Sunday, November 28, 2021

07 ವಿವಿಧ ಕಥೆಗಳ ನಿರೂಪಣೆ / Various stories

॥ ಅಥಃ ಶ್ರಿ ಸಾಯಿ ಸಚ್ಚರಿತೆ ॥

"ವಿವಿಧ ಕಥೆಗಳ ನಿರೂಪಣೆ"

 

ಶ್ರೀ ಗಣೇಶನಿಗೆ ಪ್ರಣಾಮಗಳು.

ಶ್ರೀ ಸರಸ್ವತಿಗೆ ಪ್ರಕಾಮಗಳು.

ಶ್ರೀ ಗುರುವಿಗೆ ಪ್ರಣಾಮಗಳು.

ಶ್ರೀ ಕುಲದೇವತೆಗೆ ಪ್ರಣಾಮಗಳು.

ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.

ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.



ಹಿಂದಿನ ಅಧ್ಯಾಯದ ಎಳೆಗಳನ್ನು ತೆಗೆಯೋಣ. ಬಾಬಾರವರು ದೇವಸ್ಥಾನಗಳ ಜೀರ್ಣೋದ್ಧಾರವನ್ನು ಎಷ್ಟು ಇಷ್ಟಪಡುತ್ತಿದ್ದರೆಂಬುದನ್ನು ನೆನೆಯೋಣ. ॥1॥ ಅವರು ಇತರರಿಗೆ ಎಷ್ಟು ಕರುಣೆ ತೋರುತ್ತಿದ್ದರು, ತಮ್ಮ ಭಕ್ತರನ್ನು ಹೇಗೆ ರಕ್ಷಣೆ ಮಾಡುತ್ತಿದ್ದರು ಮತ್ತು ಅವರನ್ನೆಲ್ಲ ಎಷ್ಟರ ಮಟ್ಟಿಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು! ಅದರಲ್ಲೇ ಅವರು ತಮ್ಮನ್ನು ತಾವು ಸವೆಸಿಕೊಳ್ಳುತ್ತಿದ್ದರು. ಭಕ್ತರಿಗಾಗಿ ಎಷ್ಟು ಕಷ್ಟ ಅನುಭವಿಸುತ್ತಿದ್ದರು! ॥2॥ ಅವರು ಖಂಡಯೋಗ ಅಭ್ಯಾಸ ಮಾಡುವಾಗ ಸಮಾಧಿಯಲ್ಲಿರುತ್ತಿದ್ದರು. ಅವರು ಧೋತಿ-ಪೋತಿ ಮತ್ತಿತರ ಯೋಗಾಭ್ಯಾಸಗಳನ್ನೂ ಮಾಡುತ್ತಿದ್ದರು. ಕೆಲವು ವೇಳೆ ಅವರು ತಮ್ಮ ತಲೆ, ಕಾಲುಗಳು ಮತ್ತು ತೋಳುಗಳನ್ನು ದೇಹದಿಂದ ಬೇರ್ಪಡಿಸಿ ಮತ್ತೆ ಹಿಂದಿನ ಹಾಗೆ ಒಟ್ಟಿಗೆ ಜೋಡಿಸುತ್ತಿದ್ದರು. 3॥ ಅವರನ್ನು ಹಿಂದುವೆಂದು ಕರೆಯೋಣವೆಂದರೆ ಮುಸ್ಲಿಮರ ತರಹ ಕಾಣುತ್ತಿದ್ದರು. ಮುಸ್ಲಿಂ ಎಂದಾದರೆ ಅವರಿಗೆ ಹಿಂದುವಿನ ಎಲ್ಲಾ ಮಂಗಳಕರ ಲಕ್ಷಣಗಳೂ ಇದ್ದವು. ಈ ರೀತಿ ಅವರದು ವಿಶಿಷ್ಟವಾದ ಅವತಾರವಾಗಿತ್ತು. ಯಾವ ಪಂಡಿತನು ಅವರನ್ನು

ವರ್ಣಿಸಬಲ್ಲನು? 4 ಅವರು ಹಿ೦ದೂವೋ, ಮುಸ್ಲಿಮರೋ ಸ್ವಲ್ಪ ಮಾತ್ರವಾದರೂ ಸಹ ಯಾರೂ ಊಹೆಮಾಡಲು ಆಗುತ್ತಿರಲಿಲ್ಲ. ಎರಡೂ ಪಂಗಡದವರಿಗೆ ಅವರ ವರ್ತನೆ ಒಂದೇ ರೀತಿಯದಾಗಿತ್ತು. 5


ರಾಮನವಮಿಯು ಒಂದು ಹಿಂದೂ ಹಬ್ಬವಾಗಿತ್ತು. ಅದನ್ನು ಅವರು ಸ್ವಂತ ಹಬ್ಬದಂತೆಯೇ ತೊಟ್ಟಿಲನ್ನು ಸಭಾಮಂಟಪದಲ್ಲಿ ಕಟ್ಟಿ ಕಥೆ ಮತ್ತು ಕೀರ್ತನೆಗಳನ್ನು ನಡೆಸುತ್ತಿದ್ದರು. 6॥ ರಸ್ತೆಯ ಚೌಕದಲ್ಲಿ ಅವರ ಎದುರಿನಲ್ಲೇ ತೊಟ್ಟಿಲನ್ನು ಕಟ್ಟಿ ಕೀರ್ತನೆಗಳನ್ನು ಮಾಡಲಾಗುತ್ತಿತ್ತು. ಅದೇ ರಾತ್ರಿಯಂದು ಅವರು ಮುಸ್ಲಿಮರ ಚಂದನದ ಮೆರವಣಿಗೆಗೂ ಅನುಮತಿ ಇತ್ತಿದ್ದರು. 7 ಬಹಳ ಜನ ಮುಸ್ಲಿಮರು ಬರಲು ಇಚ್ಚಿಸಿ ಚಂದನದ ಮೆರವಣಿಗೆಯಲ್ಲಿ ಅತ್ಯಂತ ಅಬ್ಬರ ವೈಭವಗಳಿಂದ ಭಾಗವಹಿಸುತ್ತಿದ್ದರು. ಅವರು ಈ ಎರಡೂ ಸಮಾರಂಭಗಳನ್ನು ಸಮನಾದ ಸಂತೋಷದಿಂದ ಆಚರಿಸುತ್ತಿದ್ದರು. ॥8 ರಾಮನವಮಿಯ ದಿನವು ಮುಗಿಯುತ್ತಿದ್ದಂತೆಯೇ ಕುಸ್ತಿಯ ಪಂದ್ಯವನ್ನು ಆಡಿಸಿ ಬಹಳ ಉತ್ಸಾಹದಿಂದ ಕುದುರೆ, ಕಡಗ ಮತ್ತು ರುಮಾಲು ಇವುಗಳನ್ನು ಬಹುಮಾನವಾಗಿ ಕೊಡುತ್ತಿದ್ದರು. 9॥ ಗೋಕುಲಾಷ್ಟಮಿ ಹಬ್ಬ ಬಂದಾಗ ಅವರು ಗೋಪಾಲಕಾಲ ನಡೆಸುತ್ತಿದ್ದರು. ಈದ್‌ ದಿನದಲ್ಲಿ ಮುಸ್ಲಿಮರಿಗೆ ನಮಾಜ್‌ನಿಂದ ವಿನಾಯಿತಿ ಇರಲಿಲ್ಲ. ॥10॥ ಒಮ್ಮೆ ಮೊಹರಮ್‌ ಹಬ್ಬ ಬಂದಿತು. ಕೆಲವು ಮುಸ್ಲಿಮರು ಒಂದು ಹಳ್ಳಿಯಲ್ಲಿ ತಾಜಿಯಾ ಮೆರವಣಿಗೆಯನ್ನು ನಡೆಸಲು ಅಪ್ಪಣೆ ಬೇಡಿದರು. ॥11 ಅವರ ಅಪ್ಪಣೆ ಮೇರೆಗೆ ತಾಜಿಯಾವನ್ನು ಕಟ್ಟಲಾಯಿತು. ಅದನ್ನು ಕೆಲವು ದಿನಗಳು ಅಲ್ಲಿಟ್ಟು 5ನೆಯ ದಿನ ತೆಗೆಯಲು ಹೇಳಲಾಯಿತು. ಇಂತಹ ಸಂತೋಷ ಅಥವಾ ಅಗಲಿಕೆಯ ನೋವು - ಬಾಬಾರವರಿಗೆ ಅಂತಹ ಯಾವ ಭಾವನೆಯೂ ಇರಲಿಲ್ಲ. ॥12॥


