Thursday, February 11, 2021

05 ಸಾಯಿಯ ಪುನರ್ದರ್ಶನ / Baba's return to Shirdi

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ಸಾಯಿಯ ಪುನರ್ದರ್ಶನ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.



ಈಗ ಹಿಂದಿನ ಅಧ್ಯಾಯದಿಂದ ಕತೆಯನ್ನು ಮುಂದುವರಿಸಬೇಕೆಂದರೆ, ಬಾಬಾರವರು ಶಿರಡಿಯಿಂದ ಮರೆಯಾದರು ಮತ್ತು ಪುನಃ ಚಾಂದಪಾಟೀಲನ ಜೊತೆಯಲ್ಲಿ ಆಗಮಿಸಿದರು. ಇದೆಲ್ಲ ಹೇಗೆ ನಡೆಯಿತೆಂಬುದನ್ನು ಆಲಿಸಿರಿ. ॥1॥
ಬಾಬಾರವರು ತೋಟವನ್ನು ಹೇಗೆ ನಿರ್ಮಾಣ ಮಾಡಿದರು ಮತ್ತು ತಾವೇ ಸ್ವತಃ ನೀರನ್ನು ಹಾಯಿಸುತ್ತ ಹೇಗೆ ಕಾಪಾಡಿದರು, ಗ೦ಗಾಗೀರ್‌ ಮತ್ತಿತರ ಸಂತರ ಸಂಗ ಮಾಡಿದರು ಅಂತಹ ಪಾವನ ಕತೆಯನ್ನು ಕೇಳಿರಿ. ॥2॥
ಅನ೦ತರ ಬಾಬಾರವರು ಸ್ವಲ್ಪ ಕಾಲ ಮರೆಯಾಗಿದ್ದವರು. ಈ ಮಾನವರತ್ನ ಮುಸಲ್ಮಾನನ ಮನೆಯ ಮದುವೆ ದಿಬ್ಬಣದ ಜೊತೆಯಲ್ಲಿ ಹೇಗೆ ಶಿರಡಿಗೆ ಹಿಂತಿರುಗಿದರು ಎಂಬುದನ್ನು ಹೇಳುತ್ತೇನೆ. ॥3॥
ಅದಕ್ಕೆ ಮೊದಲು ದೇವಿದಾಸನು ಶಿರಡಿಯಲ್ಲಿ ನೆಲೆಯೂರಿದ್ದನು. ಅನಂತರ ಜಾನಕೀದಾಸ ಎಂಬ ತಪಸ್ವಿಯೂ ಅಲ್ಲಿಗೆ ಬಂದಿದ್ದನು. ॥4॥
ಇವೆಲ್ಲವೂ ಯಾವ ರೀತಿ ನಡೆದವು, ನಾನು ಅದನ್ನೆಲ್ಲ ವಿವರವಾಗಿ ಹೇಳುತ್ತೇನೆ. ಶ್ರೋತೃಗಳೇ, ಆದರಪೂರ್ವಕವಾಗಿ ಗಮನವಿಟ್ಟು ಕೇಳಿರಿ. ॥5॥
ಔರಂಗಾಬಾದ್‌ ಜಿಲ್ಲೆಯ ಧೂಪ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ಭಾಗ್ಯತಾಲಿಯಾದ ಮುಸಲ್ಮಾನನಿದ್ದನು. ಅವನ ಹೆಸರು ಚಾಂದಪಾಟೀಲ. ॥6॥
ಅವನು ಔರಂಗಾಬಾದಿಗೆ ಹೋಗುತ್ತಿದ್ದಾಗ ಅವನ ಕುದುರೆಗಳಲ್ಲಿ ಒಂದು ತಪ್ಪಿಸಿಕೊಂಡಿತು. ಸುಮಾರು 2 ತಿಂಗಳವರೆಗೆ ಅದರ ಸುಳಿವಿರಲಿಲ್ಲ. ಅವನು ನಿರಾಶನಾದನು. ॥7॥
ಪಾಟೀಲನು ಪೂರ್ಣ ನಿರಾಶನಾಗಿ, ಕುದುರೆ ಕಳೆದುಹೋಗಿದ್ದರಿಂದ ಬಹಳ ಸಂಕಟಪಟ್ಟನು. ಅದರ ಜೀನನ್ನು ತನ್ನ ಬೆನ್ನ ಮೇಲೆ ಹೊತ್ತು ಹಿಂತಿರುಗಲು ಪ್ರಾರಂಭಿಸಿದನು. ॥8॥
ಔರಂಗಾಬಾದ್‌ನಿಂದ 4 1/2 ಕೋಸು ಪಯಣಿಸಿದ ಮೇಲೆ, ದಾರಿಯಲ್ಲಿ ಒಂದು ಮಾವಿನ ಮರ ಸಿಕ್ಕಿತು. ಅದರ ಕೆಳಗೆ ಆ  ರತ್ನ(ಸಾಯಿ)ವನ್ನು ಕಂಡನು. ॥9॥
ತಲೆಯ ಮೇಲೆ ಟೋಪಿ ಮತ್ತು ದೇಹದ ಮೇಲೆ ಕಫಿನಿಯನ್ನು ಧರಿಸಿ, ಒಂದು ಮರದ ಕೋಲ(ಸಟಕ)ನ್ನು ಕಂಕುಳಲ್ಲಿಟ್ಟು ಹೊಗೆಸೊಪ್ಪನ್ನು ತನ್ನ ಚಿಮಣಿಯಲ್ಲಿ ಸೇದಲು ಪುಡಿಮಾಡುತ್ತ ಇದ್ದನು. ಆಗ ಒಂದು ವಿಚಿತ್ರ ಘಟನೆ ನಡೆಯಿತು. ॥10॥
ಚಾಂದ ಪಾಟೀಲನು ಪಕ್ಕದಲ್ಲಿ ಹಾದುಹೋದಾಗ ಫಕೀರನು ಕರೆಯುತ್ತಿದ್ದುದನ್ನು ಕೇಳಿದನು. "ಹೇ, ಬಾ ಇಲ್ಲಿ. ಒಂದು ದಮ್‌ ಎಳೆದುಕೋ; ಮತ್ತೆ ಮುಂದೆ ನಡಿ. ನೆರಳಿನಲ್ಲಿ ಸ್ವಲ್ಪಕಾಲ ಕುಳಿತುಕೋ". ॥11॥
ಫಕೀರನು ಕೇಳುತ್ತಾನೆ - "ಈ ಜೀನು ಏತಕ್ಕಾಗಿ"? ಪಾಟೀಲ ಉತ್ತರಿಸುತ್ತಾನೆ, "ನನ್ನ ಕುದುರೆ ತಪ್ಪಿಸಿಕೊಂಡಿದೆ". ಅನಂತರ ಫಕೀರನು ಹೇಳುತ್ತಾನೆ, "ಹೋಗು, ಆ ನಾಲೆಯ ಹತ್ತಿರ ಹುಡುಕು". ತಕ್ಷಣವೇ ಕುದುರೆಯು ಕಾಣಿಸಿತು. ॥12॥
ಚಾಂದಪಾಟೀಲನು ಆಶ್ಚರ್ಯಚಕಿತನಾದನು. ಮನಸ್ಸಿನಲ್ಲೇ ತಾನೊಬ್ಬ 'ಅವಲಿಯ'ನ್ನು ಭೇಟಿಮಾಡಿದೆನೆಂದು ಯೋಚಿಸಿದನು. ಅವನ ಶಕ್ತಿ ಅಪರಿಮಿತ. ಅವನನ್ನು ಸಾಮಾನ್ಯ ಮಾನವನೆಂದು ಕರೆಯುವ ಹಾಗಿಲ್ಲ. ॥13॥
ಅನಂತರ ಪಾಟೀಲನು ಕುದುರೆಯೊಂದಿಗೆ ಸ್ಥಳಕ್ಕೆ ಬಂದನು. ಫಕೀರನು ಅವನನ್ನು ಪಕ್ಕದಲ್ಲೇ ಕುಳ್ಳಿರಿಸಿಕೊ೦ಡನು. ನಂತರ ತನ್ನ ಕೈಯಲ್ಲಿ ಚಿಮಟವನ್ನು ತೆಗೆದುಕೊ೦ಡನು. ॥14॥
ಅನ೦ತರ ಅವನು ಅದನ್ನು ನೆಲದ ಮಣ್ಣಿನ ಒಳಗೆ ಚುಚ್ಚಿದನು. ಒಂದು ಕೆಂಡವನ್ನು ತೆಗೆದನು. ಅದನ್ನು ತನ್ನ ಕೈಯಲ್ಲಿದ್ದ ಚಿಲುಮೆಯಲ್ಲಿ ಹಾಕಿದನು. ನಂತರ ಅವನು ತನ್ನ ಸಟಕವನ್ನು ಎತ್ತಿಕೊ೦ಡನು. ॥15॥
ಮತ್ತೆ ಅಲ್ಲಿ ಚಿಲುಮೆಗೆ ಬೇಕಾದ ಚಪ್ಪಿಯನ್ನು ಒದ್ದೆಮಾಡಲು ನೀರು ಇರಲಿಲ್ಲ. ಅದಕ್ಕಾಗಿ ಅವನು ಸಟಕವನ್ನು ನೆಲಕ್ಕೆ ಬಡಿಯಲು ಅಲ್ಲಿ ನೀರು ಚಿಮ್ಮಿತು. ॥16॥
ಚಪ್ಪಿಯನ್ನು ನೀರಿನಲ್ಲಿ ನೆನೆಸಿ ಅದನ್ನು ಹಿಂಡಿ ಒಣಗಿಸಲಾಯಿತು. ಅವನು ಅದನ್ನು ಚಿಲುಮೆಗೆ ಸುತ್ತಿದನು. ಅದನ್ನು ತಾನೇ ಒಮ್ಮೆ ಸೇದಿ ನಂತರ ಪಾಟೀಲನನ್ನೂ ಸೇದುವಂತೆ ಮಾಡಿದನು. ಪಾಟೀಲನಾದರೋ ದಿಗ್ಬ್ರಮೆಹೊಂದಿದನು. ॥17॥
ಅವನು ಫಕೀರನನ್ನು ತನ್ನ ಮನೆಗೆ ಬರಬೇಕೆಂದು ಪ್ರಾರ್ಥಿಸಿದನು. ಈ ದಿವ್ಯ ಲೀಲೆಗಳ ಪ್ರದರ್ಶನಕಾರನಾದ ಫಕೀರನು ಅವನ ಮಾತಿಗೆ ಒಪ್ಪಿದನು. ॥18॥


ಮಾರನೆಯ ದಿನ ಅವನು ಹಳ್ಳಿಗೆ ಹೋದನು. ಸ್ವಲ್ಪ ಸಮಯ ಪಾಟೀಲನ ಜೊತೆ ಇದ್ದನು. ನಂತರ ಶಿರಡಿಗೆ ಹಿಂತಿರುಗಿದನು. ॥19॥
ಈ ಚಾಂದಪಾಟೀಲನು ಕಾರಭಾರಿ. ಧೂಪಖೇಡ ಹಳ್ಳಿಯ ಗ್ರಾಮಾಧಿಕಾರಿಯೂ ಆಗಿದ್ದನು. ಅವನ ಪತ್ನಿಯ ಸೋದರಳಿಯನ ಮದುವೆಯು ಶಿರಡಿಯ ಹುಡುಗಿಯೊಂದಿಗೆ ಆಯೋಜಿಸಲಾಗಿತ್ತು. ॥20॥
