Thursday, July 2, 2020

ಪ್ರೇರಣೆ

ಪ್ರೇರಣೆ

ಓಂ ಶ್ರೀ ಸಾಯಿರಾಂ. ಸಕಲ ಜೀವರಾಶಿಗಳಲ್ಲೂ ಅತಿ ಶ್ರೇಷ್ಠವಾದ ಮಾನವಜನ್ಮವನ್ನು ಹೊತ್ತು ಈ ಜಗತ್ತಿಗೆ ಬಂದಿರುತ್ತೇವೆ. ನಮಗೆ ಪ್ರೀತಿಪಾತ್ರರಾದ ಮಾತಾ-ಪಿತೃಗಳು, ಬಂಧು-ಬಳಗ, ಪತಿ-ಪತ್ನಿ, ಮಕ್ಕಳು-ಮೊಮ್ಮಕ್ಕಳು ಎಲ್ಲರೂ ಜೀವನದಲ್ಲಿ ಸುಖ ಸಂತೋಷಗಳನ್ನು ನೀಡಬಲ್ಲರು. ಆದರೆ ಜೀವನದ ಪರಮ ಗುರಿಯಾದ ಮೋಕ್ಷವನ್ನು ನೀಡಲು ಯಾರಿಂದಲೂ ಸಾಧ್ಯವಿಲ್ಲ. ಜೀವನದ ಅತ್ಯಮೂಲ್ಯ ಗುರಿಯಾದ ಆತ್ಮಸಾಕ್ಷಾತ್ಕಾರಕ್ಕೆ ಹಾಗೂ ಇಹ-ಪರಗಳೆರಡಕ್ಕೂ ಮಾರ್ಗತೋರಿಸುವವನೇ ಸದ್ಗುರು. ಸಾಕ್ಷಾತ್ ಪರಬ್ರಹ್ಮ ವಸ್ತುವೇ ಸದ್ಗುರುವಾಗಿ ಈ ಭುವಿಯ ಶಿರಡಿಯಲ್ಲಿ ಮಾನವ ದೇಹದಿಂದ ಅವತರಿಸಿ ಬಂದಿರುವುದು ನಮ್ಮೆಲ್ಲರ ಸುಕೃತ. ನಿತ್ಯ ನಿರ್ಮಲ ನಿರ್ಗುಣ ನಿರಂಜನ ಪರಬ್ರಹ್ಮವಸ್ತುವೇ ನಾನಾಗಿರುವೆನೆಂಬ ಸ್ವಸ್ವರೂಪಾನಂದದಲ್ಲಿ ಸದಾ ನೆಲಸಿರುವವರೇ ಶ್ರೀ ಶಿರಡಿ ಸಾಯಿ ಬಾಬಾರವರು. ಅಂದಹವರ ಜೀವನ ಚರಿತ್ರೆಯಾದ 'ಶ್ರೀ ಸಾಯಿ ಸಚ್ಚರಿತೆ'ಯು ಶ್ರೀ ಗೋವಿಂದ ರಘುನಾಥ ದಾಬೋಲ್ಕರ್ ಅವರಿಂದ ಮರಾಠಿ ಭಾಷೆಯಲ್ಲಿ 9309  ಶ್ಲೋಕಗಳ ರೂಪದಲ್ಲಿ ಸದ್ಗುರು ಬಾಬಾರವರ ಕೃಪೆಯಿಂದಲೇ ರಚಿಸಲ್ಪಟ್ಟ ಅತ್ಯಮೂಲ್ಯ ವೇದಾಂತ ತತ್ವಗಳನ್ನೊಳಗೊಂಡ ಖನಿ. ಮೂಲ ಮರಾಠಿ ಭಾಷೆಯ ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿದವರು ಶ್ರೀಮತಿ ಝರೀನ್ ಅವರು. ಆಂಗ್ಲ ಭಾಷೆಯ ಅನುವಾದಿತ ಕೃತಿಯ ಸಹಾಯದಿಂದ ಕನ್ನಡ ಭಾಷೆಯಲ್ಲಿ ಈ ಕೃತಿ ಮೂಡಿಬಂದಿರುವುದು ಬಾಬಾರವರ ಇಚ್ಛೆಯಷ್ಟೆ. ವೃತ್ತಿಯಲ್ಲಿ ವೈದ್ಯಳಾಗಿ, ಬೋಧಕಳಾಗಿ, ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನನ್ನನ್ನು ಅನುಗ್ರಹಿಸಿ ಅಗಾಧವಾದ ಅಂತರಾರ್ಥವುಳ್ಳ ವೇದಾಂತ ತತ್ವವೇ ಆದ ಈ ಶ್ರೀ ಸಾಯಿ ಸಚ್ಚರಿತೆಯ ಕನ್ನಡ ಅನುವಾದವನ್ನು ಬಾಬಾರವರೇ ಕೈಹಿಡಿದು ಬರೆಸಿರುವರೆಂಬುದು ನನ್ನ ದೃಢವಿಶ್ವಾಸ. ಮರಾಠಿ ಭಾಷೆಯಲ್ಲಿ ಚತುಷ್ಪದಿಯಲ್ಲಿರುವ ಈ ಗ್ರಂಥವನ್ನು ಕನ್ನಡ ಭಾಷೆಯಲ್ಲಿ ಒಂದೊಂದು ಪಾಡಿಗೂ ಅನುಗುಣವಾಗಿ ಅರ್ಥೈಸಲು ಮೂಲ ಕಾರಣರಾದ ಶಿರಡಿಯ ಶ್ರೀ ಜ್ಯೋತಿಲಾಲ್ ಜಾಧವ್ ಹಾಗೂ ಶಿರಡಿಯ ಅರ್ಚಕರಾದ ಶ್ರೀ ಸುಲಾಖೆ ಶಾಸ್ತ್ರಿ ಮಹಾರಾಜ್ ಅವರ ನಿರಂತರ ಪ್ರೋತ್ಸಾಹವನ್ನು ಇಲ್ಲಿ ಸ್ಮರಿಸುತ್ತೇನೆ. ಈ ಗ್ರಂಥದ ವಿಮರ್ಶಾವಲೋಕನ ಮಾಡಿ ಪ್ರತಿ ಹೆಜ್ಜೆಗೂ ಸಲಹೆ ನೀಡಿದ ನನ್ನ ಗುರುಗಳಾದ ಮೈಸೂರಿನ ಪ್ರೊ. ಕೆ. ಬಿ. ಪ್ರಭುಪ್ರಸಾದ್ ಅವರಿಗೆ ನನ್ನ ವಂದನೆಗಳು.