ಅವರನ್ನು ಮುಸ್ಲಿಮರೆಂದು ತಿಳಿಯೋಣವೆಂದರೆ ಕಿವಿಗಳನ್ನು ಚುಚ್ಚಿಸಿಕೊಂಡಿದ್ದರು. ಹಿಂದುವೆಂದರೆ ಅವರಿಗೆ ಸುನ್ನತಿಯಲ್ಲಿ ನಂಬಿಕೆಯಿತ್ತು. ಈ ರೀತಿ ಹಿಂದೂವೂ ಅಲ್ಲ ಮುಸ್ಲಿಮರೂ ಅಲ್ಲ. ಈ ರೀತಿ ಸಾಯಿಯ ಅವತಾರ ಪವಿತ್ರವಾಗಿತ್ತು. 13 ಅವರು ಹಿಂದೂವಾದರೆ ಸದಾ ಮಸೀದಿಯಲ್ಲಿ ವಾಸಮಾಡುತ್ತಿದ್ದರು. ಮುಸ್ಲಿಮರೆಂದಾದರೆ ಮಸೀದಿಯಲ್ಲಿ ಹಗಲು ರಾತ್ರಿ ಸದಾ ಅಗ್ನಿಯನ್ನು ಉರಿಸುತ್ತಿದ್ದರು. ॥14। ಮಸೀದಿಯಲ್ಲಿಯೇ ಒಂದು ಬೀಸುವ ಕಲ್ಲು ಇದ್ದು ಅಲ್ಲಿ ಬೀಸುವಿಕೆ ನಡೆಯುತ್ತಿತ್ತು. ಮಸೀದಿಯಲ್ಲಿ ಘಂಟಾನಾದ ಮೊಳಗುತ್ತಿತ್ತು ಮತ್ತು ಶಂಖವನ್ನೂ ಊದಲಾಗುತ್ತಿತ್ತು. ಮಸೀದಿಯಲ್ಲಿ ಪವಿತ್ರ ಅಗ್ನಿಗೆ ಆಹುತಿಕೊಡಲಾಗುತ್ತಿತ್ತು. ಅವರು ಇದೆಂತಹ ಮುಸ್ಲಿಮರಾಗಿದ್ದರು? ॥15॥ ಮಸೀದಿಯಲ್ಲಿ ಸದಾ ಭಜನೆ ನಹಿಯುತ್ತಿತ್ತು. ಉಚಿತ ಅನ್ನದಾನ, ಭಗವಂತನಿಗೆ ನೈವೇದ್ಯ, ಪಾದಪೂಜೆ ಇವುಗಳು ನಡೆಯುತ್ತಿದ್ದವು. ಅವರು ಅದೆಂತಹ ಮುಸ್ಲಿಮರಾಗಿದ್ದರು? ॥16॥ ಇವರನ್ನು ಮುಸ್ಲಿಮರೆಂದರೆ

ಬ್ರಾಹ್ಮಣರ ಉತ್ತಮ ಕರ್ತವ್ಯವಾದ ಪೂಜೆ, ಅಗ್ನಿಹೋತ್ರಗಳನ್ನುಆಚರಿಸಿ ತಮ್ಮ ಅಹಂಭಾವವನ್ನು ಅದರಲ್ಲಿ ಒಪ್ಪಿಸಿ ಪರಿಶುದ್ಧರಾಗಿ ಶರಣಾಗತರಾಗಿ ವಂದಿಸುತ್ತಿದ್ದರು. ॥17॥ ಈ ರೀತಿ ಜನರು ಮನಸ್ಸಿನಲ್ಲಿಯೇ ಅಚ್ಚರಿಪಟ್ಟರು. ಏನೇ ಅನುಭವವಾಗಲಿ ಅದೇ ರೀತಿ ವರ್ತಿಸುತ್ತ ದರ್ಶನ ಸಮಯದಲ್ಲಿ ಮೌನವಾಗಿರುತ್ತಿದ್ದರು. ॥18॥ ಪರಮಾತ್ಮನಲ್ಲಿ ಪೂರ್ಣ ಶರಣಾದ ವ್ಯಕ್ತಿಯನ್ನು ಹಿಂದೂ ಅಥವಾ ಮುಸ್ಲಿಂ ಎಂದು ಕರೆಯಲಾಗುವುದೇ? ಅವನು ನೀಚ ಜಾತಿಯಲ್ಲಿ ಹುಟ್ಟಿರಲಿ ಅಥವಾ ಜಾತಿಯಿಲ್ಲದೆ ಹುಟ್ಟಿರಲಿ (ಸಮಾಜದ ಹೊರಗಡೆ), ಜಾತಿಯು ಅವರಿಗೆ ಪ್ರಾಮುಖ್ಯತೆಯ ಒರೆಗಲ್ಲಾಗಿರಲಿಲ್ಲ.॥19॥ ದೇಹಭಾವವನ್ನು ತ್ಯಜಿಸಿರುವವನು, ಹಿಂದೂವೋ ಮುಸ್ಲಿಮನೋ ಅವರಿಗೆ ಎಲ್ಲಾ ಜಾತಿಪಂಥಗಳೂ ಸಮನಾಗಿದ್ದವು. ಜಾತಿ ಆಧಾರಿತ ಪಕ್ಷಪಾತ ಅವರಿಗೆ ಅನ್ವಯಿಸುತ್ತಿರಲಿಲ್ಲ. ॥20॥ ಅವರು ಫಕೀರರಿಂದ ಮಾಂಸವನ್ನು ಸ್ವೀಕರಿಸುತ್ತಿದ್ದರು. ತಾವಾಗಿಯೇ ಮೀನು ಸೇವಿಸುತ್ತಿದ್ದರು. ಅವರು ಊಟಮಾಡುವಾಗ ಒಂದು ನಾಯಿಯು ಬಾಯಿ ಹಾಕಿದರೂ ಅಸಹ್ಯಪಟ್ಟುಕೊಳ್ಳುತ್ತಿರಲಿಲ್ಲ. ॥21। ಒಬ್ಬ ರೈತನು ಆ ವರ್ಷದಲ್ಲಿ ಬೆಳೆದ ಧಾನ್ಯವನ್ನು ಉಗ್ರಾಣದಲ್ಲಿ ಸಂಗ್ರಹಿಸಿಡುತ್ತಾನೆ. ಮರು ವರ್ಷ ಎಲ್ಲಾದರೂ ಕೊರತೆ ಉಂಟಾದರೆ ಅದು ಉಪಯೋಗಕ್ಕೆ ಬರುತ್ತದೆ. ॥22॥ ಗೋಧಿ ಸಂಗ್ರಹಿಸಲು ಚೀಲ ಸಂಗ್ರಹಿಸಲಾಗಿತ್ತು. ಗೋಧಿ ಬೀಸಲು ಬೀಸುವ ಕಲ್ಲು ಮಸೀದಿಯಲ್ಲಿತ್ತು. ಅಲ್ಲಿ ಧಾನ್ಯವನ್ನು ಕೇರಲು ಬೇಕಾದ ಮೊರಗಳೂ ಇದ್ದುವು. ಒಬ್ಬ ಗೃಹಸ್ಥನ ಜೀವನಕ್ಕೆ ಯಾವುದೂ ಕೊರತೆ ಇರಲಿಲ್ಲ. ॥23॥ ಪೆಂಡಾಲಿನಲ್ಲಿ ಒಂದು ಅಲಂಕೃತವಾದ ಸುಂದರ ಮತ್ತು ವಿಶೇಷವಾದ ತುಳಸಿ ಬೃಂದಾವನ ಇತ್ತು. ಹತ್ತಿರವೇ ಸು೦ದರ ಕೆತ್ತನೆ ಉಳ್ಳ ಮರದ ತೇರು ಇತ್ತು. ॥24


ನನ್ನ ಪೂರ್ವಜನ್ಮದ ಷುಣ್ಯಕಾರ್ಯಗಳಿಂದಲೇ ನಾನು ಈ ಒಳ್ಳೆಯದೆಲ್ಲದರ ಸಂಗಕ್ಕೆ ಬಂದೆನು. ಅವುಗಳನ್ನು ನನ್ನ ಮನಸ್ಸಿನಲ್ಲಿ ಬಂಧಿಸಿಟ್ಟುಕೊ೦ಡು ಕೊನೆಯವರೆಗೆ ಯಾವ ಕೊರತೆಯನ್ನೂ ಅನುಭವಿಸುವುದಿಲ್ಲ. ॥25॥ ನನ್ನ ಹಿಂದಿನ ಜನ್ಮಗಳ ಷುಣ್ಯಗಳಿಗೆ ಧನ್ಯವಾದಗಳು. ಅವರ ಚರಣಗಳಲ್ಲಿ ಮನಃಶಾಂತಿಯನ್ನೂ ಪ್ರಾಪಂಚಿಕ ಧನ್ಯತೆಯನ್ನೂ ಅನುಭವಿಸಲು ಸಾಧ್ಯವಾಯಿತು. ॥26॥ ಆನ೦ತರ ನಾನು ಎಷ್ಟೇ ಅಭಿವೃದ್ಧಿಹೊ೦ದಲಿ, ಆ ಸಂತೋಷವನ್ನು ಶ್ರೀ ಸಾಯಿ ಸಮರ್ಥರ ಸತ್ಸಂಗದಲ್ಲಿ ಪಡೆದ ಅನುಗ್ರಹವನ್ನು ಅನುಭವಿಸಿದಷ್ಟು ಆನಂದವನ್ನು ಮತ್ತೆಲ್ಲೂ ಅನುಭವಿಸಲಿಲ್ಲ. 27 ಸಾಯಿಯು ಪರಮಾನಂದದ ಭಂಡಾರ. ಅವರ ವೈಶಿಷ್ಟ್ಯವನ್ನು ಹೇಗೆ ವರ್ಣಿಸಲಿ? ಅವರಲ್ಲಿ ಪೂರ್ಣ ಶರಣಾದವರು ಮಾತ್ರ ತಮ್ಮ ಒಳಿತಿಗಾಗಿ ಅಲ್ಲಿಯೇ ಶಾಶ್ವತವಾಗಿ ನೆಲೆಸಿದರು. 28 ತಪಸ್ಸು ಮಾಡಿದ ಸಂನ್ಯಾಸಿಗಳು, ದಂಡವನ್ನು ಹಿಡಿದವರು, ಕಾವಿಯನ್ನು ವಸ್ತ್ರವಾಗಿ ಧರಿಸಿದ್ದವರು ಮತ್ತು ಜಿಂಕೆಯ ಚರ್ಮವನ್ನು ಆಸನ ಮಾಡಿಕೊಂಡವರು, ಹರಿದ್ವಾರರ ಮುಂತಾದ ತೀರ್ಥಯಾತ್ರೆ ಮಾಡಿದವರು, ಕಠಿಣ ತಪಸ್ಸು ಮಾಡಿದವರು, ಲೌಕಿಕವನ್ನು ತ್ಯಾಗಮಾಡಿದವರು ಮತ್ತು ನಿರ್ಮೋಹರಾಗಿರುವವರು ಎಲ್ಲರೂ ಅಲ್ಲಿಗೆ ಬಂದರು. ॥29 ಅವರು ತುಂಬ ಓಡಾಡುತ್ತ, ಮಾತನಾಡುತ್ತ, ನಗುತ್ತ ಇರುತ್ತಿದ್ದರು. ಬಾಬಾರವರು ಸದಾ "ಅಲ್ಲಾ ಮಾಲಿಕ್‌" ಎನ್ನುತ್ತಿದ್ದರು. ವಾದ ವಿವಾದಗಳನ್ನು, ಚರ್ಚೆಗಳನ್ನೂ ಇಷ್ಟಪಡುತ್ತಿರಲಿಲ್ಲ. ಕೈಯಲ್ಲಿ ಯಾವಾಗಲೂ ಒಂದು ಸಟಕ ಇರುತ್ತಿತ್ತು. 30॥ ಒಬ್ಬ ತಪಸ್ವಿಯಾಗಿ, ಸ್ವಭಾವತಃ ನಿರ್ಮೋಹಿಯಾಗಿ, ಅಲ್ಪ ವಾಸನಾಯುಕ್ತರಾಗಿ, ಯಾರನ್ನೂ ದ್ವೇಷಿಸದೆ, ಅವರ ಉಪನ್ಯಾಸವು ವೇದಾಂತದ ತತ್ವವನ್ನು ಹರಿಸುತ್ತಿರಲು ಕೊನೆಯವರೆಗೆ ಬಾಬಾರವರು ಯಾರೆಂದು ಊಹಿಸಲೂ ಸಾಧ್ಯವಾಗಲಿಲ್ಲ. 31 ಶ್ರೀಮ೦ತರಾಗಲಿ, ಬಡವರಾಗಲಿ ಇಬ್ಬರನ್ನೂ ಸಮಭಾವದಿಂದ ಅವರು ನೋಡುತ್ತಿದ್ದರು. ಶ್ರೀಮಂತ ಪುತ್ರನೇ ಆಗಲಿ ನಿರ್ಗತಿಕ ಭಿಕ್ಷುಕನೇ ಆಗಲಿ ಇಬ್ಬರನ್ನೂ ಒಂದೇ ಮಾಪನದಿಂದ ಅಳೆಯುತ್ತಿದ್ದರು. 32॥ ಯಾರದ್ದಾದರೂ ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನೂ ಅಂತರಂಗದ ಆಸೆಗಳನ್ನೂ ಅರಿಯಬಲ್ಲವರಾಗಿದ್ದರು. ಅವರ ವೈಯುಕ್ತಿಕ ರಹಸ್ಯಗಳನ್ನು ಸಾಂಕೇತಿಕವಾಗಿ ಅವರಿಗೆ ತಿಳಿಸುತ್ತಿದ್ದರು. ಅದರಿಂದಾಗಿ ಭಕ್ತರು ನಿಬ್ಬೆರಗಾಗುತ್ತಿದ್ದರು. 33॥ ಅವರು ಜ್ಞಾನ ಮತ್ತು ಬುದ್ಧಿಯ ಸಾರವಾಗಿದ್ದು ಅದನ್ನು ಮರೆಮಾಡಿ ಅಡಗಿಸಿಟ್ಟಿದ್ದರು. ಗೌರವ-ಸನ್ಮಾನ ಅವರಿಗೆ ಒಂದು ಹೂಮಾಲೆಯಾಗಿತ್ತು. ಇವು ಶ್ರೀ ಸಾಯಿಯವರ ಲಕ್ಷಣಗಳು. ॥34