ಚಾಂದಭಾಯಿಯ ಪತ್ನಿಯ ಸೋದರಳಿಯನಿಗೆ ಶಿರಡಿಯವಿವಾಹಯೋಗ್ಯ ವಧುವಿನ ಜೊತೆ ಮದುವೆ ನಿಗದಿಪಡಿಸಲಾಗಿದ್ದು ಸುಯೋಗವೇ ಸರಿ. ॥21॥
ಕುದುರೆಗಳು, ಗಾಡಿಗಳು, ಇವುಗಳೊಡನೆ ಮದುವೆಯ ದಿಬ್ಬಣ ಶಿರಡಿಯ ಕಡೆಗೆ ಹೊರಟಿತು. ಚಾ೦ದಭಾಯಿಯ ಮೇಲಿನ ಪ್ರೀತಿಯಿ೦ದ ಬಾಬಾರವರೂ ದಿಬ್ಬಣದ ಜೊತೆ ಸೇರಿದರು. ॥22॥
ಮದುವೆಯು ನೆರವೇರಿತು. ಮದುವೆಯ ಪರಿವಾರ ಹಿಂತಿರುಗಿತು. ಬಾಬಾರವರು ಮಾತ್ರ ಅಲ್ಲಿಯೇ ಉಳಿದರು ಮತ್ತು ಅಲ್ಲಿಯೇ ನೆಲೆಸಿದರು. ಈ ರೀತಿ ಶಿರಡಿಯ ಭಾಗ್ಯ ಉದಯಿಸಿತು. ॥23॥
ಸಾಯಿಯು ಅವಿನಾಶಿ ಮತ್ತು ಪುರಾತನರು. ಹಿಂದುವೂ ಅಲ್ಲ ಮುಸಲ್ಮಾನನೂ ಅಲ್ಲ. ಅವರಿಗೆ ಯವುದೇ ಜಾತಿಯಾಗಲಿ,  ಕುಲವಾಗಲಿ, ಗೋತ್ರವಾಗಲಿ ಇಲ್ಲ. ಅವರು ಆತ್ಮಸಾಕ್ಷಾತ್ಕಾರ ಪಡೆದ ಮಹಾತ್ಮನೆಂದು ತಿಳಿ. ॥24॥
ಜನರು "ಸಾಯಿ, ಸಾಯಿ" ಎಂದು ಕರೆದರು. ಈ ಹೆಸರು ಹೇಗೆ ಬಂತು? "ಬಾ ಸಾಯಿ" ಎಂದು ಗೌರವಪೂರ್ವಕವಾಗಿ ಸ್ಥಾಗತಿಸಲ್ಪಟ್ಟರು. ಅದೇ ರೀತಿ ಸಂಬೋಧಿಸಲ್ಪಟ್ಟರು. ॥25॥
ಖಂಡೋಬಾ ಮಂದಿರದ ಹತ್ತಿರ ಮ್ಹಾಲಸಾಪತಿಯವರ ಒಕ್ಕಣಿ ಮಾಡುವ ಜಾಗದಲ್ಲಿ ಬಾಬಾರವರು ಮದುವೆ ದಿಬ್ಬಣದ ಜೊತೆಯಲ್ಲಿ ಬಂದಿಳಿದಾಗ, ಆ ದಿನದಂದು ಈ ಹೆಸರು ಕೊಡಲಾಯಿತು. ॥26॥
ಪ್ರಾರಂಭದಲ್ಲಿ ಆ ಒಕ್ಕಣಿಯ ಜಾಗ ಮ್ಹಾಲಸಾಪತಿಯವರದ್ದಾಗಿತ್ತು. ಆನಂತರ ಅದು ಅಮೀನಾಭಾಯಿಯವರದಾಯಿತು. ಮದುವೆಯ ದಿಬ್ಬಣ ಬಂದಾಗ ಅದು ಒ೦ದು ಆಲದ ಮರದ ಕೆಳಗಡೆ ಇಳಿಯಿತು. ॥27॥
ಗಾಡಿಗಳನ್ನು ಆ ಒಕ್ಕಣೆಯ ಭೂಮಿಯಲ್ಲಿ ಬಿಡಿಸಲಾಯಿತು. ಖಂಡೋಬಾ ಮಂದಿರದ ಮುಂದೆ ಇದ್ದ ವಿಶಾಲವಾದ ಬಯಲಿನಲ್ಲಿ ನಿಲ್ಲಿಸಲಾಯಿತು. ಬಾಬಾರವರು ಮದುವೆಯ ಇತರ ಅತಿಥಿಗಳೊಡನೆ ಅಲ್ಲಿ ಇಳಿದರು. ॥28॥
ಈ ಬಾಲ ಫಕೀರನು ಗಾಡಿಯಿಂದ ಇಳಿದಕೂಡಲೇ ಮೊದಲು ಭಗತ್ ‌ಮ್ಹಾಲಸಾಪತಿಯವರ ದೃಷ್ಟಿಗೆ ಬಿದ್ದನು. ಅವನು ಮುಂದೆಹೋಗಿ "ಬಾ ಸಾಯಿ, ಸ್ವಾಗತ" ಎಂದು ಹೇಳಿದನು. ಅಲ್ಲಿಂದೀಚೆಗೆ ಅವನು ಆ ಹೆಸರಿನಿಂದಲೇ ಕರೆಯಲ್ಪಟ್ಟನು. ॥29॥


ಅನ೦ತರ, ಆ ಸಮಯದಿಂದಲೇ ಎಲ್ಲರೂ ಅವನನ್ನು "ಸಾಯಿ, ಸಾಯಿ" ಎಂದು ಕರೆದರು. ಅದು ಅವನ ಅಂಕಿತ ನಾಮವಾಯಿತು. ॥30॥
ಅವನು ಅಲ್ಲಿ ಹುಕ್ಕವನ್ನು ಸೇದುತ್ತಿದ್ದನು. ಮಸೀದಿಯಲ್ಲಿ ವಾಸಮಾಡುತ್ತ ದೇವಿದಾಸನ ಸಹವಾಸದಲ್ಲಿ ಸಂತೋಷವಾಗಿರುತ್ತಿದ್ದನು. ಹೀಗೆ ಆತ ಶಿರಡಿಯಲ್ಲಿ ಆನ೦ದವಾಗಿದ್ದನು. ॥31॥
ಕೆಲವು ಸಲ ಅವನು ಚಾವಡಿಯಲ್ಲಿ ಕುಳಿತಿರುತ್ತಿದ್ದನು. ಕೆಲವೊಮ್ಮೆ ದೇವಿದಾಸನ ಸಹವಾಸದಲ್ಲಿ, ಕೆಲವು ಸಲ ಮಾರುತಿ ದೇವಸ್ಥಾನದಲ್ಲಿ ಸದಾಕಾಲ ಸ್ವಾತ್ಮಾನಂದದಲ್ಲಿ ಸಂಪೂರ್ಣವಾಗಿ ಮುಳುಗಿರುತ್ತಿದ್ದನು. ॥32॥
ಈ ದೇವೀದಾಸನು ಈಗಾಗಲೇ ಶಿರಡಿಯಲ್ಲಿ ಬಾಬಾರವರು ಶಿರಡಿಗೆ ಬರುವ ಮೊದಲೇ ನೆಲಸಿದ್ದನು. ಆನಂತರ ಮಹಾನುಭವ ಪಂಥದ ಸನ್ಯಾಸಿ ಜಾನಕೀದಾಸ ಗೋಸಾವಿ ಬ೦ದನು. ॥33॥
ಜಾನಕೀದಾಸರ ಜೊತೆಯಲ್ಲಿ ಸಾಯಿ ಮಹಾರಾಜರು ಕುಳಿತು ಮಾತುಕತೆ ಆಡುತ್ತಿದ್ದರು. ಇಲ್ಲದಿದ್ದಲ್ಲಿ ಜಾನಕೀದಾಸರು ಮಹಾರಾಜರು  ಕುಳಿತಿದ್ದ ಜಾಗಕ್ಕೇ ಬರುತ್ತಿದ್ದರು. ॥34॥
ಇಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು ಮತ್ತು ನಿತ್ಯವೂ ಭೇಟಿಯಾಗುತ್ತಿದ್ದರು. ಅವರ ಈ ರೀತಿಯ ಸಮಾಗಮ ಪ್ರತಿಯೊಬ್ಬರಿಗೂ ಅತ್ಯಂತ ಸಂತಸ ತರುತ್ತಿತ್ತು. ॥35॥
ಅದೇ ರೀತಿ, ಒಬ್ಬ ಪ್ರಸಿದ್ಧ ವೈಷ್ಣವ ಗೃಹಸ್ಥಾತ್ರಮಿ ಗಂಗಾಗೀರ್‌ ಮತ್ತು ಪ್ರಣತಾಂಬೆಯ ಶಿರಡಿಗೆ ಆಗಾಗ್ಗೆ ಬಂದು ಹೋಗುವ ಯಾತ್ರಾರ್ಥಿಯಾಗಿದ್ದರು. ॥36॥
ಆರಂಭದಲ್ಲಿ ಗಂಗಾಗೀರನ ಅಚ್ಚರಿ ಬಹಳವಾಗಿತ್ತು. ಸಾಯಿಯು ಎರಡೂ ಕೈಗಳಿಂದ ಮಣ್ಣಿನ ಮಡಕೆಗಳಲ್ಲಿ ಬಾವಿಯಿಂದ ನೀರನ್ನು ಹೊತ್ತು ತರುತ್ತಿದ್ದರು. ॥37॥
ಅದೇ ರೀತಿ ಬುವಾನ ದೃಷ್ಟಿಗೆ ಸಾಯಿಯು ಮೊದಲು ಕಂಡಾಗ ಅವನು ಹೇಳಿದ್ದು - "ಇದು ಶಿರಡಿಯ ಮಹಾಪುಣ್ಯ ಈ ರೀತಿಯ ರತ್ನ ಶ್ರೇಷ್ಠವು ಶಿರಡಿಯಲ್ಲಿರುವುದು ಶಿರಡಿಯ ಮಹಾಭಾಗ್ಯ. ಶಿರಡಿಯು ಧನ್ಯ" ಎಂದು ಸ್ಪಷ್ಟೀಕರಿಸಿದನು. ॥38॥
ಈ ದಿನ ಅವನು ಹೆಗಲಮೇಲೆ ನೀರನ್ನು ಹೊತ್ತು ತರುತ್ತಿದ್ದರೂ, ಅವನು ಸಾಧಾರಣ ಮಾನವನಲ್ಲ. ಅವನ ಪಾದ ಸೋಕಿದ ಶಿರಡಿಯ ನೆಲವೇ ಧನ್ಯ ॥39॥
ಅದೇ ರೀತಿ ಮತ್ತೊಬ್ಬ ಪ್ರಖ್ಯಾತ ಸಂತ ಆನಂದನಾಥರು ಅವರ (ಸಾಯಿ) ಬಗ್ಗೆ, ಅವರು ಅದ್ಭುತಗಳನ್ನು ಮಾಡುವರೆಂದು ಭವಿಷ್ಯ ನುಡಿದಿದ್ದರು. ॥40॥
ಈ ಮಹಾ ಪ್ರಸಿದ್ಧ ಆನಂದನಾಥರು ಯೇವಲಾ ಎಂಬ ಗ್ರಾಮದಲ್ಲಿ ಒಂದು ಮಠವನ್ನು ಸ್ಥಾಪಿಸಿದ್ದರು. ಒಮ್ಮೆ ಅವರು ಕೆಲವು ಶಿರಡಿ ನಿವಾಸಿಗಳೊಂದಿಗೆ ಶಿರಡಿಗೆ ಬಂದರು. ॥41॥
ಆನಂದನಾಥರು ಅಕ್ಕಲಕೋಟೆಯ ಮಹಾಪುರುಷರ ಶಿಷ್ಯರು. ಸಾಯಿಯನ್ನು ನೋಡಿದ ಕೂಡಲೇ ಘೋಷಿಸಿದರು -"ಇದು ನಿಜವಾಗಿಯೂ ಒಂದು ವಜ್ರ, ಒ೦ದು ಅಸಲಿ ವಜ್ರ" ಎಂದು. ॥42॥