ಭಗವಂತನ ಅವತಾರ ಸ್ವರೂಪರಾದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ಪ್ರೇಮದಿಂದ ನನ್ನನ್ನು 'ಸೀತಾಮಹಾಲಕ್ಷ್ಮಿ' ಎಂದು ಕರೆಯುತ್ತಾ ಶಿರಡಿ ಸಾಯಿಯ ಅವತಾರವೇ ತಾವೆಂಬ ಅರಿವನ್ನು ಮೂಡಿಸಿ ಶಿರಡುಸಾಯಿ ಸ್ವರೂಪದಲ್ಲಿ ಅನುಗ್ರಹಿಸಿರುತ್ತಾರೆ.

ಸೆಪ್ಟೆಂಬರ್ 1ನೇ ತಾರೀಖು 1946ರಂದು ಭದ್ರಾವತಿಯಲ್ಲಿ ನನ್ನ ಜನ್ಮಕ್ಕೆ ಕಾರಣರಾದ ಭಾರದ್ವಾಜಗೋತ್ರಜರಾದ ತಂದೆ ದಿ|| ಶ್ರೀ ಡಿ. ಎಸ್. ರಾಮಚಂದ್ರ ಅಯ್ಯರ್ ಮತ್ತು ತಾಯಿ ಕಮಲ್ಲಮ್ಮನವರಿಗೆ ನನ್ನ ಪ್ರಥಮ ವಂದನೆ ಸಲ್ಲಿಸುತ್ತೇನೆ. ಮನೆದೇವರಾದ ಮಾರೇಹಳ್ಳಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ಸಾಷ್ಟಾಂಗ ಪ್ರಣಾಮಗಳು. ಹಾಗೆಯೇ ಈ ಆಧ್ಯಾತ್ಮ ಮಾರ್ಗದಲ್ಲಿ ಕರೆದೊಯ್ದ ನನ್ನ ದೀಕ್ಷಾಗುರುಗಳಾದ ಹಿಮಾಲಯದ ಮಹಾನ್ ಯೋಗಿ ಸ್ವಾಮೀ ರಾಮರಾವರಿಗೆ ಅನಂತ ಪ್ರಣಾಮಗಳು. ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳು, ಗುರುಪರಂಪರೆಯ ಮಹಾವತಾರ ಬಾಬಾಜಿ, ಲಾಹಿರಿ ಮಹಾಶಯ, ಯುಕ್ತೇಶ್ವರಗಿರಿ, ಪರಮಹಂಸ ಯೋಗಾನಂದರು, ಮಾತಾ ಅಮೃತಾನಂದಮಯಿ ದೇವಿ, ಮಾತಾ ವಿಜಯೇಶ್ವರಿ ದೇವಿ, ಪರಬ್ರಹ್ಮ ಆಶ್ರಮದ ಗುರು ಭಗವಾನ್ ಶ್ರೀ ಗಂಗಾಧರ್ ಗುರೂಜಿ, ಕಿನ್ನಿಗೋಳಿಯ ಶಕ್ತಿ ದರ್ಶನಯೋಗಾಶ್ರಮದ ಗುರೂಜಿ ಶ್ರೀ ದೇವಬಾಬಾ, ತಟ್ಟೆಕೆರೆಯ ಅವಧೂತ ಶ್ರೀ ಸಿದ್ಧಪಾಜಿ, ಇವರ ಅನುಗ್ರಹವೂ ಅಪಾರ. 