ಅವರಿಗೆ ಭೌತಿಕ ದೇಹವಿದ್ದರೂ ಅವರ ಕಾರ್ಯಗಳು ಪ್ರತಿಯೊಂದೂ ಪರಮಾತ್ಮನ ಕಾರ್ಯಗಳ ರೀತಿ ಅಸ್ವಾಭಾವಿಕವಾಗಿದ್ದವು. ಅವರು ಶಿರಡಿಯ ಪ್ರತ್ಯಕ್ಷ ದೈವವಾಗಿದ್ದರು. ಜನರೆಲ್ಲರೂ ಅತಿ ಶ್ರದ್ಧೆಯಿಂದ ನಂಬಿದ್ದರು. 35 ಬಾಬಾರವರ ಪವಾಡಗಳು ಅದೆಷ್ಟು? ಅವುಗಳಲ್ಲಿ ಕ್ಷುಲ್ಲಕ ವ್ಯಕ್ತಿಯಾದವನು ಎಷ್ಟನ್ನು ಹೇಗೆ ವಿವರಿಸಬಹುದು? ಬಾಬಾರವರು ಅನೇಕಾನೇಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿಸಿದರು. ॥36॥ ಶಿರಡಿಯಲ್ಲಿಯೇ ತಾತ್ಯಾ ಪಾಟೀಲನ ಕೈಯಲ್ಲಿ ಶನಿ, ಗಣಪತಿ, ಶ೦ಕರ, ಪಾರ್ವತಿ, ಗ್ರಾಮ ದೇವತೆ ಮತ್ತು ಮಾರುತಿಯ ದೇವಾಲಯಗಳನ್ನು ಅಭಿವೃದ್ಧಿಪಡಿಸಿದರು. 37॥ ಜನರಿಂದ ದಕ್ಷಿಣೆಯಾಗಿ ಪಡೆದ ಹಣವನ್ನು ಭಾಗಶಃ ಈ ಧರ್ಮಕಾರ್ಯಗಳಿಗಾಗಿ ಮತ್ತು ಉಳಿದ ಸ್ವಲ್ಪ ಭಾಗವನ್ನು ಸಾಧಾರಣವಾಗಿ ಹಾಗೆಯೇ ದಾನಮಾಡಿಬಿಡುತ್ತಿದ್ದರು. 38 ಕೆಲವರಿಗೆ ನಿತ್ಯವೂ 30 ರೂಪಾಯಿಗಳನ್ನು, ಕೆಲವರಿಗೆ 10, 15 ಅಥವಾ 50 ರೂಪಾಯಿಗಳನ್ನು ಕೊಡುತ್ತಿದ್ದರು. ಅವರ ಮನಸೋ ಇಚ್ಛೆ ಸಂತೋಷವಾಗಿ ಹಂಚುತ್ತಿದ್ದರು. 39 ಈ ಹಣವು ಎಲ್ಲಾ ಜಾತಿ ಧರ್ಮಗಳ ಜನರದು. ಅದನ್ನು ಸ್ವೀಕರಿಸಿದವರಿಗೆ ಇದು ತಿಳಿದಿತ್ತು. ಬಾಬಾರವರಿಗೆ ಅದು ಸದ್ವಿನಿನಿಯೋಗವಾಗಬೇಕೆಂಬ ಇಚ್ಛೆಮಾತ್ರ ಇತ್ತು. 40॥ ಅದುಹಾಗಿರಲಿ, ಅನೇಕರು ಅವರ ದರ್ಶನದಿ೦ದಲೇ ಉದ್ಧಾರವಾದರು. ಅನೇಕ ದುಷ್ಟರು ಒಳ್ಳೆಯವರಾದರು. ಅನೇಕ ಜನರ ಕಾಯಿಲೆಗಳು (ಕುಷ್ಠ ಸಹ) ವಾಸಿಯಾದವು. ಬಹಳ ಜನರು ತಮ್ಮ ಕ್ಷೇಮವನ್ನು ಪಡೆದರು. ॥40॥ ಯಾವುದೇ ಕಾಡಿಗೆ ಇಲ್ಲದೆ, ಮುಲಾಮೂ ಹಾಕದೇ ಅಥವಾ ಗಿಡಮೂಲಿಕೆಗಳ ರಸವಿಲ್ಲದೆ ಅನೇಕ ಕುರುಡರು ದೃಷ್ಟಿ ಪಡೆದರು. ಕುಂಟರು ನಡೆಯಲಾರಂಭಿಸಿದರು. ಅವರೆಲ್ಲ ಶ್ರೀ ಸಾಯಿ ಚರಣಗಳಲ್ಲಿ ಶರಣಾಗಿದ್ದರು. 42॥ ಅವರ ಮಹತ್ತು ಈ ರೀತಿ ಅನ೦ತವಾಗಿತ್ತು. ಯಾರೂ ಅದರ ಆಳವನ್ನು ಅಳೆಯಲು ಸಾಧ್ಯವಿರಲಿಲ್ಲ. ನಾಲ್ಕೂ ನಿಟ್ಟಿನಿಂದ ಅಸಂಖ್ಯಾತ ಜನರು ಪ್ರವಹಿಸಲು ಪ್ರಾರಂಭಿಸಿದರು. 43 ಅವರು ಧುನಿಯ ಹತ್ತಿರ ಅದೇ ಜಾಗದಲ್ಲಿ ಕುಳಿತಿರುತ್ತಿದ್ದರು. ಅಲ್ಲಿಯೇ ದೇಹಭಾದೆ ತೀರಿಸಿಕೊಳ್ಳುತ್ತಿದ್ದರು. ಅವರು ಅದೇ ಜಾಗದಲ್ಲಿ ಸ್ನಾನಮಾಡಿ ಕೆಲವೊಮ್ಮೆ ಸ್ನಾನವಿಲ್ಲದೆ ಇರುತ್ತಿದ್ದರು. ಸದಾ ಧ್ಯಾನಸ್ಥಿತಿಯಲ್ಲಿರುತ್ತಿದ್ದರು. 44 ಅವರು ತಲೆಯ ಮೇಲೆ ಒಂದು ಬಿಳಿಯ ಶಿರವಸ್ತ್ರ ಮತ್ತು ಸೊಂಟಕ್ಕೆ ಕಟ್ಟಿದ ಶುಚಿಯಾದ ಧೋತಿ, ಒಂದು ಶರಟು ಅಥವಾ ಪೆಹರಾನ್‌ ಧರಿಸುತ್ತಿದ್ದರು. ಅವರ ವೇಷಭೂಷಣ ಮೊದಲು ಈ ರೀತಿ ಇತ್ತು. ॥45


