Friday, March 19, 2021

06 ರಾಮಜನ್ಮ ದಿನಾಚರಣೆಯ ನಿರೂಪಣೆ / Ram Navami Festival & Repairs to the Masjid

   ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥

"ರಾಮಜನ್ಮ ದಿನಾಚರಣೆಯ ನಿರೂಪಣೆ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.



ಲೌಕಿಕ ಜೀವನವಾಗಲಿ, ಅಧ್ಯಾತ್ಮ ಜೀವನವಾಗಲಿ ಸದ್ಗುರುವೇ ನಾವೆಯ ನಾವಿಕನಾಗಿರುವಾಗ ಅವನು ಪ್ರಯಾಣಿಕರನ್ನು ನಾವೆಯಲ್ಲಿ ಇನ್ನೊಂದು ತೀರದವರೆಗೆ ದಾಟಿಸುವನು. ॥1॥

ಸದ್ಗುರುವೆಂಬ ಹೆಸರೇ ಸಾಯಿಯು ನನ್ನ ಮುಂದೆ ನಿಂತು ತನ್ನ ಹಸ್ತವನ್ನು ನನ್ನ ತಲೆಯ ಮೇಲಿಟ್ಟು ಆಶೀರ್ವದಿಸುವುದನ್ನು ಕಣ್ಣಮುಂದೆ ತರುತ್ತದೆ. ॥2॥

ಅವರ ವರದ ಹಸ್ತದಿಂದ ಧುನಿಯಿಂದ ತಂದ ಉದೀ(ವಿಭೂತಿ)ಯು ನನ್ನ ಶಿರವನ್ನು ತಾಗುತ್ತಲೇ ನನ್ನ ಹೃದಯ, ಅಂತರಂಗದ ಸಂತಸದಿಂದ ಉಕ್ಕುತ್ತದೆ ಹಾಗೂ ನನ್ನ ಕಣ್ಣುಗಳು ಪ್ರೀತಿಯಿಂದ ಅರಳುತ್ತವೆ. ॥3॥

ಗುರುವಿನ ಹಸ್ತದ ಸ್ಪರ್ಶವು ದಿವ್ಯಾನುಭವ. ನನ್ನ ಸೂಕ್ಷ್ಮಶರೀರವನ್ನು ಅಳಿಸುವ ಶಕ್ತಿ ಆ ಕೈಗಳಿಗಿದೆ. ಇಲ್ಲದಿದ್ದಲ್ಲಿ ಇಡೀ ಪ್ರಪಂಚವೇ ಕರಗಿಹೋದರೂ ಈ ಸೂಕ್ಷ್ಮ ಶರೀರವನ್ನು ಅಳಿಸಲಾಗದು. ॥4॥

ಭಗವಂತನ ನಾಮ ಅಥವಾ ಚರಿತ್ರೆಗಳನ್ನು ಅಕಸ್ಮಾತ್ತಾಗಿ ಶ್ರವಣ ಮಾಡಿದಾಗ ಉಂಟಾಗುವ ಮನಸ್ಸಿನ ಉದ್ವೇಗವು ಅಶಾಂತಿಗೊಂಡ ಮನಸ್ಸುಗಳನ್ನೂ ಸಾಂತ್ವನಗೊಳಿಸುತ್ತದೆ. ॥5॥

ಅವನ ಹಸ್ತ ಕಮಲಗಳನ್ನು ತುಲೆಯ ಮೇಲಿಟ್ಟ ಕೂಡಲೇ, ಪೂರ್ವಜನ್ಮಗಳ ಅನೇಕ ಸಂಚಿತಕರ್ಮಗಳು ತೊಳೆದುಹೋಗುತ್ತವೆ. ಸಾಯಿಯ ಪ್ರೀತಿಯ ಭಕ್ತರು ಪರಿಶುದ್ಧರಾಗುತ್ತಾರೆ. ॥6॥

ಈ ದೃಶ್ಯಾವಳಿಗಳನ್ನು ನೋಡಿದ ಕೂಡಲೇ ನಿಮಲಿ ಬಹಾನಂದ ಉಕ್ಕುತ್ತದೆ. ಆನಂದ ಭಾಷ್ಪಗಳು ಉದುರುತ್ತವೆ ಮತ್ತು ಹೃದಯವು ಶ್ರದ್ಧಾಯುಕ್ತ ಸಾತ್ವಿಕ ಭಾವದಿಂದ ವಿಕಸಿಸುತ್ತದೆ. ॥7॥

ಅವನು ಸಮತ್ವ ಭಾವವನ್ನು ಎಚ್ಚರಿಸುತ್ತಾನೆ. ಆಗ ಆತ್ಮಾನಂದವು ತಾನೇ ಪ್ರಕಟವಾಗುತ್ತದೆ ಮತ್ತು ದ್ವೈತ ಭಾವವನ್ನು ಅಳಿಸಿಹಾಕುತ್ತದೆ. ಏಕೆಂದರೆ ಪರಮಾತ್ಮನೊಡನೆ ಐಕ್ಯಹೊಂದಿದ ಭಾವ ಸಮತ್ವಭಾವವನ್ನು ಸಮನಾಗಿ ಹರಡುತ್ತದೆ. ॥8॥

ಪವ್ರಿತ್ರಂಥಗಳನ್ನು ಮತ್ತು ಪುರಾಣಗಳನ್ನು ಓದಲು ಪ್ರಾರಂಭಿಸಿದಾಗ ಸದ್ಗುರುವು ಅವನ ಮನಸ್ಸಿನಲ್ಲಿ ಹೆಜ್ಜೆ ಹೆಜ್ಜೆಗೂ ಬರುತ್ತಾನೆ. ಸಾಯಿಯೇ ರಾಮ ಮತ್ತು ಕೃಷ್ಣ ಮತ್ತು ತನ್ನ ಆತ್ಮಚರಿತ್ರೆಯನ್ನು ನಾವು ಕೇಳುವಂತೆ ಮಾಡುತ್ತಾನೆ. ॥9॥

ಭಾಗವತ ಪುರಾಣವನ್ನು ಆಲಿಸುವಾಗ ಶ್ರೀಕೃಷ್ಣನು ತಾನೇ ಸಾಯಿಸ್ವರೂಪನಾಗಿ ಉದ್ಧವನ ಗೀತೆಗಳನ್ನು ಹಾಡುತ್ತಾ ಭಕ್ತರಿಗೆ ಮಂಗಳವನ್ನುಂಟುಮಾಡುತ್ತಾನೆ. ॥10॥

ಸಾಮಾನ್ಯ ಸಂಭಾಷಣೆಯಲ್ಲಿಯೂ ಅನಿರೀಕ್ಷಿತವಾಗಿ ಸಾಯಿಯ ಜೀವನದ ಘಟನೆಗಳನ್ನೂ, ಕಥೆಗಳನ್ನೂ ಒಂದು ವಿಷಯವನ್ನು ದೃಢೀಕರಿಸಲು ನೆನಪಿಸಿಕೊಳ್ಳಲಾಗುತ್ತದೆ. ॥11॥

ಬರೆಯುವ ಉದ್ದೇಶದಿಂದ ಕೈಯಲ್ಲಿ ಕಾಗದ ಮತ್ತು ಲೇಖನಿ ಹಿಡಿದಲ್ಲಿ ಪದಗಳು ತೊದಲುತ್ತವೆ. ಆದರೆ ಅವನೇ ಬರೆಯಲು ಆಜ್ಞಾಪಿಸಿದಾಗ ಪದಗಳ ಜೋಡಣೆಯ ಜೊತೆಗೆ ಪೂರೈಸಲು ಸುಲಭವಾಗುತ್ತದೆ. ॥12॥

ಅಹಂಭಾವವು ತಲೆ ಎತ್ತಿದ ಕೂಡಲೇ ಅವನು ಅದನ್ನು ತಗ್ಗಿಸುತ್ತಾನೆ ಮತ್ತು ಉತ್ತಮ ಚೇತನದ ಅರಿವನ್ನು ಸೃಷ್ಟಿಸಿ ಶಿಷ್ಯನಲ್ಲಿ ಒಂದು ತೃಪ್ತಿಭಾವವನ್ನು ಉಂಟುಮಾಡುತ್ತಾನೆ. ॥13॥

ಅತಿತಕ್ತಿವಂತ ಸಾಯಿಗೆ ತರಣಾಗುವಾಗ ದೇಹ, ಆತ್ಮ ಸದ್ಗುಣ, ಆಸ್ತಿ ಪ್ರೀತಿ ಮತ್ತು ಅನುಗ್ರಹಗಳನ್ನು ಶ್ರಮ ಪಡದೆಯೇ, ಕೇಳದೆಯೇ ಅನುಭವಿಸಬಹುದು. ॥14॥

ನಾಲ್ಕು ವಿವಿಧ ಮಾರ್ಗಗಳಾದ ಕರ್ಮ, ಜ್ಞಾನ, ಯೋಗ ಮತ್ತು ಭಕ್ತಿ ಇವುಗಳು ಪ್ರತ್ಯೇಕವೆಂದು ಕಂಡರೂ ಎಲ್ಲದರ ಗುರಿಯೂ ಒಂದೇ ಆಗಿರುತ್ತದೆ. ॥15॥

ಭಕ್ತಿಮಾರ್ಗವು ಮುಳ್ಳಿನ ಬಾಬುಲ್‌, ಕಾಡಿನಲ್ಲಿನ ರಸ್ತೆಯ ತರಹ. ಅದರ ತುಂಬ ಹಳ್ಳ ಕೊಳ್ಳಗಳು ಇವೆ. ಒಂದೆರಡು ಹೆಜ್ಜೆಗಳನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ನಿಜವಾಗಿಯೂ ಪರಮಾತ್ಮನೆಡೆಗೆ ಕರೆದೊಯ್ಯುತ್ತದೆ. ॥16॥

ಮುಳ್ಳುಗಳನ್ನು ದಾಟಿ ಮುಂದಕ್ಕೆ ಹೆಜ್ಜೆ ಇಡಬೇಕು. ಆಗ ನಿರ್ಭಯವಾಗಿ ಗುರಿ ತಲಪಬಹುದು ಎಂದು ಗುರುಮಾಯಿಯವರು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ॥17॥

ಮನೋ ಉದ್ಯಾನವನ್ನು ಭಕ್ತಿಯಿಂದ ನೀರೆರೆದಾಗ ವೈರಾಗ್ಯ ವೃದ್ಧಿಯಾಗುತ್ತದೆ. ಜ್ಞಾನವು ಅರಳುತ್ತದೆ. ಪರಮಾತ್ಮನೊಡನೆ ಐಕ್ಯ ಫಲಿತವಾಗುತ್ತದೆ ಮತ್ತು ಪರಮಾನಂದ ಉಕ್ಕಿ ಬರುತ್ತದೆ. ಖಂಡಿತವಾಗಿ ಜನನ ಮರಣಗಳೆಂಬ ಚಕ್ರದಿಂದ ತಪ್ಪಿಸಿಕೊಳ್ಳಬಹುದು. ॥18॥