"ಈದಿನ ಅವನು ಒ೦ದು ಕಸದ ರಾಶಿಯ ಮೇಲೆ ಇದ್ದರೂ (ತಿರಸ್ಕರಿಸಲ್ಪಟ್ಟಿದ್ದರೂ) ಇದು ಕೇವಲ ಒಂದು ಹರಳಲ್ಲ, ಆದರೆ ಅಸಲಿ ವಜ್ರ" ಎಂದು ಘೋಷಿಸಿದರು. ಇವು ಬಾಬಾರವರು ಇನ್ನೂ ಬಾಲಕನಿದ್ದಾಗ ಹೇಳಿದ ಆನಂದನಾಥರ ಮಾತುಗಳು. ॥43॥
"ನನ್ನ ಮಾತುಗಳನ್ನು ಧ್ಯಾನದಿಂದ ಕೇಳಿರಿ. ಅನಂತರ ನೀವು ಇವುಗಳನ್ನು ಮತ್ತೆ ಜ್ಞಾಪಿಸಿಕೊಳ್ಳುವಿರಿ" ಈ ರೀತಿ ಭವಿಷ್ಯವಾಣಿಯನ್ನು ನುಡಿದು ಯೇವಾಲ ಗ್ರಾಮಕ್ಕೆ ಹಿಂತಿರುಗಿದರು. ॥44॥
ಆ ದಿನಗಳಲ್ಲಿ ಸಾಯಿಯು ಯುವಕರಾಗಿದ್ದು, ಕೇಶಮುಂಡನವನ್ನೂ ಮಾಡಿಕೊಳ್ಳದೆ ಕೂದಲನ್ನು ಉದ್ದವಾಗಿ ಬೆಳೆಸಿದ್ದರು ಮತ್ತು ಒಬ್ಬ ಕುಸ್ತಿಪಟುವಿನ ರೀತಿ ಉಡುಪು ಧರಿಸುತ್ತಿದ್ದರು. ॥45॥
ಬಾಬಾರವರು ರಾಹತಾಗೆ ಹೋದಾಗಲೆಲ್ಲಾ ಚಂಡು ಹೂವು ಮತ್ತು ಮಲ್ಲಿಗೆ ಹೂವಿನ ಸಸಿಗಳನ್ನು ತರುತ್ತಿದ್ದರು. ಅವುಗಳನ್ನು ಬಂಜರು ಭೂಮಿಯಲ್ಲಿ ನೆಟ್ಟು ದಿನವೂ ನೀರು ಹಾಕುತ್ತಿದ್ದರು. ॥46॥
ವಾಮನ ತಾತ್ಯಾ ಎಂಬ ಭಕ್ತನೊಬ್ಬನು ನಿತ್ಯವೂ ಎರಡು ಹಸಿ ಮಡಕೆಗಳನ್ನು ಬಾಬಾರವರಿಗೆ ಕೊಡುತ್ತಿದ್ದನು. ಅದರಿಂದ ಬಾಬಾರವರು ತಮ್ಮ ಕೈಗಳಿಂದಲೇ ನೀರು ಹಾಕುತ್ತಿದ್ದರು. ॥47॥
ಬಾಬಾರವರು ಬಾವಿಯ ಹತ್ತಿರವಿದ್ದ ಕೊಳದಿಂದ ನೀರು ತುಂಬಿ ಹೆಗಲಮೇಲೆ ಹೊತ್ತು ತರುತ್ತಿದ್ದರು. ಸೂರ್ಯಾಸ್ತಮ ಸಮಯದಲ್ಲಿ ಆ ಮಡಕೆಗಳನ್ನು ಬೇವಿನ ಮರದ ಬುಡದಲ್ಲಿ ಇಡುತ್ತಿದ್ದರು. ॥48॥
ನೆಲದ ಪೀಲೆ ಇಟ್ಟ ಕೂಡಲೇ ಆ ಮಡಕೆಗಳು ಒಡೆದು ಹೋಗುತ್ತಿದ್ದವು. ಮಾರನೆಯ ದಿನ ಬೆಳಿಗ್ಗೆ ತಾತ್ಯಾ ಹೊಸ ಮಡಕೆಗಳನ್ನು ತಂದು ಕೊಡುತ್ತಿದ್ದನು. ॥೪9॥
ಸುಟ್ಟ ಮಡಕೆಯು ಬಹಳ ಬಾಳಿಕೆ ಬರುತ್ತದೆ. ಆದರೆ ಬಾಬಾರವರಿಗೆ ಕೇವಲ ಹೊಸದಾದ ಹಸಿ ಮಡಕೆಗಳೇ ಬೇಕಾಗಿದ್ದವು. ಆದ್ದರಿಂದ ಸುಡುವ ಗೋಜಿಗೇ ಹೋಗದೆ ಕುಂಬಾರನು ಮಡಕೆಗಳನ್ನು ಮಾರುತ್ತಿದ್ದನು. ॥50॥
ಮೂರು ವರ್ಷಗಳ ಕಾಲ ಇದು ಮುಂದುವರೆಯಿತು. ನಿರರ್ಥಕವಾದ ಜಮೀನು ಒಂದು ತೋಟವಾಗಿ ಪರಿವರ್ತಿತವಾಯಿತು. ಈ ನೆಲದ ಮೇಲೆಯೇ ಇಂದು 'ವಾಡಾ' ನೆಲೆಸಿದೆ ಹಾಗೂ ಭಕ್ತರಿಗೆ ನಿಕಟ ಸಂಬಂಧ ಉಂಟುಮಾಡುವ ಸ್ಥಳವಾಗಿದೆ. ॥51॥
ಇಲ್ಲಿ, ಬೇವಿನ ಮರದ ಕೆಳಗಡೆ ಭಾಯಿ ಎಂಬ ಭಕ್ತನು ಅಕ್ಕಲಕೋಟೆ ಸ್ವಾಮಿಯವರ ಪಾದುಕೆಗಳನ್ನು ಭಕ್ತರು ಪೂಜಿಸಲೆಂದು ಸ್ಥಾಪನೆಮಾಡಿದ್ದಾನೆ. ॥52॥
ಅಕ್ಕಲಕೋಟೆಯ ಸ್ವಾಮಿ ಸಮರ್ಥರು ಭಾಯಿಯ ಉಪಾಸ್ಯ ದೈವವಾಗಿದ್ದರು. ಭಾಯಿಯು ನಿತ್ಯವೂ ಭಕ್ತಿಯಿಂದ ಅವರ ಚಿತ್ರಪಟವನ್ನು ಪೂಜಿಸುತ್ತಿದ್ದನು. ॥53॥
ಅವನೊಮ್ಮೆ ಅಕ್ಕಲಕೋಟೆಗೆ ಹೋಗಿ ಅಲ್ಲಿ ಪಾದುಕೆಗಳ ದರ್ಶನವಾಡಿ ತನ್ನ ಮನಃಪೂರ್ವಕವಾಗಿ ಪೂಜಿಸಲು ಯೋಚಿಸಿದನು. ॥54॥
ಮಾರನೆಯ ದಿನ ಬೊಂಬಾಯಿನಿಂದ ಹೊರಡಲು ಸಿದ್ಧನಾದನು. ಆದರೆ ಅವನ ನಿರ್ಧಾರ ನೆರವೇರದೆ ಬದಲಾಗಿ ಶಿರಡಿಗೆ ಹೊರಟನು. ॥55॥
ಹೊರಡುವ ಹಿಂದಿನ ದಿನ ಅವನಿಗೆ ಒಂದು ಸ್ಪಪ್ನವಾಯಿತು. ಅಕ್ಕಲಕೋಟೆ ಸ್ವಾಮಿಗಳು ಆಜ್ಞಾಪಿಸುತ್ತಾರೆ - "ಈಗ ಶಿರಡಿಯೇ ನನ್ನ ವಾಸ ಸ್ಥಾನ. ನೀನು ಅಲ್ಲಿಗೇ ಹೋಗು" ಎ೦ದು. ॥56॥
ಅತಿ ಪೂಜ್ಯಭಾವನೆಯಿಂದ ಆಜ್ಞಾಧಾರಕನಾಗಿ ಭಾಯಿಯು ಬೊಂಬಾಯಿನಿಂದ ಹೊರಟನು. ಶಿರಡಿಯಲ್ಲಿ ಆರು ತಿಂಗಳುಗಳ ಕಾಲ ನೆಲೆಸಿ ಶಾಂತಿ, ಸಂತೋಷಗಳನ್ನು ಹೊಂದಿದರು. ॥57॥
ಭಾಯಿಯು ಪೂರ್ಣನಿಷ್ಠಾವಂತನಾಗಿದ್ದನು. ಆದ್ದರಿಂದ ಸ್ಪಷ್ನದರ್ಶನದ ಸ್ಮರಣಾರ್ಥವಾಗಿ ಸ್ವಾಮಿಯವರ ಪಾದುಕೆಗಳನ್ನು ಬೇವಿನಮರದ ಕೆಳಗೆ ಸ್ಥಾಪಿಸಿದನು. ॥58॥
ಶಕೆ 1834ರಲ್ಲಿ ಶುಕ್ಲ ಪಕ್ಷ; ಶ್ರಾವಣ ಮಾಸದ ಒಂದು ಮಂಗಳಕರವಾದ ದಿನದಂದು ಪಾದುಕೆಗಳನ್ನು ಬೇವಿನಮರದ ಕೆಳಗೆ ಪೂರ್ವಕವಾಗಿ ನಾಮಸಂಕೀರ್ತನೆ ಮಾಡುತ್ತ ಪ್ರತಿಷ್ಠಾಪಿಸಿದನು. ॥59॥
ಆ ಶುಭಮುಹೂರ್ತದಲ್ಲಿ ಪ್ರತಿಷ್ಠಾಪನಾ ಸಮಾರಂಭವು ದಾದಾ ಕೇಳ್ಕರ್‌ರವರಿಂದ ನೆರವೇರಿಸಲ್ಪಟ್ಟಿತು. ಶಾಸ್ತ್ರಪೂರ್ವಕ ವಿಧಿವಿಧಾನಗಳು ಉಪಾಸನಿ ಅವರಿಂದ ನೆರವೇರಿಸಲ್ಪಟ್ಟಿತು. ॥60॥
ಮುಂದೆ, ಆಚರಣೆಗಳನ್ನು ದೀಕ್ಷಿತ್‌ ಎ೦ಬ ಬ್ರಾಹ್ಮಣನಿಗೆ ಒಪ್ಪಿಸಲಾಯಿತು. ಅವನು ಪೂಜೆ ಮಾಡುವವನು. ಆಡಳಿತ ವ್ಯವಸ್ಥೆಯನ್ನು ಸಗುಣಿ ಎಂಬ ಭಕ್ತನಿಗೆ ವಹಿಸಲಾಯಿತು. ಇದು ಪಾದುಕೆಗಳ ಕತೆಯು. ॥61॥
ಈ ರೀತಿ ಸಂತರು ಅನಿರ್ಬಾಧಿತರು. ಭಗವ೦ತನ ನಿಜವಾದ ಅವತಾರ ಪುರುಷರು. ಭೂಮಿಯ ಮೇಲೆ ಮುಕ್ತಿಗಾಗಿ ಮತ್ತು ಮಾನವ ಕಲ್ಯಾಣಕ್ಕಾಗಿ ಅವತರಿಸುತ್ತಾರೆ. ॥62॥
ಕೆಲವು ದಿನಗಳ ನಂತರ ಒಂದು ವಿಶೇಷ ನಡೆಯಿತು. ಶ್ರೋತೃಗಳು ಶ್ರದ್ಧೆಯಿಂದ, ಗೌರವದಿಂದ ಕೇಳಿದಲ್ಲಿ ಆತ್ಚರ್ಯಪಡುತ್ತಾರೆ. ॥63॥
ಅಲ್ಲಿ ವೀಳೆಯದೆಲೆ ಮಾರುವ ಮೊಹಿದೀನ್‌ ಭಾಯಿ ಎಂಬುವವನಿದ್ದನು. ಅವನ ಮತ್ತು ಬಾಬಾರವರ ಮಧ್ಯೆ ಒಂದು ವಾಗ್ವಾದ ಹುಟ್ಟಿ ಕುಸ್ತಿ ಪಂದ್ಯಕ್ಕೆ ಪ್ರಜ್ವಲಿಸಿತು. ॥64॥
ಇಬ್ಬರೂ ನುರಿತ ಕುಸ್ಸಿಪಟುಗಳೆ. ಆದರೆ ವಿಧಿಯು ಶಕ್ತಿಯ ಮೇಲೆ ನಿರ್ಧಾರವಾಗುತ್ತದೆ. ಮೊಹಿದೀನ್‌ ಶಕ್ತಿವ೦ತನೆಂದು ಸಾಧಿಸಿದನು. ಬಾಬಾರವರು ನಿಶ್ಯಕ್ತರಾಗಿದ್ದರಿಂದ ಸೋತರು. ॥6॥