ಪ್ರಾರಂಭದಲ್ಲಿ ಹಳ್ಳಿಯಲ್ಲಿ ಆಯುರ್ವೇದವನ್ನು ಅಭ್ಯಸಿಸುತ್ತಿದ್ದರು. ರೋಗಿಗಳನ್ನು ಪರೀಕ್ಷಿಸಿ ಔಷಧ ಕೊಡುತ್ತಿದ್ದರು. ಅವರ ಹಸ್ತಸ್ಪರ್ಶಕ್ಕೇ ಗುಣಪಡಿಸುವ ಶಕ್ತಿಯಿತ್ತು. ಹೆಸರಾಂತ ಹಕೀಮರಾದರು. 46 ಒಮ್ಮೆ ಒಬ್ಬ ಭಕ್ತನ ಕಣ್ಣುಗಳು ಬೆಂಕಿಯ ಚೆಂಡಿನಂತೆ ಕೆಂಪಗಾಗಿದ್ದವು. ಶಿರಡಿಯಲ್ಲಿ ಯಾವ ವೈದ್ಯರೂ ಇರಲಿಲ್ಲ. 47 ಸರಳ ಹಾಗೂ ಧರ್ಮಶ್ರದ್ಧೆಯುಳ್ಳ ಭಕ್ತನು ಅವನ ಕಣ್ಣುಗಳನ್ನು ಬಾಬಾರವರಿಗೆ ತೋರಿಸಿದನು. ಕೂಡಲೇ ಬಾಬಾರವರು ಬೀಬಾ ಬೀಜವನ್ನು ಪುಡಿಮಾಡಿ ಉಂಡೆಗಳಾಗಿ ಮಾಡಿದರು. 48 ಈ ಸನ್ನಿವೇಶದಲ್ಲಿ ಸುರಮಾ(ಮುತ್ತಿನ ಪುಡಿ)ಯಿಂದಾಗಲಿ, ಕೆಲವರು ಬಟ್ಟೆಯನ್ನು ಹಸುವಿನ ಹಾಲಿನಲ್ಲಿ ಒದ್ದೆಮಾಡಿ, ಕೆಲವರು ಕರ್ಪೂರದ ಗಟ್ಟಿಯನ್ನಿಟ್ಟು ತಣ್ಣಗಾಗಿಸಿ ಅಥವಾ ಕೆಲವರು ಕಾಡಿಗೆಯನ್ನು ಉಪಯೋಗಿಸಿ ಚಿಕಿತ್ಸೆ ನೀಡಬಹುದು. ॥49॥ ಆದರೆ ಬಾಬಾರವರ ಚಿಕಿತ್ಸೆ ಪೂರ್ಣವಾಗಿ ವಿಶಿಷ್ಟವಾಗಿತ್ತು. ಅವರು ಬೀಬಾದ ಉಂಡೆಯನ್ನು ತಮ್ಮ ಕೈಯಲ್ಲೇ ಹಿಡಿದು ಎರಡೂ ಕಣ್ಣುಗಳ ಮೇಲೆ ಆದಷ್ಟು ಜೋರಾಗಿ ಒತ್ತಿ ಹಿಡಿದು ಒಂದು ಬಟ್ಟೆಯನ್ನು ಅವುಗಳ ಮೇಲೆ ಕಟ್ಟಿದರು. ॥50॥ ಮಾರನೆಯ ದಿನ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆಗೆದು ಕಣ್ಣುಗಳಿಗೆ ತಣ್ಣೀರನ್ನು ಒಂದು ಸ್ಥಿರವಾದ ಪಿಚಕಾರಿಯಂತೆ ಬಿಡುತ್ತಾ ತೊಳೆದರು. ಎಲ್ಲ ಊತವೂ ಮಾಯವಾಗಿತ್ತು. ಕಣ್ಣಾಲಿಗಳು ತಿಳಿಯಾಗಿದ್ದವು. 51 ಅತಿಸೂಕ್ಷ್ಮವಾದ ಅಂಗಗಳಾದ ಕಣ್ಣುಗಳನ್ನು ಬೀಬಾನಿಂದ ಚಿಕಿತ್ಸೆಮಾಡಿದರೂ ಉರಿಯಲಿಲ್ಲ. ರೋಗವು ಗುಣವಾಗಿತ್ತು. ಇಂತಹ ಅನುಭವಗಳು ಎಣಿಸಲಾರದಷ್ಟು. ॥52॥



ಅವರಿಗೆ ಧೋತಿ-ಪೋತಿಯೆ೦ಬ ಯೋಗ ಕ್ರಿಯೆಯು ತಿಳಿದಿತ್ತು. ಯಾರಿಗೂ ತಿಳಿಯದ ಹಾಗೆ ಅವರು ಏಕಾಂತವಾದ ಜಾಗಕ್ಕೆ ಹೋಗಿ ಸ್ನಾನಮಾಡುವಾಗ ತಮ್ಮ ಕರುಳನ್ನು ವಾಂತಿಮಾಡಿ, ತೊಳೆದು ಒಣಗಲು ಹಾಕುತ್ತಿದ್ದರು. ॥53॥ ಮಸೀದಿಯಿಂದ ಬಾವಿಗಿದ್ದಷ್ಟು ದೂರದಲ್ಲಿಯೇ ಮುಂದೆ ಒಂದು ಆಲದ ಮರವಿತ್ತು. ಅದರಿಂದ ಮುಂದೆ ಮತ್ತೊಂದು ಬಾವಿ ಇತ್ತು. ಅಲ್ಲಿಗೆ ಪ್ರತಿ ಮೂರನೆಯ ದಿನ ಹೋಗುತ್ತಿದ್ದರು. ॥54 ಸರಿಯಾಗಿ ಮಧ್ಯಾಹ್ನದ ಸಮಯದಲ್ಲಿ ಉರಿಯುತ್ತಿರುವ ಸೂರ್ಯನ ಕೆಳಗೆ ಅಲ್ಲಿ ಸುತ್ತಲೂ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡು ಕೈಯಾರೆ ಬಾವಿಯಿಂದ ನೀರನ್ನು ತೆಗೆದುಕೊಂಡು ತಮ್ಮ ಮುಖ ತೊಳೆದುಕೊಂಡು ಶೌಚಕರ್ಮಗಳನ್ನು ನೆರವೇರಿಸುತ್ತಿದ್ದರು. 55 ಅ೦ತಹ ಒಂದು ಸಂದರ್ಭದಲ್ಲಿ ಅವರು ಸ್ನಾನಮಾಡುತ್ತಿರುವಾಗ ತಮ್ಮ ಕರುಳನ್ನು ಬೇಗನೇ ತೆಗೆದು ಅಲ್ಲಿಯೇ ತೊಳೆಯಲು ಪ್ರಾರಂಭಿಸಿದರು. ॥56॥ ಒಂದು ಮೇಕೆಯನ್ನು ಬಲಿಕೊಟ್ಟಾಗ ಅದರ ಕರುಳನ್ನು ಹೊರತೆಗೆದು ಚೆನ್ನಾಗಿ ತೊಳೆದು ಶುಚಿಮಾಡಿ ಸುತ್ತಿಡುತ್ತಾರೆ. 57 ಅದೇ ರೀತಿ, ಅವರು ತಮ್ಮ ಕರುಳುಗಳನ್ನು ಹೊರತೆಗೆದು ತೊಳೆದು, ಮರದ ಮೇಲೆ ಹರಡಿದರು. ಜನರಿಗೆ ಬಹಳ ಅಚ್ಚರಿಯಾಯಿತು. ॥58॥ ಅದನ್ನು ಕಣ್ಣಾರೆ ನೋಡಿದವರಲ್ಲಿ ಕೆಲವರು ಈಗಲೂ ಶಿರಡಿಯಲ್ಲಿ ಇದ್ದಾರೆ. ಬಾಬಾ ಒಬ್ಬ ಅಸಾಧಾರಣ ಸಂತನೆಂದು ಅವರು ಹೇಳುತ್ತಾರೆ. ॥59॥ ಕೆಲವೊಮ್ಮೆ ಅವರು ಖಂಡಯೋಗವನ್ನು ಅಭ್ಯಸಿಸುತ್ತಿದ್ದರು. ತಮ್ಮ ಕೈಗಳು ಮತ್ತು ಕಾಲುಗಳನ್ನು ಬೇರ್ಪಡಿಸುತ್ತಿದ್ದರು. ಈ ರೀತಿ ಅವುಗಳನ್ನು ಮಸೀದಿಯಲ್ಲಿ ಅಲ್ಲಿ ಇಲ್ಲಿ ಹರಡುತ್ತಿದ್ದರು. 60॥ ಈ ರೀತಿ ದೇಹವನ್ನು ಭಾಗಭಾಗವಾಗಿ ಬೇರ್ಪಡಿಸುತ್ತಿದ್ದರು. ಈ ದೃಶ್ಯವು ಅತಿ ಭಯಂಕರವಾಗಿತ್ತು. ಇದನ್ನು ನೋಡಲು ಅನೇಕರು ಓಡಿ ಬಂದಾಗ ಅಲ್ಲಿ ಬಾಬಾರವರು ಎಂದಿನಂತೆ ಸಹಜವಾಗಿ ಕುಳಿತಿರುವುದು ಕಾಣುತ್ತಿತ್ತು. 61 ಒಮ್ಮೆ ಇಂತಹ ಘಟನೆಯನ್ನು ನೋಡಿದವನೊಬ್ಬನು ಬಹಳ ಹೆದರಿ, ಯಾರೋ ದುಷ್ಪರು ಬಾಬಾರವರನ್ನು ಕೊಲೆಮಾಡಿ ಈ ರೀತಿ ಅತ್ಯಾಚಾರವೆಸಗಿದ್ದಾರೆಂದುಕೊಂಡನು. ॥62॥ ಮಸೀದಿಯಲ್ಲಿ ನಾಲ್ಕೂ ದಿಕ್ಕಿನ ಮೂಲೆಗಳಲ್ಲಿ ಅಲ್ಲಲ್ಲಿ ಕೈಕಾಲುಗಳು ಕಂಡು ಬಂದವು. ಅದು ಅರ್ಧ ರಾತ್ರಿಯಾಗಿದ್ದು ಮತ್ತೆ ಯಾರೂ ಸುತ್ತ ಇರಲಿಲ್ಲ. ಅವನು ಚಿಂತಿತನಾದನು. ॥63॥ ಈ ಘಟನೆಯನ್ನು ಯಾರಿಗೆ ತಿಳಿಸಬೇಕು? ಅದಕ್ಕೆ ಬದಲಾಗಿ ತನ್ನನ್ನೇ ಗಲ್ಲಿಗೇಗೇರಿಸಬಹುದು. ಈ ರೀತಿ ಆಲೋಚಿಸಿ ಅವನು ಹೊರಗೆ ಹೋಗಿ ಕುಳಿತುಕೊ೦ಡನು. 64 ಅದು ಸಾಯಿಯ ಯೋಗಕ್ರಿಯೆಯೆಂದು ಅವನಿಗೆ ಕನಸು ಮನಸಿನಲ್ಲಿಯೂ ತೋಚಲಿಲ್ಲ. ದೇಹದ ಭಾಗಗಳನ್ನು ನೋಡಿ ಅವನ ಹೃದಯ ಹೆದರಿಕೆಯಿಂದ ಬಡಿಯಲಾರಂಭಿಸಿತು. ॥65॥ ಈ ಘಟನೆಯನ್ನು ಯಾರಿಗಾದರೂ ತಿಳಿಸಬೇಕು. ಈ ಯೋಚನೆ ಅವನಿಗೆ ಮತ್ತೆ ಮತ್ತೆ ಬರಲಾರಂಭಿಸಿತು. ಆದರೆ ಮೊದಲು ವರದಿ ಮಾಡುವುದರಿಂದ ತನ್ನನ್ನೇ ಅಪರಾಧಿಯನ್ನಾಗಿ ಭಾವಿಸಬಹುದು. 66 ಆದ್ದರಿ೦ದ ಅವನು ಯಾರಿಗೂ ತಿಳಿಸಲಿಲ್ಲ. ಅನೇಕ ಬಗೆಯ ಊಹೆಗಳು ಅವನಿಗೆ ಬಂದವು. ಆದ್ದರಿಂದ ಬೆಳಗ್ಗೆ ಅವನು ಮತ್ತೆ ನೋಡಲು ಅಲ್ಲಿಗೆ ಹೋದನು. ಆಗ ಕಂಡುದು ಆಶ್ಚರ್ಯವನ್ನುಂಟುಮಾಡಿತು. ॥67॥ ಅಲ್ಲಿ ಮೊದಲು ನಡೆದುದರ ಸುಳಿವೂ ಇರಲಿಲ್ಲ. ಬಾಬಾರವರು ಆರೋಗ್ಯವಂತರಾಗಿ ತಮ್ಮ ದಿನನಿತ್ಯದ ಜಾಗದಲ್ಲಿ ಕುಳಿತುಕೊಂಡಿದ್ದರು. ಆ ಪ್ರೇಕ್ಷಕನು ದಿಗ್ಭ್ರಮೆಹೊ೦ದಿ ತಾನೇನಾದರೂ ಕನಸು ಕಂಡೆನೊ ಎಂದುಕೊಂಡು ಅಚ್ಚರಿಗೊ೦ಡನು. ॥68॥ ಈ ಯೋಗಕ್ರಿಯೆಗಳಾದ ಧೋತಿ-ಪೋತಿ ಅವುಗಳನ್ನು ಬಾಬಾರವರು ಬಾಲ್ಯದಿಂದಲೇ ಮಾಡುತ್ತಿದ್ದರು. ಅದರ ಆಳವನ್ನಾಗಲೀ, ಯೋಗಸ್ಥಿತಿಯ ಮಟ್ಟವನ್ನಾಗಲೀ ಯಾರೂ ಅರಿಯಲಾರರು. ॥69॥