ಸನಾತನ ಪರಮಾತ್ಮನು ಸತ್‌ಸ್ವರೂಪನು. ಅದೇ ಮೂರು ವಿಧದ ಅನುಭವವಾದ ಸತ್‌, ಚಿತ್‌ ಮತ್ತು ಆನಂದ. ಅದು ದೃಷ್ಟಿ ಚಿತ್ರಣಕ್ಕೆ ಪರಿಪೂರ್ಣ ತ್ಯಾಗದಂತೆ ಕಂಡರೂ ನಿಜವಾಗಿಯೂ ಭಕ್ತರಿಗಾಗಿ ಪ್ರಕಟಗೊಳ್ಳುತ್ತದೆ. ॥19॥

ಬ್ರಹ್ಮನು ಮೂರು ಗುಣಗಳ ಮೂಲಕ ಪ್ರಕಟವಾದಾಗ ಮಾಯೆಯು ಚಲನಶೀಲಳಾಗಿ ಆಡುತ್ತಾಳೆ. ಸತ್ವ, ರಜಸ್‌, ತಮಸ್ಸು ಇವುಗಳು ಅವಳ ಗುಣಗಳು. ॥20॥

ಜೇಡಿ ಮಣ್ಣಿಗೆ ಒಂದು ರೂಪವನ್ನು ಕೊಟ್ಟಾಗ ಮಡಕೆ ಎಂದು ಸರಿಯಾಗಿ ನಾಮಕರಣ ಮಾಡಲಾಗುತ್ತದೆ. ಆದರೆ ಮಡಕೆ ಒಡೆದಾಗ ಅದರ ಸ್ವಭಾವ, ರೂಪ ಮತ್ತು ಗುರುತನ್ನು ಕಳೆದುಕೊಳ್ಳುತ್ತದೆ. ॥21॥

ಇಡೀ ಜಗತ್ತೇ ಮಾಯೆಯಿಂದ ಜನಿಸುತ್ತದೆ ಮತ್ತು ಅವೆರಡೂ ಕಾರಣ ಮತ್ತು ಪರಿಣಾಮ ಪರಸ್ಪರವಾಗಿವೆ. ಈ ರೀತಿ ಮಾಯೆಯು ವಿಶ್ವದ ವಿವಿಧ ಅಂಗಾಂಗಗಳಂತೆ ರೂಪುಗೊಳ್ಳುತ್ತಾಳೆ. ॥22॥

ಮಾಯೆಯ ಸ್ಚಭಾವವನ್ನು ನೋಡಿದಲ್ಲಿ, ಈ ಜಗತ್ತಿನ ಅಸ್ತಿತ್ವಕ್ಕೆಮೊದಲು ಯಾವುದೂ ಸಹಜವಾಗಿ ಕಾಣುವುದಿಲ್ಲ. ಅವಳು ಪರಮಾತ್ಮನಲ್ಲಿ ಲೀನವಾಗಿದ್ದು ಅವಳು ಅವ್ಯಕ್ತವಾಗಿಯೇ ಇದ್ದಾಳೆ. ॥23॥

ಅವಳು ವ್ಯಕ್ತವಾದರೂ ಪರಮಾತ್ಮ ಸ್ವರೂಪವೇ. ಅವಳು ಅವ್ಯಕ್ತವಾದರೂ ಪರಮಾತ್ಮ ಸ್ಪರೂಪವೇ. ಈ ರೀತಿ ಮಾಯೆಯು ಪರಮಾತ್ಮ ಸ್ವರೂಪಳೇ ಆಗಿರುವಾಗ ಪರಮಾತ್ಮನಿಂದ ಬೇರ್ಪಡಿಸಲು

ಸಾಧ್ಯವಿಲ್ಲ. ॥24॥

ಪ್ರಾರಂಭದಲ್ಲಿ ಮಾಯೆಯು ತಮೋಗುಣದಿಂದ ಜಡ ಪದಾರ್ಥಗಳನ್ನು ನಿರ್ಜೀವವಾದ ಚಲನವಲನವಿಲ್ಲದ ವಸ್ತುಗಳನ್ನು ಸೃಷ್ಟಿಸಿ ಪ್ರಥಮ ಭಾಗವನ್ನು ಪೂರ್ಣಗೊಳಿಸಿದಳು. ॥25॥

ಅನಂತರ ಪರಮಾತ್ಮನು ಮಾಯೆಯ ರಜೋಗುಣ ಸ್ವರೂಪನಾಗಿ ಅವಶ್ಯವಾದ ಕ್ರಿಯೆಗಳನ್ನು ಗ್ರಹಿಸಿ ಎರಡೂ ಗುಣಗಳಿಂದ ರೂಪುಗೊಂಡನು. ॥26॥

ಅನ೦ತರ ಮಾಯೆಯ ಸತ್ವಗುಣದಿಂದ ಬುದ್ಧಿಯು ಜನಿಸಿತು. ಅದು ಪರಮಾತ್ಮನ ದಿವ್ಯಾನಂದ ಗುಣದೊಡನೆ ಮಿಲಿತವಾಗಿ ಸೃಷ್ಟಿಯ ಸಂಪೂರ್ಣ ಕ್ರಿಯೆಯನ್ನು ಪೂರ್ಣಗೊಳಿಸಿತು. ॥27॥

ಈ ರೀತಿ ಮಾಯೆಯು ಮಹಾಪರಿವರ್ತನೆಗೊಳಗಾಗಿ ಮೇಲೆ ಹೇಳಿದ ವಸ್ತುಗಳನ್ನು ಕ್ರಿಯಾತ್ಮಕ ಶಕ್ತಿ ಪ್ರೇರೇಪಿಸುವವರೆಗೆ ಸೃಷ್ಟಿಸುವುದಿಲ್ಲ. ಅಲ್ಲಿಯವರೆಗೆ ಮೂರು ಗುಣಗಳೂ ಅವ್ಯಕ್ತವಾಗಿಯೇ ಉಳಿಯುತ್ತವೆ. ॥28॥

ಈ ಮೂರು ಗುಣಗಳು ಕ್ರಿಯಾತ್ಮಕವಾಗುವವರೆಗೆ ಮಾಯೆಯು ವ್ಯಕ್ತವಾಗುವುದಿಲ್ಲ. ಅವಳು ಅವ್ಯಕ್ತಳಾಗಿಯೇ ಅಸ್ತಿತ್ವದಲ್ಲಿರಬಲ್ಲಳು ಮತ್ತು ನಿಷ್ಕ್ರಿಯತೆಯನ್ನು ಅಭ್ಯಸಿಸಬಲ್ಲಳು. ॥29॥

ಮಾಯೆಯು ಪರಮಾತ್ಮನ ಸೃಷ್ಟಿ. ಜಗತ್ತು ಮಾಯೆಯ ಸೃಷ್ಟಿ. ಸರ್ವಂ ಬ್ರಹ್ಮಮಯಂ ಅಂದರೆ ಈ ಜಗತ್ತು, ಮಾಯೆ ಮತ್ತು ಪರಬ್ರಹ್ಮ ಎಲ್ಲವೂ ಒಂದೇ. ॥30॥

ಈ ಅದ್ವೈತಭಾವವನ್ನು ಅರಿಯುವ ತೀವ್ರ ಇಚ್ಛೆಯುಳ್ಳವರು ವೇದಗಳನ್ನು ಮತ್ತು ಶಾಸ್ತ್ರಗಳನ್ನು ಪರಿಶೀಲಿಸಬಹುದು. ॥31॥

ವೇದಗಳು, ಶಾಸ್ತ್ರಗಳು, ಶ್ರುತಿಗಳು, ಸ್ಮೃತಿಗಳು, ಗುರುಗಳು ಮತ್ತು ಗ್ರಂಥಗಳು ಜ್ಞಾನವನ್ನು ನೀಡಿ ವೇದಾಂತ ತತ್ವವನ್ನೂ ಪರಮಾನ೦ದವನ್ನೂ ಕೊಡುತ್ತವೆ. ॥32॥

"ನನ್ನ ಭಕ್ತರ ಮನೆಗಳಲ್ಲಿ ಆಹಾರಕ್ಕೆ ಮತ್ತು ವಸ್ತ್ರಕ್ಕೆ ಯಾವ ಕೊರತೆಯೂ ಉಂಟಾಗುವುದಿಲ್ಲ". ಇದು ಶ್ರೀ ಸಾಯಿಯವರು ನೀಡಿರುವ ಅಭಯ ವಚನ ಮತ್ತು ಭಕ್ತರೆಲ್ಲರಿಗೂ ತಿಳಿದ ವಿಷಯ. ॥33॥

"ಯಾರು ನನ್ನನ್ನು ಮನಃಪೂರ್ವಕವಾಗಿ ಆರಾಧಿಸುತ್ತಾರೋ ಮತ್ತು ಸದಾ ಪ್ರೀತಿಯಿಂದ ಸೇವೆ ಸಲ್ಲಿಸುತ್ತಾರೋ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ಆದೇ ನನ್ನ ಧ್ಯೇಯವಾಕ್ಯ". ॥34॥

ಇದು ಭಗವದ್ಗೀತೆಯ ಪ್ರಮಾಣ ವಚನವು ಹೌದು. ಸಾಯಿ ಇದನ್ನು ಸರ್ವಮಾನ್ಯ ಸತ್ಯವೆಂದು ಸ್ವೀಕರಿಸಲು ತಿಳಿಸಿದ್ದಾರೆ. "ಆಹಾರ ಮತ್ತು ವಸ್ತ್ರದ ಕೊರತೆ ಎಂದಿಗೂ ಇರುವುದಿಲ್ಲ. ಆದ್ದರಿಂದ ಎಂದಿಗೂ ಅವುಗಳ ಮೇಲೆ ತೀವ್ರವಾದ ಆಸೆಬೇಡ. ॥35॥

"ಪ್ರತಿಯೊಬ್ಬರೂ ಪರಮಾತ್ಮನ ಬಾಗಿಲಿಗೆ ಮಾತ್ರ ಹೋಗಬೇಕು ಮತ್ತು ಕೇವಲ ದೇವರನ್ನು ಬೇಡಬೇಕು. ಅವನ ಪ್ರಸಾದ(ಆಶೀರ್ವಾದ)ವನ್ನು ಮಾತ್ರ ಬೇಡಬೇಕು. ಲೌಕಿಕ ಭಾವವನ್ನು ಪಕ್ಕಕ್ಕಿರಿಸಬೇಕು. ॥36॥

"ಸಮಾಜವು ಕೊಡುವ ಗೌರವದಿಂದ ಏಕೆ ತೃಪ್ತನಾಗುವೆ? ಮತ್ತು ಅದಕ್ಕಾಗಿ ಏಕೆ ಮೋಹಪರವತಶನಾಗಿರುವೆ? ಅದರ ಬದಲು ತೀವ್ರವಾದ ಭಕ್ತಿಯಿಂದ ನಿನ್ನ ಇಷ್ಟದೈವದ ಕರುಣೆಯನ್ನೂ, ಸಾತ್ವಿಕಭಾವದಿಂದ ಉಕ್ಕುವ ಆನಂದವನ್ನೂ ಪ್ರಕಟಿಸುವಂತೆ ಬೇಡು. ॥37॥

