕುಂಟಾದರೂ ಏನಾಗುತ್ತೆ? ॥156॥
ಸನ್‌ 1909ನೆಯ ಇಸವಿಯ ನವಂಬರ್‌ 2ನೆಯ ತಾರೀಖು ದೀಕ್ಷಿತನು ಮೊದಲಬಾರಿಗೆ ಸಾಯಿಯನ್ನು ಭೇಟಿಮಾಡಿದ್ದು, ಪುಣ್ಯ ಪಾವನ ದರ್ಶನ ಪಡೆದನು. ॥157॥
ಆನ೦ತರ, ಅದೇ ವರ್ಷದಲ್ಲಿ, ಡಿಸಂಬರ್‌ ತಿಂಗಳಲ್ಲಿ ಅವನು ಶಿರಡಿಗೆ ಮತ್ತೆ ದರ್ಶನಕ್ಕಾಗಿ ಹೋದನು ಮತ್ತು ಅಲ್ಲಿಯೇ ನೆಲಸಲು ಯೋಚಿಸಿದನು. ॥158॥
ಅವನು ಮೊದಲು ತನ್ನ 25 ಶೇರ್‌ಗಳನ್ನು ಮಾರಾಟಮಾಡಿ ಒಂದು ತೆಳುವಾದ ತಗಡಿನ ಗುಡಿಸಲನ್ನು ಕಟ್ಟಬೇಕೆಂದು ಯೋಚಿಸಿದನು. ಅದು ಯಾತ್ರಾರ್ಥಿಗಳಿಗೂ ಸಹಾಯಕವಾಗಿತ್ತು. 159
ಅನ೦ತರ ಅವನು ಒಂದು ವಾಡೆಯನ್ನು ಕಟ್ಟಲು ನಿಶ್ಚಯಿಸಿದನು. ಮತ್ತು ಬರುವ ಸಂವತ್ಸರದಲ್ಲಿ ತಳಪಾಯ ಹಾಕಲು ಒಂದು ಶುಭ ಮುಹೂರ್ತವನ್ನು ನಿರ್ಧರಿಸಲು ಯೋಚಿಸಿದನು. 160
ಡಿಸೆಂಬರ್‌ 9ನೆಯ ತಾರೀಖು, ಅವನು ಬಾಬಾರವರ ಅನುಮತಿ ಪಡೆದನು. ಆ ದಿನವೇ ಅಸ್ತಿಭಾರ ಹಾಕಲು ಮಂಗಳಕರ ದಿನವೆಂದು ನಿರ್ಧರಿಸಿದನು. ॥161॥
ದೀಕ್ಷಿತನ ಸೋದರನು, ಆಹ್ವಾನಿಸಿದರೂ ಬಾರದೇ ಇರುವವನು, ಆ ಮಂಗಳಕರ ಶುಭಮಹೂರ್ತದಂದೇ ಬಂದಿಳಿದನು. 162
ದಾದಾ ಸಾಹೇಬ್‌ ಖಾಪರ್ಡೆ'ಯು ಈಗಾಗಲೇ ಒಬ್ಬನೇ ಅಲ್ಲಿಗೆ ಬಂದನು. ಅವನು ಬಾಬಾರವರಿಂದ ತನ್ನ ಮನೆಗೆ ಹಿಂದಿರುಗುವ ಬಗ್ಗೆ ಅನುಮತಿ ಪಡೆಯಲು ಸ್ವಲ್ಪ ಎಡವಟ್ಟು ಅನುಭವಿಸಿದನು. ॥163
ಆದರೆ ಡಿಸೆಂಬರ್‌ 10ನೆಯ ತಾರೀಖು ಖಾಪರ್ಡೆಯು ಶಿರಡಿಯಿಂದ ಹೊರಡಲು ಮತ್ತು ದೀಕ್ಷಿತನು ಅಸ್ತಿಭಾರ ಹಾಕಲು - ಈ ಎರಡಕ್ಕೂ ಆ ದಿನ ಅನುಮತಿಯನ್ನು ನೀಡಲಾಯಿತು. ॥164॥
ಮತ್ತೊಂದು ಮುಖ್ಯವಾದ ಘಟನೆ ಆ ದಿವಸ ನಡೆಯಿತು. ಆ ದಿನ ಶೇಜಾರತಿಯು ಚಾವಡಿಯಲ್ಲಿ ಅತಿ ಪರಮಭಕ್ತಿ ಶ್ರದ್ಧೆಗಳಿಂದ ಪ್ರಾರಂಭವಾಯಿತು. ॥165॥
ಅನ೦ತರ, ಸನ್‌ 1911ನೆಯ ಇಸವಿಯಲ್ಲಿ ಅತಿ ಮಂಗಳಕರವಾದ ರಾಮನವಮಿಯಂದು ಗೃಹಪ್ರವೇಶ ಸಂಸ್ಕಾರವನ್ನು ವಿಧಿವಿಧಾನಪೂರ್ವಕವಾಗಿ ನೆರವೇರಿಸಲಾಯಿತು. ॥166॥
ಅನ೦ತರ, ಶ್ರೀಮಂತನಾದ ಬೂಟಿಯು ಭವ್ಯವಾದ ಕಟ್ಟಡವನ್ನು ಬಹಳ ಹಣವನ್ನು ಖರ್ಚುಮಾಡಿ ಕಟ್ಟಿಸಿದನು. ಆದರೆ ಈ ಹಣವು ಅತ್ಯಂತ ಉಪಯುಕ್ತವಾಯಿತೆಂದು ಸಾಬೀತಾಯಿತು. ಏಕೆಂದರೆ ಬಾಬಾರವರ ಸಮಾಧಿಯನ್ನು ಅಲ್ಲಿ ಮಾಡಲಾಗಿದೆ. ॥167॥