ಅವರು ಯಾರಿಂದಲೂ ಒಂದು ನಾಣ್ಯವನ್ನೂ ಸ್ವೀಕರಿಸಲಿಲ್ಲ. ತಮ್ಮದೇ ಆದ ಗುಣಗಳಿಂದ ಅವರಿ ಹೆಸರುವಾಸಿಯಾದರು. ದೀನರು ಮತ್ತು ಬಡವರಿಗೆ ಒಳ್ಳೆಯ ಆರೋಗ್ಯ ನೀಡಿದರು. ಆ ಪ್ರಾಂತದಲ್ಲೇ ಹೆಸರಾಂತ ಹಕೀಮರಾದರು. ॥70॥ ಅವರು ಬೇರೆಯವರಿಗೆ ಮಾತ್ರವೇ ಹಕೀಮರಾಗಿದ್ದರು. ಅವರು ತಮ್ಮ ವೈಯಕ್ತಿಕ ಲಾಭದಿಂದ ವಿಮುಖರಾಗಿದ್ದರು. ಅತರರಿಗೆ ಒಳ್ಳೆಯದನ್ನು ಸಾಧಿಸಬೇಕಾದರೆ ಅವರು ಅತಿ ಕಷ್ಟ ನೋವುಗಳನ್ನು ಅನುಭವಿಸಬೇಕಾಯಿತು. ॥71 ಇದನ್ನು ವಿವರಿಸುವಂತಹ ಒಂದು ವಿಶೇಷವಾದ ಕತೆಯನ್ನು ಶ್ರೋತೃಗಳಿಗಾಗಿ ಹೇಳುವೆನು. ಅದು ಬಾಬಾರವರ ಕರುಣೆ ಹಾಗೂ ವಿಶ್ವಾತ್ಮಕವಾದ ಸರ್ವವ್ಯಾಪಕತ್ವವನ್ನು ತೋರಿಸುತ್ತದೆ. ॥72॥ ಕ್ರಿ.ಶ. 1910ರಲ್ಲಿ ದತ್ತಾತ್ರೇಯ ಜಯಂತಿಯ ದಿನ ಬಾಬಾರವರು ಸ್ವಾಭಾವಿಕವಾಗಿ ಧುನಿಯ ಬಳಿ ಕಟ್ಟಿಗೆ ಉರಿಸುತ್ತ ಕುಳಿತಿದ್ದರು. ॥73॥ ಧುನಿಯು ಬಹಳ ಬಿಸಿಯಾಗಿ ಜೋರಾಗಿ ಉರಿಯಲು ಪ್ರಾರಂಭಿಸಿತು. ಅವರು ತಮ್ಮ ಕೈಯನ್ನೇ ಬೆಂಕಿಯ ಒಳಗೆ ಹಾಕಿ ಶಾಂತವಾಗಿ ಕುಳಿತರು. ಕೈ ಪೂರ್ತಿ ಸುಟ್ಟಿತು. 74॥ ಅವರ ಸೇವೆ ಮಾಡುತ್ತಿದ್ದ ಮಾಧವನು ಅದನ್ನು ಆಕಸ್ಮಾತ್ತಾಗಿ ನೋಡಿದನು. ಮಾಧವ ರಾವ್‌ ದೇಶಪಾಂಡೆ ಸಹ ಹತ್ತಿರ ಇದ್ದನು. ಅವನೂ ಕೂಡಲೇ ಹತ್ತಿರ ಓಡಿದನು. 75 ಅವರು ಹೋಗಿ ಬಾಬಾರವರ ಹಿಂದೆ ಕಾಲುಗಳನ್ನು ಅಡ್ಡಮಾಡಿ ಕುಳಿತು ತಮ್ಮ ಕೈಗಳನ್ನು ಬಿಗಿಯಾಗಿ ಅವರ ಸೊಂಟದ ಮೇಲಿಟ್ಟು ಹಿಂದಕ್ಕೆ ಎಳೆದರು. ಅವರು ಹೇಳಿದರು, "ನೋಡಿ ಏನಾಯಿತು?" 76 "ಓ ದೇವಾ! ಇದೇನು ಮಾಡಿದಿರಿ?" ಈ ಮಾತುಗಳನ್ನು ಕೇಳುತ್ತಲೇ ಬಾಬಾರವರಿಗೆ ಪರಿಸ್ಥಿತಿಯ ಅರಿವಾಯಿತು. ಆಗ "ತಾಯಿಯ ಕಂಕುಳಲ್ಲಿದ್ದ ಮಗು ಜಾರಿ ಬೆಂಕಿಕುಂಡದೊಳಗೆ ಬಿತ್ತು" ॥77॥ ಗಂಡನ ಕರೆಗಳನ್ನು ಕೇಳುತ್ತ ಕೇಳುತ್ತ ಗಾಬರಿಯಿಂದ ಅಕ್ಕಸಾಲಿಗನ ಪತ್ನಿಯು ತನ್ನ ಮಗುವನ್ನು ಕಂಕುಳಲ್ಲಿ ಎತ್ತಿಕೊ೦ಡೇ ಕುಲುಮೆಯ ತಿದಿಯನ್ನು ಒತ್ತುತ್ತಿದ್ದಳು. ॥78॥ ತಿದಿಯೊತ್ತುತ್ತಾ ಕಂಕುಳಲ್ಲಿದ್ದ ಮಗುವಿನ ಕಡೆಗೆ ಲಕ್ಷ್ಯತಪ್ಪಿತು. ಮಗು ಸಹ ತು೦ಬಾ ಚಡಪಡಿಸುತ್ತಿತ್ತು. ಕ್ಷಣದಲ್ಲಿ ಕೈಜಾರಿತು. "ಶಾಮಾ, ಅವಳ ಕೈಯಿಂದ ಮಗು ಬೀಳುತ್ತಿದ್ದಂತೆ ನಾನು ಎತ್ತಿಕೊಂಡೆ. 79॥ ನಾನು ಆ ಎಳೆ ಹುಡುಗಿಯನ್ನು ಹೊರತೆಗೆಯುವಾಗ ಹೀಗಾಯಿತು. ನನ್ನ ಈ ಹಾಳು ಕೈ ಸುಟ್ಟರೂ ಪರವಾಗಿಲ್ಲ, ಸಧ್ಯ ಮಗುವಿನ ಜೀವ ಉಳಿಯಿತಲ್ಲ!" ॥80॥