"ಅ೦ತಹ ತೀವ್ರ ಬಯಕೆಯಲ್ಲಿ ನಿನಗೆ ಸಂತಸವಾಗಲಿ, ನಿನ್ನ ಎಲ್ಲಾ ಇಂದ್ರಿಯಗಳೂ ಅಂತಹ ಭಕ್ತಿಯ ಉನ್ಮತ್ತತೆಯಿಂದ ಸ್ತಬ್ಧಗೊಳ್ಳಲಿ. ವಿಷಯವಾಸನೆಗಳು ಷೂರ್ಣವಾಗಿ ಪರಿವರ್ತಿತವಾಗಿ ಭಕ್ತಿಯ ಆರಾಧನೆ ಮೊಳಗಲಿ, ಮತ್ತೆ ಯಾವ ಅಸೆ ನಿನ್ನಲ್ಲಿ ಉಳಿಯುತ್ತದೆ? ॥38॥

"ಅ೦ತಹ ಭಕ್ತಿ ನಿನ್ನಲ್ಲಿ ಸದಾ ಆವರಿಸಿ ಬೇರೆ ಯಾವುದರಿಂದಲೂ ಸುಖ ಪಡೆಯದಂತೆ ಆಗಲಿ. ನಿನ್ನ ಮನಸ್ಸು ಸದಾ ನನ್ನ ನಾಮಸ್ಮರಣೆ ಮಾಡುತ್ತಿರಲಿ ಮತ್ತು ಬೇರೆ ಎಲ್ಲವನ್ನೂ ಮರೆಯುವಂತಾಗಲಿ. ॥39॥

"ಆಗ ನಿನ್ನ ದೇಹ, ಮನೆ, ಆಸ್ತಿ ಇವುಗಳ ಯೋಚನೆ ಇರುವುದಿಲ್ಲ. ನಿನ್ನ ಚಿತ್ತವು ಪರಮಾನಂದದಲ್ಲಿಯೇ ನೆಲೆಯಾಗುತ್ತದೆ. ಮನಸ್ಸು ಸಮದರ್ಶಿಯಾಗಿಯೂ ಪ್ರಶಾಂತವಾಗಿಯೂ ಇರುತ್ತದೆ. ಆಗ ನಿಶ್ಚಯವಾಗಿಯೂ ಪರಿಷೂರ್ಣವಾಗುತ್ತದೆ". ॥40॥

ಪ್ರಶಾಂತವಾದ ಮನಸ್ಸು ಸತ್ಸಂಗದ ಕುರುಹು. ಅಲೆದಾಡುವ ಮನಸ್ಸನ್ನು ಪರಮಾತ್ಮನಲ್ಲಿ ಶರಣಾಗಿಸುವುದು ಹೇಗೆ? ॥41॥

ಆದುದರಿಂದ ಶ್ರೋತೃಗಳೇ, ಪೂರ್ಣ ಸಾವಧಾನ ಚಿತ್ತರಾಗಿ ಶ್ರದ್ಧೆಯಿಂದ ಈ ವಿವರಣೆಯನ್ನು ಕೇಳಿರಿ. ಸಾಯಿ ಸಚ್ಚರಿತೆಯನ್ನು ಕೇಳುವುದರಿಂದ ನಿಮ್ಮ ಮನಸ್ಸು ಭಕ್ತಿಭಾವದಿಂದ ತು೦ಬಲಿ॥42॥

ಕಥಾಸಂಗತಿಯ ಜೊತೆಯಲ್ಲಿ ನೀವು ಪ್ರಶಾಂತತೆಯನ್ನು ಅನುಭವಿಸುವಿರಿ. ನಿಮ್ಮ ಚಂಚಲ ಮನಸ್ಸು ಶಾಂತವಾಗುತ್ತದೆ. ಮನದ ಆಂದೋಲನ ಮಾಯವಾಗಿ ನೀವು ಸುಖಶಾಂತಿಯನ್ನು ಪಡೆಯುವಿರಿ. ॥43॥

ಈಗ, ನಾವು ಹಿಂದಿನ ಕತೆಯ ಅನುಸಂಧಾನ ಮಾಡೋಣ. ಮಸೀದಿಯನ್ನು ಪುನರ್ನಿರ್ಮಾಣವಾಡಿ ರಾಮನ ಜನ್ಮದಿನದ ಅಂಗವಾಗಿ ಸಂಕೀರ್ತನ ಮಾಡಿದ ಬಗ್ಗೆ ನಿರೂಪಣೆಯನ್ನು ಮುಂದುವರೆಸೋಣ. ॥44॥

ಗೋಪಾಲಗುಂಡ ಎಂಬ ಭಕ್ತನೊಬ್ಬನಿದ್ದನು. ಅವನಿಗೆ ಬಾಬಾರವರ ಮೇಲೆ ಅತ್ಯಂತ ಭಕ್ತಿ. ಅವನು ತನ್ನ ಸಮಯವನ್ನೆಲ್ಲ ನಿರಂತರವಾಗಿ ಬಾಬಾರವರ ನಾಮಸ್ಕರಣೆಯಲ್ಲೇ ಕಳೆಯುತ್ತಿದ್ದನು. ॥45॥

ಅವನಿಗೆ ಸಂತಾನವಿರಲಿಲ್ಲ. ಅನಂತರ ಸಾಯಿಯ ಆಶೀರ್ವಾದದಿಂದ ಒಬ್ಬ ಪುತ್ರನನ್ನು ಪಡೆದನು. ಅವನ ಮನಸ್ಸು ಅತ್ಯಂತ ಪ್ರಸನ್ನವಾಗಿತ್ತು. ॥46॥

ಅದರಿಂದಾಗಿ ಗೋಪಾಲಗುಂಡ ಒಂದು ಯಾತ್ರೆ (ಮೆರವಣಿಗೆ) ಮಾಡಲು ಯೋಚಿಸಿದನು. ವರ್ಷಕ್ಕೊಮ್ಮೆ ಶಿರಡಿ ಗ್ರಾಮದಲ್ಲಿ ಉರುಸ್‌ ನಡೆಸಲು ನಿಶ್ಚಯಿಸಿದನು. ಪ್ರತಿಯೊಬ್ಬರೂ ಆನಂದಪಟ್ಟರು. ॥47॥

ತಾತ್ಕಾಕೋತೆ, ದಾದಾಕೋತೆ, ಮಾಧವರಾವ್‌ ಮತ್ತು ಇತರ ಪ್ರಮುಖ ಭಕ್ತರು ಈ ಸಲಹೆಯನ್ನು ಒಪ್ಪಿದರು ಮತ್ತು ಅದಕ್ಕಾಗಿ ಎಲ್ಲಾ ತಯಾರಿ ನಡೆಸಲು ಆರಂಭಿಸಿದರು. ॥48॥

ಆದರೆ ಅಂತಹ ವಾರ್ಷಿಕ ಸಮಾರಂಭಗಳಿಗೆ ಕೆಲವು ನಿಯಮಾವಳಿಗಳಿದ್ದವು. ಜಿಲ್ಲಾಧಿಕಾರಿಯವರಿಂದ ಅನುಮೋದನೆ ಅತ್ಯವಶ್ಯಕವಾಗಿತ್ತು. ॥49॥

ಅಂತಹ ಒಪ್ಪಿಗೆಪತ್ರ ಪಡೆಯಲು ಪ್ರಯತ್ನಿಸಿದಾಗ ಅಲ್ಲೊಬ್ಬ ಹಳ್ಳಿಯವ, ಕುಲಕರ್ಣಿ ಎಂಬ ವಕ್ರಬುದ್ಧಿಯವ ಇದಕ್ಕೆ ವಿರುದ್ಧವಾಗಿ ಅನೇಕ ಅಡಚಣೆಗಳನ್ನು ಉ೦ಟುಮಾಡಿನನು. ॥50॥

ಕುಲಕರ್ಣಿಯು ಅಡ್ಡಿಪಡಿಸಿದಾಗ ಅದರ ಪರಿಣಾಮ ಏನಾಯಿತೆಂದು ನೋಡಿ. ಜಿಲಾಧಿಕಾರಿಯು ಶಿರಡಿಯಲ್ಲಿ ಯಾತ್ರೆಯು (ಮೆರವಣಿಗೆಯು) ನಡೆಯಬಾರದೆಂದು ಆದೇಶ ನೀಡಿದನು. ॥51॥ ಆದರೆ ಶಿರಡಿಯಲ್ಲಿ ಈ ಯಾತ್ರೆ ನಡೆಸುವುದು ಬಾಬಾರವರ ಇಚ್ಛೆಯೂ ಆಗಿತ್ತು. ಅವರು ತಮ್ಮ ಅನುಗ್ರಹದೊಂದಿಗೆ ಅದನ್ನು ನೆರವೇರಿಸಲು ಆದೇಶ ನೀಡಿದರು. ॥52॥

ಹಳ್ಳಿಯವರು ಪಟ್ಟು ಹಿಡಿದು ತಮ್ಮ ಅವಿರತ ಪ್ರಯತ್ನ ಮಾಡಿದರು. ಆಗ ಅಧಿಕಾರಿಗಳು ಹಿಂದಿನ ಆದೇಶವನ್ನು ಮಾರ್ಪಡಿಸಿ ಜನರ ಅಭೀಷ್ಟವನ್ನು ನೆರವೇರಿಸಿದರು. ॥53॥

ಅಲ್ಲಿಂದೀಚೆಗೆ ಬಾಬಾರವರ ಇಚ್ಛಾನುಸಾರ ಮೆರವಣಿಗೆಯು ರಾಮನವಮಿಯಂದು ನಡೆಸಲ್ಪಡುತ್ತದೆ. ತಾತ್ಕಾಕೋತೆ ಅದರ ತಯಾರಿಯನ್ನು ನೋಡಿಕೊಳ್ಳುತ್ತಿದ್ದನು. ಜನಸಮುದಾಯ ಅಲ್ಲಿ ಸೇರುತ್ತಿತ್ತು. ॥54॥

ರಾಮನವಮಿಯ ದಿನದಂದು ಭಕ್ತಿಗೀತೆಗಳ ಭಜನೆ ಮತ್ತು ಪೂಜೆ ತಾಳವಾದ್ಯಗಳ ಸಮೇತ ನಡೆಯುತ್ತಿತ್ತು. ಜನರು ನಾಲ್ಕೂ ದಿಕ್ಕುಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ॥55॥ ಪ್ರತಿವರ್ಷ ಎರಡು ಹೊಸ ಬಾವುಟಗಳನ್ನು ವಿಧಿವತ್ತಾಗಿ ಮೆರವಣಿಗೆಯಲ್ಲಿ ತೆಗೆದುಕೊಂಡುಹೋಗಿ ಮಸೀದಿಯ ಗೋಪುರಕ್ಕೆ ಕಟ್ಟಿ ಅಲ್ಲಿಯೇ ಶಾಶ್ವತವಾಗಿ ನಿಲ್ಲಿಸುತ್ತಿದ್ದರು. ॥56॥