ಅನ೦ತರ ಅವರು ಒಂದು ನಿರ್ಧಾರ ತೆಗೆದುಕೊಂಡರು. ಬಾಬಾರವರು ಸಂಪೂರ್ಣವಾಗಿ ತಮ್ಮ ಉಡುಗೆಯನ್ನು ಬದಲಿಸಿದರು. ಅವರು ಒಂದು ಕಫನಿಯನ್ನು ಧರಿಸಿ, ಒಂದು ಕೌಪೀನವನ್ನು ಧರಿಸಿದರು. ತಮ್ಮ ತಲೆಯ ಸುತ್ತಲೂ ಒಂದು ಬಟ್ಟೆಯನ್ನು ಸುತ್ತಿದರು. ॥66॥
ಅವರು ಒಂದು ಗೋಣಿಚೀಲವನ್ನು ಕುಳಿತುಕೊಳ್ಳಲು ಮತ್ತು ಹಾಸಿಗೆಯನ್ನಾಗಿಸಲು ಉಪಯೋಗಿಸುತ್ತಿದ್ದರು. ಅವರು ಹರಿದು ಹೋದ, ಸವೆದು ಹೋದ ಚಿಂದಿಗಳಿಂದ ತೃಪ್ತರಾಗಿದ್ದರು. ॥67॥
ಸಾಯಿಯು ನಿತ್ಯವೂ ಹೇಳುತ್ತಾರೆ, - "ಬಡತನವು ಒಡೆತನಕ್ಕಿಂತ ಮಿಗಿಲು, ಸಿರಿತನಕ್ಕಿಂತ ಅತಿ ಉತ್ತಮ, ಪರಮಾತ್ಮನು ಬಡವರ ಬಂಧು"॥68॥
ಗ೦ಗಾಗೀರರೂ ಇದೇ ರೀತಿಯ ಸ್ಥಿತಿಯನ್ನು ದಾಟಿದ್ದರು. ಅವರಿಗೆ ಅಂಗಸಾಧನೆ ಅತಿ ಪ್ರಿಯವಾಗಿತ್ತು. ಒಮ್ಮೆ ಒಂದು ಕುಸ್ತಿಯ ಆಟದಲ್ಲಿ ಮಗ್ನರಾಗಿದ್ದಾಗ ಅವರಿಗೂ ಇದೇ ರೀತಿಯ ನಿರ್ವಿಕಾರತೆಯ ಭಾವ ಉಂಟಾಯಿತು. ॥69॥
ಒಂದು ಪ್ರಾಪ್ತ ಕಾಲದಲ್ಲಿ ಅವರಿಗೆ ಒಬ್ಬ ಸಿದ್ಧನ ವಾಣಿಯು ಕೇಳಿಸಿತು. "ಪ್ರತಿಯೊಬ್ಬನ ದೇಹ, ಪರಮಾತ್ಮನ ಸೇವೆಗಾಗಿ ಇದೆ ಮತ್ತು ಆ ಪರಮಾತ್ಮನ ಸೇವೆಯಲ್ಲಿಯೇ ಸವೆದುಹೋಗಬೇಕು." ॥70॥
ಅವರು ಕುಸ್ತಿಮಾಡುತ್ತಿರುವಾಗಲೇ ಈ ಅನುಗ್ರಹವಾಣಿಯು ಕೇಳಿಸಿತು. ಆದುದರಿಂದ ಅವರು ತಮ್ಮ ಸಾಂಸಾರಿಕ ಜೀವನವನ್ನು ತ್ಯಜಿಸಿ ಅಧ್ಯಾತ್ಮದ ಹಾದಿಯನ್ನು ಹಿಡಿದಿದ್ದರು. ॥71॥
ಪುರಿತಂಬೆಯ ಹತ್ತಿರ ನದಿಯ ಮಧ್ಯದಲ್ಲಿದ್ದ ಒಂದು ದ್ವೀಪದಲ್ಲಿ, ಬುವಾನ ಮಠವು ಇದ್ದಿತು. ಅಲ್ಲಿ ಕೆಲವರು ಶಿಷ್ಯರು ಅವರ ಸೇವೆಗಾಗಿ ನೆಲೆಸಿದ್ದರು. ॥72॥
ಸಾಯಿನಾಥರು ತಮಗೆ ಹಾಕಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ತಮ್ಮಷ್ಟಕ್ಕೆ ಎಂದೂ ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ॥73॥ 
ಹಗಲು ವೇಳೆ ಅವರು ಬೇವಿನಮರದ ಕೆಳಗೆ ಕುಳಿತಿರುತ್ತಿದ್ದರು. ಕೆಲವೊಮ್ಮೆ ಹಳ್ಳಿಯ ಹೊರವಲಯದಲ್ಲಿದ್ದ ಒಂದು ಹೊಳೆಯ ಪಕ್ಕದಲ್ಲಿದ್ದ ಬಾಬುಲ್‌ ಮರದ ಹರಡಿದ್ದ ಕೊಂಬೆಗಳ ನೆರಳಿನಲ್ಲಿ ಕುಳಿತಿರುತ್ತಿದ್ದರು. ॥74॥
ಕೆಲವು ಸಲ ಹಗಲಿನಲ್ಲಿ ಮನಸೋ ಇಚ್ಛೆ ತಿರುಗಾಡುತ್ತಿದ್ದರು. ಅಥವಾ ಮಧ್ಯಾಹ್ನದಲ್ಲಿ ಅಥವಾ ಬೆಳಗಿನ ಜಾವದಲ್ಲಿ ಸುಮಾರು ಇದು ಮೈಲು ದೂರದಲ್ಲಿರುವ ನೀಮಗಾಂವಕ್ಕೆ ನಡೆಯುತ್ತಿದ್ದರು. ॥75॥
ಪ್ರಸಿದ್ಧವಂಶವಾದ ತ್ರಿಂಬಕ್‌ಡಿಂಗ್ಲೆ ಕುಟುಂಬದವರು ನೀಮಗಾಂವನ ಜಾಗಿರದಾರಿಯನ್ನು ಹೊಂದಿದ್ದರು. ಬಾಬಾ ಸಾಹೇಬ್‌ ಡಿಂಗ್ಲೆ ಆ ಕುಟುಂಬದವನು. ಅವನನ್ನು ಕಂಡರೆ ಬಾಬಾಗೆ ಅತ್ಯಂತ ಪ್ರೀತಿ. ॥76॥
ಬಾಬಾರವರು ನೀಮ್‌ಗಾಂವನ್ನು ಸುತ್ತಿ ಬಂದಾಗಲೆಲ್ಲಾ ಅವನ ಮನೆಗೆ ಹೋಗಿ ಅವನೊಡನೆ ಬಹಳ ಪ್ರೀತಿಯಿಂದ ಮಾತನಾಡುತ್ತ ದಿನವನ್ನು ಕಳೆಯುತ್ತಿದ್ದರು. ॥77॥
ಅವನಿಗೆ ನಾನಾಸಾಹೇಬ್‌ ಎ೦ಬ ಕಿರಿಯ ಸೋದರನೊಬ್ಬನಿದ್ದನು. ಅವನಿಗೆ ಸಂತಾನವಿಲ್ಲದುದರಿಂದ ಖಿನ್ನ ಮನಸ್ಕನಾಗಿದ್ದನು. ॥78॥
ಅವನ ಮೊದಲ ಪತ್ನಿಯಿಂದ ಸಂತಾನದ ಸಾಧ್ಯತೆ ಇರಲಿಲ್ಲ. ಆದ್ದರಿಂದ ಅವನು ಎರಡನೆ ಬಾರಿ ಮದುವೆಯಾಗಿದ್ದನು. ಆದರೂ ವಿಧಿ ಬದಲಾಗಲಿಲ್ಲ. ವಿಧಿಬರಹವನ್ನು ತಪ್ಪಿಸುವವರಾರು? ॥79॥
ಅನ೦ತರ ಬಾಬಾಸಾಹೇಬರು ಸಾಯಿಯ ದರ್ಶನಕ್ಕಾಗಿ ಕಳಿಸಿದರು. ಸಾಯಿಯ ಆಶೀರ್ವಾದದಿಂದ ಒಬ್ಬ ಮಗನ ರೂಪದ ಪ್ರಸಾದ ಪಡೆದರು. ॥80॥
ಸಮಯ ಕಳೆದಂತೆ ಜನಸಮುದಾಯವು ಸಾಯಿಯ ದರ್ಶನಕ್ಕಾಗಿ ಮುಗಿಬೀಳುತ್ತಿತ್ತು. ಸಾಯಿಯ ಕೀರ್ತಿ ಹರಡಿ ಈ ವರ್ತಮಾನವು ಅಹಮದ್‌ನಗರವನ್ನು ತಲಪಿತು. ॥81॥
ಅಲ್ಲಿ ನಾನಾನು ಸರಕಾರಿ ವಲಯದಲ್ಲಿ ಓಡಾಡುತ್ತಿದ್ದನು. ಅಲ್ಲಿ ಅನೇಕ ಅಧಿಕಾರಿಗಳಿಂದ ಪ್ರಭಾವಿತನಾಗಿದ್ದು ಅವರಲ್ಲಿ ಚಿದಂಬರ ಕೇಶವ ಎನ್ನುವವನೊಬ್ಬನು ಜಿಲ್ಲಾಧಿಕಾರಿಗಳ ಕಾರ್ಯದರ್ಶಿಯಾಗಿದ್ದನು. ॥82॥
ಅವನಿಗೆ ಒಂದು ಪತ್ರ ಬರೆದು ಸಾಯಿ ಸಮರ್ಥರು ದರ್ಶನಕ್ಕೆ ಯೋಗ್ಯರು ಮತ್ತು ಅವನು ತನ್ನ ಪತ್ನಿ, ಪುತ್ರ ಮತ್ತು ಬಂಧುಮಿತ್ರರೊಡನೆ ಸಾಯಿಯ ದರ್ಶನಮಾಡಬೇಕೆಂದು ತಿಳಿಸಿದನು. ॥83॥
ಒಬ್ಬರಾದ ಮೇಲೊಬ್ಬರು ಈ ರೀತಿ ಅನೇಕ ಜನರು ಶಿರಡಿಗೆ ಬರಲು ಪ್ರಾರಂಭಿಸಿದರು. ಬಾಬಾರವರ ಕೀರ್ತಿ ಹರಡುತ್ತಿದ್ದಂತೆ ಭಕ್ತವೃಂದವೂ ಬೆಳೆಯತೊಡಗಿತು. ॥84॥
ಸಾಯಿಗೆ ಸಂಗದ ಅವಶ್ಯಕತೆಯಿಲ್ಲದಿದ್ದರೂ ದಿನವೆಲ್ಲ ಭಕ್ತಪರಿವಾರದಿಂದ ಸುತ್ತುವರೆದಿರುತ್ತಿದ್ದರು. ಆದರೆ ಸೂರ್ಯಾಸ್ತದನಂತರ ತಮ್ಮ ಶಿಥಿಲವಾದ ಮಸೀದಿಯಲ್ಲಿ ವಿತ್ರಮಿಸುತ್ತಿದ್ದರು. ॥85॥
ತಂಬಾಕಿನ ಚಿಲುಮೆ ಮತ್ತು ಒ೦ದು ಲೋಟ, ಜೊತೆಗೆ ಒಂದು ಸಟಕಾವನ್ನು ಯಾವಾಗಲೂ ತಮ್ಮೊಡನೆ ಇಟ್ಟುಕೊಳ್ಳುತ್ತಿದ್ದರು. ಮೊಣಕಾಲಿನವರೆಗಿನ ಒಂದು ಕಫನಿಯನ್ನು ಧರಿಸಿ ತಲೆಯ ಸುತ್ತ ಒಂದು ಬಿಳಿಯ ವಸ್ತ್ರವನ್ನು ಸುತ್ತಿಕೊಂಡಿರುತ್ತಿದ್ದರು. ॥86॥
ಆ ಒಗೆದ ವಸ್ತ್ರವನ್ನು ತಮ್ಮ ಎಡ ಕಿವಿಯ ಹಿಂದೆ ಕಲಾತ್ಮಕವಾಗಿ ಕೂದಲಿಗೆ ಗಂಟುಹಾಕಿ ಇಳಿಬಿಡುತ್ತಿದ್ದರು. ॥87॥