ಆ ಕೈನಿಂದಾದಕಷ್ಟ ಮತ್ತು ನೋವುಗಳಿಗೆ ಪರಿಹಾರ ಏನು? ಯಾರಿಂದ ಪಡೆಯಬಹುದು? ಮಾಧವರಾವ್‌ ಚಂದೋರಕರ್‌ಗೆ ಪತ್ರ ಬರೆಯಲು ನಿಶ್ಚಯಿಸಿದನು.81 ಅವರು ವಿವರವಾಗಿ ಪತ್ರ ಬರೆದನು. ಕೂಡಲೇ ಚಂದೋರಕರ್‌ನು ಶಿರಡಿಗೆ ಬಂದನು. ಜೊತೆಯಲ್ಲಿ ಖ್ಯಾತ ವೈದ್ಯ ಡಾ| ಪರಮಾನಂದನನ್ನೂ ಕರೆತಂದನು. ॥82॥ ಉರಿಯನ್ನು ಉಪಶಮನಮಾಡಲು ಡಾ। ಪರಮಾನಂದನು ತನ್ನ ಜೊತೆಯಲ್ಲಿ ಆನೇಕ ಔಷಧಿಗಳನ್ನು ತಂದನು. ಅವೆಲ್ಲವೂ ಉಪಯೋಗವಾಗಲೆಂದು ತಂದು ಸಾಯಿ ಸೇವೆ ಮಾಡಲು ನಾನಾನ ಜೊತೆ ಬಂದನು. 83॥ ಬಾಬಾರವರಿಗೆ ನಮಸ್ಕರಿಸಿದನು. ಅವರ ಯೋಗಕ್ಷೇಮವನ್ನು  ವಿಚಾರಿಸಿದನು. ತಾನು ಬಂದ ಕಾರಣವನ್ನು ಅರಿಕೆಮಾಡಿಕೊಂಡು ತಮ್ಮ ಕೈಯನ್ನು ತೋರಿಸುವಂತೆ ಪ್ರಾರ್ಥಿಸಿದನು. ॥84 ಆದರೆ, ಕೈ ಸುಟ್ಟಾಗಿನಿಂದ ಭಾಗೋಜಿ ಶಿಂಧೆಯು ತುಪ್ಪ ಹಚ್ಚುತ್ತಿದ್ದನು. ಅದರ ಮೇಲೆ ಒಂದು ಎಲೆಯನ್ನು ಇಟ್ಟು ಗಟ್ಟಿಯಾಗಿ ಪಟ್ಟಿಯನ್ನು ದಿನವೂ ಕಟ್ಟುತ್ತಿದ್ದನು. 85॥ ಪಟ್ಟಿಗಳನ್ನು ತೆಗೆದುಹಾಕಿ, ಕೈಯನ್ನು ಡಾ| ಪರಮಾನಂದನಿಗೆ ತೋರಿಸಿ ಚಿಕಿತ್ಸೆ ಪಡೆದು ಬಾಬಾರವರ ಸುಟ್ಟಗಾಯ ವಾಸಿಯಾಗಲೆಂಬುದು ಉದ್ದೇಶ. 86॥ ಈ ಒಂದು ಒಳ್ಳೆಯ ಉದ್ದೇಶದಿಂದ ನಾನಾನು ಬಹಳವಾಗಿ ಕಾಲಿಗೆ ಬಿದ್ದು ಬೇಡಿಕೊಂಡನು. ಪರಮಾನಂದನೂ ಸಹ ಪಟ್ಟಿಗಳನ್ನು ಬಿಚ್ಚಿ ಕೈಯನ್ನು ನೋಡಲು ಪ್ರಯತ್ನಿಸಿದನು. ॥87॥ ಆ ದಿನವಲ್ಲ, ಮರುದಿನವೂ ಅದೇ ರೀತಿ ಕೇಳಿಕೊಂಡನು. ಬಾಬಾ ತಮ್ಮ ಕೈಯನ್ನು ನೋಡಲು ಬಿಡಲೇ ಇಲ್ಲ. ಅಲ್ಲಾನೇ ತಮ್ಮ ವೈದ್ಯರು ಎನ್ನುತ್ತಿದ್ದರು. ಅವರಿಗೆ ಕಿಂಚಿತ್ತಾದರೂ ಕ್ಲೋಭೆಯುಂಟಾಗಲಿಲ್ಲ. ॥88॥ ಪರಮಾನಂದನು ತಂದಿದ್ದ ಔಷಧಿಗಳಲ್ಲೊಂದನ್ನೂ ಶಿರಡಿಯಲ್ಲಿ ಬಿಚ್ಚಲೇ ಇಲ್ಲ. ಆದರೆ ಸಾಯಿ ದರ್ಶನವಾದದ್ದು ವೈದ್ಯನ ಪುಣ್ಯ. ಅದಕ್ಕಾಗಿಯೇ ಬಹುಶಃ ಈ ಘಟನೆ ಸಂಭವಿಸಿರಬಹುದು. 89


ಭಾಗೋಜಿಯೇ ಸದಾ ಸೇವೆಮಾಡುತ್ತಿದ್ದನು. ಭಾಗೋಜಿಯೇ ಕೈಯನ್ನು ಸಹ ನೋಡಿಕೊಂಡನು. ಕೆಲವು ದಿನಗಳಲ್ಲೆ ಪೂರ್ತಿ ಗುಣವಾಯಿತು. ಎಲ್ಲರಿಗೂ ಸಂತೋಷವಾಯಿತು. 90॥ ಈ ರೀತಿ ಕೈಯು ಪೂರ್ಣವಾಗಿ ಗುಣವಾಗಿದ್ದರೂ ಭಾಗೋಜಿ ನಿತ್ಯವೂ ಬೆಳಿಗ್ಗೆ ಪಟ್ಟಿ ಕಟ್ಟುವುದಕ್ಕೆ ಅವಕಾಶ ಕೊಡಲು ಬಾಬಾರವರ ಮನಸ್ಸಿನಲ್ಲಿ ಏನಿತ್ತು ಎಂಬುದು ಯಾರಿಗೂ ತಿಳಿಯದು. 91॥ ನೋವಿಲ್ಲದಿದ್ದರೂ ಪ್ರತಿನಿತ್ಯವೂ ತುಪ್ಪದಿಂದ ಮಾಲೀಶು ಮಾಡುತ್ತ ಕೈಯನ್ನು ಎಚ್ಚರಿಕೆಯಿಂದ ಧ್ಯಾನ ಸಮಾಧಿಯ ಹೊತ್ತಿನವರೆಗೂ ನೋಡಿಕೊಳ್ಳಲಾಗುತ್ತಿತ್ತು. ॥92॥ ಈ ಸೇವೆಗಳು ಭಾಗೋಜಿಗಾಗಿಯೇ ಇರುತ್ತಿತ್ತು. ಸಿದ್ಧರಾದ ಸಾಯಿಗೆ ಯಾವುದೂ ಬೇಕಿರಲಿಲ್ಲ. ಭಾಗೋಜಿಗೆ ನಿತ್ಯ ಸೇವೆಯನ್ನು ಭಕ್ತಿಯಿಂದ ಮಾಡುವಂತೆ ಅನುವುಮಾಡಿಕೊಟ್ಟರು. 93 ಪೂರ್ವಜನ್ಮಗಳ ಪಾಪ ಕಾರ್ಯಗಳಿಂದಾಗಿ ಭಾಗೋಜಿಯು ಕುಷ್ಠರೋಗದಿಂದ ನರಳುತ್ತಿದ್ದನು. ಆದರೆ ಅವನು ಪುಣ್ಯವಶಾತ್‌ ಸಾಯಿಯ ಸಂಪರ್ಕದಲ್ಲಿ ಬಂದನು. 94 ಬಾಬಾರವರು ಲೇಂಡಿಗೆ ಸುತ್ತು ಹೊರಟಾಗಲೆಲ್ಲ ಭಾಗೋಜಿಯು ಬಾಬಾರವರ ತಲೆಯಮೇಲೆ ಛತ್ರಿಯನ್ನು ಹಿಡಿಯುವನು. ಅವನ ದೇಹವೆಲ್ಲ ಕುಷ್ಠದ ಕಪ್ಪುಕಲೆಗಳಿಂದ ತುಂಬಿದ್ದರೂ ಅವನು ಬಾಬಾರವರ ಸೇವೆಯಲ್ಲಿ ಅಗ್ರಗಣ್ಯನಾಗಿದ್ದನು. 95 ಬಾಬಾರವರು ಬೆಳಗಿನ ಜಾವ ಧುನಿಯ ಹತ್ತಿರ ಕಂಭಕ್ಕೆ ಒರಗಿ ಕುಳಿತುಕೊಂಡಾಗಲೆಲ್ಲ, ಅವರ ಸೇವೆಮಾಡುತ್ತಿದ್ದುದು ಅವನ ಷುಣ್ಯವೇ ಸರಿ. 96 ಅವನು ಪಟ್ಟಿಗಳನ್ನು ತೆಗೆದು ಆ ಮಾಂಸಖಂಡಗಳನ್ನೆಲ್ಲ ಮಾಲೀಶು ಮಾಡಿ, ಆ ಜಾಗಕ್ಕೆ ತುಪ್ಪ ಸವರುತ್ತಿದ್ದನು. 97॥ ಭಾಗೋಜಿ ಶಿಂಧೆಯು ತನ್ನ ಹಿಂದಿನ ಜನ್ಮಗಳಲ್ಲಿ ಮಹಾ ಪಾಪಿಯಾಗಿದ್ದನು. ಅವನ ದೇಹವಿಡೀ ಹುಣ್ಣುಗಳಾಗಿ ಕೀವು ವಸರುತ್ತಿತ್ತು. ಅವನು ಅಂತಹ ಮಾರಣಾಂತಿಕ ರೋಗಕ್ಕೆ ಬಲಿಯಾಗಿದ್ದನು. ಆದರೆ ಅವನು ಬಾಬಾರವರ ಅಸಾಮಾನ್ಯ ಭಕ್ತನಾಗಿದ್ದನು. 98 ಅವನ ಬೆರಳುಗಳು ಕುಷ್ಠರೋಗದಿಂದಾಗಿ ಮೊಂಡಾಗಿದ್ದವು. ಅವನ ದೇಹವಿಡೀ ಅಸಹ್ಯಕರವಾದ ವಾಸನೆ ಬರುತ್ತಿತ್ತು. ಈ ರೀತಿ ದುರದೃಷ್ಟವಂತನೊಬ್ಬ ಸಾಯಿ ಸೇವೆಯಿಂದ ನಾಲ್ಮಡಿ ಲಾಭ ಹೊಂದಿದನು. ॥99 ಈ ರೀತಿ ಬಾಬಾರವರ ಮಹಾನ್‌ ಪವಾಡಗಳನ್ನು ಶ್ರೋತೃಗಳಿಗೆ ಹೇಗೆ ನಿರೂಪಿಸಲಿ? ಒಮ್ಮೆ ಹಳ್ಳಿಯಲ್ಲಿ ಫ್ಲೇಗ್‌ ಬಂದಾಗ ಎಂತಹ ಪವಾಡ ನಡೆಯಿತು ಎಂಬುದನ್ನು ಕೇಳಿರಿ. 100