ಎರಡರಲ್ಲಿ ಒಂದು ನಿಮೋಣಕರ್‌ನದ್ದು ಮತ್ತು ಇನ್ನೊಂದು ದಾಮು ಅಣ್ಣನದ್ದು ಅವುಗಳನ್ನು ಅದ್ಧೂರಿಯಿಂದ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಗೋಪುರದ ತುದಿಯಲ್ಲಿ ಅತಿ ಎತ್ತರಕ್ಕೆ ಹಾರಿಸುತ್ತಿದ್ದರು. ॥57॥

ಈಗ ಅತಿ ವಿಶೇಷವಾಗಿ ಉರುಸ್‌ನಿಂದ ರಾಮನವಮಿಯ ಆಚರಣೆಯು ಹೇಗೆ ಪ್ರಾರಂಭವಾಯಿತು ಎ೦ಬ ಗಮನ ಸೆಳೆಯುವ ವಿಷಯವನ್ನು ಕೇಳಿರಿ. ಶಿರಡಿಗೆ ಜಯವಾಗಲಿ, ಆನಂದವಾಗಲಿ. ॥58॥

ಉರುಸ್‌ನಿಂದ ಪ್ರಾರಂಭವಾದ ರಾಮನವಮಿಯನ್ನು ಪ್ರಥಮವಾಗಿ ಶಕೆ 1833ರಲ್ಲಿ ಆಚರಿಸಲಾಯಿತು. ತದನ೦ತರ ನಿರಂತರವಾಗಿ ಈಗಲೂ ಆಚರಿಸಲಾಗುತ್ತಿದೆ. ॥59॥

ಪ್ರಖ್ಯಾತರಾದ ಕೃಷ್ಣ ಜೋಗೇಶ್ಚರ ಭೀಷ್ಮನು ರಾಮನ ಜನ್ಮದಿನವನ್ನು ಆಚರಿಸಬೇಕೆನ್ನುವ ಸೂಚನೆಯನ್ನು ಪ್ರಪ್ರಥಮವಾಗಿ ಕಲ್ಪಿಸಿದನು. ಅದರಿಂದ ಜನರಿಗೆಲ್ಲ ಪರಮಕಲ್ಯಾಣವಾಗುತ್ತದೆಂಬುದು ಅವನ ಯೋಚನೆಯಾಗಿತ್ತು. ॥60॥

ಅಲ್ಲಿಯವರೆಗೆ ಕೇವಲ ಉರುಸ್‌ನಲ್ಲಿ ಮಾತ್ರ ಜನರು ಭಾಗವಹಿಸುತ್ತಿದ್ದರು. ಆ ಸಂವತ್ಸರದಿಂದ ರಾಮನು ಜನ್ಮ ತಾಳಿದ ದಿನದ ಸುಂದರವಾದ ಹಬ್ಬವು ಪ್ರಾರಂಭವಾಯಿತು. ॥61॥

ಒಮ್ಮೆ, ಭೀಷ್ಮನು ವಾಡೆಯಲ್ಲಿ ಶಾಂತನಾಗಿ ಕುಳಿತಿದ್ದಾಗ, ಕಾಕಾನು ಪೂಜಾ ಸಾಮಾಗ್ರಿಗಳೊಡನೆ ಮಸೀದಿಗೆ ಹೊರಡಲು ಸಿದ್ಧನಾಗುತ್ತಿದ್ದನು. ॥62॥

ಅವನು (ಕಾಕಾ) ಅಂತರಂಗದಲ್ಲಿ ಸಾಯಿದರ್ಶನದ ಬಗ್ಗೆ ಯೋಚಿಸುತ್ತಿದ್ದು ಹೊರ ನೋಟಕ್ಕೆ ಉರುಸ್‌ ಬಗ್ಗೆ ಉತ್ಸಾಹಿತನಾಗಿದ್ದನು. ಕಾಕಾನು ಶಿರಡಿಗೆ ಈ ಸಮಾರಂಭಕ್ಕೆ ಒಂದು ದಿನ ಮೊದಲೇ ಬಂದಿದ್ದನು. ॥63॥

ಈ ಸದವಕಾಶವನ್ನು ಪರಿಗಣಿಸಿ ಭೀಷ್ಮನು ಕಾಕಾನನ್ನು ಕೇಳಿದನು - "ನನ್ನಲ್ಲಿ ಉದಿಸಿರುವ ಒಂದು ಒಳ್ಳೆಯ ಕಾರಣಕ್ಕಾಗಿ ಸಹಾಯ ನೀಡುವಿಯಾ? ॥64॥

"ಇಲ್ಲಿ ಪ್ರತಿ ವರುಷ ಉರುಸ್‌ನ್ನು ರಾಮ ಹುಟ್ಟಿದ ದಿನವೆಂದು ಆಚರಿಸಲಸುತ್ತದೆ. ಆದ್ದರಿಂದ ಇದು ರಾಮನ ಜನ್ಮ ದಿನವನ್ನು ಆಚರಿಸಲು ಒಂದು ಸಹಜವಾದ ಅವಕಾಶ". ॥65॥

ಕಾಕಾನಿಗೆ ಈ ಸಲಹೆ ಇಷ್ಟವಾಯಿತು. ಭೀಷ್ಮನಿಗೆ ಬಾಬಾರವರ ಒಪ್ಪಿಗೆ ಪಡೆಯಲು ಸೂಚಿಸಿದನು. ಸಾಯಿಯ ಇಚ್ಛೆಯನ್ನು ಅದು ಅವಲಂಬಿಸುತ್ತದೆ. ಆಗ ಆ ಕೆಲಸಕ್ಕೆ ಯಾವುದೇ ಅಡೆತಡೆಗಳಿರುವುದಿಲ್ಲ. ॥66॥

ಆದರೆ ಈ ಸಮಾರಂಭಕ್ಕೆ ಸಂಕೀರ್ತನೆ ಇರಬೇಕು. ಅದು ಒಂದು ಸಮಸ್ಯೆಯಾಯಿತು. ಏಕೆಂದರೆ, ಈ ಸಣ್ಣ ಹಳ್ಳಿಯಲ್ಲಿ ಒಬ್ಬ ಹರಿದಾಸನನ್ನು ಹುಡುಕುವುದು ಹೇಗೆ? ಇದೇ ಒಂದು ಪ್ರಶ್ನೆಯಾಯಿತು. ॥67॥

ಭೀಷ್ಮನು ಹೇಳಿದನು, "ನಾನೇ ಕೀರ್ತನಕಾರನಾಗುತ್ತೇನೆ. ನೀವು ಹಾರ್ಮೋನಿಯಂ ಬಾರಿಸಿರಿ ಮತ್ತು ರಾಧಾಕೃಷ್ಣಮಾಯಿಯು ಸಮಯಕ್ಕೆ ಸರಿಯಾಗಿ ಶುಂಠಿವಾಡಾವನ್ನು ತಯಾರಿಸಿಕೊಡುತ್ತಾಳೆ. ॥68॥

"ಬನ್ನಿ; ಬಾಬಾರವರಲ್ಲಿಗೆ ಹೋಗೋಣ. ಶುಭ ಕೆಲಸಕ್ಕೆ ವಿಳಂಬಮಾಡಿದಲ್ಲಿ ಅಡಚಣೆಗಳು ಉಂಟಾಗುತ್ತವೆ. ನಿಸ್ಪೃಹತೆಯಿಂದ ಕೂಡಿದ ಒಂದು ಸದುದ್ದೇಶವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ॥69॥

"ನನ್ನೊಡನೆ ಬನ್ನಿ. ಸಂಕೀರ್ತನೆ ಮಾಡಲು ಅಪ್ಪಣೆಯನ್ನು ಪಡೆಯೋಣ" ಈ ರೀತಿ ಹೇಳುತ್ತ ಇಬ್ಬರೂ ಆ ಸಮಯದಲ್ಲಿ ಮಸೀದಿಗೆ ಬಂದರು. ॥70॥

ಕಾಕಾನು ಪೂಜೆ ಮಾಡಲು ಪ್ರಾರಂಭಿಸಿದ ಕೂಡಲೇ, ಬಾಬಾರವರು ತಾವೇ ವಾಡಾದಲ್ಲಿ ಯಾವುದರ ಬಗ್ಗೆ ಚರ್ಚೆಯಾಯಿತೆಂದು ಕೇಳಿದರು. ಕಾಕಾನಿಗೆ ಏನೂ ಉತ್ತರಿಸಲಾಗಲಿಲ್ಲ. ॥71॥

ಕೂಡಲೇ ಬಾಬಾರವರು ಭೀಷ್ಮನನ್ನು ಅದೇ ಪ್ರಶ್ನೆಯನ್ನು ಮತ್ತೊಂದು ರೀತಿಯಲ್ಲಿ ಕೇಳಿದರು. "ಬುವಾ ಏನು ಹೇಳುತ್ತಾನೆ?" ॥72॥

ಆಗ ಕಾಕಾನು ನೆನಪಿಸಿಕೊಂಡು ತನ್ನ ಉದ್ದೇಶವನ್ನು ಪ್ರಕಟಿಸಿದನು. ಬಾಬಾರವರಿಗೆ ಈ ವಿಚಾರ ಇಷ್ಟವಾಯಿತು. ಈ ಸಮಾರಂಭವನ್ನು ಆಚರಿಸಲು ಉದ್ದೇಶಿಸಲಾಯಿತು. ॥73॥

ಮಾರನೆಯ ದಿನ, ಬೆಳಗಿನ ಜಾವದಲ್ಲಿ ಬಾಬಾರವರು ಲೇಂಡಿಗೆ ಹೋಗಿರಲು, ಒಂದು ತೊಟ್ಟಿಲನ್ನು ಬಯಲಿನಲ್ಲಿ ಕಟ್ಟಿ ಕೀರ್ತನೆಗೆ ಸಿದ್ಧಪಡಿಸಲಾಯಿತು. ॥74॥

ಪ್ರೇಕ್ಷಕರು ಅಲ್ಲಿ ಸೇರಿದರು. ಅನಂತರ ಬಾಬಾರವರು ಸಮಯಕ್ಕೆ ಸರಿಯಾಗಿ ಹಿಂತಿರುಗಿದರು. ಭೀಷ್ಮನು ಎದ್ದು ನಿಂತನು. ಕಾಕಾನು ಹಾರ್ಮೋನಿಯಂ ಹಿಡಿದು ಕುಳಿತನು. ಆಗ ಬಾಬಾರವರು ಕಾಕಾನನ್ನು ಬರ ಹೇಳಿದರು. ॥75॥

"ಬಾಬಾರವರು ನಿನ್ನನ್ನು ಕರೆಯುತ್ತಿದ್ದಾರೆ". ಅದನ್ನು ಕೇಳಿ ಕಾಕಾನು ಬೆಚ್ಚಿಬಿದ್ದನು. ಏನಾಯಿತೆಂದು ಅರ್ಥಮಾಡಿಕೊಳ್ಳಲಾರದೇ ಹೋದನು. ಯಾವುದೇ ಅಪಜಯವಾಗದಂತಾಗಲಿ. ॥76॥

ಬಾಬಾರವರ ಕರೆಯನ್ನು ಕೇಳುತ್ತಲೇ ಕಾಕಾನು ಭಯಭೀತನಾದನು. "ಬಾಬಾ ಏಕಿಷ್ಣು ಕೋಪಗೊಂಡಿದ್ದಾರೆ? ಕೀರ್ತನೆಯು ಯಾವ ತೊಂಡೆಯೂ ಇಲ್ಲದೆ ನಡೆಯುವುದೋ ಇಲ್ಲವೋ"? ॥77॥

ಅವನು ತಿರುಗಿ ತಿರುಗಿ ನೋಡುತ್ತಲೇ ಮುಂದೆ ನಡೆದನು. ಅವನು ಮೆಟ್ಟಲುಗಳನ್ನು ಭಯದಿಂದ ಹತ್ತಿಹೋದನು. ಅವನ ಹೆಜ್ಜೆಗಳು ಬಹಳ ಮೆದುವಾಗಿದ್ದುವು. ಕಾಕಾನು ಬಹಳ ಚಿಂತಿತನಾಗಿದ್ದನು. ॥78॥

ಬಾಬಾ ಅವನನ್ನು ಪ್ರಶ್ನಿಸಿದರು - "ಈ ತೊಟ್ಟಿಲನ್ನು ಇಲ್ಲಿ ಏಕೆ ಕಟ್ಟಿದೆ?" ಸಂಕ್ಷಿಪ್ತವಾದ ಕತೆಯನ್ನು ಅದರ ಹಿಂದಿರುವ ಕಾರಣವನ್ನೂ ಮತ್ತು ಕಾರ್ಯಕ್ರಮವನ್ನೆಲ್ಲ ಕೇಳಿದ ನಂತರ ಸಂತಸಗೊಂಡರು. ॥79॥

ನಂತರ ಗೂಡಿನಿಂದ ಒಂದು ಸುಂದರವಾದ ಹಾರವನ್ನು ತೆಗೆದು ಕಾಕಾನ ಕೊರಳಿಗೆ ಹಾಕಿದರು. ಮತ್ತೊಂದನ್ನು ಭೀಷ್ಮನಿಗೆ ಕೊಟ್ಟರು. ॥80॥



ತೊಟ್ಟಲಿನ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಅಲ್ಲೆಲ್ಲ ಕಾತರತೆ ಉಂಟಾಯಿತು. ಆದರೆ ಕೊರಳಿಗೆ ಹಾರಗಳನ್ನು ಹಾಕಿದಾಗ ಎಲ್ಲರಿಗೂ ಆರಾಮವಾಯಿತು. ॥81॥

ಭೀಷ್ಮನು ಒಬ್ಬ ಅಸಾಧಾರಣ ವ್ಯಕ್ತಿ. ಕತೆಗಳನ್ನು ವಿವರಿಸುವಲ್ಲಿ ಅಗಾಧವಾದ ಪಾಂಡಿತ್ಯವಿತ್ತು. ಕೀರ್ತನೆಯು ಅತಿ ಮಧುರವಾಗಿದ್ದು ಶ್ರೋತೃಗಳೆಲ್ಲರೂ ಬಹಳ ಸಂತಸಗೊಂಡರು. 82॥

ಬಾಬಾರವರೂ ಸಹ ಅತ್ಯಂತ ಪ್ರಸನ್ನರಾದರು. ಅವರ ಒಪ್ಪಿಗೆಯಮೇರೆಗೆ ಹಬ್ಬವನ್ನು ಆಚರಿಸಲಾಯಿತು. ಭಜನೆ, ಕೀರ್ತನೆ ಇತ್ಯಾದಿಗಳಿದ್ದವು. ॥83॥

ರಾಮನು ಜನ್ಮತಾಳಿದ ಸಮಯದಲ್ಲಿ ಕೆಂಪು ಗುಲಾಲು ಪುಡಿಯನ್ನು ಎರಚಾಡಿದಾಗ ಬಾಬಾರವರ ಕಣ್ಣಿನಲ್ಲಿ ಬಿದ್ದು ಬಾಬಾರವರು ಅತ್ಯಂತ ಕ್ರೋಧಿತರಾದರು. ಅವರು ನರಹರಿಯ ಹಾಗೆ ಭಯಂಕರವಾಗಿ ಕಂಡರು. ಆ ಸಮಯ ಕೌಸಲ್ಯೇಯ ಅರಮನೆಯಲ್ಲಿ ರಾಮನ ಜನನವಾಗಿತ್ತು. ॥84॥

ಗುಲಾಲು ಕೇವಲ ಒಂದು ನೆಪಮಾತ್ರ ಈ ಘಟನೆಯು ರಾವಣನೋಪಾದಿಯಲ್ಲಿರುವ ಅಹಂಕಾರವನ್ನು ರಾಕ್ಷಸರೂಪೀ ಕ್ರೌರ್ಯವನ್ನು ನಾಶಮಾಡಲು ಅವತರಿಸಿ ಬಂದ ರಾಮನ ಉದ್ದೇಶವನ್ನು ಪ್ರಕಟಿಸಿತು. ॥85॥

ತತ್‌ಕ್ಷಣವೇ ಅವರು ಅಸಮಾಧಾನಗೊಂಡರು. ನರಸಿಂಹನ ಹಾಗೆ ಆದರು. ಅನೇಕ ವಿಧದ ಶಾಪಗಳನ್ನು ಎಲ್ಲರ ಮೇಲೂ ಸುರಿಸಿದರು. ॥86॥

ರಾಧಾಕೃಷ್ಣಬಾಯಿಯು ವಿಶೇಷವಾಗಿ ತೊಟ್ಟಿಲನ್ನು ಪುಡಿಮಾಡುವರೆಂಬ ಚಿಂತೆಗೆ ಒಳಗಾದಳು. ಅದನ್ನು ಸರಿಮಾಡುವುದು ಹೇಗೆ? ಅದು ಅವಳ ಚಿಂತೆಗೆ ಕಾರಣವಾಗಿತ್ತು. ॥87॥

"ದಯಮಾಡಿ ತೆಗೆದುಬಿಡಿ. ಬೇಗ ತೆಗೆದುಬಿಡಿ" ಅವಳು ಒಂದೇ ಸಮನೆ ಒತ್ತಾಯಿಸುತ್ತಿದ್ದಳು. ಕಾಕಾನು ತೊಟ್ಟಿಲನ್ನು ತೆಗೆಯಲು ಮುಂದೆ ಹೋದನು. ॥88॥

ಆಗ ಬಾಬಾರವರು ಅತ್ಯಂತ ಕ್ರೋಧಿತರಾಗಿ, ಕಾಕಾನ ಕಡೆಗೆ ಮುನ್ನುಗ್ಗಿದರು. ತೊಟ್ಟಿಲನ್ನು ತೆಗೆಯುವುದು ಮರೆತುಹೋಯಿತು. ಬಾಬಾರವರು ಮತ್ತೆ ಶಾಂತರಾದರು. ॥89॥

ಮಧ್ಯಾಹ್ನದ ವೇಳೆಯಲ್ಲಿ ಬಾಬಾರವರ ಅಪ್ಪಣೆ ಬೇಡಿದಾಗ ಅವರ ಉತ್ತರ ಎಲ್ಲರನ್ನೂ ಬೆರಗುಗೊಳಿಸಿತು. - “ತೊಟ್ಟಿಲನ್ನು ಇಷ್ಟು ಅವಸರವಾಗಿ ಏಕೆ ಬಿಚ್ಚುವಿರಿ? ಅದರ ಅವಶ್ಯಕತೆ ಇನ್ನೂ ಇದೆ.” ॥90॥

ಇದರ ಆವಶ್ಯಕತೆಯಾದರೂ ಏನಿತ್ತು? ಸಾಯಿಯ ಮಾತುಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಸ್ವಲ್ಪ ಯೋಚಿಸಿದಲ್ಲಿ, ಹಬ್ಬ ಇನ್ನೂ ಪೂರ್ಣವಾಗದಿರುವ ಬಗ್ಗೆ ಅರಿವುಂಟಾಗುತ್ತದೆ. ॥91॥

ಹಬ್ಬವು ಒಂದು ಮಟ್ಟದವರೆಗೆ ಮಾತ್ರ ಸಾಗಿತ್ತು. ಆದರೆ ಮಾರನೆಯ ದಿನದ ಸಂಜೆಯವರೆಗೆ ಮತ್ತು ಗೋಪಾಲಕಾಲದ ಸಮಯದವರೆಗೆ ಉತ್ಸವ ಷೂರ್ಣವಾಯಿತೆಂದು ತಿಳಿಸಲು ಆಗುವುದಿಲ್ಲ. ॥92॥

ಈ ರೀತಿಯಲ್ಲಿ, ಎರಡನೆಯ ದಿನ ಗೋಪಾಲಕಾಲ ಮತ್ತು ಸಂಕೀರ್ತನೆಯ ನಂತರ ಬಾಬಾರವರು ತೊಟ್ಟಿಲನ್ನು ತೆಗೆಯಲು ಒಪ್ಪಿಗೆ ನೀಡಿದರು. ॥93॥

ಮಾರನೆಯ ವರ್ಷದಲ್ಲಿ ಭೀಷ್ಮನು ಇರಲಿಲ್ಲ. ಬಾಳಾ ಬುವಾ ಸತಾರ್ಕರ್‌ನನ್ನು ಕೀರ್ತನೆಗಾಗಿ ಕರೆಸಬೇಕಾಗಿತ್ತು. ಆದರೆ ಅವನು ಕವಟೆಗೆ ಹೋಗಬೇಕಾಯಿತು. ॥94॥

ಆದ್ದರಿಂದ, 'ಆಧುನಿಕ ತುಕಾರಾಂ' ಎಂದು ಕರೆಯಲ್ಪಡುತ್ತಿದ್ದ ಬಾಳಾ ಬುವಾ ಭಜನಿಯನ್ನು ಕಾಕಾ ಮಹಾಜನಿಯು ಕರೆತಂದನು. ಅವನ ಕೈಗಳಿಂದ ಉತ್ಸವ ಆಚರಿಸಲಾಯಿತು. ॥95॥

ಭಜನಿಯೂ ದೊರಕದಿದ್ದಲ್ಲಿ ಕಾಕಾನೇ ಕೀರ್ತನೆ ಮಾಡುತ್ತಿದ್ದನು. ಏಕೆಂದರೆ ಅವನಿಗೆ ದಾಸಗಣು ರಚಿಸಿದ್ದ ರಾಮನವಮಿಯ ರಚನೆ ಬಾಯಿಪಾಠವಾಗಿತ್ತು. ॥96॥