ಈ ರೀತಿ ಅವರ ಉಡುಪು ಇರುತ್ತಿತ್ತು. ಕೆಲವೊಮ್ಮೆ ಎಂಟು ದಿನಗಳವರೆಗೆ ಸ್ನಾನ ಮಾಡದೆ ಬರಿಗಾಲಲ್ಲಿ ಓಡಾಡುತ್ತಿದ್ದರು. ಅವರು ಕೇವಲ ಒಂದು ಗೋಣಿಚೀಲದ ಮೇಲೆ ಕುಳಿತಿರುತ್ತಿದ್ದರು. ॥88॥
ಅವರ ಆಸನವು ಸದಾ ಒಂದು ಚೀಲದ ತುಂಡು. ಅವರಿಗೆ ಮೆತ್ತನೆಯ ಒರಗುದಿ೦ಬು ಏನೆಂಬುದು ತಿಳಿದಿರಲಿಲ್ಲ. ಅವರಿಗೆ ಹಾಸಿಗೆ, ಆಡಂಬರಗಳು ಇರಲು ಹೇಗೆ ಸಾಧ್ಯ? ॥89॥
ಆ ದಿನಗಳಲ್ಲಿ, ಒಂದು ಹಳೆಯ ಚೀಲದ ತುಂಡು ಅವರ ಪ್ರೀತಿಪಾತ್ರ ಆಸನವಾಗಿತ್ತು. ಅದು 24 ಗಂಟೆಗಳೂ ಅಲ್ಲಿಯೇ ಇರಿತ್ತಿತ್ತು. ॥90॥
ಅದೊಂದೇ ಅವರ ಆಸನ ಮತ್ತು ಹಾಸಿಗೆ. ಅವರು ಕೌಪೀನವನ್ನು ಸೊಂಟಕ್ಕೆ ಬಿಗಿದಿರುತ್ತಿದ್ದರು. ಮತ್ತಾವುದೇ ಉಡುಪು ಇರಲಿಲ್ಲ, ಚಳಿಯನ್ನು ಓಡಿಸಲು ಕೇವಲ ಒಂದು ಧುನಿ ಇತ್ತು. ॥91॥
ಬಾಬಾರವರು ದಕ್ಷಿಣಾಭಿಮುಖವಾಗಿ ಎರಡು ಕಾಲುಗಳನ್ನೂ ಮಡಚಿ ಪದ್ಮಾಸನದಲ್ಲಿ ಕುಳಿತು ಎಡಗೈಯನ್ನು ಮಸೀದಿಯ ಕಟಕಟೆಯ ಮೇಲಿಟ್ಟು ಮುಂದಿರುವ ಧುನಿಯನ್ನು ತೀವುವಾಗಿ ದೃಷ್ಟಿಸುತ್ತಿರುತ್ತಿದ್ದರು. ॥92॥
ಅಹಂಕಾರ ಮತ್ತು ವಾಸನೆಗಳ ಜೊತೆಗೆ ಎಲ್ಲಾ ರೀತಿಯ ಆಸೆಗಳನ್ನು ಆಹುತಿಯಾಗಿ ಕೊಡುತ್ತಿದ್ದರು. ಸಾಂಸಾರಿಕ ಲೋಭ ಪ್ರವೃತ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಧುನಿಗೆ ಆಹುತಿ ನೀಡುತ್ತಿದ್ದರು. ॥93॥
ಈ ರೀತಿಯಲ್ಲಿ, ಅವರು ಜ್ಞಾನದ ಅಹಂಕಾರವನ್ನು ಪ್ರಜ್ವಲಿಸುತ್ತಿರುವ ಅಗ್ನಿಗೆ ಸಮರ್ಪಿಸಿ 'ಅಲ್ಲಾ ಮಾಲಿಕ್' ಎಂದು ಪುನಶ್ಚರಣೆ ಮಾಡುತ್ತ ಪರಮಾತ್ಮನ ನಾಮ ಪತಾಕೆಯನ್ನು ಅತಿ ಎತ್ತರದಲ್ಲಿ ಹಾರಿಸುತ್ತಿದ್ದರು. ॥94॥
ಆ ಮಸೀದಿಯು ಎಷ್ಟು ದೊಡ್ಡದಾಗಿತ್ತು? ಎಲ್ಲಾ ಜಾಗವನ್ನು ಸೇರಿಸಿದರೂ ಎರಡು ಕೋಣೆಗಳಷ್ಟು? ಇದ್ದು ಅಲ್ಲಿ ಅವರು ಕುಳಿತು, ವಾಸಮಾಡಿ, ನಿದ್ರಿಸುತ್ತಿದ್ದರು ಮತ್ತು ಎಲ್ಲರಿಗೂ ಸಂದರ್ಶನ ನೀಡುತ್ತಿದ್ದರು. ॥95॥
ಹಾಸಿಗೆ, ಮೆತ್ತನೆಯ ದಿಂಬು ಇವು ಇತ್ತೀಚಿನವುಗಳು. ಭಕ್ತರು ಅವರ ಸುತ್ತುವರೆದಿದ್ದಾಗ ಇದ್ದುದು. ಮೊದಲಿನ ದಿನಗಳಲ್ಲಿ ಯಾರೂ ಧೈರ್ಯವಾಗಿ ಅವರ ಹತ್ತಿರ ಹೋಗುತ್ತಿರಲಿಲ್ಲ. ॥96॥
ಸನ್‌ 1912 ಇಸವಿಯ ನಂತರ ಈ ಬದಲಾವಣೆ ಬಂದಿತು. ಮಸೀದಿಯ ಜೀರ್ಣೋದ್ಧಾರದ ಕೆಲಸವೂ ಆನಂತರವಷ್ಟೇ ಪ್ರಾರಂಭವಾಯಿತು. ॥97॥
ಮಸೀದಿಯ ನೆಲದಲ್ಲಿ ಮೊಳಕಾಲುದ್ದದ ಹಳ್ಳಗಳಿದ್ದವು. ಆದರೆ, ಭಕ್ತರ ಶ್ರದ್ಧಾಭಕ್ತಿಗಳಿಂದ ನೆಲವನ್ನು ಸಮತಟ್ಟುಮಾಡಿ ಶಾಹಬಾದಿ ಕಲ್ಲುಚಪ್ಪಡಿಗಳನ್ನು ಹಾಸಲಾಯಿತು. ॥98॥
ಮಸೀದಿಗೆ ಸ್ಥಳಾಂತರಮಾಡುವ ಮೊದಲು ಬಾಬಾರವರು ಟಾಕಿಯಾದಲ್ಲಿರುತ್ತಿದ್ದರು. ಅಲ್ಲಿ, ಬಹಳ ಸಮಯ ಶಾಂತರಾಗಿ, ಯಾರಿಂದಲೂ ತೊಂದರೆಗೊಳಗಾಗದೆ ಅಲ್ಲಿದ್ದರು. ॥99॥
ಇಲ್ಲಿ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಮನೋಹರವಾಗಿ ನಾಟ್ಯಮಾಡುತ್ತಿದ್ದರು. ಭಕ್ತಿಯಿಂದ ಮಧುರವಾಗಿ ಹಾಡುತ್ತಿದ್ದರು. ಜೊತೆಗೆ ತಂಬೂರಿಯ ಶೃತಿಯೂ ಇರುತ್ತಿತ್ತು. ॥100॥
ಮೊದಲ ದಿನಗಳಲ್ಲಿ ಸಾಯಿ ಸಮರ್ಥರು ಎಣ್ಣೆಯಿಂದ ದೀಪ ಉರಿಸಲು ಇಹುಡುತ್ತಿದ್ದರು. ಅದಕ್ಕಾಗಿ ಅವರು ಸ್ಪತಃ ಅಂಗಡಿಗಳಿಗೆ ಹೋಗಿ ಎಣ್ಣೆಯನ್ನು ಬೇಡುತ್ತಿದ್ದರು. ॥101॥
ಕೈಯಲ್ಲಿ ಒಂದು ಲೋಟದ ತರಹದ ಕುಡಿಯುವ ಪಾತ್ರೆಯನ್ನು ಹಿಡಿದು ಎಣ್ಣೆಗಾಗಿ ದಿನಸಿ ಅಂಗಡಿಯವರನ್ನು ಮತ್ತು ಎಣ್ಣೆ ಅಂಗಡಿಯವರನ್ನು ಬೇಡುತ್ತಿದ್ದರು. ಅದನ್ನು ತಂದು ಮಣ್ಣಿನ ಹಣತೆಯಲ್ಲಿ ತುಂಬಿಸುತ್ತಿದ್ದರು. ॥102॥
ಅವರು ಮಂದಿರಗಳಲ್ಲಿ ಮತ್ತು ಮಸೀದಿಗಳಲ್ಲಿ ದೀಪವನ್ನು ಉರಿಸುತ್ತಿದ್ದರು. ಇದು ಕೆಲವು ಸಮಯದವರೆಗೆ ಮುಂದುವರೆಯಿತು. ॥103॥
ದೀಪಾರಾಧನೆಯ ಬಗ್ಗೆ ಇದ್ದ ಒಲವಿನಿಂದಾಗಿ ದೀಪಾವಳಿಯನ್ನು ಬೆಳಕಿನಿಂದ ಆಚರಿಸುತ್ತಿದ್ದರು. ಹಗ್ಗವನ್ನು ಬತ್ತಿಯಾಗಿ ಹೊಸೆದು ಮಸೀದಿಯಲ್ಲಿ ದೀಪಗಳನ್ನು ಪ್ರಜ್ವಲಿಸುತ್ತಿದ್ದರು. ॥104॥
ಅವರು ಪ್ರತಿನಿತ್ಯವೂ ಎಣ್ಣೆಯನ್ನು ಉಚಿತವಾಗಿ ತರುತ್ತಿದ್ದರು. ಆದ್ದರಿದ ಒಮ್ಮೆ ಎಣ್ಣೆ ವ್ಯಾಪಾರಿಗಳೆಲ್ಲರೂ ಅವರಿಗೆ ತಿರುಗಿಬಿದ್ದು ಈ ಉಪದ್ರವವನ್ನು ತಪ್ಪಿಸಬೇಕೆಂದು ಪಿತೂರಿ ನಡೆಸಿದರು. ॥105॥
ಅನ೦ತರ, ಬಾಬಾರವರು ನಿತ್ಯದಂತೆ ಎಣ್ಣೆಯನ್ನು ಕೇಳಲು ಹೋದಾಗ, ಎಲ್ಲರೂ ನಿರಾಕರಿಸಿದಾಗ ಎಂತಹ ಸೋಜಿಗ ನಡೆಯಿತೆಂದು ನೋಡಿ. ॥106॥
ಬಾಬಾರವರು ಒಂದು ಮಾತನ್ನೂ ಆಡದೆ ಹಿಂತಿರುಗಿದರು. ಹಸಿ ಬತ್ತಿಯನ್ನು ಹಣತೆಗಳಲ್ಲಿಟ್ಟರು. ಎಣ್ಣೆ ಇಲ್ಲದಿದ್ದಾಗ ಅವರು ಏನು ಮಾಡಲು ಸಾಧ್ಯ? ಎಣ್ಣೆ ವ್ಯಾಪಾರಿಗಳು ಈ ತಮಾಷೆಯನ್ನು ನೋಡಲು ಕಾತರತೆಯಿಂದ ಕಾದರು. ॥107॥
ಬಾಬಾರವರು ಮಸೀದಿಯ ದಿಡ್ಡಿ ಗೋಡೆಯಮೇಲಿದ್ದ ಒಂದು ಮಡಕೆಯನ್ನು ತೆಗೆದುಕೊಂಡರು. ಅದರಲ್ಲಿ ಸ್ವಲ್ಪವೇ ಎಣ್ಣೆ (ಸಂಜೆ ದೀಪಹಚ್ಚಲೂ ಸಾಕಾಗದಷ್ಟು) ಇತ್ತು. ॥108॥