ದಾದಾ ಸಾಹೇಬ್‌ ಖಪರ್ಡೆಯವರ ಚಿಕ್ಕ ಮಗ ತನ್ನ ತಾಯಿಯ ಜೊತೆಯಲ್ಲಿ ವಾಸಿಸುತ್ತಿದ್ದ ಮತ್ತು ಬಾಬಾರವರ ಸಂಗದಲ್ಲಿ ಬಹಳ ಸಂತೋಷವಾಗಿದ್ದನು. ॥101 ಆ ಹುಡುಗ ಬಹಳ ಚಿಕ್ಕ ಬಾಲಕ. ಹೀಗಿರುವಾಗ ಅವನಿಗೆ ವಿಪರೀತ ಜ್ವರ ಬಂದಿತು. ತಾಯಿಯ ಹೃದಯ ಕಾತರಗೊಂಡಿತು ಮತ್ತು ಪ್ರಕ್ಷುಬ್ಧವಾಯಿತು. ॥102॥ ಆಕೆಯ ಮನೆ ಅಮರಾವತಿಯಲ್ಲಿತ್ತು. ಆದ್ದರಿಂದ ಅವಳು ಅಲ್ಲಿಗೆ ಹೋಗಲು ಯೋಚಿಸಿದಳು. ಸಂಜೆ ವೇಳೆ ಸರಿಯಾದ ಹೊತ್ತಿನಲ್ಲಿ ಜಬಾರವರಿಂದ ಅನುಮತಿ ಬೇಡಲು ಬಂದಳು. ॥103॥ ಸಂಜೆಯ ತಿರುಗಾಟ ಮುಗಿಸಿ ಬಾಬಾರವರು ವಾಡಾ ಹತ್ತಿರ ಬಂದರು. ಅಲ್ಲಿ ಆ ಹೆ೦ಗಸು ಅವರ ಚರಣಗಳಿಗೆ ಬಾಗಿ ನಮಸ್ಕರಿಸಿ, ತನ್ನ ಮಗನ ಜ್ವರದ ಬಗ್ಗೆ ತಿಳಿಸಿದಳು. ॥104 ಹೆ೦ಗಸರು ಸ್ವಭಾವತಃ ಅಂಜಿಕೆಯುಳ್ಳವರಾಗಿರುವರು, ಮಗನ ಜ್ವರ ಹಾಗೂ ನಡುಕವೂ ನಿಲ್ಲಲಿಲ್ಲ. ಅಲ್ಲಿ ಫ್ಲೇಗಿನ ಹೆದರಿಕೆಯೂ ಇತ್ತು. ಆದ್ದರಿಂದ ಅವಳು ಏನಾಯಿತೆಂದು ಭಿನ್ನವಿಸಿದಳು. ॥105॥ ಬಾಬಾರವರು ಪ್ರೀತಿಯಿಂದ ಆಶ್ವಾಸನೆ ನೀಡುವ ಈ ಮಾತುಗಳನ್ನು ಹೇಳಿದರು - "ಇದನ್ನು ತಿಳಿ. ಆಕಾಶದಲ್ಲಿ ಮೋಡಗಳು ಕವಿಯುತ್ತವೆ. ಮಳೆ ಬರುತ್ತದೆ ಮತ್ತು ಮೋಡಗಳು ಚದುರಿ ಹೋಗುತ್ತವೆ. ಋತುಮಾನ ಮುಗಿಯುತ್ತದೆ. ॥106॥ "ನೀನೇಕೆ ಭಯಪಡುವೆ?" ಈ ರೀತಿ ಹೇಳುತ್ತ ಅವರು ಕಫನಿಯನ್ನು ಸೊಂಟದವರೆಗೆ ಎತ್ತಿ ಅಲ್ಲಿದ್ದ ಗ೦ಟುಗಳನ್ನು ಎಲ್ಲರಿಗೂ ತೋರಿಸಿದರು. ॥107॥ ನಾಲ್ಕು ಜಾಗದಲ್ಲಿ ಕೋಳಿಮೊಟ್ಟೆ ಅಳತೆಯ ನಾಲ್ಕು ಗಂಟುಗಳು ಇದ್ದುವು. ಅವರು ಹೇಳಿದರು, "ನೋಡು, ನಿಮ್ಮ ಕಷ್ಟಗಳಿಂದಾಗಿ ನಾನು ಅನುಭವಿಸಬೇಕಾಗುತ್ತದೆ." 1108 ಜನರು ಈ ದಿವ್ಯ ಹಾಗೂ ವಿಶಿಷ್ಟವಾದ ಸಂಕಷ್ಟವನ್ನು ನೋಡಿ ಆಶ್ಚರ್ಯ ಚಕಿತರಾದರು. ತಮ್ಮ ಭಕ್ತರಿಗಾಗಿ ಸಂತರು ಎಷ್ಟು ಕಷ್ಟಪಡುತ್ತಾರೆ೦ಬುದು ತಿಳಿಯಿತು. ॥109॥ ಅವರ ಹೃದಯ ಮೇಣಕ್ಕಿಂತಲೂ ಮೃದು. ಬೆಣ್ಣೆ ಹೊರನೋಟಕ್ಕೆ ಕಾಣುವ ರೀತಿ ಇರುತ್ತದೆ. ಅವರಿಗೆ ತಮ್ಮ ಸ್ವಂತ ಭಕ್ತರಮೇಲೆ ಬಂಧು ಬಳಗವೋ ಎಂಬಷ್ಟು ನಿಸ್ದಾರ್ಥವಾದ ಪ್ರೇಮವಿರುತ್ತದೆ. ॥110॥


ಒಮ್ಮೆ ಈ ರೀತಿ ನಡೆಯಿತು. ನಾನಾ ಸಾಹೇಬ್‌ ಚ೦ದೊಲಕರನು ನಂದೂರ್‌ಬಾರ್‌ನಿಂದ ಪಂಡರಾಪುರಕ್ಕೆಂದು ಹೊರಟನು. ॥111 ನಾನಾ ಅದೃಷ್ಟವಂತನು. ಅವನಿಗೆ ಸಾಯಿ ಬಗೆಗಿನ ಅಂತರಾಳದ ಭಕ್ತಿ ಫಲ ನೀಡಿತ್ತು. ಅವನಿಗೆ ಭೂಲೋಕದ ಸ್ವರ್ಗ ಕೈಗೆಟುಕಿತ್ತು. ಆ ಊರಿನ ಮಾಮಲೇದಾರರ ಹುದ್ದೆ ದೊರಕಿತ್ತು. ॥112॥ ಅವನು ನ೦ದೂರ್‌ ಬಾರ್‌ನಲ್ಲಿ ಆದೇಶ ಪಡೆದಾಗ ಕೂಡಲೇ ಅಲ್ಲಿಂದ ಬಿಡಬೇಕಾಯಿತು. ಅವಸರದಲ್ಲಿ ಎಲ್ಲ ತಯಾರಿಯೂ ಮಾಡಿಕೊಂಡು ಮನದಲ್ಲಿ ಬಾಬಾರವರ ದರ್ಶನ ಮಾಡಲು ಇಚ್ಚಿಸಿದನು. ॥113॥ ಪತ್ನಿ ಮತ್ತು ಕುಟುಂಬದವರ ಜೊತೆಯಲ್ಲಿ ಶಿರಡಿಗೆ ಹೋಗುವ ಯೋಚನೆಮಾಡಿದನು. ಶಿರಡಿಯೇ ಅವನಿಗೆ ಪಂಡರಾಪುರವಾಗಿತ್ತು. ಬಾಬಾರವರಿಗೆ ತನ್ನ ಗೌರವ ಅರ್ಪಿಸಲು ಇಚ್ಚಿಸಿದನು. 141 ಅವನು ಯಾರಿಗೂ ಪತ್ರವನ್ನಾಗಲೀ ಸಂದೇಶವನ್ನಾಗಲೀ ಕಳಿಸಲಿಲ್ಲ. ತನ್ನ ಸಾಮಾನುಗಳನ್ನೆಲ್ಲ ಒಟ್ಟಾಗಿ ಅವಸರದಿಂದ ಗಾಡಿಯಲ್ಲಿ ತುಂಬಿದನು. 115 ಈ ರೀತಿ ನಾನಾ ಹೊರಟನು. ಶಿರಡಿಯಲ್ಲಿ ಯಾರಿಗೂ ಇದರ ಅರಿವು ಇರಲಿಲ್ಲ. ಆದರೆ ಸರ್ವಜ್ಞರಾದ ಸಾಯಿಗೆ ಎಲ್ಲವೂ ತಿಳಿದಿತ್ತು. ॥116॥ ನಾನಾ ಹೊರಟು ನೀವುಗಾ೦ವನ ಹೊರವಲಯ ತಲಪಿರಬಹುದು. ಅದೇ ಸಮಯದಲ್ಲಿ ಶಿರಡಿಯಲ್ಲಿ ಎಂತಹ ಪವಾಡ ನಡೆಯಿತೆಂಬುದನ್ನು ಎಚ್ಚರಿಕೆಯಿಂದ ಆಲಿಸಿರಿ. ॥117॥ ಬಾಬಾರವರು ಮಸೀದಿಯಲ್ಲಿದ್ದರು. ಮ್ಹಾಳಸಾಪತಿಯು ಜೊತೆಯಲ್ಲಿದ್ದನು. ಭಕ್ತರಾದ ಅಪ್ಪಾ ಸಿಂಧೆ ಮತ್ತು ಕಾಶೀನಾಥನು ಮಾತುಕತೆಯಾಡುತ್ತ ಕುಳಿತಿದ್ದರು. ॥118 ಆ ಸಮಯದಲ್ಲಿ 