ಮೂರನೆಯ ವರ್ಷ, ಬಾಳಾ ಬುವಾ ಸತಾರಕರ್‌ನೇ ಶಿರಡಿಗೆ ಆ ಸಮಾರಂಭದ ಸಮಯಕ್ಕೆ ಸರಿಯಾಗಿ ಆಗಮಿಸಿದನು. ಈ ಘಟನೆಯ ಬಗ್ಗೆ ಆದರಪೂರ್ವಕವಾಗಿ ಆಲಿಸಿರಿ. ॥97॥

ಸಾಯಿಬಾಬಾರವರ ಕೀರ್ತಿನೆಯನ್ನು ಕೇಳಿದ್ದ ಅವನಿಗೆ ದರುಶನದ ಆಕಾಂಕ್ಷೆ ಉದಯಿಸಿತು. ಆದರೆ ಮಾರ್ಗದಲ್ಲಿ ಅವನಿಗೆ ಜೊತೆಗಾರರು ಬೇಕಾಗಿತ್ತು. ಯಾರಾದರೂ ಸಿಗುವರೇ ಎಂದು ಕಾತರದಿಂದ ಕಾಯುತ್ತ ಇದ್ದನು. ॥98॥

ಬಾಳಾ ಬುವಾನು ತಾನೇ ಒಬ್ಬ ಹರಿದಾಸ (ಕೀರ್ತನಕಾರ)ನಾಗಿದ್ದನು. 'ಸತಾರಾ'ದವನಾಗಿದ್ದ ಅವನು ಆ ಸಮಯದಲ್ಲಿ ಬೊಂಬಾಯಿಯ ಪರೇಲ್‌ನಲ್ಲಿ ವಾಸವಾಗಿದ್ದನು. ॥99॥ 

ತಾರಾ ಜಿಲ್ಲೆಯ ಬೃಹತ್‌ ಸಿದ್ಧಕವಾಟೆ ಎಂಬಲ್ಲಿ ಒ೦ದು ದೇವಸ್ಥಾನವಿದ್ದು ಅಲ್ಲಿ ಬುವಾನು ಪ್ರತಿವರ್ಷ ರಾಮನವಮಿಯ ದಿನ ಕೀರ್ತನೆ ನಡೆಸುತ್ತಿದ್ದನು. ಅದಕ್ಕಾಗಿ ಪ್ರತಿವರ್ಷ ಸಂಭಾವನೆ ಪಡೆಯುತ್ತಿದ್ದನು. ॥100॥

ಬಾಳಾ ಬುವಾನು ಎರಡು ವಾರ್ಷಿಕ ಉತ್ಸವಗಳಲ್ಲಿ ಸಂಬಂಧಿಸಿದ್ದನು. ಒಂದು ಆಷಾಡ ಏಕಾದಶಿ, ಮತ್ತೊಂದು ರಾಮನವಮಿ. ಇವೆರಡು ಚೈತ್ರ ಮಾಸದಲ್ಲಿಯೇ ಬರುತ್ತಿದ್ದವು. ॥101॥

ಮೊಘಲ್‌ ಚಕ್ರವರ್ತಿಯಶಾಸನಾಧಿಕಾರದ ಅನುಸಾರ ರೂ. 2400/-ಗಳನ್ನು ಮೂರ್ತಿಯ (ಬಡೇಬಾಬಾ)ರ ಖರ್ಚಿಗಾಗಿ ನಿಗದಿಪಡಿಸಲಾಗಿತ್ತು. ಮತ್ತು ಸಂಸ್ಥೆಯಿಂದಲೇ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ॥102॥

ಈ ಎರಡು ಉತ್ಸವಗಳಿಗೆ ಬುವಾನಿಗೆ ರೂ. 30/ಎಗಳನ್ನು ಕೊಡುತ್ತಿದ್ದರು. ಆದರೆ ಆ ವರ್ಷ ಕವಾಟೆ ಹಳ್ಳಿಯಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಹರಡಿತ್ತು. ಹಳ್ಳಿಯವರು ಕಷ್ಟ ಕಾರ್ಪಣ್ಯದಲ್ಲಿದ್ದರು. ॥103॥

ಆದುದರಿಂದ ಅಲ್ಲಿ ರಾಮನವಮಿಯ ಹಬ್ಬವನ್ನು ರದ್ದುಗೊಳಿಸಲಾಗಿತ್ತು. ಬುವಾನು ಹಳ್ಳಿಯನ್ನು ತೆರವು ಗೊಳಿಸಿದ್ದರಿಂದ

ಮುಂದಿನ ವರ್ಷ ಬರುವಂತೆ ಆಹ್ವಾನಪತ್ರಗಳನ್ನು ಸ್ಟೀಕರಿಸಿದನು. ॥104॥

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅವನಿಗೆ ರಾಮನ ಸೇವೆ ಮಾಡುವ ಅವಕಾಶ ತಪ್ಪಿತು ಮತ್ತು ಸಂಭಾವನೆಯನ್ನೂ ಸ್ಟೀಕರಿಸಲಾಗಲಿಲ್ಲ. ಆದರೆ, ಅದು ಅವನಿಗೆ ಶಿರಡಿಗೆ ಹೋಗುವ ಅವಕಾಶಮಾಡಿಕೊಟ್ಟಿತು. ಅದರಿಂದಾಗಿ ಅವನು ದೀಕ್ಷಿತನನ್ನು ಭೇಟಿಯಾದನು. ॥105॥

ದೀಕ್ಬಿತನು ಬಾಬಾರವರ ಪರಮ ಭಕ್ತ. ಶಿರಡಿಗೆ ಹೋಗುವ ಬಯಕೆಯೂ ನೆರವೇರುವಂತಾಗಿ ಅದು ತನ್ನ ಮೇಲೆ ಆಧರಿಸಿದ್ದರಿಂದ ಅವನಿಗೆ ಲೌಕಿಕ ಲಾಭದ ಜೊತೆಯಲ್ಲಿ ಆಧ್ಯಾತ್ಮಿಕ ಲಾಭವೂ ದೊರಕುವಂತಾಯಿತು. ॥106॥

ಆದ್ದರಿಂದ ಅವನು ದೀಕ್ಷಿತನಿಗೆ ಈ ರೀತಿ ತಿಳಿಸಿದನು. ವಾರ್ಷಿಕ ಆದಾಯವೂ ತಾತ್ಕಾಲಿಕವಾಗಿ ತಡೆಹಿಡಿಯಲ್ಪಟ್ಟಿದ್ದರಿಂದ ಬಾಬಾರವರ ದರ್ಶನ ಮಾಡಿ ಅಲ್ಲಿ ಕೀರ್ತನೆ ನಡೆಸುವೆನೆಂದು ತಿಳಿಸಿದನು. ॥107॥

ಭಾವು ಸಾಹೇಬನು ಅದಕ್ಕೆ ಹಣ ಪಾವತಿಯಬಗ್ಗೆ ನಿಶ್ಚಿತವಿಲ್ಲವೆಂದು ಉತ್ತರಿಸಿದನು. ಕೊಡಬೇಕಾ ಬೇಡವಾ ಎನ್ನುವುದು ಬಾಬಾರವರ ಕೈಯಲ್ಲಿದೆ ಮತ್ತು ಕೀರ್ತನೆ ಮಾಡಲೂ ಸಹ ಬಾಬಾರವರ ಅನುಮತಿ ಪಡೆಯಬೇಕಾಗುತ್ತದೆಂದನು. ॥108॥

ಈ ಮಾತುಕತೆ ನಡೆಯುತ್ತಿರುವಾಗಲೇ ಕಾಕಾ ಮಹಾಜನಿಯು ಅನಿರೀಕ್ಷಿತವಾಗಿ ಅಲ್ಲಿಗೆ ಬಂದು ಶಿರಡಿಯ ಪ್ರಸಾದವೆಂದು ಉದಿಯನ್ನು ಹಂಚಿದನು. ಇದನ್ನು ತುಭಶಕುನವೆಂದು ಪರಿಗಣಿಸಲಾಯಿತು. ॥109॥

ಮಹಾಜನಿಯು ಆಗ ತಾನೇ ಶಿರಡಿಯಿಂದ ಹಿಂತಿರುಗಿದ್ದನು. ಅಲ್ಲೆಲ್ಲವೂ ಚೆನ್ನಾಗಿಯೇ ಇದೆಯೆಂದು ತಿಳಿಸಿ ಅನ೦ತರ ತನ್ನ ಮನೆಗೆ ಮರಳಿದನು. ॥110॥

ಅನಂತರ ದೀಕ್ಷಿತನು ಬಹಳ ಪ್ರೀತಿಯಿಂದ ಬುವಾನಿಗೆ ತಾನು ಬಾಬಾರವರ ಅನುಮತಿ ಕೇಳುವುದಾಗಿ ತಿಳಿಸಿದನು. ಅದು ದೊರಕಿದಲ್ಲಿ ಕೂಡಲೇ ನಿಶ್ಚಯವಾಗಿ ತಿಳಿಸುವುದಾಗಿ ಹೇಳಿದನು. ॥111॥

"ಪತ್ರ ಕೈಸೇರಿದ ಕೂಡಲೇ ಶಿರಡಿಗೆ ಹೊರಟು ಬಾ, ಪ್ರಯಾಣದ ವೆಚ್ಚದ ಬಗ್ಗೆ ಚಿಂತಿಸಬೇಡ. ನೀನು ಅದನ್ನು ಭರಿಸಬೇಕಾಗಿ ಬರುವುದಿಲ್ಲ. ಅದರ ಬಗ್ಗೆ ಸಂಶಯಬೇಡ". ॥112॥

ಅನ೦ತರ ದೀಕ್ಷಿತನು (ಬಾಳಾ ಬುವಾನಿಗಿ೦ತ) ಮುಂಚಿತವಾಗಿ ಹೋದನು. ಬಾಬಾರವರು ಅನುಮತಿ ನೀಡಿದರು. ಬಾಳಾ ಬುವಾನು ಶಿರಡಿಗೆ ಬಂದನು. ಮನಃಪೂರ್ತಿಯಾಗಿ ಸಾಯಿಯ ದರ್ಶನ ಪಡೆದನು. ॥113॥

ಸಾಯಿಬಾಬಾರವರು ರಾಮನವಮಿ ಉತ್ಸವವನ್ನು ತಮ್ಮ ಸಮಕ್ಷಮದಲ್ಲಿ ಅತಿ ಪ್ರೀತಿಯಿಂದ ಬಾಳಾ ಬುವಾನ ಕೈಯಿಂದ ಬಹು ವಿಜೃಂಭಣೆಯಿಂದ ನಡೆಸಿದರು. ॥114॥