ನ೦ತರ ಆ ಎಣ್ಣೆಗೆ ನೀರನ್ನು ಹಾಕಿ ಬಾಬಾರವರು ಸ್ವಲ್ಪ ಕುಡಿದರು. ಈ ರೀತಿ ಪರಬ್ರಹ್ಮನಿಗೆ ಸಮರ್ಪಿಸಿ ಸ್ಟಲ್ಪ ತುದ್ಧವಾದ ನೀರನ್ನು ತೆಗೆದುಕೊಂಡರು. ॥109॥
ನಂತರ ಆ ನೀರನ್ನು ಹಣತೆಗಳಿಗೆಲ್ಲಾ ಹಾಕಿದರು. ಒಣ ಬತ್ತಿಗಳನ್ನು ಪೂರ್ತಿ ನೆನೆಸಿದರು. ಬೆಂಕಿ ಕಡ್ಡಿಗಳಿಂದ ಎಲ್ಲಾ ದೀಪಗಳನ್ನೂ ಎಲ್ಲರಿಗೂ ಕಾಣುವಂತೆ ಉರಿಸಿದರು. ॥110॥
ನೀರಿನಲ್ಲಿ ದೀಪಗಳು ಉರಿಯುತ್ತಿರುವುದನ್ನು ನೋಡಿ ಆ ವ್ಯಾಪಾರಿಗಳು, ವರ್ತಕರು ನಿಬ್ಬೆರಗಾದರು. ಅವರಿಗೆ ತಮ್ಮ ಮೇಲೆಯೇ ಬಾಬಾರವರಿಗೆ ಸುಳ್ಳು ಹೇಳಿದ್ದಕ್ಕಾಗಿ ಜಿಗುಪ್ಸೆ ಉಂಟಾಯಿತು. ॥111॥
ಒಂದು ತೊಟ್ಟು ಎಣ್ಣೆ ಇಲ್ಲದಿದ್ದರೂ ದೀಪಗಳು ಇಡೀ ರಾತ್ರಿಯೆಲ್ಲಾ ಪ್ರಜ್ವಲಿಸಿದವು. ವರ್ತಕರು ಸಾಯಿಕೃಪೆಯನ್ನು ಕಳೆದುಕೊಂಡರೆಂದು ಜನರು ಟೀಕೆ ಮಾಡಲು ಪ್ರಾರಂಭಿಸಿದರು. ॥112॥
ವ್ಯಾಪಾರಿಗಳು ಬಾಬಾರವರನ್ನು ಕಾರಣವಿಲ್ಲದೆ ಕಾತರಗೊಳಿಸಿ ಕಾಡಿದ್ದಕ್ಕಾಗಿ ಪಶ್ಚಾತ್ತಾಪಪಟ್ಟರು. ಸುಳ್ಳು ಹೇಳಿದ ಪಾಪಕ್ಕೊಳಗಾದರು. ಬಾಬಾರವರ ಶಕ್ತಿ ಎಷ್ಟು ಅಪರಿಮಿತವಾದದ್ದು ಎಂದು ಯೋಚಿಸಿದರು. ॥113॥
ಬಾಬಾರವರು ಇದರ ಬಗ್ಗೆ ಯಾವಾಗಲೂ ಯೋಚಿಸಲೇ ಇಲ್ಲ. ಅವರಿಗೆ ಯಾರ ಮೇಲೆಯೂ ಕೋಪ, ದ್ವೇಷಗಳಿರಲಿಲ್ಲ. ಅವರಿಗೆ ಸ್ನೇಹಿತರಾಗಲೀ, ಬಂಧುಗಳಾಗಲೀ ಇರಲಿಲ್ಲ. ಅವರಿಗೆ ಎಲ್ಲ ಜೀವಿಗಳಲ್ಲೂ ಸಮ ಭಾವವಿತ್ತು. ॥114॥
ಅದು ಹಾಗಿರಲಿ, ನಾವು ಹಿಂದಿನ ಘಟನೆಯ ಬಗ್ಗೆ ಮುಂದುವರೆಸೋಣ. ಕುಸ್ತಿಯಲ್ಲಿ ಮೊಹಿದ್ದೀನನು ಜಯಗಳಿಸಿದನು. ಅನಂತರದ ಚರಿತ್ರೆ ಬಹಳ ಕುತೂಹಲಕಾರಿಯಾಗಿದೆ. ದಯಮಾಡಿ ಗಮನವಿಟ್ಟು ಆಲಿಸಿರಿ. ॥115॥
ಕುಸ್ತಿಯ ಆಟದ ಐದು ವರ್ಷಗಳ ನಂತರ, ಅಹಮದ್‌ನಗರವಾಸಿಯಾದ ಜವಹರ್‌ ಆಲಿ ಎಂಬ ಫಕೀರನು ತನ್ನ ಶಿಷ್ಯರೊಡನೆ ರಾಹತಾದಲ್ಲಿ ನೆಲಸಲು ಬಂದನು. ॥116॥
ವೀರಭದ್ರ ದೇವಸ್ಥಾನದ ಹತ್ತಿರ ಇದ್ದ ಬಯಲು ಪ್ರದೇಶದಲ್ಲಿ ಫಕೀರನು ಮೊಕ್ಕಾಮು ಹೂಡಿದನು. ಆ ಫಕೀರನು ಬಹಳ ಅದೃಷ್ಟವಂತನು. ॥117॥
ಅವನು ಭಾಗ್ಯವಂತನಲ್ಲದಿದ್ದಲ್ಲಿ ಸಾಯಿಯಂತಹ ಮಹಾನ್‌ ಶಿಷ್ಯನನ್ನು ಹೇಗೆ ಪಡೆಯುತ್ತಿದ್ದ? ಸಾಯಿಯ ಪ್ರಖ್ಯಾತಿ ಈಗಾಗಲೇ ಹರಡಿತ್ತು. ॥118॥
ಆ ಹಳ್ಳಿಯಲ್ಲಿ ಅನೇಕ ತರಹದ ಜನರಿದ್ದರು. ಅವರಲ್ಲಿ ಕೆಲವರು ಮರಾಠಳೂ ಇದ್ದರು. ಅವರಲ್ಲೊಬ್ಬನು ಭಾಗು ಸದಾಫೆಲ್‌ ಅವರ ಸೇವಕನಾಗಿ ಬಂದನು. ॥119॥
ಫಕೀರನು ಒಬ್ಬ ಮಹಾನ್‌ ಪಂಡಿತನು. ಖುರಾನ್‌ ಶರೀಫ್ ಅವನಿಗೆ ಕರತಲಾಮಲಕವಾಗಿತ್ತು. ಅನೇಕ ಸ್ವಾರ್ಥಪರರು, ನಿಜವಾದ ಭಕ್ತರು, ಪರಮಾರ್ಥ ಇಚ್ಛಿಸುವವರು ಎಲ್ಲರೂ ಒಂದೇ ತರಹ ಅವನನ್ನು ಆರಾಧಿಸುತ್ತಿದ್ದರು. ॥120॥
ಅವನು ಈದ್‌ಗಾವನ್ನು ಕಟ್ಟಲು ಪ್ರಾರಂಭಿಸಿದನು. ಕೆಲವು ಕಾಲಾನಂತರ, ಅವನು ವೀರಭದ್ರಸ್ಥಾಮಿಯನ್ನು ಅಪವಿತ್ರಗೊಳಿಸಿದನೆಂಬ ಆಪಾದನೆಗೆ ಗುರಿಯಾದನು. ॥121॥
ಅಲ್ಲಿಗೆ ಈದ್‌ಗಾ ನಿರ್ಮಾಣ ನಿಂತಿತು. ಫಕೀರನನ್ನು ಹಳ್ಳಿಯಿಂದ ಹೊರಗೆ ಓಡಿಸಲಾಯಿತು. ಅಲ್ಲಿಂದ ಅವನು ಶಿರಡಿಗೆ ಬಂದು ಬಾಬಾರೊಡನೆ ಮಸೀದಿಯಲ್ಲಿ ವಾಸಮಾಡಿದನು. ॥122॥
ಫಕೀರನು ಮಧುರಭಾಷಿಯಾಗಿದ್ದನು. ಇಡೀ ಹಳ್ಳಿಯೇ ಅವನನ್ನು ಪೂಜಿಸಲಾರಂಭಿಸಿತು. ಬಾಬಾರವರೊಡನೆ ಅವನು ವರ್ತಿಸಿದ ರೀತಿಯನ್ನು ನೋಡಿ ಜನರು ಅವನು ಬಾಬಾರವರನ್ನು ವಶೀಕರಿಸಿಕೊಂಡಿದ್ದಾನೆಂದೇ ಭಾವಿಸಿದರು. ॥123॥
"ನೀನು ನನ್ನ ಶಿಷ್ಯನಾಗಿರು" ಎಂದು ಫಕೀರನು ಹೇಳಿದನು. ಬಾಬಾರವರು ಲೀಲಾ ವಿನೋದದಿಂದ ಒಪ್ಪಿದರು. ಫಕೀರನು ಸಂತೋಷದಿಂದ ಬಾಬಾರವರನ್ನು ತನ್ನೊಡನೆ ಕರೆದೊಯ್ದನು. ॥124॥
ಅವನಿಗೆ ಬಾಬಾರಂತಹ ವಿಧೇಯ ಶಿಷ್ಯ ದೊರಕಿದರು. ಜವಹರ್‌ ಆಲಿ ಗುರುವಾದನು. ಇಬ್ಬರೂ ಒಟ್ಟಿಗೆ ರಾಹತಾದಲ್ಲಿ ವಾಸಮಾಡಲು ನಿಶ್ಚಯಿಸಿದರು. ॥125॥
ಗುರುವಿಗೆ ಶಿಷ್ಯನ ಪಾಂಡಿತ್ಯದ ಅರಿವಿರಲಿಲ್ಲ. ಆದರೆ ಶಿಷ್ಯನಿಗೆ ಗುರುವಿನ ನ್ಯೂನತೆಗಳು ತಿಳಿದಿದ್ದುವು. ಆದರೂ ಅವರು ಎಂದಿಗೂ ಅಗೌರವವನ್ನು ವ್ಯಕ್ತಪಡಿಸಲಿಲ್ಲ, ಶಿಷ್ಯತರ್ತವ್ಯವನ್ನು ನೆರವೇರಿಸಿದರು. ॥126॥
ಗುರುವಿನ ಆಜ್ಞೆಯನ್ನು ಎಂದಿಗೂ ವಿಮರ್ಶಕವಾಗಿ ಆಲೋಚಿಸಲಿಲ್ಲ. ಅವುಗಳನ್ನು ಕೂಲಂಕಶವಾಗಿ ನೆರವೇರಿಸಿದರು. ಅವರು ಗುರುವಿಗೆ ನೀರು ಹೊತ್ತುಕೊಂಡು ಬರುವಂತಹ ಕೆಲಸದಾಳು ಮಾಡುವ ಕೆಲಸಗಳನ್ನೂ ಮಾಡುತ್ತಿದ್ದರು. ॥127॥
ಈ ರೀತಿ ಗುರುವಿನ ಶುಶ್ರೂಷೆ ಮುಂದುವರಿಯಿತು. ಶಿರಡಿಯ ಭೇಟಿ ವಿರಳವಾಯಿತು. ಈ ರೀತಿ ನಡೆದಾಗ ಮುಂದೇನಾಯಿತೆಂದು ಹೇಳುವೆನು. ॥128॥
ಸ್ವಲ್ಪ ಸಮಯ ಇದು ನಡೆಯಿತು. ಅವರು ರಾಹತಾದಲ್ಲೇ ವಾಸಮಾಡಲು ಪ್ರಾರಂಭಿಸಿದರು. ಅವರು ಪೂರ್ಣವಾಗಿ ಶಿರಡಿಯನ್ನು ತೊರೆದು ಫಕೀರನ ಅಧೀನರಾದರೆಂದು ಜನರು ಯೋಚಿಸಿದರು. ॥129॥
ಜವಹರ್‌ ಆಲಿಯು ತನ್ನ ಯೋಗಶಕ್ತಿಯಿಂದ ಸಾಯಿಯನ್ನು ಪೂರ್ಣವಾಗಿ ವಶಪಡಿಸಿಕೊಂಡಿರುವನೆಂದು ಜನರು ಯೋಚಿಸಿದರು.