ಈಗ ಅಲ್ಲಿ ಮೂರು ವಾಡೆಗಳು ಇವೆ. ಮೊದಲು ಅಲ್ಲಿ ಏನೊಂದೂ ಇರಲಿಲ್ಲ, ಆದರೆ ಮೊದಲು ಸಾಠೆಯ ವಾಡೆಯು ಎಲ್ಲರಿಗೂ ಅತ್ಯಂತ ಉಪಯುಕ್ತವಾಗಿತ್ತು. ॥168
ಈ ವಾಡೆಗೆ ಮತ್ತೊಂದು ಮಹತ್ಪವಿದೆ. ಏನೆಂದರೆ ಆ ಜಾಗದಲ್ಲಿ ಬಾಬಾರವರು ಒಂದು ಹೂವಿನ ತೋಟವನ್ನು ಅವರ ಕೈಯಿಂದಲೇ ನಿರ್ಮಿಸಿದ್ದರು. 169
ಈ ತೋಟದ ಅಲ್ಪ ಕಥೆಯನ್ನು ಮುಂದಿನ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗುತ್ತದೆ.
ಹೇಮಾದನು ಎಲ್ಲಾ ಶ್ರೋತೃಗಳೊಡನೆ ಸಾಯಿ ಚರಣಗಳಲ್ಲಿ ಮಸ್ತಕವನ್ನು ಇಡುತ್ತಾನೆ. ॥170 ವಾಮನ ತಾತ್ಯಾ, ಸಾಯಿ ಸಮರ್ಥರಿಗೆ ಮಣ್ಣಿನ ಮಡಕೆಗಳನ್ನು ತಂದು ಕೊಡುತ್ತಿದ್ದನು. ॥171
ಅನ೦ತರ ಚಾಂದ್‌ ಪಾಟೀಲ್‌ ಅವನನ್ನು ಔರಂಗಾಬಾದ್‌ ಹತ್ತಿರ ಭೇಟಿಯಾದನು ಮತ್ತು ಸಾಯಿಯು ಅವನ ಜೊತೆಯಲ್ಲಿ ಶಿರಡಿಗೆ ಮದುವೆಯ ದಿಬ್ಬಣದ ಜೊತೆಯಲ್ಲಿ ಬಂದರು. ॥172
ಅನಂತರ ಅವನು ದೇವಿದಾಸನನ್ನು ಭೇಟಿಯಾದನು. ಜಾನಕಿದಾಸನ ಸಹಿತ ಗಂಗಾಗೀರ್‌ ಸಹ ಅವನ ಗಮನದಲ್ಲಿ ಬಂದನು. ಈ ರೀತಿ ಈ ಮೂವರೂ ಶಿರಡಿಯಲ್ಲಿ ಒಂದಾಗಿ ಭೇಟಿಯಾದರು. ॥173॥
ಅನಂತರ ಮೊಹಿದ್ದೀನನ ಜೊತೆ ಕುಸ್ತಿ ಪಂದ್ಯ ನಡೆಯಿತು. ಅದರ ನಂತರ ಅವರು ಮಸೀದಿಗೆ ಬಂದು ನೆಲೆಸಿದರು. ಆಲ್ಲಿ ಅವರು ಡೆಂಗಲೆಯವರ ಜೊತೆ ಬಾಂಧವ್ಯ ಬೆಳಸಿದರು ಮತ್ತು ಜನರು ಅವರ ಸುತ್ತ ಸೇರಲು ಪ್ರಾರಂಭಿಸಿದರು. ॥174॥ ಈ ಎಲ್ಲ ಕಥೆಗಳನ್ನು, ವಚನಗಳನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಸಲಾಗುತ್ತದೆ. ಈಗ ಹೇಮಾದನು ಸಾಯಿಗೆ ಶರಣಾಗಿ ಸಾಷ್ಟಾಂಗ ಪ್ರಣಾಮಗಳನ್ನು ಅನನ್ಯ ಭಾವದಿಂದ ಮಾಡುತ್ತಾನೆ. ॥175॥

ಎಲ್ಲರಿಗೂ ಶುಭವಾಗಲಿ.
ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಸಾಯಿ ಸಮರ್ಥರ ಅವತರಣ" ಎಂಬ ನಾಲ್ಕನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.

ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.

।ಸನ್ಮಂಗಳವಾಗಲಿ|

No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....