ಬಾಳಾ ಬುವಾನು ಮನಸ್ಸಿನಲ್ಲೇ ಸಂತಸಗೊಂಡನು. ಅವನ ಉದ್ದೇಶ ಸಫಲವಾಯಿತು. ಸಾಯಿಯೂ ಬಹಳ ಆನಂದಪಟ್ಟರು. ಈ ರೀತಿ ಪ್ರತಿಯೊಬ್ಬರ ಆಶೆಗಳೂ ನೆರವೇರಿದವು. ॥115॥

ಅವರ ನಿರೀಕ್ಷೆಗಿಂತ ಅಧಿಕವಾಗಿಯೇ ಪೂರ್ಣಗೊಂಡಿದ್ದವು. ಅವನು150/- ರೂಪಾಯಿಗಳನ್ನು ಸ್ವೀಕರಿಸಲು ಅಪ್ಪಣೆಯಾಯಿತು. ಬುವಾನು ಅತೀವ ಆನಂದ ಪಟ್ಟನು. ॥116॥

ಬಾಳಾ ಬುವಾನಿಗೆ ಏಕೆ ಸಂತಸವಾಗಿಲ್ಲ? ಕವಾಟೆಯಲ್ಲಿನ 5 ವರ್ಷಗಳ ಕಾಲದ ಸಂಪಾದನೆಯಷ್ಟು ಒಂದೇ ಉತ್ಸವದಲ್ಲಿ ಬಾಬಾರವರು ನೀಡಿದ್ದರು. ಈ ರೀತಿ ಅವನು ಬಾಬಾರವರಿಗೆ ಋಣಿಯಾದನು. ॥117॥

ಮತ್ತೆ, ನಂತರ ದಾಸಗಣು ಶಿರಡಿಯಲ್ಲಿದ್ದಾಗ, ಬಾಬಾರವರನ್ನು ಪ್ರಾರ್ಥಿಸಿಕೊಂಡಾಗ ಅವರು ದಾಸಗಣುವಿಗೆ ಪ್ರತಿವರ್ಷ ಉತ್ಸವದಲ್ಲಿ ಕೀರ್ತನೆಯನ್ನು ಮಾಡುವ ಕಾರ್ಯವನ್ನು ಒಪ್ಪಿಸಿದರು. ॥118॥

ಅಲ್ಲಿಂದ ಇಲ್ಲಿಯವರೆಗೆ ಜನ್ಮೋತ್ಸವವನ್ನು ಬಹಳ ವೈಭವ, ಆಡಂಬರಗಳಿಂದ ಆಚರಿಸಲಾಗುತ್ತಿದೆ. ಮನಃಪೂರ್ತಿಯಾಗಿ ಅನ್ನವನ್ನು ಹಂಚಲಾಗುತ್ತಿದೆ. ಬಡವರು, ದೀನರು ಸಂತಸಪಡುತ್ತಾರೆ. ॥119॥

ಸಮಾಧಿಮಂದಿರದ ಮುಖ್ಯ ಪ್ರವೇಶದ್ವಾರದಲ್ಲಿ ಜಾನಪದ ಸಂಗೀತ, ವಾದ್ಯ ಸಂಗೀತದೊಡನೆ (ಚಂಗ್‌ ಬದ ಮತ್ತು ಶಹನಾಯಿ) ಬಾಬಾರವರ ನಾಮವು ಆಕಾಶದವರೆಗೆ ಪ್ರತಿಧ್ವನಿಸುತ್ತದೆ ಮತ್ತು ಇಡೀ ವಾತಾವರಣವು ಉಲ್ಲಾಸದಿಂದ ತುಂಬಿರುತ್ತದೆ. ॥120॥ 

ಯಾವ ರೀತಿಯಲ್ಲಿ ಅವರು ಉತ್ಸವ ಮತ್ತು ಉರುಸ್‌ನ್ನು ಯೋಚಿಸಿದ್ದರೋ ಅದೇ ರೀತಿ ಗೋಪಾಲಗುಂಡನು ಹಳೆಯ ಶಿಥಿಲವಾದ ಮಸೀದಿಗೆ ಹೊಸರೂಪ ಕೊಡಲು ಪ್ರೇರಿತನಾದನು. ॥121॥

ಭಕ್ತನಾದ ಗೋಪಾಲಗುಂಡನು ತನ್ನ ಕೈಯಿಂದಲೇ ಮಸೀದಿಯನ್ನು ಜೀರ್ಣೋದ್ಧಾರ ಮಾಡಲು ನಿಶ್ಚಯಿಸಿ ಬೇಕಾದ ಕಲ್ಲುಚಪ್ಪಡಿಗಳನ್ನು ಸಿದ್ಧಪಡಿಸಿದನು. ॥122॥

ಆದರೆ ಆ ಜೀರ್ಣೋದ್ಧಾರದ ಕೆಲಸವು ಗುಂಡನಿಗೆ ನಿಯಮಿತವಾಗಿರಲಿಲ್ಲ. ಈ ಮಂಗಳ ಕಾರ್ಯಕ್ಕೆ ಬೇಕಾದ ಸಂದರ್ಭ ಅನಂತರ ನಿಶ್ಚಿತ ರೂಪದಲ್ಲಿ ಕೂಡಿಬಂದಿತು. ॥123॥

ಬಾಬಾರವರು ಜೀರ್ಣೋದ್ಧಾರದ ಕೆಲಸವು ನಾನಾ(ಚಂದೋರಕರ್‌)ನಿಂದ ಆಗಬೇಕೆಂದು ಇಚ್ಛಿಸಿದರೆಂದು ತೋರುತ್ತದೆ. ಮತ್ತೆ ನೆಲಕ್ಕೆ ಕಲ್ಲು ಹಾಸುವ ಕೆಲಸ ಕಾಕಾ(ದೀಕ್ಷಿತ್‌)ನದಾಯಿತು. ॥124॥ ಅದೇ ರೀತಿ ಅದು ಅನ೦ತರ ನೆರವೇರಿತು. ಪ್ರಾರಂಭದಲ್ಲಿ ಅನುಮತಿಗಾಗಿ ಪ್ರಾರ್ಥಿಸಿ ದಣಿದಿದ್ದರೂ, ನಂತರ ಅವನು ಮ್ಹಾಳಸಾಪತಿಯ ಮಧ್ಯಸ್ತಿಕೆ ಮಾಡಿದಾಗ ಬಾಬಾರವರು ಅನುಮತಿ ನೀಡಿದರು. ॥125॥

ಅದುಹಾಗಿರಲಿ. ಮಸೀದಿಯಲ್ಲಿ ನೆಲಕ್ಕೆ ಕಲ್ಲುಹಾಸುವ ಕೆಲಸ ಒಂದು ರಾತ್ರಿಯಲ್ಲೇ ಷೂರ್ಣಗೊಂಡಿತು. ಅಲ್ಲಿ ಮಾರನೆಯ ದಿನವೇ ಬಾಬಾರವರು ಬಂದು 'ಗಾದಿ'ಯ ಮೇಲೆ ಕುಳಿತರು. ॥126॥

ಸನ್‌ 1911ನೆಯ ಇಸವಿಯಲ್ಲಿ ಸಭಾ ಮಂಟಪವನ್ನು ನಿರ್ಮಿಸಲಾಯಿತು. ಅದು ಅತ್ಯಂತಕಷ್ಟಸಾಹಸವಾದ ಕೆಲಸವಾಗಿತ್ತು. ಅದು ಅನೇಕ ಅಪಾಯಗಳನ್ನೊಳಗೊಂಡಿದ್ದು ಜನರು ಭಯಭೀತರಾಗಿ ನಡುಗಿಹೋದರು. ॥127॥

ಈ ಕೆಲಸವನ್ನೂ ಸಹ ಭಕ್ತರು ರಾತ್ರಿಯೆಲ್ಲ ಕೆಲಸಮಾಡಿ ಪೂರೈಸಿದರು. ಅದೇ ರೀತಿಯಲ್ಲಿ ಅದೇ ಸನ್ನಿವೇಶಗಳಲ್ಲಿ ಮಾಡಿದರು. ॥128॥

ರಾತ್ರಿ ವೇಳೆಯಲ್ಲಿ ಬಹಳ ಕಷ್ಟದಿಂದ ಕ೦ಭಗಳನ್ನು ನಿಲ್ಲಿಸುತ್ತಿದ್ದರು. ಹಗಲಲ್ಲಿ ಬಾಬಾರವರು ಬಂದು ಅವುಗಳನ್ನು ತೆಗೆಸುತ್ತಿದ್ದರು. ಮತ್ತೆ ಅವಕಾಶ ದೊರೆತಾಗಲೆಲ್ಲಾ ಅವುಗಳನ್ನು ಮತ್ತೆ ನಿಲ್ಲಿಸುತ್ತಿದ್ದರು. ಈ ರೀತಿ ಎಲ್ಲರೂ ದಣಿದುಹೋದರು. ॥129॥ 

ಪ್ರತಿಯೊಬ್ಬರೂ ಸೊಂಟಕ್ಕೆ ಪಟ್ಟ ಕಟ್ಟ ರಾತ್ರಿಯನ್ನು ಹಗಲನ್ನಾಗಿ ಮಾಡಿದರು. ಬಹಳ ಶತ್ರಮವಹಿಸಿಯಾದರೂ ತಮ್ಮ ಗುರಿಯನ್ನು ಸಾಧಿಸುವುದೇ ಉದ್ದೇಶವಾಗಿತ್ತು. ॥130॥

ದೀಕ್ಷಿತ್‌ನು ಆ ನಿವೇಶನವು ಸಭಾ ಮಂಟಪವನ್ನು ಕಟ್ಟಲು ತಕ್ಕುದಾದ, ಯೋಗ್ಯವಾದ ಸ್ಥಳವೆಂದು ಯೋಚಿಸಿದ್ದನು. ಅಲ್ಲಿ ಮೊದಲು ಒ೦ದು ಬಯಲು ಜಾಗವೂ ಒಂದು ಚಿಕ್ಕ ಆಟದ ಮೈದಾನವೂ ಇದ್ದುವು. ॥131॥

ಅದಕ್ಕೆ ಬೇಕಾದ ಹಣವನ್ನು ಹೂಡಿ ಕಬ್ಬಿಣದ ಸ್ತಂಭಗಳಿಗೆ ಮತ್ತು ಕೋನಸಹಿತ ಆಧಾರದಕಂಭ, ಇವುಗಳನ್ನು ಬಾಬಾರವರು ಚಾವಡಿಯಲ್ಲಿದ್ದ ಸಮಯ ನೋಡಿಕೊಂಡು ಮುಗಿಸಿದರು. ॥132॥

ಭಕ್ತರು ರಾತ್ರಿಯನ್ನು ಹಗಲಾಗಿ ಮಾಡಿ ಶ್ರಮವಹಿಸಿ ಕಂಭಗಳನ್ನು ನಿಲ್ಲಿಸುತ್ತಿದ್ದರು. ಆದರೆ, ಬಾಬಾರವರು ಚಾವಡಿಯಿಂದ ಹಿಂತಿರುಗಿದ ಕೂಡಲೇ ಅವುಗಳನ್ನು ತೆಗೆಸಿಹಾಕುತ್ತಿದ್ದರು. ॥133॥