ಆದರೆ ಸಾಯಿಯ ದೃಷ್ಟಿಕೋನ ಬೇರೇ ಅತ್ತು. ಅವರು ದೇಹಾಭಿಮಾನವನ್ನು ನಾಶಮಾಡಲು ಇಚ್ಛಿಸಿದ್ದರು. ॥130॥
ಜನರು ಊಹಿಸಿದರು, "ಸಾಯಿಗೆ ಅಭಿಮಾನವಾದರೂ ಎಲ್ಲಿತ್ತು" ಆದರೆ ಈ ವರ್ತನೆ ಜನರಿಗಾಗಿ ಒಂದು ಉದಾಹರಣೆಯಾಗಿ ನಿರೂಪಿಸಲು ಆಗಿತ್ತು. ಇದೇ ಅವತಾರದ ನಿಜವಾದ ಉದ್ದೇಶ. ॥131॥
ಶಿರಡಿಯಲ್ಲಿ ಬಾಬಾರವರನ್ನು ಪ್ರೀತಿಸುವ ಅನೇಕ ಭಕ್ತರಿದ್ದರು. ಅವರು ಜಬಾರವರಲ್ಲಿ ಆಸಕ್ತರಾಗಿದ್ದರು. ಬಾಬಾರವರಿಂದ ದೂರ ಇರುವುದು ನ್ಯಾಯಸಮ್ಮತವಲ್ಲ ಎಂದು ಆಲೋಚಿಸಿದರು. ॥132॥
ಆದರೆ ಸಾಯಿಯಾದರೋ ಜವಹರ್‌ ಆಲಿಗೆ ಸಂಪೂರ್ಣವಾಗಿ ಶರಣಾಗಿದ್ದರು. ಈ ಪರಿಸ್ಥಿತಿಯನ್ನು ಕಂಡ ಹಳ್ಳಿಯವರು ಅತಿಯಾಗಿ ನೊಂದುಕೊಂಡರು. ಅವರು ಬಾಬಾರವರನ್ನು ಹಿಂದಕ್ಕೆ ಪಡೆಯುವ ಬಗ್ಗೆ ಗಂಭೀರವಾಗಿ ವಿಚಾರಮಾಡಲಾರಂಭಿಸಿದರು. ॥133॥ 
ಚಿನ್ನದ ಜೊತೆಯಲ್ಲಿಯೇ ಅದರ ಹೊಳಪು, ದೀಪದ ಜೊತೆಯಲ್ಲಿಯೇ ಅದರ ಪ್ರಕಾಶ ಇರುವ ರೀತಿಯಲ್ಲಿ ಗುರುಶಿಷ್ಯರ ಅವಿನಾಭಾವ ಸಂಬಂಧ ಇರುತ್ತದೆ. ॥134॥
ಭಕ್ತರ ಗುಂಪೊಂದು ಶಿರಡಿಯಿಂದ ರಾಹತಾಗೆ ಹೋಯಿತು. ಅಲ್ಲಿ ಈದ್‌ಗಾ ಹತ್ತಿರ ಇದ್ದ ಬಾಬಾರವರನ್ನು ಒಪ್ಪಿಸಿ ತಮ್ಮೊಡನೆ ಕರೆದೊಯ್ಯುವ ಪ್ರಯತ್ನ ಮಾಡಲು ಬಂದರು. ॥135॥
ಆದರೆ ಬಾಬಾರವರು ತದ್ದಿರುದ್ಧವಾಗಿ ಹೇಳಿದರು. "ಫಕೀರನು ಬಹಳ ಮುಂಗೋಪಿ. ಅವನೊಡನೆ ಅಡ್ಡ ಮಾತನಾಡಬೇಡಿ. ಅವನು ನನ್ನನ್ನೆಂದಿಗೂ ಬಿಡುವುದಿಲ್ಲ. ॥136॥
"ನೀವು ಇಲ್ಲಿಂದ ಹೊರಟರೆ ಒಳ್ಳೆಯದು. ಯಾವ ಕ್ಷಣವಾದರೂ ಅವನು ಹಳ್ಳಿಯಿಂದ ಹಿಂತಿರುಗಬಹುದು. ಅವನು ನಿಮ್ಮನ್ನು ಬೈಯುತ್ತಾನೆ. ಅವನ ಕ್ರೋಧ ಅತಿ ಭಯಂಕರ. ॥137॥
"ಅವನು ಹಿಂತಿರುಗಿದ ಕೂಡಲೇ ಕೋಪದಿಂದ ಕೆಂಡಾಮಂಡಲವಾಗುತ್ತಾನೆ. ಅವನ ಕೋಪ ಅತಿ ಭಯಂಕರ. ಓಹ್‌! ನೀವು ಕೂಡಲೇ ಹೊರಡಿ. ಶಿರಡಿಯ ಮಾರ್ಗ ಹಿಡಿಯಿರಿ". ॥137॥
ಈಗ ಯಾವ ತಿರುವು ತೆಗೆದುಕೊಳ್ಳುತ್ತದೆ? ಬಾಬಾರವರು ವಿರುದ್ಧವಾದ ದೃಷ್ಟಿಕೋನವನ್ನು ಪ್ರಕಟಿಸಿದರು. ಆ ಕೂಡಲೇ ಫಕೀರನು ಅನಿರೀಕ್ಷಿತವಾಗಿ ಹಿಂತಿರುಗಿದನು ಮತ್ತು ಅವರನ್ನು ಈ ರೀತಿ ಪ್ರಶ್ನಿಸಿದನು. ॥138॥
"ನೀವು ಈ ಯುವಕನಿಗಾಗಿ ಬಂದಿರಾ? ಇಲ್ಲಿ ಏನು ಮಾಡುತ್ತಿದ್ದೀರಿ? ಅವನನ್ನು ಶಿರಡಿಗೆ ಕರೆದೊಯ್ಯುವ ಚಿತ್ತವಿತ್ತೇನು? ಆದರೆ ಆ ತೊಂದರೆ ತೆಗೆದುಕೊಳ್ಳಬೇಡಿ". ॥139॥
ಮೊದಲು ಈ ರೀತಿ ಮಾತನಾಡಿದ್ದರೂ, ಅವನು ಹಳ್ಳಿಗರ ಒತ್ತಾಯಕ್ಕೆ ಮಣಿದು ಹೇಳಿದನು - "ನನ್ನನ್ನೂ ಹಳ್ಳಿಗೆ ಏಕೆ ಕರೆದೊಯ್ಯಬಾರದು? ನಾವು ಈ ತರುಣನನ್ನೂ ನಮ್ಮ ಜೊತೆಗೆ ಕರೆತರುತ್ತೇವೆ". ॥140॥
ಹಾಗೆ ಫಕೀರನು ಅವರ ಜೊತೆಯಲ್ಲಿ ಹೊರಟನು. ಅವನು ಬಾಬಾರವರನ್ನು ಬಿಡಲಿಲ್ಲ ಮತ್ತು ಬಾಬಾರವರೂ ಅವನನ್ನು ಬಿಡಲಾಗಲಿಲ್ಲ. ಈ ರೀತಿ ಹೇಗೆ ಆಯಿತೆಂದು ಯಾರಿಗೂ ತಿಳಿಯಲಿಲ್ಲ. ॥141॥
ಸಾಯಿಯು ಸಾಕ್ಷಾತ್‌ ಪರಬ್ರಹ್ಮನ ಅವತಾರ. ಆದರೆ ಜವಹರ್‌ ಆಲಿಯು ಒಬ್ಬ ನಕಲಿ ವೇಷಧಾರಿ, ದೇವೀದಾಸನು ಅವನನ್ನು ಪರೀಕ್ಷಿಸಿದನು. ಅದೇ ರೀತಿ ಶಿರಡಿಯಲ್ಲಿ ಬೆಕ್ಕು ಚೀಲದಿಂದ ಹೊರಗೆ ಬಂದಿತು. ॥142॥
ದೇವಿದಾಸನಿಗೆ ಒಳ್ಳೆಯ ದೇಹದಾರ್ಡ್ಯವಿತ್ತು ಹೊಳೆಯುವ ಕಣ್ಣುಗಳು ಮತ್ತು ಆಕರ್ಷಕ ನೋಟ. ಅವನು ಶಿರಡಿಗೆ ಬಂದಾಗ 10-11 ವರ್ಷ ವಯಸ್ಸಿನವನಾಗಿದ್ದನು. ॥144॥
ಆ ಕೋಮಲ ಮನಸ್ಸಿನಲ್ಲಿ ಕೌಪೀನಧಾರಿಯಾಗಿ, ಯಾತ್ರಾರ್ಥಿಯಾಗಿ ಬಂದವನು ಮಾರುತಿದೇವಾಲಯದಲ್ಲಿ ನೆಲೆಸಿದನು. ॥145॥ 
ಆಪ್ಪ ಭಿಲ್ಲ ಮತ್ತು ಮ್ಹಾಳಸಾಪತಿಯವರು ನಿಯಮಿತವಾಗಿ ಅವನನ್ನು ಭೇಟಿಯಾಗುತ್ತಿದ್ದರು. ಕಾಶೀರಾಂ? ಮತ್ತಿತರರು
ಅವನಿಗೆ ಭಿಕ್ಷೆ ನೀಡುತ್ತಿದ್ದರು. ಈ ರೀತಿ ಅವನ ಕೀರ್ತಿ ಹರಡಿತು. ॥146॥
ಬಾಬಾರವರು ಮದುವೆಯ ದಿಬ್ಬಣದ ಜೊತೆಯಲ್ಲಿ ಶಿರಡಿಗೆ ಬಂದ ಹನ್ನೆರಡು ವರ್ಷಗಳ ಮೊದಲು ದೇವೀದಾಸನು ಬಂದು ಶಿರಡಿಯಲ್ಲಿ ನೆಲೆಸಿದ್ದನು. ॥147॥
ಆಪ್ಪ ಭಿಲ್ಲನಿಗೆ ಬಳಪದ ಕಲ್ಲಿನ ಮೇಲೆ ಬರೆಯುತ್ತ ವೆಂಕಟೇಶ ಸೂತ್ರವನ್ನು ಕಲಿಸಲಾಯಿತು. ಎಲ್ಲರೂ ಬಾಯಿಪಾಠಮಾಡಿ ಕಲಿಯುವಂತಾಯಿತು. ಈ ಪಾಠಗಳನ್ನು ಕ್ರಮವಾಗಿ ಪ್ರತಿನಿತ್ಯ ಕಲಿಸಲಾಯಿತು. ॥148॥
ದೇವಿದಾಸನು ಮಹಾಜ್ಞಾನಿಯಾಗಿದ್ದನು. ತಾತ್ಯಾಬಾ ಅವನನ್ನು ಗುರುವೆಂದು ಪರಿಗಣಿಸಿದ್ದನು. ಕಾಶೀನಾಥ ಮತ್ತಿತರರು ಅವನ ಪ್ರಮುಖ ಶಿಷ್ಯರಾದರು ಮತ್ತು ಅವನನ್ನು ಆರಾಧಿಸಿದರು. ॥149॥