ಬಾಬಾರವರು ಆಕಸ್ಮಿಕವಾಗಿ ಹೇಳಿದರು - "ನಾವು ನಾಲ್ಕು ಜನರೂ ಭಜನೆ ಮಾಡೋಣ. ಪಂಡರಾಪುರದ ಬಾಗಿಲುಗಳು ತೆಗೆದಿವೆ. ನಾವು ಸಂತೋಷವಾಗಿ ಹಾಡಬಹುದು." ॥119 ಸಾಯಿಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಅರಿವು ಇತ್ತು. ಅವರು ಈಗಾಗಲೇ ಸುದ್ದಿಯನ್ನು ತಿಳಿದಿದ್ದರು. ನಾನಾ ಊರ ಹೊರವಲಯದ ಕಾಲುವೆ ಹತ್ತಿರ ಇರುವಾಗಲೇ ಬಾಬಾರವರು ಉತ್ಸಾಹದಿಂದ ಭಜನೆ ಹಾಡುತ್ತಿದ್ದರು. "ನಾನು ಪಂಡರಾಪುರಕ್ಕೆ ಹೋಗುತ್ತಿರುವೆ. ಹೋಗುತ್ತಿರುವೆ, ಅಲ್ಲಿ ನಾನು ನೆಲೆಸುವೆ, ನೆಲೆಸುವೆ ... ಅದು ನನ್ನ ಗುರುವಿನ ನಿವಾಸ." ॥120॥ ಬಾಬಾ ಖುದ್ದಾಗಿ ಭಜನೆ ಹಾಡುತ್ತಿದ್ದರು. ಸುತ್ತಲೂ ಕುಳಿತಿದ್ದ ಭಕ್ತರು ಅದಕ್ಕೆ ದನಿಗೂಡಿಸುತ್ತಿದ್ದರು. ಅವರೆಲ್ಲರೂ ಪಂಡರಾಪುರದ ಬಗ್ಗೆ ಇದ್ದ ಪ್ರೀತಿಯಲ್ಲಿ ಮುಳುಗಿಹೋಗಿದ್ದರು. ಆಗಲೇ ನಾನಾ ಆಗಮಿಸಿದನು. ॥121 ಅವನು ಸಾಯಿ ಚರಣಗಳಿಗೆ ಪತ್ನೀ ಸಮೇತನಾಗಿ ನಮಿಸಿದನು. ಮಹಾರಾಜರು ಅವನೊಡನೆ ಪಂಡರಾಪುರಕ್ಕೆ ಹೋಗಿ ಅಲ್ಲಿ ನಿರಾತಂಕವಾಗಿ ನಿಶ್ಚಿಂತೆಯಿಂದ ನೆಲೆಸಬೇಕೆಂದು ಪ್ರಾರ್ಥಿಸಿದನು. 1122॥ ಈ ಆಹ್ವಾನದ ಅವಶ್ಯಕತೆಯೇ ಆರಲಿಲ್ಲ. ಈಗಾಗಲೇ ಬಾಬಾರವರು ಉತ್ಪಾಹ ಭಾವದಲ್ಲಿದ್ದರು. ಅಲ್ಲಿದ್ದ ಜನರು ಹೇಳಿದರು? - ಭಜನೆಯ ವಾಕ್ಯಗಳು ತಿಳಿಸುವಂತೆ ಈಗಾಗಲೇ ಬಾಬಾ ಪಂಡರಾಪುರಕ್ಕೆ ಹೋಗಲು ತಯಾರಾಗಿದ್ದಾರೆ. ॥123॥ ನಾನಾ ಅತ್ಯಂತ ಅಚ್ಚರಿಗೊ೦ಡನು. ಈ ಲೀಲೆಯನ್ನು ನೀಡಿ ದಿಗ್ಭಮೆಗೊ೦ಡನು. ಅವರ ಪಾದಗಳಲ್ಲಿ ತಲೆಯಿಟ್ಟು ಭಾವೋನ್ಮತ್ತನಾದನು. 124 ಅವರ ಆಶೀರ್ವಾದ, ಉದಿ ಮತ್ತು ಪ್ರಸಾದಗಳನ್ನು ತೆಗೆದುಕೊಂಡು ಮತ್ತೆ ನಮಸ್ಕರಿಸಿ ಚಂದೋರಕರ್‌ನು ಪಂಡರಾಷುರಕ್ಕೆ ಹೊರಟನು. ಅವರ ಅನುಮತಿಯನ್ನು ಪಡೆದಿದ್ದನು. ॥125॥


ಈ ರೀತಿಯ ಕತೆಗಳನ್ನು ಹೇಳುತ್ತಿದ್ದರೆ ಈ ಪುಸ್ತಕವು ಅಳತೆ ಮೀರಿಹೋಗುತ್ತದೆ. ಆದ್ದರಿ೦ದ ಇಲ್ಲಿಗೆ ಇತರರ ದುಃಖ ಉಪಶಮನದ ವಿಷಯವನ್ನು ನಿಲ್ಲಿಸೋಣ. ॥126॥ ಬಾಬಾರವರ ಸತ್ಕರ್ಮಗಳಿಗೆ ಕೊನೆಯೇ ಇಲ್ಲದಿರುವುದರಿಂದ ಇಲ್ಲಿಗೆ ಈ ಅಧ್ಯಾಯವನ್ನು ಮುಗಿಸೋಣ. ಮುಂದಿನ ಅಧ್ಯಾಯದಲ್ಲಿ, ನನ್ನದೇ ಕ್ಷೇಮಕ್ಕಾಗಿ ಇನ್ನು ಬೇರೆ ಚರಿತ್ರೆಗಳನ್ನು ವಿವರಿಸುತ್ತೇನೆ. ॥127॥ ನಾನು ಎಷ್ಟೇ ಪ್ರಯತ್ನಪಟ್ಟರೂ 'ನನ್ನದು' ಎಂಬ ಅಹಂಭಾವವನ್ನು ನಾಶಮಾಡಲು ಸಾಧ್ಯವಾಗುತ್ತಿಲ್ಲ. 'ನಾನು ಯಾರು?' ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಸಾಯಿಯೇ ತಮ್ಮ ಕತೆಗಳನ್ನು ಹೇಳಲಿ. 128 ಅವರೇ ಮಾನವ ಜನ್ಮದ ಮಹತ್ವವನ್ನು ಹೇಳುತ್ತಾರೆ. ಅವರು ಏಕೆ ಭಿಕ್ಷೆ ಬೇಡುತ್ತಿದ್ದರು, ಬಾಯಜಾ ಬಾಯಿಯ ಭಕ್ತಿ ಮತ್ತು ಊಟಮಾಡುವಾಗ ಅವರ ಮನಃಸ್ಥಿತಿ ಯಾವರೀತಿ ಇತ್ತು ಎಂಬುದನ್ನು ಅವರೇ ತಿಳಿಸುವರು. ॥129॥ ಮತ್ತೆ ಸಹ ಬಾಬಾರವರು ಮಸೀದಿಯಲ್ಲಿ ಮ್ಹಾಳಸಾಪತಿ ಮತ್ತು ತಾತ್ಯಾ ಗಣಪತಿ ಕೋತೆಯವರೊಡನೆ ಹೇಗೆ ಮಲಗುತ್ತಿದ್ದರು - ಅದನ್ನು ಕೇಳಿರಿ. 130 ಹೇಮಾದಪಂತನು ಸಾಯಿಗೆ ಶರಣಾಗಿದ್ದಾನೆ. ತಾನೊಬ್ಬ ಕ್ಚುಲ್ಲಕ ಭಕ್ತ, ಅವರ ಚರಣ ಪಾದುಕೆಗಳಂತೆ ವಿನೀತ. ಅವನು ಸಾಯಿಯ ಆದೇಶಗಳನ್ನು ವಿಧೇಯಪೂರ್ವಕವಾಗಿ ಪಾಲಿಸುವವನು ಮತ್ತು ಇಲ್ಲಿಯವರೆಗಿನ ಕಥಾನಕವನ್ನು ಪೂರ್ಣಗೊಳಿಸಿರುತ್ತಾನೆ. ॥131


ಎಲ್ಲರಿಗೂ ಶುಭವಾಗಲಿ.


ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ಎವಿದ ಕಥೆಗಳ ನಿರೂಪಣೆ" ಎಂಬ ಏಳನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.


ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.


।ಸನ್ಮಂಗಳವಾಗಲಿ।


No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....