ಒಂದು ಸನ್ನಿವೇಶದಲ್ಲಿ ಬಾಬಾರವರು ಅತಿಯಾಗಿ ಉದ್ರೇಕಗೊಂಡು ತಾತ್ಯಾನನ್ನು ಒಂದು ಕೈಯಿಂದ ಕುತ್ತಿಗೆ ಪಟ್ಟಿಹಿಡಿದು ಮತ್ತೊಂದು ಕೈಯಿಂದ ಕ೦ಭವನ್ನು ಅಲ್ಲಾಡಿಸಿ ಅದನ್ನು ತಲೆಕೆಳಗಾಗಿ ಮಾಡಲು ಹೊರಟರು. ॥134॥

ಅವರು ಅದನ್ನು ಅಲ್ಲಾಡಿಸಿ ಸಡಿಲಗೊಳಿಸಿದರು. ತಾತ್ಯಾನ ತಲೆಯ ರುಮಾಲನ್ನು ತೆಗೆದು ಒಂದು ಬೆಂಕಿಕಡ್ಡಿಯಿ೦ದ ಬೆಂಕಿ ಹಚ್ಚಿದರು ಮತ್ತು ಅದನ್ನು ಕೋಪದಿಂದ ಒಂದು ಹಳ್ಳಕ್ಕೆ ಎಸೆದರು.  ॥135॥



ಆ ಸಮಯದಲ್ಲಿ ಅವರ ಕಣ್ಣುಗಳು ಬೆಂಕಿಯ ಉಂಡೆಗಳಾಗಿದ್ದವು. ಅವುಗಳನ್ನು ನೇರವಾಗಿ ದೃಷ್ಟಿಸಲು ಯಾರಿಗೆ ತಾನೇ ಸಾಧ್ಯ? ಪ್ರತಿಯೊಬ್ಬರೂ ಧೈರ್ಯಗುಂದಿದರು. ॥136॥

ಕೂಡಲೇ ಅವರು ತಮ್ಮ ಜೇಬಿಗೆ ಕೈ ಹಾಕಿ ಒಂದು ರೂಪಾಯಿಯನ್ನು ತೆಗೆದು ಒಂದು ಶುಭಗಳಿಗೆಯ ಸಂಕೇತದಂತೆ ಅಲ್ಲಿ ಬಿಸಾಡಿದರು. ॥137॥

ತಾಪಗಳು ಮತ್ತು ಬೈಗಳು ಸುರಿದವು. ತಾತ್ಕಾನೂ ಸಹ ಮನದಲ್ಲೇ ಬಹಳ ಭಯಭೀತನಾಗಿದ್ದನು. ಅದೊಂದು ಕ್ಲಿಷ್ಟ ಸನ್ನಿವೇಶದಂತೆ ತೋರಿತು. ಇವೆಲ್ಲವೂ ಹೇಗೆ ನಡೆದವು? ॥138॥

ಅಲ್ಲಿದ್ದ ಪ್ರೇಕ್ಟಕರೆಲ್ಲರೂ ಬೆರಗಾಗಿ ನಿಶ್ಚೇತನರಾದರು. ಈ ಅಪಶಕುನ ಈ ದಿನ ಏಕೆ? ತಾತ್ಯಾನ ಮೇಲೆ ಬಂದಿರುವ ಈ ಕಷ್ಟದ ನಿವಾರಣೆ ಹೇಗೆ? ॥139॥

ಭಾಗೋಜಿ ಶಿಂಧೆಯು ಧೈರ್ಯಮಾಡಿ ಎಚ್ಚರಿಕೆಯಿಂದ ಮುಂದೆ ಹೆಜ್ಜೆಯಿಟ್ಟನು. ಅವನೂ ಸಹ ಸುಲಭವಾಗಿ ಬಲಿಪಶುವಾದನು ಮತ್ತು ಬಾಬಾರವರ ಘರ್ಜನೆಗೊಳಗಾದನು. ॥140॥

ಮಾಧವರಾವ್‌ನೂಸಹ ಅವರಿಂದ ಹಿಡಿಯಲ್ಪಟ್ಟನು ಮತ್ತು ಬಾಬಾರವರಿಂದ ಬೈಗಳ ಮಳೆ ಪಡೆದನು. ಧೈರ್ಯಮಾಡಿ ಮಧ್ಯಸ್ತಿಕೆ ಮಾಡಲು ಹೋದವರೆಲ್ಲರಿಗೂ ಇದೇ ರೀತಿ ಬಾಬಾರವರಿಂದ ಪ್ರಸಾದ ದೊರೆಯಿತು. ॥141॥

ಬಾಬಾರವರ ಮುಂದೆ ಹೋಗುವ ಸಾಹಸ ಯಾರು ಮಾಡುತ್ತಾರೆ? ತಾತ್ಯಾನನ್ನು ರಕ್ಷಿಸುವುದು ಹೇಗೆ? ಈ ರೀತಿ ಅವರೆಲ್ಲರೂ ಮಾತನಾಡುತ್ತಿರುವಾಗಲೇ ಬಾಬಾರವರ ಕೋಪ ಇಳಿದು ಅವರು ಶಾಂತರಾದರು. ॥142॥

ಕೂಡಲೇ ಒಬ್ಬ ವರ್ತಕನನ್ನು ಕರೆಸಲಾಯಿತು ಮತ್ತು ಒಂದು ಜರಿ ಅಂಚಿನ ರುಮಾಲಿಗಾಗಿ ಆಜ್ಞಾಪಿಸಲಾಯಿತು. ಅವರೇ ಸ್ಪತಃ ಅದನ್ನು ತಾತ್ಯಾನ ತಲೆಗೆ ಸುತ್ತಿದರು. ಅದು ಒಬ್ಬ ರಾಜನಿಗೆ ತೋರಿಸುವ ಗೌರವದಂತಿತ್ತು. ॥143॥

ಜನರು ಬೆರಗಾಗಿ ಆ ಕೋಪಕ್ಕೆ ಕಾರಣವಾಗಲೀ ತಾತ್ಯಾನ ಮೇಲಾದ ಆಘಾತವಾಗಲೀ ಬಾಬಾರವರು ಇಷ್ಟೊಂದು ಗುಲ್ಲೆಬ್ಬಿಸಲು ಕಾರಣವನ್ನು ಅರಿಯದಾದರು. ॥144॥

ಕೋಪಗೊಳ್ಳಲು ಕಾರಣವೇನು? ಮತ್ತೆ ಮುಂದಿನ ಕ್ಷಣಗಳಲ್ಲಿ ಅದನ್ನು ಸಂತಸದ ಭಾವಕ್ಕೆ ತಿರುಗಿಸಿದ್ದೇಕೆ? ಅದಕ್ಕೆ ಮೂಲಕಾರಣ ಯಾರಿಗೂ ಗೊತ್ತಿಲ್ಲ. ॥145॥

ಕೆಲವೊಮ್ಮೆ ಅವರು ಶಾ೦ತವಾಗಿರುವರು ಮತ್ತು ಪ್ರೀತಿಯಿಂದ ಮಾತನಾಡಿಸುವರು. ಮತ್ತೊಮ್ಮೆ ಯಾವುದೇ ಸಹಜ ಕಾರಣವಿಲ್ಲದೆ ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ಅನಿರೀಕ್ಷಿತವಾಗಿ ಕ್ರೋಧಿತರಾಗುತ್ತಾರೆ. ॥146॥

ಅದು ಹಾಗಿರಲಿ. ಬಾಬಾರವರ ಚರಿತ್ರೆಗಳು ಈ ರೀತಿ ಇವೆ. ಒಂದನ್ನು ವಿವರಿಸಲು ಹೊರಟಾಗ ಮತ್ತೊಂದು ನೆನಪಿಗೆ ಬರುತ್ತದೆ. ಆಗ ಯಾವುದನ್ನು ಹೇಳಲಿ, ಯಾವುದನ್ನು ತಡೆಹಿಡಿಯಲಿ? ಮನಸ್ಸನ್ನು ಬೇರೆಡೆಗೆ ತಿರುಗಿಸುವ ಪ್ರವೃತ್ತಿ ಯೋಗ್ಯವಲ್ಲ. ॥147॥

ನನಗೆ ಯಾವುದೇ ಪಕ್ಷಪಾತವಿಲ್ಲ ಮತ್ತು ಯಾವುದನ್ನೂ ಆಯ್ಕೆಮಾಡುವುದಿಲ್ಲ. ಯಾವ ಚರಿತ್ರೆಯು ಆ ಸನ್ನಿವೇಶಕ್ಕೆ ತಕ್ಕುದೋ ಅದು ಶ್ರೋತೃಗಳ ಇಚ್ಛೆಗಳನ್ನು ಪೂರೈಸುತ್ತದೆ ಮತ್ತು ಅವರ ಹೃದಯಗಳಲ್ಲಿ ಆನಂದ ತುಂಬುತ್ತದೆ. ॥148॥

ಮುಂದಿನ ಅಧ್ಯಾಯದಲ್ಲಿ ಹಿರಿಯರಿಂದ ಸಂಗ್ರಹವಾದ ಕತೆಗಳನ್ನು ಆಲಿಸಿ ಬಾಬಾರವರು ಹಿಂದುವೋ ಮುಸ್ಲಿಮರೋ ನಾನು ಕೇಳಿದಷ್ಟು ಚೆನ್ನಾಗಿ ಅದನ್ನು ಪುನರ್‌ ನಿರೂಪಿಸುತ್ತೇನೆ. ॥149॥

ದಕ್ಷಿಣೆಯಾಗಿ ಸಂಗ್ರಹಿಸಿದ ಹಣವನ್ನು ಯಾವ ರೀತಿ ಹಳೆಯ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಉಪಯೋಗಿಸುತ್ತಿದ್ದರು ಮತ್ತು ಅವರು ಹೇಗೆ ಧೋತಿ ಪೋಟಿ ಮತ್ತು ಖಂಡಯೋಗದ ಮೂಲಕ ತಮ್ಮ ದೇಹದಂಡನೆ ಮಾಡುತ್ತಿದ್ದರು. ॥150॥

ಅವರು ಇತರರ ಒಳಿತಿಗಾಗಿ ಎಷ್ಟು ಶ್ರವವಹಿಸುತ್ತಿದ್ದರು ಮತ್ತು ತಮ್ಮ ಭಕ್ತರ ಕಷ್ಟಗಳನ್ನು ಹೇಗೆ ಪರಿಹರಿಸುತ್ತಿದ್ದರು ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ಸ್ಪಷ್ಟಪಡಿಸಲಾಗುತ್ತದೆ. ತ್ರೋತೃಗಳು ಅದರಿಂದ ಸಂತಸಹೊಂದುತ್ತಾರೆ.  ॥151॥


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ರಾಮಜನ್ಮ ದಿನಾಚರಣೆಯ ನಿರೂಪಣೆ" ಎಂಬ ಆರನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।


 



No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....