ಫಕೀರ(ಜವಹರ್‌ ಆಲಿ)ನನ್ನು ದೇವೀದಾಸರ ಮುಂದೆ ಕರೆತರಲಾಯಿತು. ಶಾಸ್ತ್ರಗಳ ಬಗ್ಗೆ ವಾಗ್ದಾದವನ್ನು ಏರ್ಪಡಿಸಲಾಯಿತು. ಬೈರಾಗಿಯು (ದೇವೀದಾಸ) ಫಕೀರನನ್ನು ಸೋಲಿಸಿದನು. ಫಕೀರನನ್ನು ಅಲ್ಲಿಂದ ಓಡಿಸಲಾಯಿತು. ॥150॥
ಅವನು ಅಲ್ಲಿಂದ ಓಡಿಹೋದಮೇಲೆ, ವೈಜಾಪುರದಲ್ಲಿ ನೆಲೆಸಿದನು. ನಂತರ ಅನೇಕ ವರ್ಷಗಳ ನಂತರ ಹಿಂತಿರುಗಿ ಬಂದು ಸಾಯಿನಾಥರಿಗೆ ಶರಣಾದನು. ॥151॥
ಈ ರೀತಿ 'ನಾನು ಗುರು ಮತ್ತು ಸಾಯಿಯು ಶಿಷ್ಯ' ಎಂಬುದು ತಪ್ಪು ಎಂದು ತಿಳಿಯಿತು. ಬಾಬಾರವರು ಹಿಂದಿನಂತೆಯೇ ಅವನನ್ನು ಸ್ವೀಕರಿಸಿದರು. ಅವನು ಪಶ್ಚಾತ್ತಾಪದಿಂದ ಪರಿತುದ್ಧನಾಗಿದ್ದನು. ॥152॥
ಬಾಬಾರವರ ಲೀಲೆಗಳು ಈ ರೀತಿಯಾಗಿ ನಿಗೂಢ. ಫಕೀರನ ಭ್ರಮೆ ದೂರವಾಗುವ ಕಾಲ ವಿಧಿವತ್ತಾಗಿ ಬರುವವರೆಗೆ ಸಾಯಿಯು ನಾಟಕವನ್ನಾಡಿದರು. ॥153॥
ಸಾಯಿನಾಥರು ಗುರುಶಿಷ್ಯರ ಸಂಬಂಧವನ್ನು ತಾವೇ ಕಾರ್ಯರೂಪವಾಗಿ ತೋರಿಸಿ ಗೌರವಿಸಿದರು. ಅವರು ಅವನಿಗೆ ಗುರುವಿನ ಸ್ಥಾನಮಾನವನ್ನು ಅನುಭವಿಸಲು ಅನುವುಮಾಡಿಕೊಟ್ಟು ತಾವು ಸ್ಪತಃ ವಿದ್ಯಾರ್ಥಿ ಸ್ಥಾನವನ್ನು ಒಪ್ಪಿಕೊಂಡರು. ॥154॥
ನಾವು ಒಬ್ಬರಿಗಾಗಿ ಆಗಬೇಕು ಅಥವಾ ಮತ್ತೊಬ್ಬರು ನಮಗಾಗಿ. ಇದರಿಂದ ಬೇರೆ ಯಾವುದೇ ಆದರೂ ಅದು ಸರಿಯಲ್ಲ. ಅದಿಲ್ಲದೆ ಭವಸಾಗರವನ್ನು ದಾಟಲು ಸಾಧ್ಯವಿಲ್ಲ. ॥155॥
ಅವರ ವರ್ತನೆಯಿಂದ ಈ ಪಾಠವನ್ನು ಮಾತ್ರ ಕಲಿಯಬಹುದು. ಈ ರೀತಿಯ ಧೈರ್ಯ, ಆತ್ಮಸ್ಥೈರ್ಯ ಮತ್ತು ನಿರ್ಭಯತೆಗಳನ್ನು ನೋಡುವುದು ಅತಿದುರ್ಲಭ. ಈ ಉದಾಹರಣೆಯನ್ನು ಅನುಸರಿಸುವವರು ನಿರಭಿಮಾನವನ್ನು ಪಡೆಯುವರು. ॥156॥
ಇ೦ತಹ ವಿಷಯಗಳಲ್ಲಿ ಸ್ಪಬುದ್ಧಿ, ಚತುರತೆಗಳು ಕೆಲಸಕ್ಕೆ ಬರುವುದಿಲ್ಲ. ತನಗೆ ಒಳ್ಳೆಯದಾಗಲೆಂದು ಬಯಸುವವನು ನಿರಭಿಮಾನಿಯಾಗಿ ವರ್ತಿಸಬೇಕು. ॥157॥
ದೇಹಾಭಿಮಾನವನ್ನು ಸುಟ್ಟಿರಿವಂತಹ ಮಾನವನು ಮಾತ್ರವೇ ತನ್ನ ದೇಹವನ್ನು ಸಾರ್ಥಕವಾಗಿ ಉಪಯೋಗಿಸಿರುತ್ತಾನೆ. ಪರಮಾರ್ಥವನ್ನು ಸಾಧಿಸಲು ಅವನು ಯಾರದಾದರೂ ಶಿಷ್ಯ ಅಥವಾ ಹಿಂಬಾಲಕನಾಗಬಹುದು. ॥158॥
ಕಿರಿಯರು ಮತ್ತು ಹಿರಿಯರೆಲ್ಲರೂ ಒಬ್ಬ ಚಿಕ್ಕ ತರುಣ, ಸು೦ದರ ಯುವಕನಲ್ಲಿನ ಮನಸ್ಸಿನ ಅಸಮಾನತೆಯ ಸ್ಥಿತಿಯನ್ನು ನೋಡಿ ಅಚ್ಚರಿಗೊಂಡರು. ಜನರೆಲ್ಲರೂ ಅವನನ್ನು ಆರಾಧಿಸಿದರು ಮತ್ತು ಅಚ್ಚರಿಗೊ೦ಡರು. ॥159॥
ಆತ್ಮಜ್ಞಾನಿಯ ಕರ್ಮಗಳು ಅವನ ಹಿಂದಿನ ಕರ್ಮಗಳ ಮೇಲೆ ಆಧಾರಿತವಾಗಿರುತ್ತವೆ. ಆದರೆ ಅವು ಯಾವುವೂ ಬಂಧನವಲ್ಲ. ಅವನು ನಿಜವಾಗಿ ಕರ್ತೃವೇ ಆಗುವುದಿಲ್ಲ. ॥160॥
ಸೂರ್ಯನು ಕತ್ತಲಲ್ಲಿ ನಿಲ್ಲಲಾರ. ಅದೇ ರೀತಿ ಜ್ಞಾನಿಯು ದ್ವೈತಭಾವದಲ್ಲಿ ನಿಲ್ಲಲಾರನು. ಅವನಿಗೆ ಇಡೀ ವಿಶ್ವವೇ ಅವನ ಸ್ವಸ್ತರೂಪವು. ಅವನು ಅದ್ವೈತದಲ್ಲಿಯೇ ನೆಲಸಿರುತ್ತಾನೆ. ॥161॥ ಈ ಗುರು ಶಿಷ್ಯರ ಚರಿತ್ರೆಯನ್ನು ಸಾಯಿನಾಥರ ಪರಮಭಕ್ತ ಮ್ಹಾಳಸಾಪತಿಯವರು ತಿಳಿಸಿರುತ್ತಾರೆ. ಅದನ್ನು ಮೊದಲಿನಿಂದ ಕೊನೆಯವರೆಗೆ ನಾನು ಅವರಿಂದ ಕೇಳಿದಂತೆ ತಿಳಿಸಿರುತ್ತೇನೆ. ॥162॥
ಈ ಚರಿತ್ರೆಯನ್ನು ಈಗ ಮುಗಿಸೋಣ. ಮುಂದಿನದು ಇನ್ನೂ ಹೆಚ್ಚು ಗಾಢಪ್ರಜ್ಞೆಯುಳ್ಳದ್ದು ಅದನ್ನು ಅನುಕ್ರಮಾನುಸಾರ ತಿಳಿಸುತ್ತೇನೆ. ದಯಮಾಡಿ ಗಮನವಿಟ್ಟು ಕೇಳಿರಿ. ॥163॥
ಮಸೀದಿಯ ಪೂರ್ವಸ್ಥಿತಿ ಯಾವ ರೀತಿ ಇತ್ತು. ಅದನ್ನು ಎಷ್ಟು ಶ್ರಮವಹಿಸಿ ಸಮತಟ್ಟು ಮಾಡಿದರು. ಸಾಯಿಯು ಹಿಂದುವೋ ಮುಸ್ಲಿಮನೋ ಯಾರಿಗೂ ನಿಖರವಾಗಿ ತಿಳಿದಿಲ್ಲ. ॥164॥
ಮುಂದಿನ ಅಧ್ಯಾಯದಲ್ಲಿ ಅನುಕ್ರಮವಾಗಿ ಈ ವಿವರಗಳು ತಿಳಿಸಲ್ಪಟ್ಟಿವೆ. ಬಾಬಾರವರ ಯೋಗಶಕ್ತಿಯಲ್ಲಿ ಧೂತಿಪೋಟ ಮತ್ತು ಖಂಡಯೋಗ' ಮತ್ತು ಭಕ್ತರ ಕರ್ಮಫಲಗಳನ್ನು ತಾವು ಸ್ವೀಕಾರಮಾಡಿರುವ ಬಗ್ಗೆ. ॥165॥
ಹೇಮಾದನು ಸಾಯಿಗೆ ಶರಣಾಗುತ್ತಾನೆ. ಈ ಕಥಾಚರಿತ್ರೆಯ ವಿವರಣೆಯು ಅವನ ಅನುಗ್ರಹದಿಂದ ಮಾತ್ರ. ಇಂತಹ ಪುಣ್ಯಕರ ಮತ್ತು ಪವಿತ್ರ ಕಥೆಯು ಅಜ್ಞಾನವನ್ನು ದೂರಮಾಡುತ್ತದೆ. ॥166॥

ಎಲ್ಲರಿಗೂ ಶುಭವಾಗಲಿ.

ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಸಾಯಿಯ ಪುನರ್ದರ್ಶನ" ಎಂಬ ಐದನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.

ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.

[ಸನ್ಮಂಗಳವಾಗಲಿ।

No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....