ನನ್ನ ಆಧ್ಯಾತ್ಮಿಕ ಮಾರ್ಗಕ್ಕೆ ಸಹಕಾರಿಗಳಾದ ಪತಿದೇವರಾದ ಡಾ|| ಈ. ಪಿ. ನರಸಪ್ಪ, ಸಹೋದ್ಯೋಗಿ ಡಾ|| ನಾಗ್, ಮೈಸೂರಿನ ವೇದಾಂತಮಾಸ್ತರರಾದ ಶ್ರೀ ನಾಗರಾಜ್ ಇವರೆಲ್ಲರ ಮಮತೆಯ ಮಗುವಾಗಿ ಬೆಳೆದು ನಿಮ್ಮೆದುರಿಗೆ ನಿಂತಿರುವುದು ನನ್ನ ಸೌಭಾಗ್ಯ. ಹಾಗೂ ಸಹಕಾರ ನೀಡಿದ ಶ್ರೀಮತಿ ರಾಧಾನರಸಪ್ಪ ಮತ್ತು ಅರ್ಜುನ್ ಕೃಷ್ಣಮೂರ್ತಿ ಇವರೇನೂ ಸ್ಮರಿಸುತ್ತೇನೆ.

ಈ ಗ್ರಂಥರಚನೆಯಲ್ಲಿ ಸಹಾಯ ಹಸ್ತನೀಡಿದ ನನ್ನ ಆತ್ಮೀಯ ಗೆಳತಿ ಹಾಗೂ ಅಧ್ಯಾತ್ಮ ಬಂಧುವಾದ ಡಾ|| ಎಚ್. ವಿ. ಚಂದ್ರಲೇಖಳಿಗೆ ನನ್ನ ಕೃತಜ್ಞತೆಗಳು. ಪುಸ್ತಕದ ಡಿ.ಟಿ.ಪಿ (ಬೆರಳಚ್ಚು) ಮಾಡಿದಂತಹ ಶ್ರೀ ಈ. ಪಿ. ಜಯರಾಮ, ಅಳಿಕೆ ಮತ್ತು ಶ್ರೀಮತಿ ಚಂದ್ರಕಲಾ, ಪ್ರತಿ ಹೆಜ್ಜೆಯಲೂ ತಮ್ಮ ಅಗಾಧವಾದ ಸಾಯಿಭಕ್ತಿಯಿಯನ್ನು ತುಂಬಿದ್ದಾರೆ. ಶ್ರೀ ಸಾಯಿಯವರ ಸೇವೆಯಲ್ಲಿ ನಿರತಳಾಗಿದ್ದ ನಾನು ಸದ್ಗುರುವಿನ ಪ್ರೇರೇಪಣೆಯಂತೆ ಊರಿನ ಸಾಧ್ಭಕ್ತರ ನೆರವು ಹಾಗೂ ಸಹಕಾರಗಳೊಂದಿಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿ "ಶ್ರೀ ಶಿರಡಿ ಸಾಯಿ ಶಕ್ತಿಸನ್ನಿಧಿ" ಮಂದಿರವನ್ನು ನಿರ್ಮಿಸಿ 2010ರ ನವೆಂಬರ್18 ಮತ್ತು 19, ಉತ್ಥಾನ ದ್ವಾದಶಿ ದಿನದಂದು ಸ್ವಾಮಿಯ ಶ್ರೀಚರಣಗಳಲ್ಲಿ ಅರ್ಪಿಸಿ ಕೃತಾರ್ಥಳಾದೆನು. ಶ್ರೀಚಕ್ರದ ಮೇಲೆ ಆಸೀನರಾಗಿರುವ ಸದ್ಗುರುವಿನ ಸನ್ನಿಧಿಯಲ್ಲಿ ಪ್ರತಿದಿನ ಪೂಜಾಕೈಂಕರ್ಯಗಳು ಸಾಂಗವಾಗಿ ನೆರವೇರುತ್ತಿವೆ. ಹಲವಾರು ಬಾರಿ ಶ್ರೀ ಶಿರಡಿ ದಿವ್ಯಕ್ಷೇತ್ರಕ್ಕೆ ಭೇಟಿನೀಡಿ ಸದ್ಗುರುವಿನ ಕೃಪಾಕಟಾಕ್ಷಕ್ಕೆ ಪಾತ್ರಳಾಗುವ ಅವಕಾಶ ದೊರೆತಿದೆ. ಈ ಮಂದಿರದ ಪೂರ್ಣ ಉಸ್ತುವಾರಿಯನ್ನು ಹೆಗಲೇರಿಸಿಕೊಂಡು ನಡೆಸುತ್ತಿರುವ ಶ್ರೀ ಪಿ. ಟಿ. ಗಂಗಾಧರಯ್ಯ ಮತ್ತು ಡಾ|| ಆರ್. ಪಿ. ಸಾಯಿನಾಥ್ ಇವರೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. 

ಶ್ರೀ ಸಾಯಿ ಸದ್ಗುರುವಿನ ಪ್ರೇರಣೆ ಹಾಗೂ ಅನುಗ್ರಹದಂತೆ ಸಮಸ್ತ ಕನ್ನಡ ಸಾಯಿಬಂಧುಗಳಿಗೂ ಈ ದಿವ್ಯಕೃತಿಯನ್ನು ಸದ್ಭಾವೇಯಿಂದ ಸೇವಾರ್ಥವಾಗಿ ಸಮರ್ಪಿಸುತ್ತಿದ್ದೇನೆ. ಸಹೃದಯರು ಈ ಕೃತಿಯನ್ನು ಅದರಾಭಿಮಾನಗಳಿಂದ ಗುರುಭಕ್ತಿಯಿಂದ ಸ್ವೀಕರಿಸಿ ಸದ್ಗುರುವಿನ ಅನುಗ್ರಹಕ್ಕೆ ಪಾತ್ರರಾಗಲಿ ಎಂದು ಹಾರೈಸುತ್ತೇನೆ. 

 12-7-2014, ಗುರುಪೂರ್ಣಿಮೆ  ಡಾ|| ಆರ್. ಸೀತಾಲಕ್ಷ್ಮಿ, MD
(ನಿವೃತ್ತ ವೈದ್ಯಕೀಯ ಶಿಕ್ಷಣ ನಿರ್ದೇಶಕರು, ಕರ್ನಾಟಕ ಸರಕಾರ)
ಮೈಸೂರು, ಕರ್ನಾಟಕ 
Dr. R. Seethaalakshmi, M.D.
Retd. Director of MEdical Education, Govt of Karnataka
Ph: 09620567111
e-mail: dr.seethamahalakshmi@rediffmail.com

No comments:

Post a Comment

08 ಸಾಯಿ ಸಮರ್ಥರ ಅವತಾರ / Sri Sai Baba's incarnation

  ॥ ಅಥಃ ಶ್ರೀ ಸಾಯಿ ಸಚ್ಚರಿತೆ ॥ " ಸಾಯಿ ಸಮರ್ಥರ ಅವತಾರ"   ಶ್ರೀ ಗಣೇಶನಿಗೆ ಪ್ರಣಾಮಗಳು . ಶ್ರೀ ಸರಸ್ವತಿಗೆ ಪ್ರಕಾಮಗಳು . ಶ್ರೀ ಗುರುವಿಗೆ ಪ್ರಣಾಮಗಳು ....